ಮುಂದಿನ 10 ವರ್ಷ ನಾವೇ ಅಧಿಕಾರಿದಲ್ಲಿರುತ್ತೇವೆ, ಉಚಿತ ಬಸ್ಸಿನಲ್ಲಿ ನೂಕುನುಗ್ಗಲು ಬೇಡ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಜೂ.19: ಮುಂದಿನ ಹತ್ತು ವರ್ಷ ನಾವೇ ರಾಜ್ಯದಲ್ಲಿ ಅಧಿಕಾರಿದಲ್ಲಿರುತ್ತೇವೆ. ಶಕ್ತಿ ಯೋಜನೆಯೂ ಮುಂದುವರೆಸುತ್ತೇವೆ.ಹಾಗಾಗಿ, ಮಹಿಳೆಯರು ಒಟ್ಟಿಗೆ ಬಸ್ಸಿಗಳಿಗೆ ತೆರಳಿ ಜನದಟ್ಟಣೆ, ನೂಕುನುಗ್ಗಲು ಉಂಟು ಮಾಡುವುದು ಬೇಡ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಮೂರು ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ.ಆದರೆ, ಹಲವೆಡೆ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದರಿಂದ ಬಸ್ಸುಗಳಲ್ಲಿ ನೂಕಾ ನುಗ್ಗಲು ಉಂಟಾಗಿದ್ದು, ನಿರ್ವಾಹಕರು, ಚಾಲಕರಿಗೆ ತೊಂದರೆ ಉಂಟಾಗಿದೆ ಎಂದರು.
ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸತತ ಐದು ವರ್ಷಗಳ ಕಾಲ ಇರಲಿದೆ. ಜೊತೆಗೆ, ಮುಂದಿನ ಬಾರಿಯೂ ನಾವು ಅಧಿಕಾರಕ್ಕೆ ಬರುತ್ತೇವೆ.ಹಾಗಾಗಿ, 10 ವರ್ಷಗಳ ಕಾಲ ಈ ಯೋಜನೆ ಮುಂದುವರೆಯುತ್ತದೆ. ಆದ ಕಾರಣ ಯಾರೋ ಸಹ ಯೋಚನೆ ಮಾಡುವ ಅಗತ್ಯವಿಲ್ಲ. ಒಟ್ಟಿಗೆ ಹೋಗುವ ಬದಲು, ಕೆಲಸದ ನಿಮಿತ್ತ, ಅಗತ್ಯಕ್ಕೆ ತಕ್ಕಂತೆ ಈ ಯೋಜನೆ ಬಳಕೆ ಮಾಡಿಕೊಂಡು ಇತರರಿಗೂ ಸಹಕಾರಿ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರಿಗೆ ಸಿಬ್ಬಂದಿಗೂ ಒತ್ತಡ ಹೆಚ್ಚಾಗಬಾರದು. ಈ ಸಂಬಂಧ ಇಲಾಖೆಯ ನಿರ್ದೇಶಕರೊಂದಿಗೆ ಮಾತುಕತೆನಡೆಸಿದ್ದೇನೆ.ಮುಂದಿನ ದಿನಗಳಲ್ಲಿ ಈ ಜನದಟ್ಟಣೆ ಕಡಿಮೆಯಾಗುವ ವಿಶ್ವಾಸ ಇದೆ ಎಂದು ರಾಮಲಿಂಗಾರೆಡ್ಡಿ ನುಡಿದರು.