ಗೋರಕ್ಷಕರೆಂದು ಹೇಳಿಕೊಂಡು ಯಾರಾದರೂ ಗಲಾಟೆ ಮಾಡಿದರೆ ಒದ್ದು ಒಳಗಾಕಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ಸಭೆ
ಕಲಬುರಗಿ: 'ಸರಕಾರದ ಬಗ್ಗೆ ತಪ್ಪು ಮಾಹಿತಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವವರನ್ನು ಪತ್ತೆ ಮಾಡಿ' ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
''ಇತ್ತೀಚೆಗೆ ನಡೆದ ಜೇವರ್ಗಿಯ ಪೇದೆ ಹತ್ಯೆ ನಾನೇ ಮಾಡಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಲಾಗುತ್ತಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವ ಪೋಸ್ಟ್ ಗಳನ್ನು ನಿರಂತರವಾಗಿ ನೋಡಲು ಒಂದು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ತೀಕ್ಷ್ಣ ಕಾನೂನು ಕ್ರಮ ಕೈಗೊಳ್ಳಿ. ಗೋವು ರಕ್ಷಕರು ಎಂದು ಹೇಳಿಕೊಂಡು ಕೆಲ ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದರೆ, ಅಂತವರನ್ನು ಒದ್ದು ಒಳಗಾಕಿ.'' ಎಂದು ಖರ್ಗೆ ಸೂಚಿಸಿದರು.
ಇದನ್ನೂ ಓದಿ>> ಎಬಿವಿಪಿ ಮುಖಂಡನಿಂದ 30 ರಿಂದ 40 ಯುವತಿಯರ ಅಶ್ಲೀಲ ವಿಡಿಯೋ ಚಿತ್ರೀಕರಣ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪ
ಅಕ್ರಮ ಮರುಳು ಸಾಗಾಣಿಕೆ ಮಾಡುವ ಜಾಲದಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡುವ ದರಪಟ್ಟಿಯನ್ನು ಓದಿ ಹೇಳಿದ ಸಚಿವರು, ಈ ಪಟ್ಟಿ ಪ್ರಕಾರ ಅಕ್ರಮ ಮರುಳುದಾರರಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿ, ಯಾರ ವಿರುದ್ಧ ಗಡಿಪಾರು ಆದೇಶಗಳು ಇವೆಯೋ ಅವುಗಳನ್ನು ಹಾಗೆ ಮುಂದುವರಿಸುವಂತೆ ಎಸ್ ಪಿಗೆ ಸೂಚಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ, ಓವರ್ ಲೋಡ್ ಮರುಳು ಸಾಗಾಣಿಕೆ ಮಾಡುವ ವಾಹನಗಳನ್ನು ಸೀಜ್ ಮಾಡಿ ಕೇಸು ದಾಖಲಿಸಿ ಎಂದು ಸೂಚಿಸಿದರು.
ನಗರದಲ್ಲಿ 22 ಕ್ಲಬ್ ಗಳು ನಡೆಯುತ್ತಿವೆ. ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿವೆ ಪಟ್ಟಿ ಮಾಡಿ ಅಕ್ರಮ ಚಟುವಟಿಕೆ ಗಳು ನಡೆಯುತ್ತಿರುವ ಬಗ್ಗೆ ನಾನೇ ಮಾಹಿತಿ ಕೊಡುತ್ತೇನೆ ಅಂತಹ ಕ್ಲಬ್ ಗಳ ಮೇಲೆ ದಾಳಿ ಮಾಡಿ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ. ಅಕ್ರಮ ಚಟುವಟಿಕೆ ನಡೆಸುವ ಯಾವ ಕ್ಲಬ್ ಕೂಡಾ ನಗರ ವ್ಯಾಪ್ತಿಯಲ್ಲಿ ಇರಬಾರದು ಎಂದು ಡಿಸಿಪಿ ಶ್ರೀನಿವಾಸಲು ಅವರಿಗೆ ಡಾ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಓ ಭನ್ವರ್ ಸಿಂಗ್ ಮೀನಾ, ನಗರ ಪೊಲೀಸ್ ಕಮೀಷನರ್ ಆರ್. ಚೇತನ್, ಪ್ರಭಾರಿ ಅಪರ ಜಿಲ್ಲಾಧಿಕಾರಿ ರಾಚಪ್ಪ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸ್ ಪಿ ಇಶಾಪಂತ್, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಎಸಿಪಿ ದೀಪನ್ ಎನ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಯಗಳು ಉಪಸ್ಥಿತರಿದ್ದರು.