ಮಂಡ್ಯ: ತಂದೆಯಿಂದಲೇ ಇಬ್ಬರು ಪುಟ್ಟ ಮಕ್ಕಳ ಹತ್ಯೆ, ಪತ್ನಿಗೆ ಮಾರಣಾಂತಿಕ ಹಲ್ಲೆ
ಮಂಡ್ಯ, ಜೂ.22: ತಂದೆಯೇ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು, ಪತ್ನಿಗೆ ಗಂಭೀರ ಗಾಯಗೊಳಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮರಳಾಗಾಲ ಎಂಬ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿರುವುದು ವರದಿಯಾಗಿದೆ.
ಆದಿತ್ಯ(4) ಮತ್ತು ಅಮೂಲ್ಯ(3) ಹತ್ಯೆಯಾದ ಮಕ್ಕಳು. ಮೂಲತಃ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಾಣಗಾಪುರ ನಿವಾಸಿ ಶ್ರೀಕಾಂತ್ ಕೊಲೆ ಆರೋಪಿ. ಈತ ಇದೇವೇಳೆ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.
ಮರಳಗಾಲದ ಬಳಿಯಿರುವ ಮನೆಯೊಂದರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಅಂಬಿಕಾ ಎಂಬವರ ಮಗಳಾದ ಲಕ್ಷ್ಮೀ ಮಂಗಳವಾರ ಪತಿ, ಮಕ್ಕಳ ಜೊತೆ ಮರಳಗಾಲಕ್ಕೆ ಆಗಮಿಸಿದ್ದರು.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿ ಶ್ರೀಕಾಂತ್ ತನ್ನ ಮಕ್ಕಳಿಬ್ಬರನ್ನು ಕತ್ತು ಸೀಳಿ ಕೊಲೆಗೈದಿದ್ದಾನೆ. ಇದೇವೇಳೆ ಪತ್ನಿ ಲಕ್ಷ್ಮೀಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿ ತೀವ್ರ ಗಾಯಗೊಳಿಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.