ಕಾಂಗ್ರೆಸ್ ಸ್ಥಿತಿ ‘ಕುಣಿಯಲಾಗದವರು ನೆಲ ಡೊಂಕು’ ಎಂಬಂತಾಗಿದೆ: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು, ಜೂ.17: ಕಾಂಗ್ರೆಸ್‍ನ ಸ್ಥಿತಿ ‘ಕುಣಿಯಲಾಗದವರು ನೆಲ ಡೊಂಕು’ ಎಂಬಂತಾಗಿದೆ. ಅವರು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಆಗದ ಕಾರಣ ಮೋದಿ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ಷೇಪಿಸಿದ್ದಾರೆ.
ಶನಿವಾರ ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ಸಿನ ಹಲವಾರು ಸಚಿವರು ಮತ್ತು ಪಕ್ಷವು ನಿರಂತರ ಸುಳ್ಳುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಕೊಡಬೇಕೆಂದು ಹೊರಟ ಅಕ್ಕಿಯನ್ನು ದುರುದ್ದೇಶಪೂರ್ವಕ ನೀತಿ ನಿಯಮಗಳನ್ನು ಬದಲಿಸಿ ರಾಜ್ಯ ಸರಕಾರಕ್ಕೆ ಅಕ್ಕಿ ಕೊಡುವುದನ್ನು ಮೋದಿ ಅವರ ಸರಕಾರವು ನಿಲ್ಲಿಸಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಚುನಾವಣೆಗೆ ಮೊದಲೇ ಮೇ 2ರಂದು ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ‘ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಂ’ ಕುರಿತು ಪರಿಶೀಲಿಸಲು ಸೂಚಿಸಲಾಗಿತ್ತು. ಕಾಂಗ್ರೆಸ್ ಸರಕಾರದ ಯೋಜನೆಯನ್ನು ಫ್ಲಾಪ್ ಮಾಡಲು ತಂದ ತಿದ್ದುಪಡಿ ಇದಲ್ಲ. ಬೆಲೆ ಏರಿಕೆ ನಿಯಂತ್ರಿಸುವ ದೂರದೃಷ್ಟಿಯ ಚಿಂತನೆಯಿಂದ ಕೇಂದ್ರ ಸರಕಾರ ಈ ತಿದ್ದುಪಡಿಗೆ ಮುಂದಾಗಿತ್ತು ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಮೋದಿ ಸರಕಾರ ಈಗಾಗಲೇ ಕರ್ನಾಟಕಕ್ಕೆ 5 ಕೆಜಿ ಅಕ್ಕಿ ಕೊಡುತ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಕೇಂದ್ರದಿಂದ ಪಡೆದು ಮೋದಿ ಭಂಡಾರದಿಂದ ತಂದ 10 ಕೆ.ಜಿ ಅಕ್ಕಿಯನ್ನೇ ಸಿದ್ದರಾಮಯ್ಯ ಅವರ ಫೋಟೊ ಹಾಕಿ ಜನಕ್ಕೆ ಅನ್ನಭಾಗ್ಯದಡಿ ಕೊಟ್ಟೇವು ಎಂಬ ಯೋಜನೆ ಇತ್ತು. ಅದು ಈಡೇರದ ಕಾರಣಕ್ಕೆ ಮೋದಿ ಸರಕಾರದ ವಿರುದ್ಧ ಆರೋಪಿಸುವ ಷಡ್ಯಂತ್ರ ನಡೆದಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.