ಬಿರಿಯಾನಿ ನೀಡಲಿಲ್ಲವೆಂಬ ಕಾರಣಕ್ಕೆ ಹಲ್ಲೆ: ಕರಸೇ ಅಧ್ಯಕ್ಷ ಟಿ.ರಮೇಶ್‍ಗೌಡ ಬಂಧನ
ಬೆಂಗಳೂರು, ಜೂ. 19: ‘ಬಿರಿಯಾನಿ ನೀಡಲಿಲ್ಲವೆಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ರಕ್ಷಣೆಗೆ ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಠಾಣೆಯಲ್ಲಿ ರಂಪಾಟ ಮಾಡಿದ್ದ ಆರೋಪದಡಿ ಕರ್ನಾಟಕ ರಕ್ಷಣಾ ಸೇನೆ ಸಂಸ್ಥಾಪಕ ಅಧ್ಯಕ್ಷ ಟಿ.ರಮೇಶ್ ಗೌಡ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂ.10ರ ರಾತ್ರಿ ನಡೆದಿರುವ ಘಟನೆ ಸಂಬಂಧ ಹೋಟೆಲ್ ಸಹಾಯಕ ವ್ಯವಸ್ಥಾಪಕ ವಿದ್ಯಾನಂದ್ ಹಾಗೂ ಪಿಎಸ್‍ಐ ಎನ್.ವಿ.ಕೌಶಿಕ್ ಪ್ರತ್ಯೇಕ ದೂರು ನೀಡಿದ್ದಾರೆ. ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಿಸಿಕೊಂಡು, ಕರಸೇ ಅಧ್ಯಕ್ಷ ರಮೇಶ್ ಗೌಡನನ್ನು ಬಂಧಿಸಲಾಗಿದೆ. ಕೃತ್ಯದ ವೇಳೆ ಆರೋಪಿ ಜೊತೆಗಿದ್ದ ಚಂದನ್ ರೆಡ್ಡಿ ಹಾಗೂ ಸುರೇಶ್ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟಿ.ರಮೇಶ್‍ಗೌಡ ಹಾಗೂ ಆತನ ಬೆಂಬಲಿಗರು ಸಹಕಾರ ನಗರದಲ್ಲಿರುವ ಬಿರಿಯಾನಿ ಹೋಟೆಲ್‍ಗೆ ರಾತ್ರಿ ಹೋಗಿದ್ದಾರೆ. ಬಿರಿಯಾನಿ ಕೊಡುವಂತೆ ಹೇಳಿದ್ದಾರೆ. ಬಿರಿಯಾನಿ ಖಾಲಿ ಆಗಿರುವುದಾಗಿ ಹೋಟೆಲ್ ಸಹಾಯಕ ವ್ಯವಸ್ಥಾಪಕ ವಿದ್ಯಾನಂದ್ ತಿಳಿಸಿದ್ದಾರೆ. ಅಷ್ಟಕ್ಕೆ ಕೋಪಗೊಂಡಿದ್ದ ಟಿ.ರಮೇಶ್‍ಗೌಡ, ‘ನಾನು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷನಾಗಿದ್ದೇನೆ, ನನಗೇ ಬಿರಿಯಾನಿ ಇಲ್ಲವೆಂದು ಹೇಳುತ್ತಿರಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೋಟೆಲ್‍ನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಹೋಟೆಲ್‍ನಲ್ಲಿರುವ ಎಲ್ಲರನ್ನೂ ಸುಮ್ಮನೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿದ್ದ ಎಂದು ತಿಳಿದುಬಂದಿದೆ.
ಹೋಟೆಲ್‍ನ ಗಲಾಟೆ ಮಾಹಿತಿ ತಿಳಿದು ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ಮಾಡದಂತೆ ಟಿ.ರಮೇಶ್‍ಗೌಡಗೆ ತಾಕೀತು ಮಾಡಿದ್ದರು. ಸಿಬ್ಬಂದಿ ವಿರುದ್ಧವೂ ಜಗಳ ತೆಗೆದಿದ್ದ ಆರೋಪಿ ಟಿ.ರಮೇಶ್‍ಗೌಡ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗಸ್ತಿನಲ್ಲಿದ್ದ ಪಿಎಸ್‍ಐ ಕೌಶಿಕ್ ಸಹ ಸ್ಥಳಕ್ಕೆ ಹೋಗಿದ್ದರು. ಅವರ ಮೇಲೂ ಆರೋಪಿ ಹರಿಹಾಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಿ.ರಮೇಶ್‍ಗೌಡನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹೊಯ್ಸಳ ವಾಹನದಲ್ಲಿ ಕೂರಿಸಿದ್ದಾಗ ಪಿಎಸ್‍ಐ ಸಮವಸ್ತ್ರ ಹಿಡಿದು ಎಳೆದಾಡಿದ್ದಾನೆ. ಠಾಣೆಗೆ ಹೋಗುತ್ತಿದ್ದಂತೆ, ಪಿಎಸ್‍ಐ ಜೊತೆ ಠಾಣೆಯಲ್ಲೂ ಜಗಳ ತೆಗೆದಿದ್ದ ಆರೋಪಿ ಟಿ.ರಮೇಶ್‍ಗೌಡ, ‘ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನಾಳೆಯೇ ಠಾಣೆಯಿಂದ ವರ್ಗಾವಣೆ ಮಾಡಿಸುತ್ತೇನೆ’ ಎಂದು ನಿಂದಿಸಿ ಪಿಎಸ್‍ಐ ಹಾಗೂ ಠಾಣೆಯಲ್ಲಿದ್ದ ಎಲ್ಲರ ಕರ್ತವ್ಯಕ್ಕೂ ಆರೋಪಿ ಅಡ್ಡಿಪಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.