ಜಾರಿಗೆ ಬಾರದ ಫಸಲು ವಿಮೆ ಟರ್ಮ್ ಶೀಟ್ ಸಿದ್ಧ್ದವಾಗದೆ ಆತಂಕದಲ್ಲಿ ರೈತರು
ಎಂ. ಯೂಸುಫ್ ಪಟೇಲ್
ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ನೋಂದಣಿ ಪ್ರಾರಂಭ ಆಗದೆ ಮಲೆನಾಡಿನ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಗೆ ಬಂದ ಈ ವಿಮಾ ಯೋಜನೆಯು ಆ ಸಮಯದಲ್ಲಿ ಹವಾಮಾನ ವೈಫಲ್ಯದಿಂದ ಫಸಲು ಕಳೆದುಕೊಂಡ ರೈತರ ಕೈ ಹಿಡಿದಿತ್ತು. ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ದೇಶದಲ್ಲೇ ರೈತ ಪರ ಅತ್ಯುತ್ತಮ ಯೋಜನೆಯಾಗಿತ್ತು. ರೈತರು ಮಳೆ ಮತ್ತು ಹವಾಮಾನ ವೈಫಲ್ಯದಿಂದ ಫಸಲು ಕಳೆದುಕೊಂಡರೆ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲು ಅವಕಾಶ ಇತ್ತು. ಆರಂಭದ ವರ್ಷಗಳಲ್ಲಿ ರೈತರ ನಷ್ಟ, ಆತಂಕಕ್ಕೆ ನೆರವಾಗುತ್ತಿದ್ದ ಈ ಯೋಜನೆ ಕಳೆದ ನಾಲ್ಕು ವರ್ಷಗಳಲ್ಲಿ ವೈಫಲ್ಯ ಕಾಣುತ್ತಿದೆ.
ಅಡಿಕೆ ಮತ್ತು ಕಾಳು ಮೆಣಸಿನ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಮತ್ತು ಭತ್ತದ ಬೆಳೆಗಿರುವ ಫಸಲು ವಿಮಾ ಯೋಜನೆಯು ದಿನ ನಿತ್ಯದ ಮಳೆ ಮತ್ತು ಉಷ್ಣಾಂಶ ಮಾಹಿತಿ ಮೇಲೆ ತೀರ್ಮಾನವಾಗುತ್ತದೆ. ರೈತರಿಗೆ ವಿಮೆ ಪಡೆಯಲು ಮಳೆ ಮತ್ತು ಹವಾಮಾನ ಆಧಾರಿತ ಅಂಕಿ ಅಂಶದಿಂದ ಟರ್ಮ್ ಶೀಟ್ ಪ್ರಧಾನ ಪಾತ್ರ ವಹಿಸುತ್ತದೆ. ಈ ಟರ್ಮ್ ಶೀಟ್ ಆಧಾರದಲ್ಲಿ ರಾಜ್ಯ ಸರಕಾರ ವಿಮಾ ಏಜೆನ್ಸಿ ನಿಗದಿಪಡಿಸಲು ಟೆಂಡರ್ ಕರೆಯುತ್ತದೆ. ಟೆಂಡರ್ ಪ್ರಕ್ರಿಯೆ ಮೇ ತಿಂಗಳಲ್ಲಿ ಮುಗಿದು ಜೂನ್ 30ರ ಒಳಗೆ ರೈತರು ವಿಮಾ ಹಣ ಪಾವತಿಸಬೇಕು. ಆದರೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಟರ್ಮ್ ಶೀಟ್ ವಿಮಾ ಕಂಪೆನಿಗಳಿಗೆ ನೀಡಿರುವುದಿಲ್ಲ.
ತೋಟಗಾರಿಕೆ ಇಲಾಖೆ ನೀಡಿರುವ ಟರ್ಮ್ ಶೀಟ್ ಈಗಾಗಲೇ ವಿಮಾ ಕಂಪೆನಿ ರಾಜ್ಯ ಸರಕಾರ ನಿಗದಿ ಪಡಿಸಿರುವ ವಿಮಾ ಶೇರು ಶೇ. 27ಕ್ಕೆ ಒಪ್ಪದೆ ತಿರಸ್ಕರಿಸಿದೆ. ಮಳೆಗಾಲದ ಖುತುಮಾನ ಮಲೆನಾಡಿನಲ್ಲಿ ಈಗಾಗಲೇ ಆರಂಭ ಆಗಿದೆ. ಜುಲೈ ತಿಂಗಳಿನಿಂದ ಜಾರಿಗೆ ಬರುವ ವಿಮಾ ಯೋಜನೆ ಸಕಾಲದಲ್ಲಿ ನೋಂದಣಿ ಆಗದಿದ್ದರೆ ಮಲೆನಾಡಿನ ರೈತರು ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಸುರಿದು ಬೆಳೆ ನಷ್ಟವಾಗಿರುವುದು ಸರಕಾರದ ಗಮನದಲ್ಲಿ ಇರಬಹುದು. ಮಲೆನಾಡಿನಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಅತ್ಯಧಿಕ ಮಳೆ ಬರುವುದು ವಾಡಿಕೆ.
ವಿಮಾ ಕಂಪೆನಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ನೆರವಿನಿಂದ ರೈತರಿಂದ ಜೂನ್ ಅಂತ್ಯದಲ್ಲಿ ವಿಮಾ ಕಂತು ಕಟ್ಟಿಸಿ ಕೊಳ್ಳದಿದ್ದರೆ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ರೈತರು ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.
ರಾಜ್ಯ ಸರಕಾರ ತನ್ನ ಪಾಲಿನ ವಿಮಾ ಶೇರು ಕಳೆದ ವರ್ಷ ಶೇ. 32 ನೀಡಿತ್ತು. ಈ ವರ್ಷ ಶೇ. 27 ನೀಡಿರುವುದು ಕಂಪೆನಿಗಳು ಟರ್ಮ್ ಶೀಟ್ ಒಪ್ಪಿಕೊಳ್ಳದಿರಲು ಮುಖ್ಯ ಕಾರಣ. ವಿಮಾ ಕಂಪೆನಿಗಳಿಗೆ ಈ ಯೋಜನೆಯಿಂದ ಹತ್ತಾರು ಸಾವಿರಾರು ಕೋಟಿ ರೂ. ಲಾಭ ಬರುತ್ತಿರುವುದು ಮತ್ತು ಈ ಯೋಜನೆಯ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ರಾಜ್ಯ ಸರಕಾರ ತನ್ನ ಪಾಲಿನಲ್ಲಿ ಶೇ. 5 ಕಡಿತಗೊಳಿಸಿದೆ.
ಈ ವಿಮಾ ಕಂಪೆನಿಗಳು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಮಾಪನ ಅಳವಡಿಸಿಕೊಂಡು ಮಳೆ ಮಾಹಿತಿ ಪಡೆಯುತ್ತಿದೆ. ಆದರೆ ಮಲೆನಾಡಿನ ಬಹಳಷ್ಟು ಮಳೆ ಮಾಪನ ಕೇಂದ್ರಗಳು ತಾಂತ್ರಿಕವಾಗಿ ಸರಿ ಇಲ್ಲದಿರುವುದರಿಂದ ಅಸಮರ್ಪಕ ಮಳೆ ಮಾಹಿತಿಯಿಂದಾಗಿ ರೈತರು ವಿಮಾ ಕಂತು ಕಟ್ಟಿದರೂ ಲಕ್ಷಾಂತರ ರೂ. ನಷ್ಟ ಅನುಭವಿಸಬೇಕಾಗಿದೆ.
ಉದಾಹರಣೆಗೆ ಕೊಪ್ಪ ತಾಲೂಕು ಭುವನಕೋಟೆ ಗ್ರಾಮದ ಮಳೆ ಮಾಪನ ಉಪಕರಣ ಸರಿ ಇಲ್ಲದೆ ಹಿಂದಿನ ವರ್ಷದಲ್ಲಿ ವ್ಯಾಪಕ ಮಳೆಯಾಗಿ ಬೆಳೆ ನಷ್ಟವಾಗಿದ್ದರೂ ವಿಮಾ ವ್ಯಾಪ್ತಿಗೆ ಬರದೆ 30 ಲಕ್ಷ ರೂ. ವಿಮಾ ಕಂತು ನಷ್ಟವಾಯಿತು. ಇಂತಹ ಹಲವಾರು ಉದಾಹರಣೆ ಇದೆ.
ವಿಮಾ ಯೋಜನೆ ಜಾರಿಗೆ ಮೊದಲು ಆಸಕ್ತ ರೈತರ ಮೊಬೈಲ್ ನಂಬರಿಗೆ ದಿನವೂ ಮಳೆ ಪ್ರಮಾಣ ಮಾಹಿತಿ ದೊರೆಯುತ್ತಿತ್ತು. ಈಗ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳೆಯ ಮಾಹಿತಿ ರೈತರಿಗೆ, ಗ್ರಾಮ ಪಂಚಾಯತ್ಗೆ ಮತ್ತು ಯಾವುದೇ ಸರಕಾರದ ಇಲಾಖೆಗಳಿಗೆ ಲಭ್ಯವಿಲ್ಲ. 2017ರಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಜಾರಿಗೆ ತಂದ ಗ್ರಾಮ ಪಂಚಾಯತ್ ಮಟ್ಟದ ಮಳೆ ಮಾಹಿತಿ ದೇಶದಲ್ಲೇ ಪ್ರಥಮ ಮತ್ತು ಅತ್ಯುತ್ತಮ ವ್ಯವಸ್ಥೆಯಾಗಿತ್ತು. ಈಗ ಮಾಹಿತಿ ಪಡೆಯಬೇಕಾದರೆ ಸಾವಿರಾರು ರೂ. ವೆಚ್ಚ ಮಾಡಿ ಮಾಹಿತಿ ಹಕ್ಕಿನಿಂದ ಪಡೆಯಬೇಕು. ಕಳೆದ ನಾಲ್ಕು ವರ್ಷಗಳಿಂದ ಸರಕಾರದ ನೆರವಿನಿಂದ ಖಾಸಗಿ ಮಳೆ ಮಾಪನ ಮಾಡುವ ಏಜೆನ್ಸಿಗಳು ಮಳೆಯ ಹೆಸರಿನಲ್ಲಿ ರೈತರನ್ನು ಆರ್ಥಿಕವಾಗಿ ಶೋಷಿಸುತ್ತಿವೆ.
ಈಮೇಲ್ ಮೂಲಕ ಗ್ರಾಮ ಪಂಚಾಯತ್ಗೆ ದಿನ ನಿತ್ಯದ ಮಳೆ ಮಾಹಿತಿ ನೀಡಿದರೆ ರೈತರು ಮಳೆಯ ಪ್ರಮಾಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅನುಕೂಲ ಆಗುತ್ತದೆ. ವಿಮಾ ಕಂಪೆನಿಗಳು ರೈತರಿಗೆ ಮಾಡುವ ವಂಚನೆಯಿಂದ ಸ್ವಲ್ಪಮಟ್ಟಿಗೆ ಪಾರಾಗಬಹುದು.
ರೈತರ ಹಿತದೃಷ್ಟಿಯಿಂದ ಪ್ರಾರಂಭವಾದ ಈ ಯೋಜನೆ ಈಗ ವಿಮಾ ಕಂಪೆನಿ, ಕೇಂದ್ರ ಮತ್ತು ರಾಜ್ಯ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ವಂಚಕರಿಗೆ ಲಾಭದಾಯಕ ಯೋಜನೆಯಾಗಿ ಮಾರ್ಪಟ್ಟಿದೆ.
ಮಲೆನಾಡಿನ ಜನಪ್ರತಿನಿಧಿಗಳು, ರೈತರು, ಸಹಕಾರಿ ಧುರೀಣರು ಏನೇ ಪ್ರಯತ್ನ ಪಟ್ಟರೂ ರಾಷ್ಟ್ರ ಮಟ್ಟದ ಲಾಬಿ ಹೊಂದಿರುವ ವಿಮಾ ಏಜೆನ್ಸಿ ತನ್ನ ಲಾಬಿಯಿಂದ ರೈತರನ್ನು ವಂಚಿಸುತ್ತಿದೆ. ಸರಕಾರ ಕೂಡಲೇ ರೈತರಿಗೆ ವಿಮಾ ಹಣ ತುಂಬಲು ಅವಕಾಶ ನೀಡಬೇಕು.
ಜುಲೈ ಅಂತ್ಯದ ಒಳಗೆ ಹಣ ಕಟ್ಟಿಸಿಕೊಂಡರೂ ಜುಲೈ ತಿಂಗಳಿನ ವಿಮೆ ಪಡೆಯಲು ಅವಕಾಶ ನೀಡಬೇಕು.