ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೊಮ್ಮಾಯಿ, ಆರ್. ಅಶೋಕ್ ಪೊಲೀಸ್ ವಶಕ್ಕೆ
ಬೆಂಗಳೂರು, ಜೂ.20: ರಾಜ್ಯ ಸರಕಾರದ ನೀತಿಗಳನ್ನು ಖಂಡಿಸಿ ಮತ್ತು ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಬೇಕು ಎಂದು ಆಗ್ರಹಿಸಿ ಬೃಹತ್ ಧರಣಿ ನಡೆಸಲು ಮುಂದಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಮಂಗಳವಾರ ಮೌರ್ಯ ವೃತ್ತದ ಬಳಿ ಮಾಜಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಮುನಿರಾಜು, ಎಂ.ಕೃಷ್ಣಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಛಲವಾದಿ ನಾರಾಯಣಸ್ವಾಮಿ, ಮಂಜುನಾಥ್, ನಾರಾಯಣಗೌಡ ಮತ್ತಿತರ ಪ್ರಮುಖರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮುನ್ನ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಇದೊಂದು ಸುಳ್ಳ- ಮಳ್ಳ ಸರಕಾರ. ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರಕಾರ ಇದಾಗಿದೆ. ಅಲ್ಲದೆ, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಈಗಾಗಲೆ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ನೀವು ಅದಕ್ಕೆ 10 ಕೆಜಿ ಸೇರಿಸಿ ಕೊಡುವುದನ್ನು ಬಿಟ್ಟು ಪ್ರತಿಭಟಿಸುತ್ತೀರಾ? ಎಂದು ಪ್ರಶ್ನಿಸಿದರು.
ನಾವು ಪೊಲೀಸ್ ರಾಜ್ಯಕ್ಕೆ ಹೆದರುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಹೋರಾಟ ವಿಧಾನಸಭೆ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ. ಅಲ್ಲದೆ, ಸರಕಾರದ ಸುಳ್ಳು ಭರವಸೆಗಳನ್ನು ಜನ ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಅಕ್ಕಿ ವಿಚಾರದಲ್ಲಿ ಸುಳ್ಳುಗಳನ್ನೆ ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ಷರತ್ತುಗಳ ಮೇಲೆ ಜಾರಿ ಮಾಡುತ್ತಿದ್ದು, ಅವರು ಮಾತು ತಪ್ಪಿದ್ದಾರೆ. ಇದೀಗ ಅಕ್ಕಿ ಕೊಡುವುದನ್ನು ಮುಂದೂಡಲು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅಧಿಕಾರ ಕೊಟ್ಟ ಮೇಲೂ ಬೀದಿಗೆ ಬಂದಿದ್ದಾರೆ ಅಂದರೆ ಯೋಗ್ಯತೆ ಇಲ್ಲದವರು ಎಂದರ್ಥ ಎಂದು ವಾಗ್ದಾಳಿ ನಡೆಸಿದರು.