ಕೆಎಂಎಫ್ ಅಧ್ಯಕ್ಷರಾಗಿ ಮಾಜಿ ಶಾಸಕ ಭೀಮಾ ನಾಯ್ಕ್ ಅವಿರೋಧ ಆಯ್ಕೆ
ಬೆಂಗಳೂರು, ಜೂ. 21: ಕರ್ನಾಟಕ ಹಾಲು ಮಹಾಮಂಡಳ ನಿಯಮಿತ(ಕೆಎಂಎಫ್)ಕ್ಕೆ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಬುಧವಾರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಳ್ಳಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿರುವ ಭೀಮಾ ನಾಯ್ಕ್ ಅವರು ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು.
ಬೇರೆ ಯಾರೂ ಸ್ಪರ್ಧಿಸದ ಕಾರಣ ಭೀಮಾ ನಾಯ್ಕ್ ಅವರ ಆಯ್ಕೆ ಅವಿರೋಧವಾಗಿ ನಡೆದಿದೆ. ಇನ್ನು ಒಂದು ವರ್ಷ ಕಾಲ ಅಧಿಕಾರಾವಧಿ ಇದ್ದರೂ ಕೆಎಂಎಫ್ ಅಧ್ಯಕ್ಷರಾಗಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬದಲಾದ ಪರಿಸ್ಥಿತಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಈ ಹಿಂದೆಯೇ ಪ್ರಕಟಿಸಿದ್ದರು.
ಆ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ನಡೆದು ಎಲ್ಲ ಹಾಲು ಒಕ್ಕೂಟಗಳ ನಿರ್ದೇಶಕರು ಒಮ್ಮತದಿಂದ ಭೀಮಾ ನಾಯ್ಕ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕೆಎಂಎಫ್ ನೂತನ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿ ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ರೈತರ ಪರವಾಗಿ ಒಕ್ಕೂಟ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.