PSI ನೇಮಕಾತಿಯಲ್ಲಿ ಹಗರಣ: ಅಕ್ರಮದಲ್ಲಿ ತೊಡಗಿದ್ದ 52 ಅಭ್ಯರ್ಥಿಗಳು ಶಾಶ್ವತ ಡಿಬಾರ್
ಬೆಂಗಳೂರು, ಜೂ.21: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ 52 ಮಂದಿ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿಜಿಪಿ ಆದೇಶವನ್ನು ಬುಧವಾರ ಹೊರಡಿಸಿದ್ದು, 545 ಪಿಎಸ್ಐ ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ವಿವಿಧ ಜಿಲ್ಲೆಗಳ 52 ಅಭ್ಯರ್ಥಿಗಳನ್ನು ಖಾಯಂ ಆಗಿ ಡಿಬಾರ್ ಮಾಡಲಾಗಿದೆ.
2021 ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ದೂರು ಕೇಳಿ ಬಂದಿದ್ದರಿಂದ ಸಿಐಡಿ ಇದರ ತನಿಖೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 52 ಮಂದಿ ಆರೋಪಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಡಿಬಾರ್ ಮಾಡುವ ಮೊದಲು ಈ 52 ಅಭ್ಯರ್ಥಿಗಳ ಬಳಿ ಸ್ಪಷ್ಟನೆ ಕೇಳಲಾಗಿತ್ತು. ಸ್ಪಷ್ಟನೆ ಪಡೆದ ನಂತರ ಈ 52 ಅಭ್ಯರ್ಥಿಗಳನ್ನೂ ಪೊಲೀಸ್ ಇಲಾಖೆ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳಿಂದ ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ ಎಂದು ಡಿಜಿಪಿ (ನೇಮಕಾತಿ) ಅವರ ಆದೇಶ ತಿಳಿಸಲಾಗಿದೆ.