ಭಟ್ಕಳ: ಸಚಿವ ಮಂಕಾಳ ವೈದ್ಯರ ಅಭಿನಂದನಾ ಬ್ಯಾನರ್ ಗೆ ಕಿಡಿಗೇಡಿಗಳಿಂದ ಹಾನಿ
ಭಟ್ಕಳ, ಜೂ.22: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯರ ಅಭಿನಂದನಾ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಕಿತ್ತೆಸೆದ ಘಟನೆ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಮಂಕಾಳ ವೈದ್ಯ ಅವರನ್ನು ಅಭಿನಂದಿಸಿ ಅವರ ಅಭಿಮಾನಿಗಳು ತಾಲೂಕಿನ ವಿವಿಧಡೆ ಬ್ಯಾನರ್ ಅಳವಡಿಸಿದ್ದಾರೆ. ಈ ಪೈಕಿ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಬ್ಯಾನರ್ ಅನ್ನು ಜೂ.18ರಂದು ಯಾರೂ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಗೆ ಬೆಳಕೆ ನಿವಾಸಿ ನಾರಾಯಣ ನಾಯ್ಕ್ ಎಂಬವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story