ವಿಳಂಬವಾದರೂ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: 'ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೇವೆ. ನಾವು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿಗೆ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎನ್ನುವುದನ್ನು ಮರೆಯುತ್ತಿದೆ. ಈ ಕಾಯ್ದೆ ಬಂದಿದ್ದರಿಂದ 5 ಕೆಜಿ ಅಕ್ಕಿ ಕೊಡುವುದು ಮುಂದುವರೆದಿದೆ'' ಎಂದು ತಿಳಿಸಿದರು.
'ಬಿಜೆಪಿ ಸರಕಾರ ಸರ್ವಾಧಿಕಾರಿಯಲ್ಲ. ಇದೊಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಒಕ್ಕೂಟ ರಚನೆಯನ್ನು ಹೊಂದಿದ್ದೇವೆ. ಕೇಂದ್ರ ಸರಕಾರವೇ ಭತ್ತ ಬೆಳೆಯುತ್ತದೆಯೇ. ಎಲ್ಲೆಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲಿಂದ ಅಕ್ಕಿಯನ್ನು ಪಡೆಯುತ್ತಾರೆ' ಎಂದರು.
'ದ್ವೇಷದ ರಾಜಕಾರಣ ಮಾಡುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ನಮ್ಮ ಪಕ್ಷದ ವತಿಯಿಂದ ಎಲ್ಲೆಡೆ ಪ್ರತಿಭಟನೆ ಮಾಡಲಾಗಿದೆ. ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಹೇಳುತ್ತಾರೆ. ಇದೇ ಇವರ ಸಹಕಾರಿ ಒಕ್ಕೂಟ ವ್ಯವಸ್ಥೆಯೇ?' ಎಂದು ಅವರು ಪ್ರಶ್ನೆ ಮಾಡಿದರು.