ಉಚಿತ ಕೊಡುಗೆಗಳು ಅರ್ಹರಿಗೆ ದೊರಕಲಿ
ಯಾವುದೇ ದೇಶ, ರಾಜ್ಯ ಯಾವುದೇ ಉಚಿತ ಕೊಡುಗೆಗಳನ್ನು ನೀಡಬೇಕಾದರೆ ಅದರ ಅವಶ್ಯಕತೆ ಇರುವವರನ್ನು ಸರಿಯಾಗಿ ಗುರುತಿಸಿ ಅದನ್ನು ತಲುಪಿಸಬೇಕಾಗಿದೆ. ಇಲ್ಲವೆಂದರೆ ಈಗಾಗಲೇ ಸಾಲದ ಸುಳಿಯಲ್ಲಿರುವ ದೇಶ ಮತ್ತು ರಾಜ್ಯಗಳು, ಕೊನೆಗೆ ಜನರೂ ಕೂಡ ಅದರ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಕರ್ನಾಟಕದ ಚುನಾವಣೆ ಫಲಿತಾಂಶ ದೇಶಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಿದ್ದೇನೊ ನಿಜ. ಆದರೆ ಅದಕ್ಕಾಗಿ ನೀಡುವ ಉಚಿತ ಕೊಡುಗೆಗಳು ಮಾತ್ರ ರಾಜಕೀಯ ಪಕ್ಷಗಳನ್ನು ದಾರಿ ತಪ್ಪಿಸುವಂತೆ ತೋರುತ್ತಿದೆ. ಒಂದು ದೇಶ ಸಮಾನವಾಗಿ ಅಭಿವೃದ್ಧಿಯಾಗಬೇ ಕಾದರೆ ಅದು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಬೇಕಾಗುತ್ತದೆ. ಜೊತೆಗೆ ಉಚಿತ ಕೊಡುಗೆಗಳು ಯಾರಿಗೆ ತಲುಪಬೇಕು ಎನ್ನುವುದು ಬಹುಮುಖ್ಯ ಪ್ರಶ್ನೆಯಾಗುತ್ತದೆ. ಸರಕಾರಗಳು ಯಾವುದೇ ವಸ್ತುವನ್ನು ಉಚಿತವಾಗಿ ನೀಡುತ್ತವೆ ಎಂದರೆ ಸಾಕು ಅದರ ಅವಶ್ಯಕತೆ ಇರುವವರಿಗಿಂತ ಅವಶ್ಯಕತೆ ಇಲ್ಲದವರೇ ಹೆಚ್ಚಾಗಿ ಸುಳ್ಳು ಮಾಹಿತಿಗಳನ್ನು ನೀಡಿ ಪಡೆದುಕೊಳ್ಳುತ್ತಾರೆ. ನಿಜವಾಗಿ ಬಿಪಿಎಲ್ ಮತ್ತು ಎಪಿಎಲ್ ವ್ಯಾಪ್ತಿಗೆ ಬರದವರೂ ಸಹ ಸುಳ್ಳು ಮಾಹಿತಿಗಳನ್ನು ನೀಡಿ ಉಚಿತ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಯಾಕೆಂದರೆ ನಮ್ಮ ಇಡೀ ಸಿಸ್ಟಮ್ ಅದಕ್ಕೆ ಒಗ್ಗಿಕೊಂಡುಬಿಟ್ಟಿದೆ.
ಚುನಾವಣೆ ಪೂರ್ವಕಾಲದಲ್ಲಿ ಕಾಂಗ್ರೆಸ್ ಅವಸರವಾಗಿ ಐದು ಉಚಿತ ಗ್ಯಾರಂಟಿಗಳನ್ನು ಕೊಟ್ಟು ಎಡವಟ್ಟು ಮಾಡಿಕೊಂಡಿದೆ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಒಂದು ರಾಜ್ಯದ ಬಜೆಟ್ ಎಷ್ಟು? ಆ ರಾಜ್ಯದ ಒಟ್ಟಾರೆ ಆರ್ಥಿಕ ಯೋಜನೆಗಳು ಮತ್ತು ಖರ್ಚಿಗೆ ಎಷ್ಟು ಹಣ ಬೇಕಾಗುತ್ತದೆ? ಆ ಸಂಪನ್ಮೂಲಗಳು ಎಲ್ಲಿಂದ ಕ್ರೋಡೀಕರಣಗೊಳ್ಳುತ್ತದೆ ಎನ್ನುವ ಲೆಕ್ಕಾಚಾರ ಇರಲೇಬೇಕು. ಇಲ್ಲದಿದ್ದರೆ ದೇಶ, ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತವೆ.
ಪ್ರಸ್ತುತ ನಮ್ಮ ದೇಶದ ಒಟ್ಟು ವಿದೇಶಿ ಸಾಲ ಮಾರ್ಚ್ 2022ಕ್ಕೆ ಸುಮಾರು 613.1 ಬಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದೆ.
ಕರ್ನಾಟಕ ರಾಜ್ಯದ ಸಾಲ 2024-25ಕ್ಕೆ ಸುಮಾರು 6.6 ಲಕ್ಷ ಕೋಟಿ ದಾಟಬಹುದು. 2023ರ ಕರ್ನಾಟಕದ ಒಟ್ಟು ಬಜೆಟ್ ರೂ. 3,09, 182 ಕೋಟಿಗಳು. ಇನ್ನು ಕಾಂಗ್ರೆಸ್ ಸರಕಾರ ಈಗ ಕೊಟ್ಟಿರುವ 5 ಗ್ಯಾರಂಟಿಗಳ ವೆಚ್ಚ ಸುಮಾರು ರೂ.59,000 ಕೋಟಿ ಎನ್ನಲಾಗಿದೆ!
ಈ ಐದು ಗ್ಯಾರಂಟಿಗಳನ್ನು ಗಮನಿಸಿದಾಗ ಉಚಿತವಾಗಿ ಕೊಡುವ ಅನುಕೂಲಗಳು ಸಮಾಜದ ಎಲ್ಲಾ ಸ್ತರಗಳ ಜನರಿಗೆ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಇದು ಸರಕಾರ ಘೋಷಿಸಿರುವ ಐದು ಉಚಿತ ಕೊಡುಗೆಗಳೆಂದರೆ: ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾಮಾನ್ಯ ಮತ್ತು ಎಕ್ಸ್ಪ್ರೆಸ್ ಬಸ್ಸುಗಳಲ್ಲಿ ರಾಜ್ಯದ ಎಲ್ಲಾ ಕಡೆ ಉಚಿತ ಪ್ರಯಾಣ, ಎಪಿಎಲ್-ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ (ಇನ್ನಿತರ ಧಾನ್ಯಗಳ ಸೇರಿ), ರಾಜ್ಯದ ಎಲ್ಲಾ ಕುಟುಂಬಗಳಿಗೂ 200 ಯುನಿಟ್ ವಿದ್ಯುತ್ ಉಚಿತ, ಮನೆಯ ಹಿರಿಯ ಮಹಿಳೆಗೆ ಮಾಸಿಕ 2,000 ರೂ., 2022-23ರಲ್ಲಿ ಡಿಗ್ರಿ ಮುಗಿಸಿದವರಿಗೆ 3,000 ಮತ್ತು ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗೆ 1,500 ರೂ.ಗಳ ಭತ್ತೆ, (ಎರಡು ವರುಷಗಳವರೆಗೆ).
ಎಪಿಎಲ್-ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ (ಇತರ ಧಾನ್ಯಗಳು ಸೇರಿ) ಉಚಿತ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳ ಲೇಬೇಕು. 2022-23 ಡಿಗ್ರಿ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕೊಡುವ ನಿರುದ್ಯೋಗಿ ಭತ್ತೆಯನ್ನು ಸಹ ಒಪ್ಪಿಕೊಳ್ಳಬಹುದು. ಇನ್ನು ಮನೆಯ ಹಿರಿಯ ಮಹಿಳೆಗೆ 2,000 ರೂ. ಒಪ್ಪಿಕೊಂಡರೂ ಅದನ್ನು ಯಾರು ಯಾರಿಗೆ ಯಾವ ರೀತಿಯ ಷರತ್ತುಗಳನ್ನು ಹಾಕಿ ಕೊಡಬೇಕು ಎನ್ನುವುದು ಹಲವಾರು ಸಮಸ್ಯೆಗಳಿಗೆ ಕಾರಣವಾ ಗಲಿದೆ. ಯಾವುದೇ ಯೋಜನೆ ಮಾಡಿದಾಗ ಅದರ ಒಟ್ಟಾರೆ ಸಾಧಕ
ಬಾಧಕಗಳನ್ನು ಕೂಲಂಕಷವಾಗಿ ಅರ್ಥಮಾಡಿಕೊಂಡು ಮಾಡಬೇಕಾಗಿದೆ. ಇಲ್ಲವೆಂದರೆ ಅದು ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ.
ಎಲ್ಲಾ ಮಹಿಳೆಯರಿಗೆ ರಾಜ್ಯದ ಎಲ್ಲಾ ಕಡೆ ಉಚಿತ ಬಸ್ ಎನ್ನುವುದನ್ನು ಮೊದಲ ಮೂರು ದಿನಗಳಲ್ಲಿ ಗಮನಿಸಿದರೆ ಇದು ಸರಿ ಇಲ್ಲ ಎನ್ನುವ ಆಲೋಚನೆ ಮೂಡುತ್ತದೆ. ಮೊದಲ ಅರ್ಧ ದಿನ 1,40,000, ಎರಡನೇ ದಿನ 5,71,023, ಮೂರನೇ ದಿನ 41,34,726 ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನುವುದನ್ನು ನೋಡಿದರೆ ದಿಗ್ಭ್ರಮೆ ಮೂಡಿಸುತ್ತದೆ. ಇಲ್ಲಿ ಗಮನಕ್ಕೆ ಬರುತ್ತಿರುವ ವಿಷಯವೆಂದರೆ ನಿಜವಾಗಿ ಉಚಿತ ಬಸ್ ಪ್ರಯಾಣ ದೊರಕಬೇಕಾದ ಕಡುಬಡವರು ಮತ್ತು ಬಡವರಾದ ಗ್ರಾಮೀಣ ಪ್ರದೇಶದ ಮಹಿಳೆಯರು ತೀರಾ ಕಡಿಮೆ ಲಾಭವನ್ನು ಪಡೆದುಕೊಳ್ಳುತ್ತಿರುವುದು ಕಾಣಿಸುತ್ತಿದೆ. ಕಾರಣ ಅವರು ಬಸ್ಸಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ಇಳಿದುಬಿಟ್ಟರೆ ಸಾಕೆ? ಉಳಿದ ಖರ್ಚುಗಳಿಗೆ ಅವರಿಗೆ ಹಣ ಎಲ್ಲಿಂದ ಬರಬೇಕು? ದಿನಾ ಕೂಲಿನಾಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವವರು ಬಸ್ಸುಗಳಲ್ಲಿ ಪ್ರಯಾಣ ಮಾಡುವುದು ಅಷ್ಟಕ್ಕಷ್ಟೆ. ನಗರ ಪ್ರದೇಶದಲ್ಲಿ ಗಾರ್ಮೆಂಟ್ಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಡಿಮೆ ಸಂಬಳ ಪಡೆಯುವವರು, ದಿನಗೂಲಿ ಮಾಡುವವರು ಮತ್ತು ಇನ್ನಿತರ ತಾತ್ಕಾಲಿಕ ಕೆಲಸಗಳನ್ನು ಮಾಡುವ ಮಹಿಳೆಯರಿಗೆ ಇದು ಸಹಜವಾಗಿಯೇ ತುಂಬಾ ಅನಕೂಲಕರ ವಿಷಯವಾಗಿದೆ.
ಆದರೆ ಮೂರು ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆಯನ್ನು ನೋಡಿದರೆ, ಇವರಲ್ಲಿ ಹೆಚ್ಚಿನವರು ಕೆಳಮಧ್ಯಮ ಮತ್ತು ಮಧ್ಯಮ ತರಗತಿಯ ಮಹಿಳೆಯರೇ ಹೆಚ್ಚಾಗಿ, ಅದೂ ಕೂಡ ಪುಣ್ಯಕ್ಷೇತ್ರಗಳಿಗೆ ದೌಡಾಯಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುತ್ತದೊ ಗೊತ್ತಿಲ್ಲ. ಮಹಿಳೆಯರ ಜೊತೆಗೆ ಬಸ್ಸುಗಳಲ್ಲಿ ಗಂಡಸರು ಓಡಾಡುವುದೇ ಕಷ್ಟವಾಗಬಹುದು! ಎಪಿಎಲ್/ಬಿಪಿಎಲ್ ಮಹಿಳೆಯರನ್ನು ಬಿಟ್ಟು ಉಳಿದ ಮಹಿಳೆಯರಿಂದ ಕನಿಷ್ಠ ಶೇ.50ರಷ್ಟು ಟಿಕೆಟ್ ಹಣ ವಸೂಲಿ ಮಾಡುವುದರ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಇಲ್ಲವೆಂದರೆ ಇದು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಸಾಲದ್ದಕ್ಕೆ ಇನ್ನೂ ಹೆಚ್ಚು ಬಸ್ಸುಗಳನ್ನು ಹಾಕಿ ಎನ್ನುವ ಒತ್ತಾಯ ಬೇರೆ ಕಾಣಿಸಿಕೊಂಡಿದೆ.
ಇನ್ನು ರಾಜ್ಯದ ಎಲ್ಲಾ ಕುಟುಂಬಗಳಿಗೂ 200 ಯುನಿಟ್ ವಿದ್ಯುತ್ ಉಚಿತ ಎನ್ನುವುದು ಮಾತ್ರ ನೂರಕ್ಕೆ ನೂರು ಪಟ್ಟು ಸರಿಯಲ್ಲ. ಇದರ ಬಗ್ಗೆ ಕೆಲವು ಸಚಿವರು ಕೆಲವು ಷರತ್ತುಗಳನ್ನು ಹಾಕಲಾಗುತ್ತದೆ ಎಂದರೆ ಕೆಲವರು ಎಲ್ಲರಿಗೂ 200 ಯುನಿಟ್ವರೆಗೂ ಉಚಿತ ಎನ್ನುತ್ತಾರೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಮತ್ತು ಬಳಕೆಯಾಗುವ ವಿದ್ಯುತ್ತಿಗೆ ಅಜಗಜಾಂತರ ವ್ಯತ್ಯಾಸವಿದೆ. ಶೇ.90 ವಿದ್ಯುತ್ತನ್ನು ರಾಜ್ಯ ಸರಕಾರ ಕೊಂಡುಕೊಳ್ಳುತ್ತಿದೆ. ಉಚಿತ ವಿದ್ಯುತ್ತನ್ನು ನೀಡುವುದರ ಬಗ್ಗೆ ಸರಕಾರ ಇನ್ನೂ ಭಾರೀ ಗೊಂದಲದಲ್ಲಿದ್ದು ಬಹುಶಃ ಇದಕ್ಕೆ ಸರಕಾರ ಕೈ ಹಾಕಬಾರದಿತ್ತು. ಹಾಕಿದರೂ ಎಲ್ಲಾ ಕುಟುಂಬಗಳಿಗೂ ಮೊದಲ 50 ಯುನಿಟ್ ಮಾತ್ರ ಉಚಿತ ಕೊಟ್ಟಿದ್ದರೆ ಸಾಕಾಗಿತ್ತು. ರಾಜ್ಯದಲ್ಲಿರುವ 20-30 ಪ್ರತಿಶತ ಮೇಲ್ಮಧ್ಯಮ ಜನರು, ಹಣವಂತರು, ರಾಜಕಾರಣಿಗಳು, ಅಧಿಕಾರಿಗಳು ಮತ್ತಿತರರಿಗೆ ಉಚಿತ ವಿದ್ಯುತ್ತನ್ನು ನೀಡುವುದು ಎಷ್ಟು ಸರಿ? ಇದರ ಬಗ್ಗೆ ಸರಕಾರ ಚೆನ್ನಾಗಿ ಆಲೋಚಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕಿತ್ತು.
ಇನ್ನು ಇಂದಿರಾ ಕ್ಯಾಂಟೀನ್ ಮಾತ್ರ ರಾಜ್ಯದ ಎಲ್ಲಾ ಕಡೆ ತೆರೆದರೂ ಒಳ್ಳೆಯದು. ಅದು ಬಡವರು, ಕೂಲಿಕಾರರು ಮತ್ತು ನಿರ್ಗತಿಕರಿಗೆ ಸರಕಾರ ನೀಡುವ ಅತ್ಯಂತ ಔಷತ್ಪೂರ್ಣ ಕೆಲಸವಾಗಿದೆ. ಮನೆಯನ್ನು ನಡೆಸುವುದು ಮುಖ್ಯವಾಗಿ ಹೆಣ್ಣುಮಕ್ಕಳೇ ಆಗಿರುವು ದರಿಂದ ಬಡ ಹೆಣ್ಣುಮಕ್ಕಳಿಗೆ ಮೇಲಿನ ಉಚಿತ ಭಾಗ್ಯಗಳು ನಿಜವಾಗಿಯೂ ದೊರಕಬೇಕಾಗಿದೆ ಮತ್ತು ಅದು ಸಮಾಜಕ್ಕೆ ಸಲ್ಲ ಬೇಕಾದ ಕೆಲಸವೂ ಆಗಿದೆ. ಆದರೆ ಉಳ್ಳವರಿಗೆ ಉಚಿತ ಕೊಡುಗೆಗಳನ್ನು ನೀಡುವುದು ಸರಿಯಲ್ಲ. ಅದಕ್ಕಿಂತ ಮುಖ್ಯವಾಗಿ ಅವರ್ಯಾರೂ ಉಚಿತ ಕೊಡುಗೆಗಳನ್ನು ನೀಡಿ ಎಂದು ಕೇಳಲೂ ಇಲ್ಲ.
ಯಾವುದೇ ದೇಶ, ರಾಜ್ಯ ಯಾವುದೇ ಉಚಿತ ಕೊಡುಗೆಗಳನ್ನು ನೀಡಬೇಕಾದರೆ ಅದರ ಅವಶ್ಯಕತೆ ಇರುವವರನ್ನು ಸರಿಯಾಗಿ ಗುರುತಿಸಿ ಅದನ್ನು ತಲುಪಿಸಬೇಕಾಗಿದೆ. ಇಲ್ಲವೆಂದರೆ ಈಗಾಗಲೇ ಸಾಲದ ಸುಳಿಯಲ್ಲಿರುವ ದೇಶ ಮತ್ತು ರಾಜ್ಯಗಳು, ಕೊನೆಗೆ ಜನರೂ ಕೂಡ ಅದರ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಜಗತ್ತಿನಲ್ಲಿ ಎಷ್ಟೋ ದೇಶಗಳು ಸಾಲದ ಸುಳಿಗೆ ಸಿಲುಕಿಕೊಂಡಿರುವುದನ್ನು ನೋಡಬಹುದು. ಒಂದು ವೇಳೆ ಐದು ಗ್ಯಾರಂಟಿಗಳನ್ನು ಕೊಡಲೇಬೇಕು ಅದು ಕಾಂಗ್ರೆಸ್ ಸರಕಾರದ ಪ್ರತಿಷ್ಠೆ ಎಂದು ಸರಕಾರ ತಿಳಿದುಕೊಂಡರೆ ಕೊನೆಗೆ ಪಶ್ಚಾತ್ತಾಪಡಬೇಕಾಗುತ್ತದೆ. ಯಾವುದೇ ಸರಕಾರ ಒಂದು ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ. ತೆಗೆದುಕೊಂಡರೂ ಅದೇ ಕೊನೆಯೇನಲ್ಲ. ಕಾಲಕಾಲಕ್ಕೆ ದೊರಕುವ ಸಂಪನ್ಮೂಲಗಳು ಮತ್ತು ಅದರ ಆದಾಯ ವೆಚ್ಚ ಎರಡನ್ನೂ ಸರಿದೂಗಿಸುವಂತೆ ಸರಕಾರ ನೋಡಿಕೊಳ್ಳಬೇಕು. ಐದೂ ಗ್ಯಾರಂಟಿಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸುವುದು ಸೂಕ್ತ.