ಎಮರ್ಜೆನ್ಸಿ ಘನಘೋರ-ಆದರೆ ಅದನ್ನು ಬೆಂಬಲಿಸಿತ್ತೇಕೆ ಸಂಘಪರಿವಾರ?!
ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!
ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಮಣಿಯನ್ ಸ್ವಾಮಿಯವರು. 2000ನೇ ಇಸವಿಯ ಜೂನ್ 13ರಂದು 'ದಿ ಹಿಂದು' ಪತ್ರಿಕೆಗೆ ಬರೆದ “The Unlearnt Lessons Of Emergency”
ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.
ಭಾಗ-1
ಇದೇ ಜೂನ್ 25ಕ್ಕೆ ಇಂದಿರಾಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 48 ವರ್ಷಗಳಾಗುತ್ತವೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಕರಾಳ ಘಟ್ಟವಾಗಿದ್ದದ್ದು ಇಂದಿರಾ ಗಾಂಧಿಯವರು ಭಾರತದ ಮೇಲೆ ಹೇರಿದ ತುರ್ತುಸ್ಥಿತಿಯ ಆ 20 ತಿಂಗಳುಗಳು.
ಆದರೆ ಅದನ್ನು ಮರೆಸುವಂತೆ ಮತ್ತು ಮೀರಿಸುವಂತೆ ಮೋದಿ ನೇತೃತ್ವದ ಕಳೆದ ಒಂಭತ್ತು ವರ್ಷಗಳ ಅಘೊಷಿತ ಮತ್ತು ಸರ್ವವ್ಯಾಪಿ ತುರ್ತುಸ್ಥಿತಿ ಇಂಡಿಯಾ ದೇಶದಲ್ಲಿ ಜಾರಿಯಲ್ಲಿದೆ. ಇಂದಿರಾ ಎಮರ್ಜೆನ್ಸಿ ರಾಜಕೀಯ ವಲಯಕ್ಕೆ ಸೀಮಿತವಾಗಿದ್ದರೆ ಮೋದಿ ಎಮರ್ಜೆನ್ಸಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಎಲ್ಲಾ ಆಯಾಮಗಳನ್ನು ಅತಂತ್ರಗೊಳಿಸಿದೆ. ಇಂದಿರಾ ಎಮರ್ಜೆನ್ಸಿ ಕೇವಲ 20 ತಿಂಗಳು ಇದ್ದರೆ ಮೋದಿ ಸರ್ವಾಧಿಕಾರ ಹತ್ತನೇ ವರ್ಷದೆಡೆ ಧಾವಿಸುತ್ತಿದೆ. ಇಪ್ಪತ್ತು ತಿಂಗಳ ಇಂದಿರಾ ಎಮರ್ಜೆನ್ಸಿಯ ವಿರುದ್ಧ ದೇಶದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲೂ ಬಹುಮತದ ಆಕ್ರೋಶ ಹುಟ್ಟಿದ್ದರೆ ಮೋದಿಯ ಫ್ಯಾಶಿಸಂಗೆ ಆ ರೀತಿಯ ಪ್ರತಿರೋಧ ಇನ್ನೂ ಕಾಣುತ್ತಿಲ್ಲ. ಬದಲಿಗೆ ಇತ್ತೀಚಿನ ಸರ್ವೇಯೊಂದು ಹೇಳುವಂತೆ ಕಳೆದ ಒಂದು ವರ್ಷದಲ್ಲಿ ರಾಹುಲ್ ಗಾಂಧಿಯ ವರ್ಚಸ್ಸು ಏರಿದ್ದರೂ ಮೋದಿಯ ಜನಪ್ರಿಯತೆ ಕುಗ್ಗಿಲ್ಲ. ಇದಕ್ಕೆ ಪ್ರಧಾನ ಕಾರಣ ಬಿಜೆಪಿ ಮತ್ತು ಸಂಘಪರಿವಾರ ಬಹಳ ವ್ಯವಸ್ಥಿತವಾಗಿ ರೂಪಿಸಿಕೊಂಡಿರುವ ಪ್ರಭಾ ವಲಯ, ಸಂಘಪರಿವಾರದ ಸಂಘಟನಾ ಬಲ ಮತ್ತು ಜನರ ಅಭಿಪ್ರಾಯಗಳನ್ನು ತಮ್ಮ ನೆರೆಟಿವ್ಗೆ ತಕ್ಕಂತೆ ರೂಪಿಸಲು ಹಾಕಿಕೊಳ್ಳುವ ಕಾರ್ಯಕ್ರಮಗಳು ಮತ್ತು ಅದನ್ನು ಕಿಂಚಿತ್ತೂ ವಿಮರ್ಶಿಸದೆ ಪ್ರಚಾರ ಮಾಡುವ ಮಾಧ್ಯಮಗಳ ಬೇಷರತ್ ಗುಲಾಮಗಿರಿ.
ಇದರ ಭಾಗವಾಗಿಯೇ ಪ್ರತಿವರ್ಷ ಎಮರ್ಜೆನ್ಸಿ ಘೋಷಿಸಿದ ದಿನವಾದ ಜೂನ್ 25 ರಂದು ಮೋದಿ ಸರಕಾರ ಒಂದು ಸಂಪ್ರದಾಯದಂತೆ ಎಮರ್ಜೆನ್ಸಿಯ ಕರಾಳತೆಯನ್ನು ದೇಶಕ್ಕೆ ನೆನಪಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ಈ ಸಂದರ್ಭವನ್ನು ಹೇಗೆ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿಯೆಂದು ಮಾತ್ರವಲ್ಲದೆ ತಮ್ಮ ಪಕ್ಷ ಮಾತ್ರ ಎಮರ್ಜೆನ್ಸಿಯಲ್ಲಿ ಸರ್ವಾಧಿಕಾರಿ ವಿರೋಧಿಯಾಗಿತ್ತೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಂಚಲು ಬಳಸಿಕೊಳ್ಳುತ್ತದೆ.
ಅದರಲ್ಲೂ ಕಳೆದ ಒಂಭತ್ತು ವರ್ಷಗಳಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿರೋಧ ಸ್ವಾತಂತ್ರ್ಯಗಳು ಇಂದಿರಾ ಎಮರ್ಜೆನ್ಸಿ ಕಾಲಕ್ಕಿಂತಲೂ ಭೀಕರವಾಗಿ ಹರಣವಾಗುತ್ತಿರುವುದು ಜಗತ್ತಿನೆದುರು ಬೆತ್ತಲಾಗಿದೆ. ಎಲ್ಲಾ ಸ್ವಾತಂತ್ರ್ಯ ಸೂಚ್ಯಂಕಗಳಲ್ಲೂ ಭಾರತ ಜಗತ್ತಿನ ಸರ್ವಾಧಿಕಾರಿ ದೇಶಗಳಿಗಿಂತ ಕೆಳಗಿಳಿಯುತ್ತಿದೆ. ಅಥವಾ ಅದರ ಜೊತೆಗಿದೆ. ಮೋದಿ ಸರಕಾರದ ಕಾಲದಲ್ಲಿ ಭಾರತವು ಒಂದು ಪ್ರಜಾತಂತ್ರವಾಗಿ ಉಳಿದಿಲ್ಲವೆಂದು, ಬದಲಿಗೆ ಭಾರತವು ಒಂದು 'ಚುನಾವಣಾ ಸರ್ವಾಧಿಕಾರ'ವಾಗಿದೆಯೆಂದು ಜಗತ್ತಿನ ಪ್ರಜಾತಂತ್ರಗಳ ಆರೋಗ್ಯದ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಸ್ವೀಡನ್ನ ವಿ-ಡೆಮ್ನಂಥ ಪ್ರತಿಷ್ಠಿತ ಜಾಗತಿಕ ಸಂಸ್ಥೆಗಳು ಘೋಷಿಸುತ್ತಿವೆ.
ಹೀಗಾಗಿ ಜಗತ್ತಿನೆದುರು ಮತ್ತು ಭಾರತದಲ್ಲೂ ತಮ್ಮ ಸರಕಾರ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳುವ ತುರ್ತಿನಲ್ಲಿರುವ ಮೋದಿ ಸರಕಾರ ಈ ವರ್ಷವೂ ಜೂನ್ 25 ರಂದು 'ಇಂದಿರಾ ಎಮರ್ಜೆನ್ಸಿ'ಯ ನೆನಪು ಮಾಡುತ್ತಾ 'ಮೋದಿ ಫ್ಯಾಶಿಸಂ' ಅನ್ನು ಮರೆಸುವ ಮಹಾ ಯೋಜನೆಯನ್ನು ಹಮ್ಮಿಕೊಂಡಿದೆ. ಮಣಿಪುರ ಇತ್ಯಾದಿ ಕಡೆಗಳಲ್ಲಿ ಕೇಂದ್ರದ ಮೌನ ಬೆಂಬಲ-ಸಹಕಾರದೊಂದಿಗೆ ನಡೆಯುತ್ತಿರುವ ಅಂತರ್ಯುದ್ಧ ಮತ್ತು ನರಮೇಧಗಳ ಬಗ್ಗೆ ತುಟಿ ಬಿಚ್ಚದ ಬೇಜವಾಬ್ದಾರಿ ಪ್ರಧಾನಿ ಅಮೆರಿಕ ಪ್ರವಾಸಕ್ಕೆ ಹೊರಟು ನಿಂತ ಕ್ಷಣದಲ್ಲೂ ಮಾಡಿದ 'ಮನ್ ಕಿ ಬಾತ್' ಭಾಷಣದಲ್ಲಿ ತುರ್ತುಸ್ಥಿತಿಯ ಕರಾಳತೆಯನ್ನು ದೇಶಕ್ಕೆ ನೆನಪು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಮಣಿಪುರದಲ್ಲಿ ಕುಕಿಗಳ ಪ್ರಭುತ್ವ ಬೆಂಬಲಿತ ನರಮೇಧ ಮತ್ತು ಅಂತರ್ಯುದ್ಧಗಳು ಪ್ರಾರಂಭವಾಗಿ 50 ದಿನಗಳಾದರೂ ಕ್ರಮತೆಗೆದುಕೊಳ್ಳದ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಸರ್ವಶಕ್ತ ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಾದರೂ ಅದರ ಬಗ್ಗೆ ಮಾತನಾಡಬಹುದೆಂದು ನಿರೀಕ್ಷಿಸಿದ್ದ ಮಣಿಪುರ ಹಾಗೂ ಈಶಾನ್ಯ ಭಾರತದ ಜನತೆ ಆಕ್ರೋಶದಿಂದ 'ಮನ್ ಕಿ ಬಾತ್' ಬಿತ್ತರಿಸುತ್ತಿದ್ದ ರೇಡಿಯೋಗಳನ್ನು ಒಡೆದುಹಾಕಿದ್ದಾರೆ.
ಅದೇನೇ ಇರಲಿ. ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಮರೆಯುವಂತಿಲ್ಲ. ಆದರೆ ತುರ್ತುಸ್ಥಿತಿಯ ವಿರುದ್ಧ ನಡೆದ ಪ್ರಜಾತಾಂತ್ರಿಕ ಸಮರ ಜನಸಂಘ-ಬಿಜೆಪಿ ಮತ್ತು ಸಂಘಪರಿವಾರದಂಥ ಪ್ರಜಾತಂತ್ರ ವಿರೋಧಿ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಹೊಸಜೀವ ಕೊಟ್ಟಿದ್ದು ಮತ್ತು ಅವರನ್ನು ಮಾನ್ಯಗೊಳಿಸಿ ಅಧಿಕಾರಕ್ಕೆ ತಂದದ್ದು ಮಾತ್ರ ಒಂದು ಐತಿಹಾಸಿಕ ವಿಪರ್ಯಾಸ. ಇದು ಎಮರ್ಜೆನ್ಸಿಗಿಂತ ದೊಡ್ಡ ಪ್ರಜಾತಾಂತ್ರಿಕ ವೈಫಲ್ಯ. ದೊಡ್ಡ ಶತ್ರುವಿನ ವಿರುದ್ಧ ಸಣ್ಣ ಶತ್ರುವಿನ ಜೊತೆ ಬೇಷರತ್ ಐಕ್ಯತೆ ಮತ್ತು ಅವಲಂಬನೆಗಳೇ ಇಂಥಾ ದುರಂತಕ್ಕೆ ಕಾರಣವಾಯಿತು. ಇಂದು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಡೆದಿರುವ ಸಂಘರ್ಷದಲ್ಲಿ ಮತ್ತೆ ಅದೇ ತಪ್ಪು ಮಾಡುತ್ತಿದ್ದೇವೆ ಎಂಬುದು ಮತ್ತೊಂದು ಐತಿಹಾಸಿಕ ವಿಪರ್ಯಾಸ.
ಅದೇನೇ ಇರಲಿ, ಇತಿಹಾಸವನ್ನು ನೋಡಿದರೆ, ಸಂಘಪರಿವಾರ ಮತ್ತು ಅಂದಿನ ಜನಸಂಘ ತುರ್ತುಸ್ಥಿತಿಯ ವಿರುದ್ಧ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ಹೋರಾಡದೆ ಇಂದಿರಾ ಗಾಂಧಿಯೊಂದಿಗೆ ರಾಜಿ-ಕಬೂಲಿಯಲ್ಲಿ ತೊಡಗಿದ್ದವು ಎಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲ, ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು.
ತುರ್ತುಸ್ಥಿತಿಯನ್ನು ಘೋಷಿಸಲು ಕಾರಣವಾದ ರಾಜಕೀಯ ಹೋರಾಟಗಳಲ್ಲಿ ಆರೆಸ್ಸೆಸ್ ಮತ್ತು ಅದರ ಜನಸಂಘ ಹಾಗೂ ಇತರ ಅಂಗಸಂಸ್ಥೆಗಳ ಪಾತ್ರ ಒಂದಿಷ್ಟಿದ್ದದ್ದು ನಿಜ. ಆದರೆ, ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘದ ನಾಯಕರು ತಾವು ಸರ್ವಾಧಿಕಾರಿ ಎಂದು ಕರೆಯುತ್ತಿದ್ದ ಇಂದಿರಾಗಾಂಧಿಯವರ ಜೊತೆ ಗುಪ್ತ ಒಪ್ಪಂದವನ್ನು ಮಾಡಿಕೊಂಡು ಎಮರ್ಜೆನ್ಸಿಯನ್ನು ಬೆಂಬಲಿಸಿದ್ದು ಕೂಡಾ ಅಷ್ಟೇ ನಿಜ.
ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೇ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಅಟಲ್ ಬಿಹಾರಿಯವರು ಅರೆಕ್ಷಣವೂ ಜೈಲಿನಲ್ಲಿರಲಿಲ್ಲ!
ಪ್ರತಿವರ್ಷ ಜೂನ್ 25ರಂದು ಬಿಜೆಪಿ ಮತ್ತು ಆರೆಸ್ಸೆಸ್ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26ರ ಪತ್ರಿಕೆಗಳ ಮುಖಪುಟವನ್ನು ಫೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ. ಆದರೆ ಬಿಜೆಪಿ ನಾಯಕರಿಗಿಂತ ಹೆಚ್ಚಿನ ಸಾವು-ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನ್ನು ಗಮನಿಸಿದರೆ ಗೊತ್ತಾಗುತ್ತದೆ. ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ? ಖಂಡಿತಾ ಇಲ್ಲ.
ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!
ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಮಣಿಯನ್ ಸ್ವಾಮಿಯವರು. 2000ನೇ ಇಸವಿಯ ಜೂನ್ 13ರಂದು 'ದಿ ಹಿಂದು' ಪತ್ರಿಕೆಗೆ ಬರೆದ “The Unlearnt Lessons Of Emergency” ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.
ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ.
ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?
ಇಂದಿರಾ ಗಾಂಧಿಗೆ ಶರಣಾದ ಆರೆಸ್ಸೆಸ್ನ 'ಸರೆಂಡರ್ ಡಾಕ್ಯುಮೆಂಟ್'
ಅದೇ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್ನ ನಾಯಕರು 1976ರ ಡಿಸೆಂಬರ್ ಹೊತ್ತಿಗೆ ಇಂದಿರಾಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ 'ಸರೆಂಡರ್ ಡಾಕ್ಯುಮೆಂಟ್'ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರು ಎಂಬುದನ್ನೂ ವಿವರಿಸುತ್ತಾರೆ.
ವಾಸ್ತವವಾಗಿ ತುರ್ತುಸ್ಥಿತಿಯ ಘೋಷಣೆಯಾದ ನಂತರ ಸರಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್ನ ಹಿರಿಯ ನಾಯಕರಾದ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಮಣಿಯನ್ ಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ 1976ರ ನವೆಂಬರ್ನಲ್ಲಿ ಮಧುಕರ್ ಮೂಳೆಯವರು ಸುಬ್ರಮಣಿಯನ್ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ:
“the RSS had finalised the document of surrender to be signed at the end of January 1977”
-ಆರೆಸ್ಸೆಸ್ 1977ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ- ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಮಣಿಯನ್ ಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಮಣಿಯನ್ ಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು.
https://www.thehindu.com/todays-paper/tp-miscellaneous/tp-others/unlearnt-lessons-of-the-emergency/article28026968.ece
ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ "India- Crucial Years' ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾ ಪ್ರಸಾದ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು 'ದಿ ಪ್ರಿಂಟ್' ವೆಬ್ ಪತ್ರಿಕೆಗೆ ಇತ್ತೀಚೆಗೆ ಬರೆದ ಲೇಖನದಲ್ಲಿ ನೆನಪಿಸಿದ್ದಾರೆ. (https://theprint.in/opinion/rss-leaders-deserted-jayaprakash-resistance-during-indira-emergency/448294/)