ಪಠ್ಯ ಸೇರ್ಪಡೆ-ಒಂದು ಸ್ಪಷ್ಟನೆ
ಜೂನ್ 19, 2023ರ 'ವಾರ್ತಾಭಾರತಿ' ಯಲ್ಲಿ ದೇವನೂರರ 'ಎದೆಗೆ ಬಿದ್ದ ಅಕ್ಷರ' ಪಾಠವನ್ನು ಪಠ್ಯದಲ್ಲಿ ಸೇರಿಸುವಂತೆ ಎಸ್ಎಫ್ಐ ಸಂಘಟನೆ ಒತ್ತಾಯಿಸಿರುವುದರ ವರದಿಯನ್ನು ನೋಡಿದೆ.
ಯಾವುದೇ ಪಠ್ಯಪುಸ್ತಕಕ್ಕೆ ಪುಟಗಳ ಇತಿಮಿತಿಯ ಹಿನ್ನೆಲೆಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ಪಠ್ಯ ಆಯ್ಕೆ ಸಮಿತಿಯ ಅಭಿರುಚಿಯನ್ನೂ ನಾವು ಗೌರವಿಸಬೇಕು. ಇಂದಿನ ದಿನಗಳಲ್ಲಿ ನಾವು ನೋಡಬೇಕಾದ್ದು ಇಷ್ಟೆ: ಸಂವಿಧಾನ ವಿರೋಧಿಯಾದ ಚಾತುರ್ವರ್ಣ ಪ್ರತಿಪಾದಿಸುವ ಹಿಂದುತ್ವದ ಆಶಯದ ವಿಷ ಇಲ್ಲದಂತೆ ನೋಡಿಕೊಳ್ಳಬೇಕು. ಬದಲಿಗೆ ಸಂವಿಧಾನದ ಆಶಯಗಳಿಗೆ ಪೂರಕವಾದ ವಿಶಾಲ ಹಿಂದೂ ಧರ್ಮದ ಸಮತ್ವದ ನೋಟ ಇರುವಂತೆ ನೋಡಿಕೊಳ್ಳಬೇಕು ಹಾಗೂ ಈ ಲೋಕದ ಎಲ್ಲಾ ಧರ್ಮ, ಪಂಥ, ಮತಗಳಲ್ಲಿ ಚಿಗುರಿರುವ ಐಕ್ಯ, ಸಮಾನತೆ, ಮಾನವೀಯ ಅಂಶಗಳನ್ನು ನಾವು ಒಳಗೊಳ್ಳಬೇಕಾಗಿದೆ. ಜೊತೆಗೆ ಜ್ಞಾನದೊಳಕ್ಕೂ ಮೌಢ್ಯ ನುಸುಳುತ್ತಿರುವುದನ್ನು ಎಚ್ಚರಿಕೆಯಿಂದ ತಡೆಗಟ್ಟಬೇಕು. ಬಹುಶಃ ಇದಿಷ್ಟೆ. ಇದನ್ನು ನಾವು ನೋಡದೆ, 'ನನಗೆ ಇಷ್ಟವಾಗುವ ಪಠ್ಯ ಇರಲಿ, ಇಷ್ಟವಾಗುವವರ ಪಠ್ಯ ಇರಲಿ ಅಥವಾ ನನಗೆ ಒಪ್ಪಿತ ಐಡಿಯಾಲಜಿ ಪಠ್ಯ ಇರಲಿ' ಎಂದುಕೊಂಡರೆ, ಪಠ್ಯ ಪುಸ್ತಕ ರಚನೆಯೇ ಮುಗಿಯದ ಕತೆಯಾಗಿ ಬಿಡುತ್ತದೆ. ಇದನ್ನು ಎಸ್ಎಫ್ಐ ಸಂಘಟನೆಯ ಗೆಳೆಯರು ದಯವಿಟ್ಟು ಗಮನಿಸಲಿ.