‘ಅನ್ನ’ದ ಬಗ್ಗೆ ವಿವಾದ ಮಾಡುತ್ತಿರುವುದು ಮನುವಾದಿ ಸಂಸ್ಕೃತಿ: ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ
ಬೆಂಗಳೂರು, ಜೂ.18: ‘ಅನ್ನದ ಬಗ್ಗೆ ಕೆಲವರು ವಿವಾದ ಮಾಡುತ್ತಿರುವುದು ಅವರ ಸಂಕುಚಿತ ಮನೋಭಾವ ತೋರಿಸುತ್ತದೆ. ಅಲ್ಲದೆ, ಅದು ಮನುವಾದಿ ಮನೋಭಾವನೆ ಎತ್ತಿ ಹಿಡಿಯುತ್ತದೆ’ ಎಂದು ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಫ್ರೀಡಂಪಾರ್ಕ್ನಲ್ಲಿ ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ-ಕರ್ನಾಟಕ’ ವತಿಯಿಂದ ಆಯೋಜಿಸಿದ್ದ ‘ಸ್ವಾಭಿಮಾನಿ ಕನ್ನಡಿಗರ ಪ್ರಜ್ಞಾದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಐದು ಗ್ಯಾರೆಂಟಿಗಳನ್ನು ಕೊಟ್ಟು ಬಂದ ಪ್ರತಿಫಲವೇ ಕೋಮುವಾದಿ ರಾಜಕೀಯ ಪಕ್ಷ ಸೋಲಲು ಕಾರಣವಾಗಿದೆ. ಬೇರೆ ರಾಜ್ಯದ ಚುನಾವಣೆಗಳಲ್ಲೂ ಇದನ್ನು ಪ್ರಣಾಳಿಕೆಯಾಗಿ ಮಾಡುತ್ತಿದ್ದಾರೆ. ಅನ್ನಭಾಗ್ಯ ಕೊಡುವಂತದ್ದು ಸರಕಾರದ ಜವಾಬ್ದಾರಿಯಾಗಿದೆ’ ಎಂದರು.
ಪ್ರಸ್ತುತ ಅನ್ನಭಾಗ್ಯ ಯೋಜನೆ ಚರ್ಚೆಗೆ ಗ್ರಾಸವಾಗುತ್ತಿದೆ. ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಮ್ಮಂತಹವರ ಸಲಹೆಗಳು ಬೇಕಾಗಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಇವರಿಗೆ ಸಂವಿಧಾನವೇ ಗೊತ್ತಿಲ್ಲ. ಆಹಾರ ಕಾಯ್ದೆ ಕುರಿತು ಮಾಹಿತಿ ಇಲ್ಲ ಎಂದು ತಿಳಿದಂತಿದೆ. ಮುಖ್ಯಮಂತ್ರಿಗೆ ಕರೆ ಮಾಡಿದರೆ, ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಿ, ಮುಖ್ಯಮಂತ್ರಿಗೆ ಕೊಡುವುದಿಲ್ಲ ಎನ್ನುವಂತಹ ಸಂಸ್ಕೃತಿ ಒಳ್ಳೆಯದಲ್ಲ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಖರ್ಚು ಮಾಡಿರುವ ಹಣ ವಸೂಲಿ ಮಾಡಲು ರಾಜ್ಯಭಾರ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಸೋಲಬೇಕಾಗುತ್ತದೆ. ಎಡಪಂಥೀಯರನ್ನು ಬಿಟ್ಟು ಉಳಿದೆಲ್ಲ ಪಕ್ಷಗಳೂ ಮತವನ್ನು ಮತ ಮಾರುಕಟ್ಟೆಗಳಾಗಿ ಮಾಡುತ್ತಿದ್ದಾರೆ. ಪ್ರತ್ಯೇಕ ಸಂಘಟನೆ ಮಾಡಿ ಚುನಾವಣೆ ವೇಳೆ ದುಡ್ಡು ಕೊಡಲು ಬರುವವರನ್ನು ಒದ್ದು ಓಡಿಸುವ ಕೆಲಸವಾದರೆ ಸಂಸದೀಯ ಪ್ರಜಾಪ್ರಭುತ್ವ ಉಳಿಯಲಿದೆ ಎಂದು ಅವರು ತಿಳಿಸಿದರು.
ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ‘ಪಠ್ಯಪುಸ್ತಕ ವಿಚಾರದಲ್ಲಿ ದ್ವೇಷ ಭಾವನೆ ಇರಬಾರದು. ಒಂದೊಂದು ಸರಕಾರ ಇರುವಾಗ ಪಠ್ಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಸತ್ಯ, ಧರ್ಮ, ನೀತಿ ಸೇರಿದಂತೆ ಮಕ್ಕಳಿಗೆ ಒಳ್ಳೆಯದಾಗುವ ವಿಷಯವನ್ನು ಎಲ್ಲರೂ ಅಂಗೀಕರಿಸಬೇಕು’ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ‘ಒಂದೇ ಧರ್ಮ ಇರಬೇಕು, ಏಕರೀತಿಯಲ್ಲಿ ಇರಬೇಕು ಎಂಬ ಕಲ್ಪನೆ ಯಾವ ಮನುಷ್ಯರೂ ಮಾಡಬಾರದು ಎಂಬುದನ್ನು ನಮ್ಮ ಜನ ಬಹಳ ಅತ್ಯುತ್ತಮ ರೀತಿಯಲ್ಲಿ ಚುನಾವಣೆ ಸಂದರ್ಭದಲ್ಲಿ ತೋರಿಸಿಕೊಟ್ಟಿದ್ದಾರೆ. ಇನ್ನು ಮುಂದೆ ಕುವೆಂಪು, ನಾರಾಯಣ ಗುರುಗಳು, ಟಿಪ್ಪು ಸುಲ್ತಾನ್, ಕನಕದಾಸರು ಇರುವ ಪಠ್ಯ ಪುಸ್ತಕದಲ್ಲಿರುತ್ತಾರೆ’ ಎಂದರು.
ಸಾಹಿತಿ ಎಲ್.ಎನ್.ಮುಕುಂದ್ ರಾಜ್, ಸಿದ್ದರಾಮ ಚೈತನ್ಯ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.