15 ಲಕ್ಷ ರೂ.ನೀಡುತ್ತೇವೆ ಎಂದಾಗ ತಲೆಯಲ್ಲಿ ಮೆದುಳು ಇರಲಿಲ್ಲವೇ?: ಶೋಭಾ ಕರಂದ್ಲಾಜೆಗೆ ಡಿ.ಕೆ.ಶಿವಕುಮಾರ್ ತಿರುಗೇಟು
ಬೆಂಗಳೂರು, ಜೂ.22: ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡುವ ಮುನ್ನ ಕಾಂಗ್ರೆಸ್ ಮುಖಂಡರ ತಲೆಯಲ್ಲಿ ಮೆದುಳು ಇರಲಿಲ್ಲವೇ? ಎಂದು ಶೋಭಕ್ಕ ಕೇಳಿದ್ದಾರೆ. ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ 15ಲಕ್ಷ ರೂ.ಹಾಕುತ್ತೇವೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಾಗ ಅವರ ತಲೆಯಲ್ಲಿ ಮೆದುಳು ಇರಲಿಲ್ಲವೇ? ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಗುರುವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿರೋಧ ಪಕ್ಷಗಳು ಬಹಳ ಟೀಕೆ ಮಾಡುತ್ತಿವೆ, ಮಾಡಲಿ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಪುಗಸಟ್ಟೆ ಅಕ್ಕಿ ಕೇಳುತ್ತಿಲ್ಲ. ಅಕ್ಕಿ ಪೂರೈಕೆಗೆ ನಮ್ಮ ಸರಕಾರ ಬೇರೆ ರಾಜ್ಯಗಳ ಜತೆ ಸಂಪರ್ಕದಲ್ಲಿದೆ ಎಂದರು.
ನಮ್ಮ ಪಕ್ಷ ಬಿಜೆಪಿ ಪಕ್ಷಕ್ಕಿಂತ ವಿಭಿನ್ನವಾಗಿದೆ. ಅವರು ನಾಲ್ಕು ವರ್ಷ ಆಡಳಿತ ಮಾಡಿದರೂ ಅವರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲಿಲ್ಲ. 1 ಲಕ್ಷ ರೂ.ವರೆಗಿನ ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು ಆದರೆ ಮಾಡಲಿಲ್ಲ. ನಾವು ಘೋಷಣೆ ಮಾಡಿರುವ ಯೋಜನೆ ಜಾರಿಗೆ ಮುಂದಾಗಿದ್ದೇವೆ. ನಮಗೆ ಬಡವರ ಬಗ್ಗೆ ಅಷ್ಟಾದರೂ ಕಾಳಜಿ ಇದೆ. ಅವರು ತಾಳ್ಮೆಯಿಂದ ಇದ್ದರೆ ಉತ್ತಮ ಎಂದು ಶಿವಕುಮಾರ್ ಹೇಳಿದರು.
ಕೇಂದ್ರ ಸರಕಾರ ಸಹಕಾರ ನೀಡದಿದ್ದರೆ ಮುಂದಿನ ಆಯ್ಕೆ ಏನು ಎಂದು ಕೇಳಿದಾಗ, ‘ಮುಖ್ಯಮಂತ್ರಿ ಹಾಗೂ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಸ್ವಲ್ಪ ತಡವಾದರೂ ನಾವು ಈ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ಆರಂಭದಲ್ಲಿ ಎಫ್‍ಸಿಐ ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆದರೆ ನಂತರ ತಮ್ಮ ನೀತಿ ಬದಲಿಸಿರುವುದಾಗಿ ತಿಳಿಸಿದೆ. ಅವರಿಗೆ ರಾಜಕಾರಣವೇ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಯೋಜನೆ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ಲವೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮಗೆ ಜ್ಞಾನ ಇರಲಿಲ್ಲ. ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ, ಅಷ್ಟು ಸಾಕು’ ಎಂದರು.
ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಬಹಳ ಸಂತೋಷ, ಈಗಲಾದರೂ ಪ್ರಧಾನಮಂತ್ರಿ ನಮ್ಮ ದೇಶದ ಮಾಧ್ಯಮಗಳ ಬಳಿ ಅಲ್ಲದಿದ್ದರೂ ವಿದೇಶಿ ಮಾಧ್ಯಮಗಳ ಬಳಿ ಮಾತನಾಡಿದ್ದಾರೆ. ನೀವು ಖುಷಿಪಡಿ’ ಎಂದರು.