ಉರಿಯುತ್ತಿರುವ ಮಣಿಪುರ ತಣ್ಣಗಾಗುವುದು ಯಾವಾಗ?
ಕರ್ನಾಟಕದಲ್ಲೂ ಲಿಂಗಾಯತರು ಮತ್ತು ಒಕ್ಕಲಿಗರನ್ನು ಮುಸಲ್ಮಾನರ ವಿರುದ್ಧ, ದಲಿತರ ಒಂದು ಪಂಗಡವನ್ನು ಇನ್ನೊಂದು ಪಂಗಡದ ವಿರುದ್ಧ ಎತ್ತಿ ಕಟ್ಟಲು ಯತ್ನಿಸಿ ಚುನಾವಣೆಯಲ್ಲಿ ಜನರಿಂದ ಮುಖಭಂಗಕ್ಕೆ ಒಳಗಾದರು. ಕರ್ನಾಟಕದ ಪ್ರಜ್ಞಾವಂತ ಜನ ಇವರನ್ನು ತಿರಸ್ಕರಿಸಿದರು. ಭಾರತ ಎಂಬುದು ಯಾವುದೇ ಒಂದು ಧರ್ಮಕ್ಕೆ, ಸಮುದಾಯಕ್ಕೆ, ಜನಾಂಗಕ್ಕೆ, ಬುಡಕಟ್ಟಿಗೆ ಸೇರಿದ್ದಲ್ಲ.ಇದು ಎಲ್ಲ ಸಮುದಾಯಗಳಿಗೆ ಸೇರಿದ ಸರ್ವಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿಸಿ, ಗೌರವಿಸಿ, ಸೌಹಾರ್ದದಿಂದ ಬದುಕಿದರೆ ಮಾತ್ರ ಇದು ಸುರಕ್ಷಿತವಾಗಿ ಉಳಿಯುತ್ತದೆ.
ಮೇ
3ರಿಂದ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 60 ಸಾವಿರ ಮಂದಿ ಮನೆಮಾರು ಕಳೆದುಕೊಂಡು 350 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನತೆಗೆ ರಕ್ಷಣೆ ನೀಡಬೇಕಾದ ರಾಜ್ಯದ ಬಿಜೆಪಿ ಸರಕಾರ ಕೈ ಚೆಲ್ಲಿ ಕುಳಿತಿದೆ ಮಾತ್ರವಲ್ಲ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ.
ಈಶಾನ್ಯ ಭಾರತದ ಮಣಿಪುರ ಎಂಬ ಪುಟ್ಟ ರಾಜ್ಯ ಒಂದೂವರೆ ತಿಂಗಳಿಂದ ಹೊತ್ತಿ ಉರಿಯುತ್ತಿದೆ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೆಂದು ಹೋಗುತ್ತಿದೆ. ರಕ್ತಪಾತದಿಂದ ನಲುಗಿದೆ. ಈ ಬೆಂಕಿ ಆರಿಸಬೇಕಾದವರು ಮೇಲೇ ಳುತ್ತಿರುವ ಜ್ವಾಲೆಗಳಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ಮಾಜಿ ಪ್ರಧಾನಿಗೆ ವೌನಿ ಬಾಬಾ ಎಂದು ಕುಹಕದ ಮಾತನಾಡಿದವರು ಗಾಢ ವೌನ ತಾಳಿದ್ದಾರೆ.ಕರ್ನಾಟಕದ ಮಾಧ್ಯಮಗಳಲ್ಲಿ ಮಣಿಪುರದ ಸುದ್ದಿ ಅಷ್ಟಾಗಿ ಬರುತ್ತಿಲ್ಲ. ಆದರೆ ಯಾದವೀ ಕಲಹದ ಅಂಚಿಗೆ ಮಣಿಪುರ ಬಂದು ನಿಂತಿದೆ.
ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಮತ್ತಿತರ ಬುಡಕಟ್ಟು ಸಮುದಾಯಗಳ ನಡುವೆ ದ್ವೇಷದ ಅಡ್ಡಗೋಡೆ ಎದ್ದು ನಿಂತು ಅದೀಗ ಹತ್ಯಾಕಾಂಡದ ರೂಪ ತಾಳಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ಆರ್.ಕೆ.ರಂಜನ್ಸಿಂಗ್ ತಮ್ಮ ಪಕ್ಷದ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂಪಾಲದಲ್ಲಿರುವ ತನ್ನ ಮನೆಯ ಮೇಲೆ ಉದ್ರಿಕ್ತ ಗುಂಪುಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದರೂ ರಾಜ್ಯ ಸರಕಾರ ಸೂಕ್ತ ಭದ್ರತೆಯನ್ನು ಒದಗಿಸಿಲ್ಲವೆಂದು ಕೆಂಡ ಕಾರಿದ್ದಾರೆ. ಕೇಂದ್ರದಲ್ಲೂ ಬಿಜೆಪಿ, ಮಣಿಪುರ ರಾಜ್ಯದಲ್ಲೂ ಬಿಜೆಪಿ ಸರಕಾರಗಳಿದ್ದರೂ ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸಲು ಡಬಲ್ ಇಂಜಿನ್ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಇಂಜಿನ್ ಕೆಟ್ಟು ನಿಂತಿದೆ.ಕೇಂದ್ರದ ಇಂಜಿನ್ ದಿಲ್ಲಿ ಬಿಟ್ಟು ಬರುತ್ತಿಲ್ಲ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಓಟಿನ ಬೆಳೆಯನ್ನು ತಗೆಯಲು ಹೊರಟವರು ತಮಗೇನೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ.
ಮಣಿಪುರದ ಜನಾಂಗೀಯ ದ್ವೇಷದ ದಳ್ಳುರಿ ಮೇ 3 ರಿಂದ ಆರಂಭ ವಾದರೂ ಅದನ್ನು ನಿಯಂತ್ರಿಸಲು ಅಲ್ಲಿನ ಬಿಜೆಪಿ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ತಕ್ಷಣ ಸ್ಪಂದಿಸಬೇಕಾದ ದೇಶದ ಗೃಹ ಮಂತ್ರಿ ಅಮಿತ್ ಶಾ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿದ್ದರು.ಕರ್ನಾಟಕವನ್ನು ಹೇಗಾದರೂ ಗೆಲ್ಲುವ ಮೂಲಕ ಇಡೀ ದಕ್ಷಿಣ ಭಾರತವನ್ನು ಕಬಳಿಸಲು ಹೊಂಚು ಹಾಕಿದವರು ಮಣಿಪುರದತ್ತ ಕಣ್ಣೆತ್ತಿ ನೋಡಲಿಲ್ಲ.ದೇಶದ ಪ್ರಧಾನಿಯೇ 15 ದಿನ ಕರ್ನಾಟಕದಲ್ಲಿ ಝೆಂಡಾ ಊರಿ ಜಿಲ್ಲೆ, ತಾಲೂಕು, ಹಳ್ಳಿ,ಪಟ್ಟಣಗಳನ್ನು ಸುತ್ತಿ ವೇದಿಕೆಯ ಮೇಲಿನಿಂದ ಜನರಿಗೆ ನಡು ಬಗ್ಗಿಸಿ, ನಮಸ್ಕಾರ ಮಾಡುವ ಪ್ರಹಸನ ನಡೆಸಿ ದಾಗ ಮಣಿಪುರ ದಳ್ಳುರಿಯಲ್ಲಿ ಬೆಂದು ಹೋಗುತ್ತಿತ್ತು.ಇವರು ಕರ್ನಾಟಕ ಚುನಾವಣೆಯನ್ನು ಮುಗಿಸಿ ದಿಲ್ಲಿಗೆ ಹೋಗಿ ಹೊಸ ಸಂಸತ್ ಭವನವನ್ನು ಪುರೋಹಿತರ ಸಮ್ಮುಖದಲ್ಲಿ ಉದ್ಘಾಟಿಸಿದ ನಂತರ ಮಣಿಪುರದ ಬೆಂಕಿಯ ಜ್ವಾಲೆಯ ಬಿಸಿ ಇವರಿಗೆ ತಟ್ಟಿತು.
ಕೊನೆಗೂ ಗೃಹ ಮಂತ್ರಿ ಅಮಿತ್ ಶಾ ಮಣಿಪುರ ರಾಜಧಾನಿ ಇಂಪಾಲಕ್ಕೆ ಹೋಗಿದ್ದು 26 ದಿನಗಳ ನಂತರ ಮೇ 29ರಂದು. ಅಮಿತ್ ಶಾ ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿ ಕಾಟಾಚಾರದ ಶಾಂತಿ ಸಮಿತಿಯನ್ನು ಮಾಡಿ ಬಂದರು. ಆದರೆ, ಮಣಿಪುರ ತಣ್ಣಗಾಗಲಿಲ್ಲ.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಣಿಪುರವನ್ನು 'ಭಾರತದ ಆಭರಣ' ಎಂದು ಕರೆದಿದ್ದರು. ಮೈತೈ, ನಾಗಾ, ಕುಕಿ, ಜೋಮಿ ಸೇರಿ ಹಲವಾರು ಬುಡಕಟ್ಟು ಸಮುದಾಯಗಳು ಇಲ್ಲಿ ನೆಲೆಸಿವೆ. ವಿಭಿನ್ನ ಸಮುದಾಯಗಳು ಒಂದು ಭೂ ಪ್ರದೇಶದಲ್ಲಿ ಕೂಡಿ ಸೌಹಾರ್ದದಿಂದ ಬದುಕುತ್ತಿರುವ ನೂರಾರು ಉದಾಹರಣೆಗಳು ಜಗತ್ತಿನಲ್ಲಿ ಇವೆ. ಮಣಿಪುರ ದಲ್ಲೂ ಜೊತೆಗೂಡಿ ಬದುಕಬಹುದಿತ್ತು.ಆದರೆ ಎಲ್ಲ ಸಮುದಾಯಗಳಲ್ಲಿ ಉಗ್ರವಾದಿಗಳು, ಜನಾಂಗೀಯ ದ್ವೇಷಿಗಳು ಇರುವಂತೆ ಮಣಿಪುರದ ಮೈತೈ ಮತ್ತಿತರ ಸಮುದಾಯಗಳಲ್ಲಿ ಇದ್ದಾರೆ.ಹೀಗಾಗಿ ಬಂಡುಕೋರ ಚಟುವಟಿಕೆಗಳಿಗೂ ಇದು ಹೆಸರಾಗಿದೆ. ಇಂಥ ಮಣಿಪುರ 1980ರಿಂದಲೂ ಅಶಾಂತಿಯ ತಾಣವಾಗಿದೆ.ಇಲ್ಲಿನ ಬಂಡುಕೋರರನ್ನು, ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ ಪಿಎ) ಜಾರಿಯಲ್ಲಿದೆ. ಈ ವಿಶೇಷಾಧಿಕಾರ ಕಾಯ್ದೆಯನ್ನು ಅಲ್ಲಿನ ಸೈನಿಕರು ದುರ್ಬಳಕೆ ಮಾಡಿಕೊಂಡು ಅನುಮಾನ ಬಂದವರನ್ನೆಲ್ಲ ಗುಂಡಿಕ್ಕಿ ಕೊಲ್ಲುತ್ತ ಬಂದಿದ್ದಾರೆ.ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಉದಾಹರಣೆಗಳೂ ಇವೆ.ಇದನ್ನು ಪ್ರತಿಭಟಿಸಿ 2000ದಲ್ಲಿ ಬೆತ್ತಲೆ ಪ್ರತಿಭಟನೆಯನ್ನು ನಡೆಸಿದ್ದರು.ಅಲ್ಲಿನ ಸೇನೆಯ ದೌರ್ಜನ್ಯವನ್ನು ವಿರೋಧಿಸುವುದಕ್ಕಾಗಿ ವಿಧವೆಯವರೆಲ್ಲ ಸೇರಿ ಸಂಘಟನೆ ಕಟ್ಟಿಕೊಂಡಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರಕಾರ ಮುಂದಾದಾಗ ಕುಕಿ ಸೇರಿದಂತೆ ಕೆಲವು ಬುಡಕಟ್ಟು ಸಮುದಾಯಗಳು ಸಾಂಕೇತಿಕ ವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದೇ ನೆಪವಾಗಿ ಮೈತೈ ಸಮುದಾಯದ ಕೆಲವು ಉಗ್ರಗಾಮಿ ಜನಾಂಗವಾದಿ ಗುಂಪುಗಳು ಕುಕಿಗಳ ಮೇಲೆ ದ್ವೇಷದ ದಾಳಿಯನ್ನು ಆರಂಭಿಸಿದವು. ಇಂಥ ಸಂದರ್ಭದಲ್ಲಿ ಎಲ್ಲ ಬುಡಕಟ್ಟು ಸಮುದಾಯಗಳು ಹಾಗೂ ಮೈತೈ ಜನಾಂಗದ ಪ್ರಮುಖರ ಸಭೆಯನ್ನು ಕರೆದು ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬಹುದಾಗಿತ್ತು.ಇಂಥ ಪರಿಹಾರ ಕಂಡು ಹಿಡಿಯಬೇಕಾದರೆ ಸರಕಾರದ ಚುಕ್ಕಾಣಿ ಹಿಡಿದವರು ಎಲ್ಲ ಜಾತಿ, ಮತ, ಸಮುದಾಯ, ಬುಡಕಟ್ಟು ಗಳ ಆಚೆಗೆ ನಿಂತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿಂದೆ ನಾಗಾಲ್ಯಾಂಡ್ನಂಥ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿದ ಉದಾಹರಣೆಗಳಿವೆ. ಆದರೆ ಜನ ವಿಭಜನೆಯನ್ನೇ ರಾಜಕೀಯ ಸಿದ್ಧಾಂತವನ್ನಾಗಿ ಮಾಡಿಕೊಂಡಿರುವುದರಿಂದ ಇಂಥ ಮನಸ್ಸು ಕಟ್ಟುವ, ಹೃದಯ ಬೆಸೆಯುವ ಕಾರ್ಯ ಸಾಧ್ಯವಾಗುವುದಿಲ್ಲ. ಮಣಿಪುರದಲ್ಲಿ ಇವರು ಮಾಡಿದ್ದು ಅದನ್ನೇ. ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಸಮುದಾಯದ ವಿರುದ್ಧ ಬಹುಸಂಖ್ಯಾತ ಮೈತೈ ಸಮುದಾಯವನ್ನು ಎತ್ತಿಕಟ್ಟಿದರು. ಮೈತೈ ಸಮುದಾಯದ ಕೆಲವು ಉಗ್ರಗಾಮಿ ಗುಂಪುಗಳು ಹಿಂದುತ್ವದ ಅಮಲನ್ನು ಏರಿಸಿಕೊಂಡವು.ಈಗ ಪರಿಸ್ಥಿತಿ ಕೈ ಮೀರಿದೆ.
ಮಣಿಪುರ ಸಮಸ್ಯೆಗೆ ವಿಶೇಷ ಸಶಸ್ತ್ರ ಪಡೆಗಳಿಂದ, ಸೇನಾಪಡೆಯ ತುಕಡಿಗಳಿಂದ, ಪೊಲೀಸ್ ಪಡೆಗಳಿಂದ ಬಂದೂಕನ್ನು ಎದೆಗೆ ಹಿಡಿದು ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಮೊದಲು ಸರಕಾರದ ಧೋರಣೆ ಬದಲಾಗಬೇಕು.ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ ವಿಭಜನಕಾರಿ ರಾಜಕೀಯದ ಬದಲು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಸು ಗೆಲ್ಲುವ ಮಾರ್ಗವನ್ನು ಅನುಸರಿಸಬೇಕು.ಇಂಥ ಸಮಸ್ಯೆಗಳಿಗೆ ಪರಿಹಾರ ಸಾವರ್ಕರ್, ಗೋಳ್ವಾಲ್ಕರ್ ಪುಸ್ತಕಗಳಲ್ಲಿ ಸಿಗುವುದಿಲ್ಲ. ಅದರ ಬದಲಾಗಿ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಶ್ಚಂದ್ರ ಭೋಸ್, ಭಗತ್ ಸಿಂಗ್ ಮಾರ್ಗದಲ್ಲಿ ಹೊಸ ದಾರಿ ಕಂಡು ಹಿಡಿಯಬೇಕು. ಆದರೆ ಇಂದಿನ ಅಧಿಕಾರ ಸೂತ್ರ ಹಿಡಿದವರಿಗೆ ಅಂಥ ಬೌದ್ಧಿಕ ಶಕ್ತಿಯಾಗಲಿ, ಪ್ರಾಮಾಣಿಕತೆಯಾಗಲಿ ಇಲ್ಲ ಎಂಬುದಕ್ಕೆ ನಿಯಂತ್ರಣಕ್ಕೆ ಬಾರದ ಮಣಿಪುರ ಕಣ್ಣೆದುರಿನ ಸಾಕ್ಷಿಯಾಗಿದೆ.
ಭಾರತ ವಿದೇಶಿ ಆಳ್ವಿಕೆಯಿಂದ ಸ್ವತಂತ್ರ ಗೊಂಡಾಗ ವ್ಯಾಪಕ ಕೋಮು ಹಿಂಸಾಚಾರ ನಡೆಯಿತು.ಆಗ ಮಹಾತ್ಮಾ ಗಾಂಧಿ ಉರಿಯುತ್ತಿದ್ದ ನೌಖಾಲಿಗೆ ಬರಿಗಾಲಲ್ಲಿ ಕೋಲೂರುತ್ತ ಹೋದರು.ಅಲ್ಲಿನ ಅತಿರೇಕವಾದಿಗಳು ಗಾಂಧಿ ಬರಬಾರದೆಂದು ದಾರಿಯುದ್ದಕ್ಕೂ ಕಲ್ಲು, ಮುಳ್ಳು, ಗಾಜಿನ ಚೂರುಗಳನ್ನು ಹಾಕಿದರು. ಗಾಂಧೀಜಿ ಕಲ್ಲು ಮುಳ್ಳಿನ ಮೇಲೆ ಕಾಲೂರುತ್ತ ಅಲ್ಲಿ ಹೋಗಿ ಉರಿಯುವ ಬೆಂಕಿಯನ್ನು ನಂದಿಸಿ ಬೆಳಕು ಚೆಲ್ಲುವ ದೀಪವನ್ನು ಹಚ್ಚಿದರು. ಗಾಯಗೊಂಡ ಮಣಿಪುರಕ್ಕೆ ಅಂಥ ಹೊಸ ಪರಿಹಾರ ಮಾರ್ಗಬೇಕಾಗಿದೆ.
ಆದರೆ ಸಮಸ್ಯೆಗಳ ಪರಿಹಾರದಲ್ಲಿ ಈಗ ಅಧಿಕಾರದಲ್ಲಿ ಇರುವವರಿಗೆ ಆಸಕ್ತಿ ಇಲ್ಲ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇವರು ಅದೇ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ತಮಿಳುನಾಡಿನ ಡಿ.ಎಂ.ಕೆ. ಮಂತ್ರಿ ಸೆಂಥಿಲ್ ಅವರನ್ನು ಬಂಧಿಸುವುದು,ದಿಲ್ಲಿಯ ತೀನ್ಮೂರ್ತಿ ಭವನದ ಆವರಣದೊಳಗೆ ಇರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಿಸುವುದು, ಸಿಬಿಐ, ಎನ್.ಐ.ಎ.ಗಳನ್ನು ಬಳಸಿ ಕೊಂಡು ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕುವುದು ಇವೇ ಮುಂತಾದ ಫ್ಯಾಶಿಸ್ಟ್ ಕುಚೇಷ್ಟೆ ನಡೆಸಿದ್ದಾರೆ.
ಕರ್ನಾಟಕದಲ್ಲೂ ಲಿಂಗಾಯತರು ಮತ್ತು ಒಕ್ಕಲಿಗರನ್ನು ಮುಸಲ್ಮಾನರ ವಿರುದ್ಧ, ದಲಿತರ ಒಂದು ಪಂಗಡವನ್ನು ಇನ್ನೊಂದು ಪಂಗಡದ ವಿರುದ್ಧ ಎತ್ತಿ ಕಟ್ಟಲು ಯತ್ನಿಸಿ ಚುನಾವಣೆಯಲ್ಲಿ ಜನರಿಂದ ಮುಖಭಂಗಕ್ಕೆ ಒಳಗಾದರು. ಕರ್ನಾಟಕದ ಪ್ರಜ್ಞಾವಂತ ಜನ ಇವರನ್ನು ತಿರಸ್ಕರಿಸಿದರು.
ಭಾರತ ಎಂಬುದು ಯಾವುದೇ ಒಂದು ಧರ್ಮಕ್ಕೆ, ಸಮುದಾಯಕ್ಕೆ, ಜನಾಂಗಕ್ಕೆ, ಬುಡಕಟ್ಟಿಗೆ ಸೇರಿದ್ದಲ್ಲ.ಇದು ಎಲ್ಲ ಸಮುದಾಯಗಳಿಗೆ ಸೇರಿದ ಸರ್ವಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿಸಿ, ಗೌರವಿಸಿ, ಸೌಹಾರ್ದದಿಂದ ಬದುಕಿದರೆ ಮಾತ್ರ ಇದು ಸುರಕ್ಷಿತವಾಗಿ ಉಳಿಯುತ್ತದೆ.