ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಚಂಡಿಗಢ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸೂದ್ ವಿರುದ್ಧ ಪ್ರಿಯಾಂಕ್ ಖರ್ಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಜೂನ್ 17ರಂದು ಆ್ಯನಿಮೇಟೆಡ್ ವೀಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವೀಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ''ಬಡವರ ಏಳಿಗೆಗಾಗಿ ಕೆಲಸ ಮಾಡ್ತಿರೋದು ಬಿಜೆಪಿಗರಿಗೆ ಇಷ್ಟ ಆಗುತ್ತಿಲ್ಲ. ಅದಕ್ಕೆ ಈ ರೀತಿ ಸುಳ್ಳು ಆರೋಪಿಸಿ ಪೋಸ್ಟ್ ಮಾಡ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ಕೊಟ್ಟಿದ್ದೇವೆ. ಅವರು ತಾಕತ್ ಇದ್ದರೆ ಕರ್ನಾಟಕಕ್ಕೆ ಬಂದು ಹೇಳಲಿ. ನಾವು ಹೇಗೆ ಆ್ಯಂಟಿ ಇಂಡಿಯಾ ಆಕ್ಟಿವಿಟಿ ಮಾಡ್ತಿದ್ದೀವಿ ಅಂತಾ ಹೇಳಲಿ" ಎಂದು ಸವಾಲು ಹಾಕಿದರು.