ಪಿಎಸ್ಸೈ ಆಗಿ ಬಂದ ಮಗಳಿಗೆ ಅಧಿಕಾರ ಹಸ್ತಾಂತರಿಸಿದ ತಂದೆ; ಮಂಡ್ಯ ಠಾಣೆಯಲ್ಲಿ ಅಪರೂಪದ ಸನ್ನಿವೇಶ
ಮಂಡ್ಯ, ಜೂ.21: ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಸ್.ವೆಂಕಟೇಶ್, ತನ್ನ ಸ್ಥಾನಕ್ಕೆ ನಿಯೋಜನೆಗೊಂಡ ಪುತ್ರಿ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಅಪರೂಪದ ಸನ್ನಿವೇಶಕ್ಕೆ ನಗರದ ಕೇಂದ್ರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಕೇಂದ್ರ ಪೊಲೀಸ್ ಠಾಣೆಯಲ್ಲಿ ಒಂದೂವರೆ ವರ್ಷದಿಂದ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೆಂಕಟೇಶ್ ಎಸ್ಪಿ ಕಚೇರಿ ಕರ್ತವ್ಯಕ್ಕೆ ವರ್ಗಾವಣೆಯಾಗಿದ್ದು, ಅವರ ಸ್ಥಳಕ್ಕೆ ಪುತ್ರಿ ವರ್ಷಾ ನಿಯೋಜನೆಯಾಗಿದ್ದಾರೆ.
ತಂದೆಯೇ ಮಗಳಿಗೆ ಜಾರ್ಜ್ ನೀಡುವ ವಿಶೇಷ ಕ್ಷಣಗಳಿಗೆ ಪೊಲೀಸ್ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ಠಾಣೆಯ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
2022ರ ಬ್ಯಾಚ್‍ನ ಪಿಎಸ್ಸೈ ಆಗಿರುವ ವರ್ಷಾ ಅವರು ಕಲಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ ಒಂದು ವರ್ಷ ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈಗ ಅವರ ಮೊದಲ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದ್ದು, ತಂದೆಯಿಂದಲೇ ಚಾರ್ಜ್ ಪಡೆದುಕೊಂಡು ವೃತ್ತಿ ಜೀವನ ಆರಂಭಿಸಿದ್ದಾರೆ.
ವೆಂಕಟೇಶ್ ಅವರು ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯ ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದ ಹಿಂದೆ ವರ್ಗಾವಣೆಯಾಗಿ ಬಂದಿದ್ದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ತೊರೆಬೊಮ್ಮನಹಳ್ಳಿಯವರಾದ ವೆಂಕಟೇಶ್, 16 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಪಿಎಸ್ಸೈ ಪರೀಕ್ಷೆ ಬರೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‍ನ ಪಿಎಸ್ಸೈ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.
“ನಾನು ಐದು ವರ್ಷದವನಿದ್ದಾಗ ನನ್ನ ತಂದೆ ತೀರಿಕೊಂಡರು. ನನ್ನ ತಾಯಿ ಕಷ್ಟಪಟ್ಟು ಓದಿಸಿದರು. ನನ್ನ ಮಗಳಿಗೆ ಸರಕಾರಿ ಶಾಲೆಯಲ್ಲೇ ಓದಿಸಿದೆ. ಯಾವುದೇ ಟ್ಯೂಷನ್‍ಗೆ ಹೋಗಲಿಲ್ಲ. ಮನೆಯಲ್ಲೇ ಕುಳಿತು ಕಷ್ಟಪಟ್ಟು ಓದಿ ಪಿಎಸ್ಸೈ ಪರೀಕ್ಷೆ ಪಾಸ್ ಮಾಡಿ ಯಾರ ಬೆಂಬಲವೂ ಇಲ್ಲದೆ ತನ್ನ ಕಾಲಮೇಲೆ ತಾನು ನಿಂತಿದ್ದಾಳೆ. ತಾನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು. ನೊಂದವರಿಗೆ ಸಹಾಯ ಮಾಡಬೇಕು ಎಂದು ಹೇಳುತ್ತಿದ್ದಳು. ನನಗೆ ತುಂಬಾ ಖುಷಿಯಾಗುತ್ತಿದೆ. ಅದೂ ಅಲ್ಲದೆ ನಾನೇ ಚಾರ್ಜ್ ಕೊಡುತ್ತಿರುವುದಕ್ಕೆ ಸಂತೋಷದ ಕಣ್ಣೀರು ಬರುತ್ತಿದೆ.”
- ಬಿ.ಎಸ್.ವೆಂಕಟೇಶ್
“ಎಲ್ಲರಿಗೂ ತಾಯಿಯೇ ಮೊದಲ ಗುರು. ಹಾಗೆಯೇ ನನ್ನ ಮೊದಲ ಗುರು ತಾಯಿಯೇ. ಶಾಲೆಗೆ ಸೇರಿಸಿದ್ದು, ಓದಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದುದು ತಾಯಿಯೇ. ಕಾಲೇಜಿಗೆ ಬಂದ ಮೇಲೆ ನಾನೇ ಕಷ್ಟಪಟ್ಟು ಓದಿದೆ. ಸರಕಾರಿ ಶಾಲಾಕಾಲೇಜಿನಲ್ಲೇ ಓದಿದೆ. ಖಾಸಗಿ ಶಾಲೆ ಬೇಕೆಂದೇನೂ ಇಲ್ಲ. ಓದುವ ಆಸಕ್ತಿ ಇದ್ದರೆ ಸರಕಾರಿ ಶಾಲೆಯಲ್ಲೇ ಚೆನ್ನಾಗಿ ಓದಬಹುದು. ಪಿಸ್ಸೈ ಹುದ್ದೆ ದೊರಕಿರುವುದಕ್ಕೆ ಖುಷಿಯಾಗಿದೆ.”
-ಬಿ.ವಿ.ವರ್ಷಾ.