ಕರಗದಿರಲಿ ನಮ್ಮ ಕರಾವಳಿ
ಭಾರತದ ಕರಾವಳಿ ನೀರಿನಲ್ಲಿ 1,600 ಮಿಲಿಯನ್ ಟನ್‌ಗಳಷ್ಟು ಕೆಸರು ಪ್ರಮುಖ ಮಾಲಿನ್ಯಕಾರಕಗಳಾಗಿವೆ. ಸುಮಾರು 8,000 ಕೈಗಾರಿಕೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಾರತೀಯ ಕರಾವಳಿ ನೀರಿನಲ್ಲಿ ತಮ್ಮ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತಿವೆ. ಭಾರತೀಯ ಕರಾವಳಿ ನೀರಿನಲ್ಲಿ ವಾರ್ಷಿಕವಾಗಿ ಸುಮಾರು 390 ಮಿಲಿಯನ್ ಟನ್‌ಗಳಷ್ಟು ಕೈಗಾರಿಕಾ ತ್ಯಾಜ್ಯವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತವು ಬಹು ವಿಸ್ತಾರವಾದ ಕರಾವಳಿ ಪ್ರದೇಶವನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತದ ಕರಾವಳಿ ಪ್ರದೇಶವು ಕೇವಲ ಭೌಗೋಳಿಕ ಇತಿಹಾಸವಲ್ಲದೇ ಸಾಮಾಜಿಕ, ಸಾಮುದಾಯಿಕ, ಸಾಂಸ್ಕೃತಿಕ ಮತ್ತು ಜೀವವೈಜ್ಞಾನಿಕ ಮಹತ್ವ ಪಡೆದಿವೆ. 16ನೇ ಶತಮಾನದ ನಂತರ, ಪೋರ್ಚುಗೀಸ್ ಮತ್ತು ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿಗಳು ಭಾರತದೊಂದಿಗೆ ವ್ಯಾಪಾರದಲ್ಲಿ ಬಹಳ ಸಕ್ರಿಯವಾದವು. ಪಾಶ್ಚಿಮಾತ್ಯ ದೇಶಗಳ ಸಂಪರ್ಕಕ್ಕೆ ಸೇತುವೆಯಾದದ್ದು ಭಾರತದ ಕರಾವಳಿ ಎಂಬುದನ್ನು ಮರೆಯುವಂತಿಲ್ಲ. ಇಂದು ಭಾರತವು ವ್ಯಾಪಾರಕ್ಕೆ ತನ್ನ ಕರಾವಳಿಯಲ್ಲಿ ಅನೇಕ ಸ್ಥಾಪಿತ ಬಂದರುಗಳನ್ನು ಹೊಂದಿದೆ. ಈ ಬಂದರುಗಳು ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುತ್ತದೆ. ಸರಕು ಹಡಗುಗಳು ತಮ್ಮ ಬಂದರುಗಳಲ್ಲಿ ತೈಲ, ಧಾನ್ಯಗಳು, ಕಲ್ಲಿದ್ದಲು, ಕಬ್ಬಿಣದ ಅದಿರು ಮುಂತಾದ ಬೆಲೆಬಾಳುವ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುತ್ತವೆ. ಭಾರತದ ಕರಾವಳಿಯಲ್ಲಿ ಅನೇಕ ನೈಸರ್ಗಿಕ ಬಂದರುಗಳೂ ಇವೆ. ಚೆನ್ನೈನಂತಹ ಆಧುನಿಕ ಮಾನವ ನಿರ್ಮಿತ ಬಂದರುಗಳೂ ಇವೆ. ಆಧುನಿಕ ಬಂದರುಗಳು ನಮ್ಮ ನೌಕಾಪಡೆಗೆ ತರಬೇತಿ ನೀಡಲು ಮತ್ತು ನಿಯೋಜಿಸಲು ಉಪಯುಕ್ತವಾಗಿವೆ.
ಭಾರತದ ಕರಾವಳಿಯ ಬಗ್ಗೆ, ಅದರಲ್ಲಿನ ಜೀವ ಪ್ರಭೇದದ ಬಗ್ಗೆ ಹೇಳುವುದಾದರೆ.. ಭಾರತದ ಸಮುದ್ರ ಜೀವವೈವಿಧ್ಯವು ಇಡೀ ದಕ್ಷಿಣ ಏಶ್ಯದ ಪ್ರದೇಶದಲ್ಲಿ ಅತ್ಯುತ್ತಮವಾಗಿದೆ. ಚಿಕ್ಕ ಸಮುದ್ರ ಕುದುರೆಯಿಂದ ಹಿಡಿದು ಬೃಹತ್ ತಿಮಿಂಗಿಲ ಶಾರ್ಕ್‌ಗಳವರೆಗಿನ ಪ್ರಭೇದಗಳನ್ನು ನಮ್ಮ ಕರಾವಳಿ ನೀರಿನಲ್ಲಿ ವಿಜ್ಞಾನಿಗಳು ದಾಖಲಿಸಿದ್ದಾರೆ. 26 ಜಾತಿಯ ಸಿಹಿನೀರಿನ ಆಮೆಗಳು ಮತ್ತು 5 ಜಾತಿಯ ಸಮುದ್ರ ಆಮೆಗಳು, ಕರಾವಳಿ ನೀರಿನಲ್ಲಿ ವಾಸಿಸುತ್ತವೆ. ಅತಿ ಹೆಚ್ಚು ಹುಲಿ ಜನಸಂಖ್ಯೆಯು ಬಂಗಾಳ ಕೊಲ್ಲಿಯ ಪಕ್ಕದಲ್ಲಿರುವ ಪೂರ್ವ ಕರಾವಳಿಯ ಸುಂದರಬನದಲ್ಲಿ ಕಂಡುಬರುತ್ತದೆ. ಕೊಲೆಗಾರ ತಿಮಿಂಗಿಲ ಎಂದೇ ಖ್ಯಾತಿ ಪಡೆದ ಬಾಲೆನೊಪ್ಟೆರಾ ಮತ್ತು ಹಂಪ್‌ಬ್ಯಾಕ್ಡ್ ವೇಲ್‌ಗಳಂತಹ ಕೆಲವು ಜಾತಿಯ ತಿಮಿಂಗಿಲಗಳು ಭಾರತದ ಕರಾವಳಿಯಲ್ಲಿರುವುದು ವರದಿಯಾಗಿವೆ. ಭಾರತವು ವಿಶ್ವದ ಅತ್ಯುತ್ತಮ ಮ್ಯಾಂಗ್ರೋವ್‌ಗಳನ್ನು ಹೊಂದಿದೆ. ಭಾರತದ ಮುಖ್ಯ ಭೂಭಾಗದ ಸುಮಾರು 380 ಕಿ.ಮೀ. ಅಥವಾ ಶೇ. 6 ಕರಾವಳಿಯು ಮ್ಯಾಂಗ್ರೋವ್‌ಗಳಿಂದ ಆವೃತವಾಗಿದೆ, ಆದರೆ ಅಂಡಮಾನ್ ಮತ್ತು ನಿಕೋಬಾರ್‌ನ ಶೇ. 40 (260 ಕಿ.ಮೀ.) ಕರಾವಳಿಗಳು ಮ್ಯಾಂಗ್ರೋವ್‌ಗಳಿಂದ ಆವೃತವಾಗಿವೆ. ಪಶ್ಚಿಮ ಬಂಗಾಳದ ಸುಂದರಬನಗಳು ದೇಶದ ಅತಿದೊಡ್ಡ ಮ್ಯಾಂಗ್ರೋವ್‌ಗಳನ್ನು ಪ್ರತಿನಿಧಿಸುತ್ತವೆ.
ಮ್ಯಾಂಗ್ರೋವ್ ವಿಶೇಷವಾಗಿ ಉಪ್ಪುಸಹಿಷ್ಣು ಮರಗಳಾಗಿದೆ. ಅವುಗಳು ಗಾಢ ಹಸಿರು ಎಲೆಗಳು ಮತ್ತು ನೀರಿನ ಮೇಲೆ ಅವುಗಳನ್ನು ಬೆಂಬಲಿಸುವ ಬೇರುಗಳಂತಹ ಅನೇಕ ವಿಶೇಷ ಜಾಲದಿಂದ ಗುಣಲಕ್ಷಣಗಳನ್ನು ಹೊಂದಿವೆ. ಮ್ಯಾಂಗ್ರೋವ್ ಜೌಗು ಪ್ರದೇಶಗಳು ಹೆಚ್ಚು ಉತ್ಪಾದಕವಾಗಿದ್ದು, ಮೀನು, ಏಡಿಗಳು ಮತ್ತು ಸಿಗಡಿಗಳಿಗೆ ಪ್ರಮುಖ ನರ್ಸರಿ ಮೈದಾನವಾಗಿದೆ. ಅವು ಸಮುದ್ರ ಮೀನುಗಳು, ಅಳಿವಿನಂಚಿನಲ್ಲಿರುವ ವಲಸೆ ಹಕ್ಕಿಗಳು, ನದೀಮುಖ ಮೊಸಳೆಗಳು, ಡುಗಾಂಗ್‌ಗಳು, ಡಾಲ್ಫಿನ್‌ಗಳು, ರಾಯಲ್ ಬೆಂಗಾಲ್ ಟೈಗರ್, ಆಲಿವ್ ರಿಡ್ಲಿ ಆಮೆಗಳು ಮತ್ತು ಸಮುದ್ರ ನೀರುನಾಯಿಗಳ ಮೊಟ್ಟೆಯಿಡುವಿಕೆ ಮತ್ತು ನರ್ಸರಿ ಹಾಸಿಗೆಗಳಿಗೆ ಅತ್ಯಗತ್ಯ ಆವಾಸಸ್ಥಾನವಾಗಿದೆ. ಪೂರ್ವ ಕರಾವಳಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪಶ್ಚಿಮ ಕರಾವಳಿಗಿಂತ ಜೀವವೈವಿಧ್ಯದಲ್ಲಿ ಶ್ರೀಮಂತವಾಗಿವೆ.
ಭಾರತದ ಕರಾವಳಿ ತೀರವು 4,000ಕ್ಕೂ ಹೆಚ್ಚು ಜಾತಿಯ ಮೀನುಗಳು, 800 ಜಾತಿಯ ಹವಳಗಳು ಮತ್ತು ಸಾವಿರಾರು ಸಸ್ಯ ಮತ್ತು ಪ್ರಾಣಿಗಳ ಇತರ ರೂಪಗಳಿಗೆ ನೆಲೆಯಾಗಿದೆ. ಜೊತೆಗೆ ಸ್ಪಂಜುಗಳು, ಎಕಿನೋಡರ್ಮ್‌ಗಳು, ಸ್ಟಾರ್‌ಫಿಶ್, ಅರ್ಚಿನ್‌ಗಳು, ಫೆದರ್ ಸ್ಟಾರ್‌ಗಳು ಮತ್ತು ಸಮುದ್ರ ಸೌತೆಗಳು, ಸಮುದ್ರ ಕೀಟಗಳು, ಏಡಿಗಳಂತಹ ಕಠಿಣಚರ್ಮಿಗಳು, ಮೃದ್ವಂಗಿಗಳು, ಕ್ಲಾಮ್ಸ್, ಸಿಂಪಿ, ಆಕ್ಟೋಪಸ್, ಸಮುದ್ರ ಗೊಂಡೆಹುಳಗಳು, ಕಪ್ಪೆಚಿಪ್ಪುಗಳು, ಸಮುದ್ರ ಹಸುಗಳು, ಡಾಲ್ಫಿನ್‌ಗಳು ಮತ್ತು ತಿಮಿಂಗಿಲಗಳು, ಸೀಲುಗಳು ಮತ್ತು ಸಮುದ್ರ ಸಿಂಹಗಳಂತಹ ಸಮುದ್ರ ಸಸ್ತನಿಗಳಿಗೆ ಕರಾವಳಿಯು ನೆಲೆಯಾಗಿದೆ. ನಮ್ಮ ಕರಾವಳಿಯ ಮುಖ್ಯ ಭೂಭಾಗ ಮತ್ತು ಹಲವಾರು ದ್ವೀಪಗಳ ಉದ್ದಕ್ಕೂ ದೀರ್ಘ ಕರಾವಳಿಯನ್ನು ಹೊಂದಿದೆ. ಬೀಚ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಗೋವಾ ಮತ್ತು ಕೋವಲಂ ಶ್ಲಾಘನೀಯ ಯಶಸ್ಸನ್ನು ಸಾಧಿಸಿವೆ. ಬೀಚ್ ಪ್ರವಾಸೋದ್ಯಮವು ಸ್ನಾನ, ಡೈವಿಂಗ್, ಈಜು, ಸ್ನಾಕ್ಲಿರ್ಂಗ್, ಸರ್ಫಿಂಗ್, ವಿಂಡ್-ಸಫಿರ್ಂಗ್, ನೌಕಾಯಾನ, ಸೂರ್ಯನ ಸ್ನಾನ ಮತ್ತು ಬೀಚ್ ಫುಟ್ಬಾಲ್ ಮುಂತಾದ ನೀರು ಆಧಾರಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಭಾರತೀಯ ಕರಾವಳಿ ಪ್ರದೇಶಗಳು ಸಮೃದ್ಧವಾಗಿ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ದೇವಾಲಯಗಳು, ಅರಮನೆಗಳು, ಉದ್ಯಾನಗಳು, ಬೆಟ್ಟಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ವಿವಿಧ ಜಾತ್ರೆಗಳು ಮತ್ತು ಉತ್ಸವಗಳೊಂದಿಗೆ ಚಿನ್ನದ ಕಡಲತೀರಗಳು ಮತ್ತು ಘರ್ಜಿಸುವ ಅಲೆಗಳನ್ನು ಹೊಂದಿವೆ. ಜೊತೆಗೆ ಭಾರತದ ಕರಾವಳಿಯು ಸಮುದ್ರದ ಖನಿಜ ಸಂಪತ್ತಿಗೆ ಹೆಸರುವಾಸಿಯಾಗಿದೆ. ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲವನ್ನು ಸಮುದ್ರದ ತಳದಿಂದ ಪಡೆಯಬಹುದು. ಭಾರತವು ಕಡಲತೀರದ ಮರಳಿನ ಖನಿಜಗಳ ದೊಡ್ಡ ನಿಕ್ಷೇಪಗಳನ್ನು ಹೊಂದಿದೆ, ಉದಾಹರಣೆಗೆ ಇಲ್ಮೆನೈಟ್, ರೂಟೈಲ್, ಜಿರ್ಕಾನ್, ಮೊನಾಜೈಟ್, ಸಿಲ್ಲಿಮನೈಟ್ ಮತ್ತು ಗಾರ್ನೆಟ್. ಈ ನಿಕ್ಷೇಪಗಳು ಹೆಚ್ಚಾಗಿ ಭಾರತದ ಪರ್ಯಾಯ ದ್ವೀಪದ ಕರಾವಳಿ ಪ್ರದೇಶದಲ್ಲಿವೆ. ಇಲ್ಮೆನೈಟ್ ಭಾರತೀಯ ಕಡಲತೀರದ ಮರಳಿನ ನಿಕ್ಷೇಪಗಳ ಅತಿದೊಡ್ಡ ಘಟಕವಾಗಿದೆ, ಆನಂತರ ಸಿಲ್ಲಿಮನೈಟ್ ಮತ್ತು ಗಾರ್ನೆಟ್. ಪ್ರಪಂಚದಲ್ಲಿ ಗಾರ್ನೆಟ್ ಉತ್ಪಾದನೆಯಲ್ಲಿ ಭಾರತವು ಪ್ರಮುಖ ಸ್ಥಾನ ಹೊಂದಿದೆ. ಇಷ್ಟೆಲ್ಲಾ ಸಂಪದ್ಭರಿತವಾದ ಕರಾವಳಿಯು ಮಾನವನ ಹಸ್ತಕ್ಷೇಪದಿಂದ ಮಾಲಿನ್ಯಕ್ಕೆ ಒಳಗಾಗುತ್ತಿರುವುದು ಖೇದನೀಯ ಎನಿಸುತ್ತದೆ.
ಇಷ್ಟೊಂದು ಜೀವ ಪ್ರಭೇದಗಳನ್ನು ಹೊಂದಿದ ಭಾರತದ ಕರಾವಳಿ ಪ್ರದೇಶವು ಈಗ ಕರಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇಲ್ಲಿ ಕರಗುವುದು ಎಂದರೆ ಅಪಾಯ ಎಂಬುದನ್ನು ಗಮನಿಸುವುದು ಮುಖ್ಯ. ಕರಾವಳಿ ಮಾಲಿನ್ಯವು ಕರಾವಳಿಯ ಆವಾಸಸ್ಥಾನಗಳನ್ನು ಬದಲಾಯಿಸುತ್ತದೆ. ಮೀನು ಮತ್ತು ಇನ್ನಿತರ ಜಲಚರಗಳನ್ನು ನಾಶಪಡಿಸುತ್ತದೆ. ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಹೆಚ್ಚಿನ ಕಸ ಮತ್ತು ಮಾಲಿನ್ಯಕಾರಕಗಳು ಪ್ರಪಂಚದ ಸಾಗರಗಳಲ್ಲಿ ಕೊನೆಗೊಳ್ಳುತ್ತವೆ ಮತ್ತು ಕರಾವಳಿ ಪ್ರದೇಶಗಳ ಬಳಿ ನೀರಿನಲ್ಲಿ ಉಳಿಯುತ್ತವೆ. ಹಲವಾರು ಕಾರಣಗಳಿಂದ ಕರಾವಳಿ ಮಾಲಿನ್ಯವು ಉಂಟಾಗುತ್ತದೆ. ಮಾಲಿನ್ಯಕಾರಕಗಳು ಉದ್ದೇಶಪೂರ್ವಕವಾಗಿ ಸೇರಬಹುದು ಅಥವಾ ಆಕಸ್ಮಿಕವಾಗಿ (ತೈಲ ಸೋರಿಕೆಗಳು) ಸೇರಬಹುದು. ನದಿಗಳು ಸಾಕಷ್ಟು ಮಾಲಿನ್ಯವನ್ನು ಸಮುದ್ರಕ್ಕೆ ಎಸೆಯುತ್ತವೆ, ಕೊಳಚೆನೀರು, ಕೈಗಾರಿಕಾ ತ್ಯಾಜ್ಯಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಹೀಗೆ ವಿವಿಧ ಕಾರಣಗಳಿಂದ ಕರಾವಳಿ ಮಾಲಿನ್ಯಕ್ಕೆ ಒಳಗಾಗುತ್ತಿದೆ.
ಭಾರತದ ಕರಾವಳಿ ನೀರಿನಲ್ಲಿ 1,600 ಮಿಲಿಯನ್ ಟನ್‌ಗಳಷ್ಟು ಕೆಸರು ಪ್ರಮುಖ ಮಾಲಿನ್ಯಕಾರಕಗಳಾಗಿವೆ. ಸುಮಾರು 8,000 ಕೈಗಾರಿಕೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಾರತೀಯ ಕರಾವಳಿ ನೀರಿನಲ್ಲಿ ತಮ್ಮ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತಿವೆ. ಭಾರತೀಯ ಕರಾವಳಿ ನೀರಿನಲ್ಲಿ ವಾರ್ಷಿಕವಾಗಿ ಸುಮಾರು 390 ಮಿಲಿಯನ್ ಟನ್‌ಗಳಷ್ಟು ಕೈಗಾರಿಕಾ ತ್ಯಾಜ್ಯವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಕರಾವಳಿ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಕೈಗಾರಿಕಾ ಮಾಲಿನ್ಯವು ಅಧಿಕವಾಗಿದೆ. ಭಾರತದ ಕರಾವಳಿಯು ಕೇರಳ ಮತ್ತು ಕರ್ನಾಟಕದ ಪಶ್ಚಿಮ ರಾಜ್ಯಗಳ ಕರಾವಳಿಯುದ್ದಕ್ಕೂ ಸವೆತಕ್ಕೆ ಗುರಿಯಾಗುತ್ತದೆ. ಏಶ್ಯದ ಅತಿದೊಡ್ಡ ಉಪ್ಪುನೀರಿನ ಸರೋವರವಾದ ಒಡಿಶಾದ ಚಿಲ್ಕಾ ಸರೋವರವು ಹೂಳು ತುಂಬಿದ ಕಾರಣ ಕುಗ್ಗುತ್ತಿದೆ. ಗೋವಾ, ಮಹಾಬಲಿಪುರಂ ಮತ್ತು ಕೋವಲಂನಂತಹ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಅಜಾಗರೂಕ ನಿರ್ಮಾಣವು ಕರಾವಳಿಯ ಸವೆತವನ್ನು ವೇಗಗೊಳಿಸಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕರಾವಳಿ ಕರಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಭಾರತದ ಕರಾವಳಿಯನ್ನು ಸಂರಕ್ಷಿಸುವ ಮೂಲಕ ಅದರಲ್ಲಿನ ಜೀವಜಗತ್ತನ್ನು ಸಂರಕ್ಷಿಸುವ ಮಹತ್ವದ ಕಾರ್ಯ ಆಗಬೇಕಿದೆ. ಜೀವಜಗತ್ತು ಉಳಿದರೆ ಕರಾವಳಿ ಪ್ರವಾಸೋದ್ಯಮವೂ ಉಳಿಯುತ್ತದೆ ಅಲ್ಲವೇ?