ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ
ಬೆಂಗಳೂರು, ಜೂ.20: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆ ಸುರಿಯಿತು.
ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತವರಣವಿತ್ತು. ನಂತರ ಜೋರು ಮಳೆ ಆರಂಭವಾಯಿತು. ಅದೇ ರೀತಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚನ್ನಪಟ್ಟಣದ ಮತ್ತಿತರ ಕಡೆ ಭಾರೀ ಮಳೆಯಾಗಿದೆ.
ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದಿದ್ದರಿಂದ ಶಾಲಾ ಮಕ್ಕಳು ಹಾಗೂ ಉದ್ಯೋಗ ಸ್ಥಳಕ್ಕೆ ಹೋಗುವವರಿಗೆ ಅಡ್ಡಿಯಾಯಿತು. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಜೆ.ಸಿ.ರಸ್ತೆ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಹೆಬ್ಬಾಳ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಮಳೆಯಿಂದಾಗಿ ಭಾರೀ ಟ್ರಾಫಿಕ್ ಉಂಟಾಯಿತು.
ಮುಂದಿನ ನಾಲ್ಕು ದಿನ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಗಾಳಿಯ ವೇಗ ಗಂಟೆಗೆ 40 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡು ಭಾಗದಲ್ಲಿಯೂ ಮಳೆ ಅಬ್ಬರ ಜೋರಾಗಿದೆ. ಬಹುತೇಕ ಕಡೆ ಬಿಸಿಲಿನ ಪ್ರಮಾಣ ಇಳಿಕೆಯಾಗಿದೆ. ಉತ್ತರ ಒಳನಾಡಿನ ಬೀದರ್, ಧಾರವಾಡ, ಗದಗ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.