ಸಾಕಪ್ಪಾಸಾಕು ಈ ರಾಮಾಯಣ!
ಒಂದು ಚಿತ್ರ ವಾಸ್ತವವನ್ನು ತೋರಿಸಬೇಕು. ಹಾಗೆಂದು ಅದು ವರದಿಯಲ್ಲ. ಕಲೆಯ ಹೆಸರಿನಲ್ಲಿ ಉಪಚಾರವೂ ಸಲ್ಲ, ಅಪಚಾರವೂ ಸಲ್ಲ. ದೇವರ ಚಿತ್ರವನ್ನು ಮಾಡುವವನು ಎಷ್ಟೇ ಆಧುನಿಕನಾಗಿರಲಿ, ನಾಲ್ಕು ಕೈಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಆಧುನಿಕ ಪರಿಕರಗಳನ್ನು ಹಿಡಿಸಬಾರದು. ಅದು ಅಣಕವಾದೀತೇ ವಿನಾ ಕಲೆಯಾಗದು. ಆದರೆ ಈ ದೇಶದ ದೊಡ್ಡ ದುರಂತಗಳಲ್ಲೊಂದೆಂದರೆ ಯಾವುದೇ ಕಲೆಯನ್ನೂ ಧಾರ್ಮಿಕವಾಗಿಸುವುದು, ರಾಜಕೀಯವಾಗಿಸುವುದು. ಶ್ರೀರಾಮನನ್ನು ವಾಲ್ಮೀಕಿಯ ಸೃಷ್ಟಿಯೆಂಬುದನ್ನು ಗಮನಿಸದೆ ಧಾರ್ಮಿಕಗೊಳಿಸಿದ್ದೇ ತಪ್ಪು.
ಈಗ ಆತನನ್ನು ಚುನಾವಣಾ ರಾಜಕೀಯಕ್ಕೆ ಎಳೆದು ತಂದು ಬೀದಿಯಲ್ಲಿ ನಿಲ್ಲಿಸಿದ್ದು ಇನ್ನೂ ದೊಡ್ಡ ತಪ್ಪು. ‘ಆದಿಪುರುಷ್’ ಎಂಬ ಹಿಂದಿ ಮತ್ತು ತೆಲುಗು ಭಾಷೆಗಳ ಚಲನಚಿತ್ರವು ಬಿಡುಗಡೆಯಾಗಿದೆ. ಇದು ತಮಿಳು, ಕನ್ನಡವೂ ಸೇರಿದಂತೆ ಇತರ ಕೆಲವು ಭಾಷೆಗಳಿಗೆ ಅವತರಣಿಕೆಯಾಗಿದೆ. ಇದನ್ನು ನೋಡಿದ ಕೆಲವರು ಇದು ನೋಡಲೇಬಾರದ ಸಿನೆಮಾ ಎಂದು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. (ನೋಡಲೇಬೇಕಾದ, ಓದಲೇಬೇಕಾದ.. ಎಂಬ ವರ್ತಮಾನದ ಈ ಪಟ್ಟಿಯಲ್ಲಿ ಈ ನೇತ್ಯಾತ್ಮಕ ದೃಷ್ಟಿಕೋನವು ಅಚ್ಚರಿಯ ವಿಚಾರ!) ಮಾಧ್ಯಮಗಳ ವಿಮರ್ಶೆಯೂ ಈ ಸಿನೆಮಾಕ್ಕೆ ಅನುಕೂಲವಾಗಿ ಇಲ್ಲ.
ರಾಮಾಯಣವನ್ನು ಸಿನೆಮಾ ಮಾಡಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಮೂಡುತ್ತದೆ. ನಮ್ಮ ಭಕ್ತವೃಂದ ಊದುಕಡ್ಡಿ, ದೀಪ, ಹೂ, ಶಂಖ-ಜಾಗಟೆ ಮುಂತಾದ ಪೂಜಾ ಸಾಮಗ್ರಿಗಳೊಂದಿಗೇ ಇಂತಹ ಸಿನೆಮಾ ನೋಡಲು ಹೋಗುವ ಕಾಲವೊಂದಿತ್ತು. ಸೂತಕವಿದ್ದರೆ ಅದನ್ನು ನೋಡಬಾರದು ಎಂಬ ಅನಧಿಕೃತ ಫರ್ಮಾನೂ ಆಗ ಇತ್ತು. ಈಗ ಅವೆಲ್ಲ ಇಲ್ಲವಾಗಬೇಕೆಂದು ಭಾವಿಸುವ ಹೊತ್ತಿನಲ್ಲೇ ಥಿಯೇಟರಿನಲ್ಲಿ ಹನುಮಂತನಿಗೆ ಪ್ರತ್ಯೇಕ ಸೀಟು ಕಾದಿರಿಸಲಾಗಿದೆಯೆಂಬ ಪ್ರಕಟಣೆಯನ್ನು ನೋಡಿ ಆಘಾತವಾಯಿತು. ಕುಮಾರವ್ಯಾಸನು ‘‘ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’’ ಎಂದು ಬರೆದಿದ್ದ. (ಕುಮಾರವ್ಯಾಸನ ಈ ಟೀಕೆಯು ನಿಂದಾಸ್ತುತಿಯೆಂದು ವಿದ್ವಾನ್ ರಂಗನಾಥ ಶರ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.) ಅಸಂಖ್ಯೆಗೆ ಸಂಖ್ಯೆಯನ್ನು ಕಲ್ಪಿಸುವುದು ಅಶಕ್ಯ. ಈ ಭಾರ ರಾಮಾಯಣದ್ದಲ್ಲ, ಬದಲಾಗಿ ರಾಮಾಯಣದ ಕವಿಗಳದ್ದು ಎಂದು ಆಧುನಿಕರು ಕಟಕಿಯಾಡಿದ್ದರಿಂದ ರಾಮಾಯಣಕ್ಕೆ ಒಳಿತಾಯಿತು. ರಾಮಾಯಣ ಎಷ್ಟಾದರೂ ಇರಲಿ, ಅದು ರಾಮಾಯಣವೇ. ಯಾರಾದರೂ ಜಾಸ್ತಿ ಮಾತನಾಡಿದರೆ ‘‘ಸಾಕಪ್ಪಾಇವನ ರಾಮಾಯಣ’’ ಎಂಬ ವರೆಗೂ ಈ ರಾಮಾಯಣ ತನ್ನ ಬಾಹುಗಳನ್ನು ಚಾಚಿದೆ. ನಾಟಕದಲ್ಲಿ ರಾಮನು ಸೀತೆಯನ್ನು ಕಾಡಿಗೆ ಕಳುಹಿಸುವ ಸನ್ನಿವೇಶವನ್ನು ಕಂಡು ಸಾಬಿಯೊಬ್ಬ ರಂಗಸ್ಥಳವನ್ನು ಪ್ರವೇಶಿಸಿ ಅದನ್ನು ತಡೆದು ರಾಮನನ್ನು ತರಾಟೆಗೆ ತೆಗೆದುಕೊಂಡ ವಾಸ್ತವ ಪ್ರಸಂಗವೊಂದನ್ನು ಬೀಚಿ ಬರೆದಿದ್ದರು. ಪ್ರಸಿದ್ಧ ತೆಲುಗು ಸಾಹಿತಿ ನಾರ್ಲವೇಂಕಟೇಶ್ವರರಾವ್ ರಾಮಾಯಣವನ್ನು ತನ್ನ ನಾಟಕಗಳ ಮೂಲಕ ನಾಸ್ತಿಕ ಮತ್ತು ಎಡ ಪಂಥ-ಸಿದ್ಧಾಂತಗಳ ಸಮರ್ಥನೆಗಳ ಮೂಲಕ ಚಿತ್ರಿಸಿದ್ದರು.
ಕನ್ನಡದಲ್ಲೂ ರಾಮಾಯಣದ ಕುರಿತ ವಿಮರ್ಶೆಗಳು ಹಲವು ರೀತಿಯಲ್ಲಿ, ಹಲವು ದೃಷ್ಟಿಕೋನಗಳಿಂದ ಮೂಡಿವೆ. ರಾಮಾಯಣವು ನಾಟಕ, ಸಿನೆಮಾ, ಸಂಗೀತ, ಸಾಹಿತ್ಯ ಹೀಗೆ ಪ್ರವೇಶಿಸದ ಕ್ಷೇತ್ರವಿಲ್ಲ. ತ್ಯಾಗರಾಜರು ತನ್ನನ್ನೂ ಶ್ರೀರಾಮನನ್ನೂ ಲೋಕಪ್ರಸಿದ್ಧರಾಗಿ ಮಾಡಿದ್ದು ಸಂಗೀತದಿಂದಲೇ. ಸಿನೆಮಾದಷ್ಟು ಪ್ರಭಾವಿ ದೃಶ್ಯಮಾಧ್ಯಮವು ಇನ್ನೊಂದಿಲ್ಲವಾಗಿ ಅದರಲ್ಲೇ ರಾಮಾಯಣ ಹೆಚ್ಚು ಜನರನ್ನು ಮುಟ್ಟಿದೆ, ತಟ್ಟಿದೆ ಎಂದನ್ನಿಸುತ್ತದೆ. 1935ರಿಂದ ದೇಶದ ವಿವಿಧ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ರಾಮಾಯಣ ಸಿನೆಮಾಗಳು ವಿವಿಧ ಹೆಸರುಗಳಲ್ಲಿ, ಭಿನ್ನ-ಭಾವಗಳಲ್ಲಿ ರಾಮಾಯಣವನ್ನು ಪೂರ್ತಾ ಅಥವಾ ಒಂದೊಂದು ಭಾಗದ ಕಥಾಹಂದರವನ್ನಿಟ್ಟುಕೊಂಡು ಬಂದಿವೆ. ಶ್ರೀರಾಮನ ಪಾತ್ರವೈಭವದಿಂದಲೇ ಪ್ರಖ್ಯಾತರಾದ ಎನ್.ಟಿ.ರಾಮರಾವ್, ಶೋಭನ್‌ಬಾಬು ಮುಂತಾದ ನಟರಿದ್ದಾರೆ. ಬಿಸ್ವಜಿತ್, ಜಿತೇಂದ್ರರಂತಹ ಕುಣುಕ (ಹೆಚ್ಚು ಕುಡಿಯುವವನು ಕುಡುಕನಾದರೆ ಹೆಚ್ಚು ಕುಣಿಯುವವನು ಕುಣುಕನಾಗಬಾರದೇಕೆ ಎಂಬುದರಿಂದ ಈ ಪದವನ್ನು ವಿನ್ಯಾಸಗೊಳಿಸಿದ್ದೇನೆ!) ನಟರೂ ರಾಮನ ಪಾತ್ರದಲ್ಲಿ ಮೆರೆದಿದ್ದಾರೆ. ‘ಇದೊಳ್ಳೆ ರಾಮಾಯಣ’ ಎಂಬ ಸಿನೆಮಾವೂ ಬಂದಿದೆ. ವ್ಯಂಗ್ಯಚಿತ್ರಗಳ (ಅನಿಮೇಷನ್) ರಾಮಾಯಣವೂ ಹಲವು ರೀತಿಯಲ್ಲಿ ತಯಾರಾಗಿವೆ. ದಕ್ಷಿಣಏಶ್ಯದ ಹಲವು ಭೂಭಾಗಗಳಲ್ಲಿ ರಾಮಾಯಣವು ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ಕಲೆಯಾಗಿ ಬೆಳೆದಿದೆ. ಈ ರಾಮಾಯಣಕ್ಕೂ ಅದರ ಪಾತ್ರಗಳಿಗೂ ಭಾರತದ ನೆಲ-ಸಂಸ್ಕೃತಿಯೆಂದು ಕರೆಯುವ ಜೀವನ ವಿಧಾನಕ್ಕೂ ಏನೋ ಸಂಬಂಧವಿರಬೇಕು. ರಾಮಾಯಣ ವಾಲ್ಮೀಕಿಗೆ ಮಾತ್ರವಲ್ಲ, ಕಾಳಿದಾಸನಿಗೂ ಬೇಕು; ದೇಶದ ಎಲ್ಲ ಭಾಷೆ, ಜಾತಿ, ಧರ್ಮಗಳ ಕವಿಗಳಿಗೂ ಬೇಕು. ಕಬೀರನಿಗೂ ಬೇಕು; ತುಳಸೀದಾಸನಿಗೂ ಬೇಕು. ಎ.ಕೆ. ರಾಮಾನುಜನ್ 300 ರಾಮಾಯಣಗಳ ಬಗ್ಗೆ ಬರೆದರು. ರಾಮನೆಂಬ ಹೆಸರಂತೂ ಸರ್ವೇಸಾಮಾನ್ಯ. ರಾಮನಿಗೆ ಇರುವ ಹತ್ತಾರು ಹೆಸರುಗಳೂ ಸರ್ವಸ್ವೀಕೃತ. ಆಯಾರಾಮ್ ಗಯಾರಾಮ್‌ಗಳೂ ಆರಾಮ್-ಹರಾಮ್‌ಗಳೂ ಇದ್ದಾರಲ್ಲ!
ಇತ್ತೀಚೆಗಿನ ವರೆಗೂ ರಾಮಾಯಣ ಎಲ್ಲರದ್ದಾಗಿತ್ತು. ಶ್ಯಾಮ್ ಬೆನಗಲ್ ಅವರ ‘ಭಾರತ್ ಏಕ್ ಖೋಜ್’ ಎಂಬ ಪ್ರಸಿದ್ಧ ಟಿವಿ ಸರಣಿಯಲ್ಲಿಯೂ ರಾಮಾಯಣ ಕಥಾನಕವಿತ್ತು. ಅದರಲ್ಲಿ ಖ್ಯಾತ ರಂಗಭೂಮಿ ಕಲಾವಿದ, ನಟ, ಸಲೀಮ್‌ಗೌಸ್ ರಾಮನ ಪಾತ್ರ ವಹಿಸಿದ್ದ. ಈ. ಅರವಿಂದನ್ ನಿರ್ದೇಶಿಸಿದ ‘ಕಾಂಚನ್‌ಸೀತಾ’ ಎಂಬ ಸಿನೆಮಾದಲ್ಲಿ ರಾಮಾಯಣದ ಕಥೆಯನ್ನು ಬುಡಕಟ್ಟಿನ ಜೀವನದ ಪಾತ್ರಧಾರಿಗಳ ಮೂಲಕ ಅದೇ ರೀತಿಯ ವೇಷ-ಭಾಷೆಯನ್ನು ಧರಿಸುವ, ಭರಿಸುವ ಮೂಲಕ ಚಿತ್ರಿಸಲಾಗಿತ್ತು. ಈಗ ಅದಕ್ಕೂ ಜಾತಿ-ಮತ-ಧರ್ಮದ ಸೋಂಕು ತಟ್ಟಿದೆ, ರಾಮಾಯಣದ ರಾಮ ಮಾತ್ರವಲ್ಲ, ಆತನ ಜೊತೆಯ ಸಾತ್ವಿಕ ನಾಯಕ-ಪೋಷಕ ಪಾತ್ರಗಳಲ್ಲಿ ನಟಿಸಲು ಹಿಂದೂಯೇತರರಿಗೆ ಅವಕಾಶ ಸಿಗುವುದು ಕಷ್ಟ. ಮತಭ್ರಾಂತ ಭಾರತದಲ್ಲಿ ಪ್ರಸಿದ್ಧ ಬಾಲಿವುಡ್ ನಟ ನವಾಝ್‌ದ್ದೀನ್ ಸಿದ್ಧೀಕಿ ತನ್ನೂರಿನ ಜಾತ್ರೆಯ ನಾಟಕದಲ್ಲಿ ಮೊದಲಿನಿಂದಲೂ ರಾಮಾಯಣದ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರೂ ಕಳೆದ ಕೆಲವು ವರ್ಷಗಳ ಮೊದಲು ನಟಿಸಲು ಬಂದಾಗ ಹಿಂದೂ ಗುಂಪುಗಳು ಆತನನ್ನು ತಡೆದದ್ದು ಎಲ್ಲೆಡೆ ಪ್ರಚಾರವಾಗಿತ್ತು. ಆತ ನಿರಾಶನಾಗಿ ಮುಂಬೈಗೆ ಮರಳಿದ. ಯಾರಿಗೆ ಲಾಭವಾಯಿತೋ ಗೊತ್ತಿಲ್ಲ.
ಶ್ರೀರಾಮ ಗುಡಿಯೊಳಗಿನ ದೇವರಾಗಿ, ಕೃತಿಯೊಳಗಿನ ಪೌರಾಣಿಕ ವ್ಯಕ್ತಿಯಾಗಿ ಉಳಿದಿಲ್ಲ. ಕಳೆದ ಸುಮಾರು 3 ದಶಕಗಳಿಂದ ಅಂದರೆ ಪ್ರಾಯಶಃ ಅಯೋಧ್ಯಾ ವಿವಾದದ ಮೂಲಕ ಆತ ಧರ್ಮದಿಂದ, ಮತದಿಂದ ರಾಜಕಾರಣಕ್ಕೆ ಎಳೆದು ತಂದ-ಬಂದ ಒಬ್ಬ ವ್ಯಕ್ತಿ, ಒಂದು ಚಿಹ್ನೆಯ ವ್ಯಕ್ತಿತ್ವವಾಗಿದ್ದಾನೆ. ಹನುಮಂತ ರಾಮಭಕ್ತನಾಗಿ ಉಳಿದಿಲ್ಲ. ಆತ ಡಾರ್ವಿನ್‌ನ ವಿಕಾಸವಾದವನ್ನು ಉಲ್ಲಂಘಿಸುವ, ದೇಶದ ಆತ್ಮನಿರ್ಭರತೆಯ ಸಂಕೇತವಾಗಿದ್ದಾನೆ. ಈ ಭಕ್ತ-ಭಗವಂತರು ಪ್ರೀತಿಗಿಂತ ಹೆಚ್ಚಾಗಿ ದ್ವೇಷವನ್ನು ಪ್ರೋತ್ಸಾಹಿಸುತ್ತಿದ್ದರೇನೋ ಎಂಬ ಆತಂಕ ಅನೇಕರಿಗಿದೆ. ಸಾಮಾನ್ಯ ವೀಕ್ಷಕರು ಸದಾ ಕಲೆಯೊಂದಿಗೆ ಭಾವನಾತ್ಮಕವಾಗಿ ಒಂದಾಗುವುದರಲ್ಲಿ ಸಿದ್ಧಹಸ್ತರು. ಅದು ಪುರಾಣ, ಧರ್ಮ ಎಂದಲ್ಲ; ಸಾಂಸಾರಿಕ ಕಷ್ಟ-ಸುಖಗಳಿಗೂ ಸಂಬಂಧಿಸಿದ್ದೇ. ‘ಸೀತಾ ಔರ್ ಗೀತಾ’ ಎಂಬ ಮನರಂಜನೆಯ ಹಿಂದಿ ಸಿನೆಮಾ ಬಂದಾಗ ಅದರಲ್ಲಿ ನಾಯಕಿಯನ್ನು ಮಲತಾಯಿ ಮತ್ತಾಕೆಯ ಸೋದರ ಹಿಂಸಿಸುವಾಗ ಅತ್ತ, ಶಾಪಹಾಕಿದ, ನೋಡಲಾಗದೆ ಕಣ್ಣುಮುಚ್ಚಿಕೊಂಡ ಹೆಂಗಳೆಯರು ಬೇಕಷ್ಟಿದ್ದರು. ‘ಆದಿಪುರುಷ್’ ಇಂತಹ ಒಂದು ಬಾಲಿವುಡ್ ಸಿನೆಮಾ ಆಗಿದ್ದರೆ ಮನೆಮಂದಿಯೆಲ್ಲ ಹೀಗೆಯೇ ನೋಡಬಹುದಿತ್ತೇನೋ? ಆದರೆ ಅದು ಅಪಾಯಕಾರೀ ಸಂಕೇತಗಳನ್ನು, ಸಂದೇಶಗಳನ್ನು ಹೊತ್ತು ನಿಂತಿದೆ. ಈಗ ದೇಶದೆಲ್ಲೆಡೆ ಮತ-ಧರ್ಮಗಳ ಕೋವಿಡ್ ಹಬ್ಬಿರುವಾಗ ಈ ‘ಆದಿಪುರುಷ್’ ಸಿನೆಮಾ ಬಂದಿರುವುದು ಹೊಸ ಆಯಾಮಗಳಿಗೆ, ಹೊಸ ಆಖ್ಯಾನ-ವ್ಯಾಖ್ಯಾನಗಳಿಗೆ ಅವಕಾಶ ನೀಡಿದೆ. ಜನರಿಗೆ ಈ ಸಿನೆಮಾದ ಖಳನಾಯಕ ರಾವಣ ಒಬ್ಬ ಮುಸ್ಲಿಮ್ ಎಂಬುದೇ ಸಂತೋಷದ ವಿಚಾರವಾದ ಪ್ರಸಂಗವೂ ನಡೆದಿದೆ. ಈಗ ಅದೊಂದು ಸಿನೆಮಾ ಆಗಿ ಉಳಿದಿಲ್ಲ.
ಅದರ ಕುರಿತ ವಿವರಣೆಗಳು ಅದೊಂದು ಉದ್ದೇಶಿತ ಸಂದೇಶವಾಹಕವೆಂಬಂತೆ ಬಿಂಬಿಸಿವೆ. ‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’ ಸಿನೆಮಾಗಳು ನೇರ ರಾಜಕೀಯ ಅಜೆಂಡಾಗಳನ್ನು ಹೊತ್ತೊಯ್ದರೆ ‘ಆದಿಪುರುಷ್’ ತನ್ನ ಆಧುನಿಕ ಮನಸ್ಥಿತಿಯೊಂದಿಗೆ ಹೊಸ ವಿಕೃತಿಯನ್ನು ಸೃಷ್ಟಿಸಲು ಹೊರಟಂತಿದೆ. ರಾಮಾಯಣದ ಪಾತ್ರಗಳಿಗೆ ಸಿದ್ಧಮಾದರಿಯ ಹೆಸರುಗಳಿದ್ದವು. ರಾಮ, ಲಕ್ಷ್ಮಣ, ಸೀತೆ, ಹನುಮಂತ, ರಾವಣ ಇವು ವಾಡಿಕೆಯ ಪದಗಳು. ಸುಲಭವಾಗಿ ಶ್ರೀಸಾಮಾನ್ಯರನ್ನು ತಲುಪುವಂಥವು. ನೋವಾದಾಗ ಮತ್ತು ಕೆಲವರಿಗಾದರೂ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿ ‘‘ರಾಮಾ’’ ಎಂಬ ಹೆಸರು ನಾಲಗೆಯ ತುದಿಯಲ್ಲೋ ಗಂಟಲಮೂಲೆಯಲ್ಲೋ ಇರುತ್ತಿತ್ತು. ಗಾಂಧಿ ಕೊನೆಯ ಉಸಿರಿನಲ್ಲಿ ‘‘ಹೇರಾಮ್’’ ಎಂದಿದ್ದರಂತೆ. ಉತ್ತರ ಭಾರತದಲ್ಲಿ ಸತ್ತವರನ್ನು ಹೊತ್ತು ನಡೆಯುವಾಗ ‘‘ರಾಮ್‌ನಾಮ್ ಸತ್ಯ್ ಹೆ’’ ಎಂಬ ಘೋಷಣೆಯು ಸಾಮಾನ್ಯ. ದೇಶದ ವೈಭವವನ್ನು ಹೇಳುವುದಕ್ಕೆ ‘‘ಭಾರತ ಮಾತಾಕೀ ಜೈ’’, ‘‘ಜೈಹಿಂದ್’’ ಅಥವಾ ‘‘ವಂದೇಮಾತರಂ’’ ಎಂಬುದು ಈಗ ಹಳತಾಗಿ ‘‘ಜೈಶ್ರೀರಾಮ್’’ ಎಂಬ ಘೋಷಣೆ ಏಕಕಾಲಕ್ಕೆ ದೇಶದ ಹಿರಿಮೆಗಿಂತ ಹೆಚ್ಚಾಗಿ ಮತೀಯ ರಾಜಕಾರಣದ ಆಶಯವನ್ನು ಹೇಳುತ್ತಿದೆ. ಇದಕ್ಕಾಗಿ ಚಿತ್ರತಂಡ ಮಾಮೂಲಿನ ತಂತ್ರಗಳನ್ನಷ್ಟೇ ಅಲ್ಲ, ಹೊಸಬಗೆಯ ಸೆಳೆತಗಳನ್ನು ಬಳಸಿಕೊಂಡಿದೆ. ನಾಯಕನಟನು ಚಿತ್ರೀಕರಣ ನಡೆಯುವಾಗ ಮದ್ಯಪಾನವನ್ನು, ಮಾಂಸಾಹಾರವನ್ನು ತ್ಯಜಿಸಿದ್ದ ಮುಂತಾದ ವಾರ್ತೆಗಳು ಅನೇಕ ದಶಕಗಳಿಂದ ಇಂತಹ ಧಾರ್ಮಿಕ, ಪೌರಾಣಿಕ ಸಿನೆಮಾಗಳಲ್ಲಿ ಸಾಮಾನ್ಯ.
‘ಆದಿಪುರುಷ್’ನಲ್ಲಿ ಪಾತ್ರಗಳ ಹೆಸರುಗಳನ್ನೇ ವಿಭಿನ್ನವಾಗಿ ಪಲ್ಲಟಗೊಳಿಸಲಾಗಿದೆ: ರಾಮ- ರಾಘವನಾಗಿದ್ದಾನೆ; ಸೀತೆ ಜಾನಕಿಯಾಗಿದ್ದಾಳೆ; ಲಕ್ಷ್ಮಣನು ಶೇಷನಾಗಿದ್ದಾನೆ; ಹನುಮಂತ ಬಜರಂಗಿಯಾಗಿದ್ದಾನೆ; ರಾವಣನು ಲಂಕೇಶನಾಗಿದ್ದಾನೆ. ಇವು ಯಾವ ಉದ್ದೇಶದಿಂದ ಸೃಷ್ಟಿಸಲ್ಪಟ್ಟಿವೆ ಮತ್ತು ಸಂಕೇತ, ಪ್ರತಿಮೆಗಳನ್ನು ಸೃಷ್ಟಿಸುತ್ತಾವೋ ಗೊತ್ತಿಲ್ಲ. ಹಾಗೆಂದು ಇವು ಇಲ್ಲದ ಹೆಸರುಗಳಲ್ಲ. ಕಾಳಿದಾಸನು ರಘುವಂಶದ ಕಥೆ ಹೇಳಿದರೆ, ಮಹಾಕವಿ ಮುರಾರಿ ‘ಅನರ್ಘರಾಘವ’ ಎಂಬ ಹೆಸರಿನಿಂದ ಸಂಸ್ಕೃತ ನಾಟಕವನ್ನು ರಚಿಸಿದ್ದಾನೆ; ಕುಮಾರವ್ಯಾಸನು ರಘುವರ ಎಂದಿದ್ದಾನೆ. ಲಕ್ಷೀ್ಮೀಶನೂ ‘‘ಕಡೆಗು ಕರುಣಾಳು ರಾಘವನಲಿ ತಪ್ಪಿಲ್ಲ’’ ಎಂದಿದ್ದಾನೆ. ಹೀಗೆ ರಾಘವ ಎಂಬ ಪದ ಅಪರಿಚಿತವೇನೂ ಅಲ್ಲ. ಇತರ ಪಾತ್ರಗಳಿಗೂ ಇದೇ ತರ್ಕ ಅನ್ವಯಿಸಬಹುದು.
ಸುವರ್ಣಲಂಕೆಯ ವೈಭವೋಪತಿ ರಾವಣನು ಲಂಕೇಶ ಹೌದು. ಅವನನ್ನು ಕಾಡಿನ ಕ್ರೂರಮನುಷ್ಯರಂತೆ ಚಿತ್ರಿಸಲಾಗಿದೆಯೆಂದು ಹೇಳಲಾಗಿದೆ. ಹನುಮಂತ ಕಾಡಕಪಿ ಹೌದು; ಆದರೂ ಅವನಿಗೊಂದು ಗೀರ್ವಾಣ ವ್ಯಕ್ತಿತ್ವವನ್ನು ಪುರಾಣ ಮತ್ತು ಭಕ್ತಧರ್ಮಾಚರಣೆ ನೀಡಿದೆ. ಅವನನ್ನು ತೀರ ಒರಟಾಗಿ ಚಿತ್ರಿಸಲಾಗಿದೆಯೆಂದು ಮಾಧ್ಯಮಗಳು ವರದಿಮಾಡಿವೆ. ಹಿಂದೂಸಮಾಜದ ಒಂದು ವರ್ಗ ತನ್ನ ಮಡಿವಂತಿಕೆಯ ಮೂಲ ಅಶಯದೊಂದಿಗೆ ಅದನ್ನು ಟೀಕಿಸಿದರೆ ಇನ್ನೊಂದು ವರ್ಗ ಸೈದ್ಧಾಂತಿಕ ಬಲವರ್ಧನೆಗೆ ಅದು ನೆರವಾಗುತ್ತದೆಂಬ ಕಾರಣಕ್ಕಾಗಿಯೋ ಏನೋ ಅದನ್ನು ಹೊಗಳಿ ಅಟ್ಟಕ್ಕೇರಿಸಿದೆ. ಅಂತೂ ಚಿತ್ರವು ಆರಂಭದ ಕೆಲವು ದಿನಗಳಲ್ಲಿ ಸಾಕಷ್ಟು ಹಣಮಾಡಿದೆ. ನಮ್ಮ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ವಸ್ತು, ವಿಚಾರ, ಪ್ರಜ್ಞೆಯೂ (ಅಥವಾ ಅದರ ಹೀನತೆಯೂ) ಆಗುತ್ತದೆ. ಈ ಸಿನೆಮಾದ ಶೀರ್ಷಿಕಾ ಫಲಕದಲ್ಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಿದ್ದನ್ನು ಗಮನಿಸಿದರೆ ಇದರ ಕಾರ್ಯಸೂಚಿ ಅರ್ಥವಾಗುತ್ತದೆ. ಎಲ್ಲರಿಗೂ ರಾಜಕಾರಣಿಗಳು ಮೋಸಮಾಡುತ್ತಾರೆಂಬ ವಾಡಿಕೆಯ ಟೀಕೆಗಳಿವೆ; ಇಲ್ಲಿ (ಮತ್ತು ಮೇಲೆ ಹೇಳಿದ ‘ಕಾಶ್ಮೀರ್ ಫೈಲ್ಸ್’, ‘ಕೇರಳ ಸ್ಟೋರಿ’ ಸಿನೆಮಾಗಳಲ್ಲಿ) ನಿರ್ಮಾಪಕರು ಜನರನ್ನು ಮಾತ್ರವಲ್ಲ, ರಾಜಕಾರಣಿಗಳನ್ನೂ ವಂಚಿಸಿದ್ದಾರೆಂದು ಅನ್ನಿಸುತ್ತದೆ.
ಇವನ್ನೆಲ್ಲ ಚುನಾವಣಾ ಭಾಷಣಗಳಂತೆ ಜನರನ್ನು ಒಂದು ಸೀಮಿತ ಅವಧಿಯಲ್ಲಿ, ಸೀಮಿತ ಉದ್ದೇಶಕ್ಕೆ ಬಳಸಿಕೊಳ್ಳಬಹುದು ಮತ್ತು ಆ ಮೂಲಕ ಹಣಸಂಪಾದಿಸುವ ವಿಧಾನವಾಗಬಹುದು. ಈಗಾಗಲೇ ಬಂದ ಇಂತಹ ಸಿನೆಮಾ ತಯಾರಕರು ರಾಜಕಾರಣದ ಎಲ್ಲ ಲಾಭಗಳನ್ನೂ ಪಡೆದುಕೊಂಡು ನೇಪಥ್ಯದಲ್ಲಿ ನಗುತ್ತಾರೆ. ನೋಡಿದವರು ತಾವೇನೋ ಸಾಧಿಸಿದ್ದೇವೆ ಎಂಬಂತೆ ವಿಜಯೋತ್ಸವವನ್ನು ಆಚರಿಸುತ್ತಾರೆ. ಇಲ್ಲಿಗೆ ಈ ನಾಟಕ ಮುಗಿಯುತ್ತದೆ. ಈಗ ಈ ಸಿನೆಮಾದ ಅಡ್ಡ ಪರಿಣಾಮಗಳನ್ನು ಗಮನಿಸಿದರೆ ಇದರಿಂದ ಕಲೆಗೆ, ಸಮಾಜಕ್ಕೆ ಆಗಿರುವ ಪ್ರಭಾವ, ನೆರವಾದರೂ ಏನು? ಕಲೆಯು ಯಾವುದೇ ನಿಶ್ಚಿತ ಉದ್ದೇಶಕ್ಕಾಗಿ ಸಿದ್ಧವಾಗುವ ವಸ್ತುವಲ್ಲದಿದ್ದರೂ ಅದು ಬಹುಕಾಲ ನಮ್ಮನ್ನು ಕಾಡಬೇಕು. ಹಾಗಾಗುವುದಿಲ್ಲ. ಆದರೆ ಕೆಲವು ದೂರಗಾಮೀ ಪರಿಣಾಮಗಳನ್ನೆದುರಿಸಬೇಕಾಗುತ್ತದೆ. ಶ್ರೀರಾಮ, ಸೀತೆ, ಕೌಸಲ್ಯೆ, ಹೀಗೆ ರಾಮಾಯಣದ ಪಾತ್ರಗಳು ಹುಟ್ಟಿದ ಸ್ಥಳಗಳೂ ವಿವಾದವನ್ನು ಸೃಷ್ಟಿಸಲು ಸಾಕೆನ್ನುವುದಕ್ಕೆ ಉದಾಹರಣೆಯೆಂದರೆ ಭೌಗೋಳಿಕ ಮೂಲದ ವಿವಾದಾಸ್ಪದ ಕಾರಣಕ್ಕೆ ನೇಪಾಳವು ಭಾರತೀಯ ಸಿನೆಮಾಗಳನ್ನು ನಿಷೇಧಿಸಿದೆ. ಧರ್ಮಕಾರಣಕ್ಕೆ, ರಾಜಕಾರಣಕ್ಕೆ, ನಿಷೇಧಕ್ಕೆ ಒಳಗಾಗುವ ಕಲೆಗಳಿವೆ. ಆದರೆ ವಿವಾದಾಸ್ಪದ ಅಥವಾ ತಪ್ಪುಮಾಹಿತಿಗಳನ್ನು ಕಲೆಯ ಹೆಸರಿನಲ್ಲಿ ಅಭಿವ್ಯಕ್ತಿಸುವ ವ್ಯಕ್ತಿ ಅಥವಾ ಸಂಸ್ಥೆಯು ಅದರ ಪರಿಣಾಮಗಳನ್ನೆದುರಿಸಲು ಸಿದ್ಧವಾಗಿರಬೇಕು.
ಸಿನೆಮಾದಂತಹ ಮಾಧ್ಯಮದಲ್ಲಿ ಈ ನಷ್ಟವು ಭಾರೀ ಪ್ರಮಾಣದಲ್ಲಿರುತ್ತದೆ. ಒಂದು ಚಿತ್ರ ವಾಸ್ತವವನ್ನು ತೋರಿಸಬೇಕು. ಹಾಗೆಂದು ಅದು ವರದಿಯಲ್ಲ. ಕಲೆಯ ಹೆಸರಿನಲ್ಲಿ ಉಪಚಾರವೂ ಸಲ್ಲ, ಅಪಚಾರವೂ ಸಲ್ಲ. ದೇವರ ಚಿತ್ರವನ್ನು ಮಾಡುವವನು ಎಷ್ಟೇ ಆಧುನಿಕನಾಗಿರಲಿ, ನಾಲ್ಕು ಕೈಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಆಧುನಿಕ ಪರಿಕರಗಳನ್ನು ಹಿಡಿಸಬಾರದು. ಅದು ಅಣಕವಾದೀತೇ ವಿನಾ ಕಲೆಯಾಗದು. ಆದರೆ ಈ ದೇಶದ ದೊಡ್ಡ ದುರಂತ ಗಳಲ್ಲೊಂದೆಂದರೆ ಯಾವುದೇ ಕಲೆಯನ್ನೂ ಧಾರ್ಮಿಕವಾಗಿಸುವುದು, ರಾಜಕೀಯವಾಗಿಸುವುದು. ಶ್ರೀರಾಮನನ್ನು ವಾಲ್ಮೀಕಿಯ ಸೃಷ್ಟಿಯೆಂಬುದನ್ನು ಗಮನಿಸದೆ ಧಾರ್ಮಿಕಗೊಳಿಸಿದ್ದೇ ತಪ್ಪು. ಈಗ ಆತನನ್ನು ಚುನಾವಣಾ ರಾಜ ಕೀಯಕ್ಕೆ ಎಳೆದು ತಂದು ಬೀದಿಯಲ್ಲಿ ನಿಲ್ಲಿಸಿದ್ದು ಇನ್ನೂ ದೊಡ್ಡ ತಪ್ಪು. ಎಂ.ಎಫ್. ಹುಸೇನ್, ನವಾಝುದ್ದೀನ್ ಸಿದ್ದೀಕಿ ಇವರೆಲ್ಲ ಇಂತಹ ರಾಜಕೀಯಕ್ಕೆ ಬಲಿಪಶುಗಳು. ಇಂದು ಸಲೀಮ್ ಗೌಸ್ ರಾಮನ ಪಾತ್ರ ವಹಿಸುವುದು ಕನಸಿನ ಮಾತು. ಮುಂದೆ ಇನ್ನೂ ಏನೇನು ನಡೆಯುವುದೋ ಕಾದು ನೋಡಬೇಕು.
ಆ (ವಿ)ಚಿತ್ರಕೆ ನಮಿಸೋ ಮಂಕುತಿಮ್ಮ!