ಓ ಮೆಣಸೇ...
ಮಹಾತ್ಮಾಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಭಾರತದ ಸುಪುತ್ರ - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ಆದ್ದರಿಂದ ಗಾಂಧೀಜಿಯ ಹತ್ಯೆ ಪರಮ ದೇಶಭಕ್ತಿಯ ಕೃತ್ಯವಾಗಿತ್ತು ಎಂದು ಯಾವಾಗ ಘೋಷಿಸುತ್ತೀರಿ?
ನಮ್ಮ ಶಾಲಾ ಪಠ್ಯ ಪುಸ್ತಕ ಎನ್ನುವುದು ಪಕ್ಷ, ಜಾತಿ, ಧರ್ಮದ ವಿಚಾರವಲ್ಲ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಮತ್ತೇನು ಅದು, ಸಮಾಜಕ್ಕೆ ಹಿಂಸೆ, ದ್ವೇಷ, ಅಸಹಿಷ್ಣುತೆಗಳನ್ನು ಕಲಿಸುವುದಕ್ಕಿರುವ ಉಪಕರಣವೇ?
ಕರ್ನಾಟಕದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ರಾಜಕೀಯ ದ್ವೇಷ ಸಾಧಿಸುವ ಮುನ್ಸೂಚನೆ ಸಿಕ್ಕಿದೆ - ತೇಜಸ್ವಿ ಸೂರ್ಯ, ಸಂಸದ
ನೀವು ಹಾಗೆ ಹೇಳಿದಾಗಲೆಲ್ಲಾ, ಅನ್ಯರ ಮೇಲೆ ದೋಷಾರೋಪ ಹೊರಿಸಲಿಕ್ಕಾಗಿ ನೀವೇ ಏನಾದರೂ ಆಕ್ರಮಣ ಮಾಡಿಸುತ್ತೀರೆಂದು ನಿಮ್ಮ ಕಾರ್ಯಕರ್ತರು ಅಂಜುತ್ತಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಸಾಮಾ ಬಿನ್ ಲಾದೆೆನ್‌ನಂತೆ ಗಡ್ಡ ಬಿಡುತ್ತಾರೆ - ಸಾಮ್ರಾಟ್ ಚೌಧರಿ, ಬಿಹಾರ ಬಿಜೆಪಿ ಅಧ್ಯಕ್ಷ
ಆತ ಮೋದೀಜಿಯನ್ನು ರಾಹುಲ್ ಗಾಂಧಿ ಎಂದು ಕನ್‌ಫ್ಯೂಝ್ ಮಾಡಿಕೊಂಡಿರಬೇಕು.
ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ - ನಳಿನ್ ಕುಮಾರ್ ಕಟೀಲು, ಸಂಸದ
ಇದೇನು ನೀವು ಮೋದೀಜಿಯವರ ಮುಂದಿಟ್ಟಿರುವ ಬೇಡಿಕೆಯೇ?
ಲೋಕಸಭೆ ಚುನಾವಣೆಗೆ ಈಗಿಂದಲೇ ಪ್ರತಿಪಕ್ಷಗಳು ಒಗ್ಗಟ್ಟಾದರೆ ಮಾತ್ರ ಫಲಿತಾಂಶ ಬದಲಾಗಬಹುದು - ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಇಲ್ಲವಾದರೆ ಪ್ರತಿಪಕ್ಷಕ್ಕೆ ವಲಸೆ ಬಂದವರು ಮರಳಿ ಹೋಗಬಹುದೇ?
ಅಡ್ರೆಸ್ ಇಲ್ಲದಂತೆ ಮಾಡಲು ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿದೆ - ಶಿವರಾಜ್ ತಂಗಡಗಿ, ಸಚಿವ
ಸುಳ್ಳು ಮತ್ತು ದ್ವೇಷ ಇದ್ದಲ್ಲಿ ಬಿಜೆಪಿ ಇದ್ದೇ ಇರುತ್ತೆ. ಅದಕ್ಕೆ ಬೇರೆ ಎಡ್ರಸ್ ಬೇಕಾಗಿಲ್ಲ.
ಕುಟುಂಬ ರಾಜಕೀಯದಿಂದ ದೂರವಾಗಲು ನನಗೆ ಸಾಧ್ಯವೇ ಇಲ್ಲ - ಸುಪ್ರಿಯಾ ಸುಳೆ, ಎನ್‌ಸಿಪಿ ಕಾರ್ಯಾಧ್ಯಕ್ಷೆ
ಅಮಿತ್ ಶಾ ಪುತ್ರನ ಜೊತೆ ಸಮಾಲೋಚಿಸಿದರೆ ಏನಾದರೂ ಸಲಹೆ ಸಿಗಬಹುದು.
ಮುಂದಿನ ವರ್ಷಗಳಲ್ಲಿ ತಮಿಳುನಾಡಿನ ನಾಯಕರೊಬ್ಬರು ಭಾರತದ ಪ್ರಧಾನಮಂತ್ರಿ ಹುದ್ದೆಗೆ ಏರಬೇಕು - ಅಮಿತ್ ಶಾ, ಕೇಂದ್ರ ಸಚಿವ
ಅಷೆಲ್ಲಾ ಕಾಯಬೇಕೇ? ಇದೇ ಅವಧಿಯ ಕೊನೆಯ ವರ್ಷವನ್ನು ಮೋದಿಯವರಿಂದ ಕಿತ್ತು ಸ್ಟಾಲಿನ್‌ರಿಗೆ ಕೊಡಬಹುದಲ್ಲಾ!
ವಿಧಾನ ಸಭೆಯಲ್ಲಿ ಗಲಾಟೆ, ಗದ್ದಲ ಪರಂಪರೆಯನ್ನು ಆದಷ್ಟು ದೂರ ಮಾಡಲು ಪ್ರಯತ್ನಿಸುತ್ತೇನೆ -ಯು.ಟಿ.ಖಾದರ್, ವಿಧಾನಸಭೆ ಸಭಾಧ್ಯಕ್ಷ
ಎಲ್ಲ ಬಗೆಯ ಹಿಂಸಾಚಾರದಲ್ಲಿ ಗರಿಷ್ಠ ಅನುಭವ ಉಳ್ಳವರು ಬಹುಸಂಖ್ಯೆಯಲ್ಲಿರುವ ಸದನ ಅದು. ಹೆಲ್ಮೆಟ್ ಧರಿಸಿ ಡ್ಯೂಟಿ ಆರಂಭಿಸಿ. ಹಿಂದಿ ಮಾತನಾಡಬೇಡಿ.
ಜೀವನ ಎಂಬ ನಾಟಕ ರಂಗದಲ್ಲಿ ಕೆಲವೊಮ್ಮೆ ನಮ್ಮವರು ಎಂದು ನಂಬಿದವರ ಕುತಂತ್ರಕ್ಕೆ ಅವಮಾನದ ವಿಷವನ್ನು ಕುಡಿಯಬೇಕಾಗುತ್ತದೆ - ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿ ಒಕ್ಕೂಟದ ಅಧ್ಯಕ್ಷ
ಈ ನಾಟಕದಲ್ಲಿ ಪರಮ ದುಷ್ಟರು ಸಜ್ಜನರಂತೆ ಕಾಣಿಸಿಕೊಳ್ಳಲು ಎಷ್ಟು ಪ್ರಯಾಸಪಟ್ಟರೂ ಅವರ ನೈಜ ಮುಖ ಖಂಡಿತ ಬಯಲಾಗುತ್ತದೆ.
ಮಾನಸಿಕ ಮತ್ತು ದೈಹಿಕ ಸದೃಢತೆಯ ಮಕ್ಕಳನ್ನು ಪಡೆಯಲು ಗರ್ಭಿಣಿಯರು 'ಸುಂದರಕಾಂಡ'ವನ್ನು ಓದಬೇಕು - ತಮಿಳುಸಾಯಿ ಸೌಂದರರಾಜನ್, ತೆಲಂಗಾಣ ರಾಜ್ಯಪಾಲ
ಮಾನಸಿಕ ಸ್ವಾಸ್ಥ ಇರುವ ರಾಜ್ಯಪಾಲರನ್ನು ಪಡೆಯಲು ತೆಲಂಗಾಣದವರು ಏನು ಮಾಡಬೇಕು?
ನನಗೆ ಶುದ್ಧ ರಾಜಕೀಯ ಬೇಕು - ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ನಾಯಕ
ಅದಕ್ಕಾಗಿ ಮೊದಲು ನೀವು ಮುಖ್ಯಮಂತ್ರಿಯಾಗುವ ಮಹದಾಸೆ ತೊರೆದು, ಶುದ್ಧರಾಗಬೇಕು.
ಹೊಸ ಪೀಳಿಗೆಗೆ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಅಗತ್ಯ ಈಗ ತುಂಬಾ ಇದೆ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಮುಖಂಡ
ಕೆಟ್ಟದೇನೆಂಬುದನ್ನು ಕಲಿಸಲು ಆರೆಸ್ಸೆಸ್ ಪರಂಪರೆಯನ್ನು ಪರಿಚಯಿಸುವ ಜೊತೆ ಒಳ್ಳೆಯದೇನೆಂಬುದನ್ನು ಕಲಿಸಲು ಇತರರ ಪರಂಪರೆಯನ್ನೂ ಪರಿಚಯಿಸಬೇಕು.
ಸುಪ್ರೀಂಕೋರ್ಟ್ ಆದೇಶ ಒಪ್ಪದ ಪ್ರಧಾನಿ ಮೋದಿ ಹಿಟ್ಲರ್ ಶಾಹಿ ಆಡಳಿತ ನಡೆಸುತ್ತಿದ್ದಾರೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಮೋದಿಯವರು ಜಗತ್ತಿನಲ್ಲಿ ಯಾರದಾದರೂ ವಿವೇಕ ಪೂರ್ಣ ಮಾತು ಕೇಳಿದ ದಾಖಲೆ ಉಂಟೇ?
ಧರ್ಮದ ವಿಚಾರದಲ್ಲಿ ಭಾರತ ಐಶ್ವರ್ಯವಂತ ದೇಶ - ಡಾ.ಜಿ.ಪರಮೇಶ್ವರ್, ಸಚಿವ
ದಾರಿದ್ರ ನೋಡಬೇಕಿದ್ದರೆ, ಒಪ್ಪೊತ್ತು ಊಟಕ್ಕಿಲ್ಲದ ಕೋಟಿಗಟ್ಟಲೆ ಭಾರತೀಯರನ್ನೊಮ್ಮೆ ನೋಡಬೇಕು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವುದು ಗಾಳಿ ಸುದ್ದಿ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಹಾಗಾದರೆ ನಿಮ್ಮ ಪಕ್ಷ ಬಿಜೆಪಿಯಲ್ಲಿ ಲೀನವಾಗಿ ಬಿಡುತ್ತದೆಂಬ ಸುದ್ದಿ ಸುಳ್ಳೇ?
ಪ್ರಧಾನಿ ಮೋದಿಯಷ್ಟು ಕೆಲಸ ಮಾಡಲು ಸಾಧ್ಯವಾಗದ್ದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಯಿತು - ಸಿ.ಟಿ.ರವಿ, ಮಾಜಿ ಶಾಸಕ
ನಿಜವಾಗಿ ಆ ಪ್ರಧಾನಿಯವರು ಏನೂ ಮಾಡದೆ ಏನೂ ಮಾತನಾಡದೆ ಸುಮ್ಮನೆ ಇದ್ದು ಬಿಟ್ಟಿದ್ದರೂ ಅವರ ಪಕ್ಷಕ್ಕೆ ಒಂದಷ್ಟು ಚಾನ್ಸ್ ಇತ್ತು.
ರಾಜ್ಯದಲ್ಲಿ ಅಂಬಾನಿ, ಅದಾನಿ ಸಮೂಹಗಳು ಬಂಡವಾಳ ಹೂಡಿಕೆ ಮಾಡಲು ಯಾವುದೇ ನಿರ್ಬಂಧ ಇಲ್ಲ - ಎಂ.ಬಿ.ಪಾಟೀಲ್, ಸಚಿವ
ಬಂಡವಾಳ ಬಂದರೆ ತಾನೇ ಕಮಿಷನ್ ಬರೋದು?
ಕಾಂಗ್ರೆಸ್‌ನವರು ದ್ವೇಷದಿಂದ ಪಠ್ಯಪುಸ್ತಕ ಪರಿಷ್ಕರಿಸುವುದು ಸರಿಯಲ್ಲ - ಬಿ.ಸಿ.ನಾಗೇಶ್, ಮಾಜಿ ಸಚಿವ
ದ್ವೇಷದ ಮೇಲೆ ಬಿಜೆಪಿಗಿರುವ ಏಕಸ್ವಾಮ್ಯವನ್ನು ಕಾಂಗ್ರೆಸ್‌ನವರು ಅಂಗೀಕರಿಸಲೇಬೇಕು.
ಬಡವರಿಗೆ ಕೊಟ್ಟ ಯೋಜನೆಯನ್ನು ಬಿಜೆಪಿ ಬೆಂಬಲಿಸಿದೆಯೇ ಹೊರತು ಯಾವತ್ತೂ ವಿರೋಧಿಸಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ
ಲವ್ ಜಿಹಾದ್, ಹಲಾಲ್ - ಜಟ್ಕಾ, ಕೋಮುಗಲಭೆ ಇವೆಲ್ಲ ನೀವು ಬಡವರಿಗೆ ಕೊಟ್ಟ ಯೋಜನೆಗಳೇ?
ಬಿಜೆಪಿಗೆ ಮತ ನೀಡಿಲ್ಲ ಎಂದು ಕೇಂದ್ರ ಸರಕಾರ ಅಕ್ಕಿ ನೀಡದೆ ಬಡವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ - ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಬಿಜೆಪಿಗೆ ಮತ ನೀಡಿದ ಕಾರಣಕ್ಕೆ ಬಡವರನ್ನು ಸತಾಯಿಸಿದವರು, ನೀಡದೆ ಇದ್ದರೆ ಬಿಟ್ಟಾರೆ? ಕಾಂಗ್ರೆಸ್ - ಬಿಜೆಪಿ ಹಿರಿಯ ನಾಯಕರೆಲ್ಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ - ಪ್ರತಾಪ ಸಿಂಹ, ಸಂಸದ
ಕೊಂದಾಣಿಕೆ ರಾಜಕಾರಣಕ್ಕಿಂತ ವಾಸಿ.