ಅಳಿವಿನಂಚಿನಲ್ಲಿರುವ ಭಾರತದ ಪ್ರಾಚೀನ ಇರುಳಿಗ ಬುಡಕಟ್ಟು ಜನಾಂಗ
ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟು ಗಳಲ್ಲಿ ಇರುಳಿಗರು ಪ್ರಮುಖರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಾಗಿ ಕಂಡುಬರುವ ಇವರು ಕರ್ನಾಟಕ ಸೇರಿದಂತೆ ತಮಿಳುನಾಡು ಮತ್ತು ಕೇರಳದಲ್ಲಿ ವಾಸಿಸುತ್ತಿದ್ದಾರೆ. ಇರುಳಿಗರು ಇಂದಿಗೂ ತಮ್ಮದೇ ಆದ ಭಾಷೆ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಆದಿಮಾನವರಂತೆ ನಾಳೆಯ ಚಿಂತೆ ಇಲ್ಲದೆ, ಕೂಡಿಡಬೇಕು, ಸಂಪಾದಿಸಬೇಕು ಎಂಬ ಯಾವ ಆಶೆ- ಆಕಾಂಕ್ಷೆಗಳಿಲ್ಲದೆ ಅವತ್ತಿನದ್ದು ಅವತ್ತಿಗೆ ಎಂಬಂತೆ ಇಂದಿಗೂ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುತ್ತಾ, ಆಧುನಿಕ ನವ ನಾಗರಿಕತೆಯ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿರುವ ಇರುಳಿಗರು ತರಗೆಲೆಗಳಂತೆ ಕೊಚ್ಚಿ ಹೋಗುತ್ತಿದ್ದಾರೆ. ಬೆಂಗಳೂರಿನ ಕೂಗಳತೆಯ ದೂರದಲ್ಲಿದ್ದರೂ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ, ಹಳ್ಳದ ನೀರು ಕುಡಿದುಕೊಂಡು, ಇವತ್ತಿಗೂ ಗುಹೆ ಗುಡಾರಗಳು ಹಾಗೂ ಅರೆಕಲ್ಲುಗಳ ಮೇಲೆ ಜೀವನ ಸಾಗಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿರುವ ಇರುಳಿಗರು ಕಾವೇರಿ ನದಿಯ ತಪ್ಪಲಿನಲ್ಲಿ ಪಾರಂಪರಿಕವಾಗಿ ಜೀವಿಸಿಕೊಂಡು ಬರುತ್ತಿದ್ದಾರೆ. ಸಿಂಧೂ ಕಣಿವೆಯ ಜನಕ್ಕೆ ಹೇಗೆ ಸಿಂಧೂ ನದಿ ಆಧಾರವೋ ಅದೇ ತೆರನಾಗಿ ಇರುಳಿಗರಿಗೆ ಕಾವೇರಿ ನದಿ ಆಧಾರ. ನದಿಯೊಂದಿಗೆ ಇವರ ಬದುಕು ಬೆಸೆದುಕೊಂಡು ಇಂದಿಗೂ ಇವರ ನಂಬಿಕೆ ಐತಿಹ್ಯ-ಪುರಾಣಗಳಲ್ಲೂ ಕಾವೇರಿ ನದಿಯೊಂದಿಗಿನ ಉಲ್ಲೇಖಗಳು ಸಿಗುವುದನ್ನು ಕಾಣಬಹುದು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಹಾಗೂ ಕೇರಳದ ಕಾವೇರಿ ನದಿಯ ಆಸುಪಾಸಿನ ಭಾಗದಲ್ಲೂ ಕಂಡುಬರುವ ಇರುಳಿಗರು ಸಾಮಾನ್ಯವಾಗಿ ಇರುಳ, ಇರುಳಾಸ್, ಇಲ್ಲಿಗರು, ಕಾಡು ಪೂಜಾರಿ, ಕಾಡ್ ಚೆನ್ಸು ಎಂಬ ಅನೇಕ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ. ಇವರು ಬೇರೆ ಬೇರೆ ರಾಜಕೀಯ ವಿಭಾಗಿತ ಪ್ರದೇಶದಲ್ಲಿ ಕಂಡು ಬಂದರೂ ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ರಕ್ತ ಸಂಬಂಧವನ್ನು ಹೊಂದಿದವರೇ ಆಗಿದ್ದಾರೆ. ಜೊತೆಗೆ ಕರ್ನಾಟಕದ ಇತರ ಭಾಗಕ್ಕೂ ಈ ಕಾವೇರಿ ನದಿ ಭಾಗದಿಂದಲೇ ಹೋಗಿ ನೆಲೆಸಿದ್ದಾರೆ ಎಂದು ಇರುಳಿಗ ಸಮುದಾಯದ ಹಿರಿಯರು ಹೇಳುತ್ತಾರೆ.
ಸಿಂಧೂ ಬಯಲಿನ ನಾಗರಿಕತೆಗಿಂತಲೂ ಹಿಂದಿನವರಾಗಿರುವ ಇರುಳಿಗರು ತಮ್ಮದೇ ಆದ ನ್ಯಾಯ ಪಂಚಾಯತ್, ಶವ ಸಂಸ್ಕಾರ, ಮದುವೆ ಪದ್ಧತಿ, ದೇವರುಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ದೇವರು ಎಂಬುದು ಅಗೋಚರ ಶಕ್ತಿಯಲ್ಲ ತಮ್ಮ ಜೊತೆಗೆ ನಿಲ್ಲುವ ಸ್ಥೈರ್ಯವೇ ಆಗಿದೆ, ದೇವರು ಬೇರೆ ಯಾರು ಅಲ್ಲ ಸತ್ತ ತಮ್ಮ ಹಿರೀಕರೇ ತಮಗೆ ದೇವರು ಎಂದು ನಂಬಿರುವ ಇರುಳಿಗರು ಇಂದಿಗೂ ಸತ್ತ ತಮ್ಮ ಹಿರಿಯರನ್ನು ಹೂಳುವುದು ಅಥವಾ ಸುಡದೆ ‘ಕಲ್ಲುಸೇವೆ’ ಮಾಡಿಕೊಂಡು ಬರುತ್ತಿದ್ದಾರೆ.
ಒಬ್ಬ ವ್ಯಕ್ತಿ ಸತ್ತ ಮೇಲೆ ದೆವ್ವ-ಭೂತವಾಗುತ್ತಾನೆ ಅಥವಾ ಸ್ವರ್ಗಕ್ಕೋ-ನರಕಕ್ಕೋ ಹೋಗುವುದಾಗಿ ಪ್ರಚಲಿತ ದಿನಮಾನದ ನಂಬಿಕೆಗಳಿವೆ. ಆದರೆ ಇರುಳಿಗರಲ್ಲಿ ಮಾತ್ರ ಸತ್ತ ವ್ಯಕ್ತಿಯನ್ನು ತಮ್ಮ ಬದುಕಿನುದ್ದಕ್ಕೂ ತಮ್ಮೊಂದಿಗೆ ಇರಿಸಿಕೊಂಡು ಕರೆದಾಗಲೆಲ್ಲ ಬಂದು ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವಂತಹ ಶಕ್ತಿಯಾಗಿಸಿಕೊಂಡು ಪೂಜಿಸುತ್ತಾರೆ. ‘‘ಸತ್ತ ವ್ಯಕ್ತಿಯ ದೇಹನನ್ನು ಮಣ್ಣಿನಲ್ಲಿ ಹೂಳುವುದರಿಂದ ಅಥವಾ ಬೆಂಕಿಯಲ್ಲಿ ಸುಟ್ಟುಬಿಡುವುದರಿಂದ ನಮ್ಮ ಹಿರಿಯರ ಕಳೇಬರ ನಾಶವಾಗಿ ಅವರ ನೆನಪುಗಳೇ ನಮಗೆ ಸಿಗದಂತಾಗುತ್ತದೆ. ಅದರ ಬದಲು ಕಲ್ಲು ಸೇವೆ ಮಾಡುವುದರಿಂದ ಅವರ ಮೂಳೆಗಳನ್ನಾದರೂ ನೋಡಿಕೊಂಡು ನಮ್ಮ ಹಿರಿಯರ ನೆನಪು ಮಾಡಿಕೊಳ್ಳುತ್ತೇವೆ. ಬದುಕಿರುವಾಗಲಂತೂ ಒಬ್ಬರಿಗೆ ಉಪಕಾರ ಮಾಡಲಿಕ್ಕೆ ಆಗಲಿಲ್ಲ. ಸತ್ತ ಮೇಲಾದರೂ ತನ್ನ ದೇಹ ನಾಲ್ಕು ಪ್ರಾಣಿ ಪಕ್ಷಿಗಳಿಗೆ ಆಹಾರವಾಗಲಿ ಎನ್ನುವ ನಂಬಿಕೆಯಿಂದಲೇ ಕಲ್ಲುಸೇವೆ ಅಥವಾ ಕಲ್ಲು ಮಲ್ಲಯ್ಯನನ್ನು ಮಾಡುತ್ತೇವೆ’’ ಎನ್ನುತ್ತಾರೆ ಇರುಳಿಗರು.
ಸಾಮಾನ್ಯವಾಗಿ ಇರುಳಿಗರು ಅರಣ್ಯ, ಪ್ರಾಣಿ-ಪಕ್ಷಿ, ಗಿಡಮರಗಳ ಬಗ್ಗೆ ಅಪಾರ ಸೂಕ್ಷ್ಮ ಜ್ಞಾನ ಹೊಂದಿದವರಾಗಿದ್ದು, ಕೇವಲ ವಾಸನೆ, ಶಬ್ದ ಮತ್ತು ಹೆಜ್ಜೆಗಳಿಂದಲೇ, ಪ್ರಾಣಿ-ಪಕ್ಷಿಗಳ ಚಲನವಲನಗಳನ್ನು ಗುರುತಿಸುವ ತೀಕ್ಷ್ಣಮತಿಗಳಾಗಿದ್ದಾರೆ. ಬಹಳ ಪ್ರಮುಖವಾಗಿ ಇರುಳಿಗರು ಮಾನಸಿಕ ಖಿನ್ನತೆಗಳಿಗೆ ಒಳಗಾದವರನ್ನು ಗುಣ ಪಡಿಸುವ ರೀತಿಯು ಇವತ್ತಿನ ಆದುನಿಕತೆಯ ತಂತ್ರಜ್ಞಾನವನ್ನು ನಿಬ್ಬೆರಗಾಗುವಂತೆ ಮಾಡಿದೆ. ಸದಾ ಸಾವಿರಾರು ಜನ ಇವರಲ್ಲಿಗೆ ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಬಗೆ ಹರಿಸಿಕೊಳ್ಳುತ್ತಿದ್ದಾರೆ. ಇವತ್ತಿಗೂ ತಮ್ಮ ಸೇವೆಗಾಗಿ ರಾಗಿ, ಅಕ್ಕಿ ದಿನಸಿಗಳನ್ನೇ ಪಡೆದುಕೊಳ್ಳುವುದು ವಿಶೇಷ.
ಹೀಗೆ, ತನ್ನದೇ ಆದ ಪಾರಂಪರಿಕ ಇತಿಹಾಸವನ್ನು ಹೊಂದಿರುವ ಇರುಳಿಗರು ಇಂದು ಇರಲು ಸೂರಿಲ್ಲದೆ, ತಿನ್ನಲು ಅನ್ನವಿಲ್ಲದೆ, ಎಲ್ಲರಂತೆ ಬದುಕಲು ಒಂದಿಷ್ಟು ಭೂಮಿ ಇಲ್ಲದೆ, ಇತರರಂತೆ ಬದುಕಲು ನಯನಾಜೂಕು ಗೊತ್ತಿಲ್ಲದೆ, ತುತ್ತಿನ ಚೀಲ ತುಂಬಿಸಿಕೊಳ್ಳಲು ಇಟ್ಟಿಗೆ ಫ್ಯಾಕ್ಟರಿ, ರೇಷ್ಮೆಗೂಡು ಬೇಯಿಸುವ ಕಾರ್ಖಾನೆ, ಎಸ್ಟೇಟ್ ಮತ್ತು ಇತರ ಮುಂದುವರಿದ ಸಮುದಾಯದವರ ಮನೆ, ಹೊಲ, ಗದ್ದೆಗಳಲ್ಲಿ ಇಂದಿಗೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಬದಿಯಲ್ಲಿ ಪೇಪರ್ ಆಯ್ದುಕೊಂಡು ಬದುಕುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿರುವ ಬಹುತೇಕ ಇರುಳಿಗರು, ಇಟ್ಟಿಗೆ ಫ್ಯಾಕ್ಟರಿಯಲ್ಲಿ ಇಂದಿಗೂ ವಾರ್ಷಿಕ 50 ಸಾವಿರ ರೂ.ಗೆ ದುಡಿಯುತ್ತಿದ್ದಾರೆ. ಈ ಇಟ್ಟಿಗೆ ಫ್ಯಾಕ್ಟರಿಗಳು ರಾಮನಗರದ ರಾಜಕೀಯ ಮುಖಂಡರ ಹಿಂಬಾಲಕರುಗಳಾಗಿದ್ದು, ಇವರು ಪೋಲಿಸರನ್ನು ತೋರಿಸಿ ಅಥವಾ ಕ್ಷಣಿಕ ಆಮಿಷಗಳನ್ನು ದುಡಿಸಿಕೊಳ್ಳುತ್ತಿರುವುದಾಗಿ ಕೆಲವರು ಮಾಹಿತಿ ನೀಡಲು ಭಯಪಟ್ಟುಕೊಂಡೇ ಹೇಳುತ್ತಾರೆ. ಇದರ ಜೊತೆಗೆ ರೇಷ್ಮೆಗೂಡು ಬೇಯಿಸುವ ಕಾರ್ಖಾನೆಗಳಲ್ಲೂ ನಿರಂತರವಾಗಿ ದುಡಿದು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಇದರಿಂದ ಇರುಳಿಗ ಸಮುದಾಯದವರ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಇಡೀ ಇರುಳಿಗರಲ್ಲಿ ಕೇವಲ ಬೆರಳೆಣಿಕೆಯಷ್ಟು ಶಿಕ್ಷಣವಂತರು ಮಾತ್ರ ಇದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದು ಇದೀಗ 76 ವರ್ಷಗಳಾದರೂ, ಒಬ್ಬ ಸರಕಾರಿ ನೌಕರನಿಲ್ಲದ ಏಕೈಕ ಸಮುದಾಯ ಇದಾಗಿದೆ. ಬಹುಸಂಖ್ಯಾತ ಇರುಳಿಗರಿಗೆ ಮೀಸಲಾತಿ ಎಂದರೇನು ಎಂದು ತಿಳಿದಿಲ್ಲ. ಸುಮಾರು ಶೇ. 60 ಇರುಳಿಗರಿಗೆ ಅಗತ್ಯ ದಾಖಲಾತಿಗಳೇ ಇಲ್ಲ, ಇನ್ನು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮಾತೆಲ್ಲಿ ಎನ್ನುವಂತಾಗಿದೆ. ಇರುಳಿಗ ಸಮುದಾಯದ ಬಗ್ಗೆ ಇವತ್ತಿಗೂ ಸರಿಯಾದ ಮಾಹಿತಿ ಇಲ್ಲ. ಸರಕಾರಿ ದಾಖಲೆಗಳಲ್ಲಿ ಒಂದಾದರೆ ವಾಸ್ತವದ ಜನಸಂಖ್ಯೆಯೇ ಬೇರೆಯಾಗಿದೆ.
2001ರ ಜನಗಣತಿಯಲ್ಲಿ ಕರ್ನಾಟಕದಲ್ಲಿ ಇರುಳಿಗರ ಜನಸಂಖ್ಯೆ 8,486 ಇದ್ದು, ಇದರಲ್ಲಿ 4,392 ಪುರುಷರು ಹಾಗೂ 4,094 ಮಹಿಳೆಯರು ಇದ್ದಾರೆಂದು ದಾಖಲಾಗಿದೆ. ಹಾಗೆಯೇ ಬೆಂಗಳೂರು ಗ್ರಾಮಾಂತರ (ಈಗಿನ ರಾಮನಗರವನ್ನು ಒಳಗೊಂಡಂತೆ) 5,645 (2,939 ಗಂಡಸರು, 2,706 ಹೆಂಗಸರು) ದಾಖಲಾಗಿದೆ. ಹಾಗೆಯೇ 2011ರ ಜನಗಣತಿಯಲ್ಲಿ ಇರುಳಿಗರ ಜನಸಂಖ್ಯೆ ಕರ್ನಾಟಕದಲ್ಲಿ 10,259 (ಪುರುಷರು-5,267 ಮಹಿಳೆಯರು-4,992), 2,507 ಕುಟುಂಬಗಳು ಎಂದು ದಾಖಲಾಗಿದೆ. ಆದರೆ ಕರ್ನಾಟಕದಲ್ಲಿ ಇರುಳಿಗರ ಒಟ್ಟು ಜನಸಂಖ್ಯೆ 18ರಿಂದ 20 ಸಾವಿರವಿದೆ. ಈ ಬಗ್ಗೆ ಸರಿಯಾದ ಅಧ್ಯಯನಗಳಾಗಬೇಕಾಗಿದೆ. ಇನ್ನು ಶೇ. 60ರಷ್ಟು ಜನರು ಇಂದಿಗೂ ವಾಸಿಸಲು ಸೂರಿಲ್ಲದೆ ಜೀತದಾಳುಗಳಾಗಿ ದುಡಿಯುತ್ತಿದ್ದು ಇವರಲ್ಲಿ ಯಾವುದೇ ಮೂಲಭೂತವಾದ ದಾಖಲಾತಿಯೂ ಇಲ್ಲದೆ ಸರಕಾರಿ ಜನಗಣತಿಯಲ್ಲಿ ಲೆಕ್ಕಕ್ಕೆ ಸಿಗದೆ ಉಳಿದುಬಿಟ್ಟಿದ್ದಾರೆ.
ಆರ್ಥಿಕವಾಗಿ ತೀರ ಹಿಂದುಳಿದ ಇರುಳಿಗರು ಇಂದಿಗೂ ತಮ್ಮ ಪಾರಂಪರಿಕ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಇದನ್ನು ಹೊರತು ಪಡಿಸಿದರೆ, ಇರುಳಿಗರಿಗೆ ಬೇರೆ ವ್ಯಾವಹಾರಿಕ ತಿಳುವಳಿಕೆ ಇಲ್ಲದಿರುವುದರಿಂದ ಇತ್ತ ಬೇರೆ ವೃತ್ತಿಗೂ ಹೊಂದಿಕೊಳ್ಳಲಾಗದೆ ಡೋಲಾಯಮಾನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇರುಳಿಗರು ತಮ್ಮ ಪಾರಂಪರಿಕ ಕಲ್ಲುಸೇವೆಯ ಜೊತೆಗೆ ಅನೇಕ ಪಾರಂಪರಿಕ ನಂಬಿಕೆಯ ಆಚರಣೆ, ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಗೆ ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇವರ ಪಾರಂಪರಿಕ ಕಲ್ಲು ಗುಹೆಗಳು ಕಾಡಿನ ಮಧ್ಯಭಾಗದಲ್ಲಿದ್ದು, ತಮ್ಮ ಹಿರಿಯರ ಕಲ್ಲುಗೋರಿ, ಕಲ್ಲುಗುಹೆಗಳನ್ನು ಉಳಿಸಿಕೊಡುವಂತೆ ಅರಣ್ಯ ಇಲಾಖೆಯ ಮುಂದೆ ಅಂಗಲಾಚುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಣೆಯ ಕಾರಣವೊಡ್ಡಿ ಇರುಳಿಗರ ಕಲ್ಲುಸೇವೆಯ ಹತ್ತಿರ ಹೋಗಲು ಬಿಡುತ್ತಿಲ್ಲ. ಇಂದಿಗೂ ವಯಸ್ಸಾದ ಎಷ್ಟೋ ಇರುಳಿಗರು ತಮ್ಮನ್ನು ಕಲ್ಲುಸೇವೆ ಮಾಡುವಂತೆ ಕೇಳಿಕೊಂಡರೂ ಅವರ ಕೊನೆಯ ಆಸೆಯನ್ನು ಈಡೇರಿಸಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ‘‘ನಾವೆಲ್ಲ ತಲೆತಲಾಂತರದಿಂದ ಹುಟ್ಟಿ ಬೆಳೆದ ಪ್ರದೇಶವು ನೋಡುನೋಡುತ್ತಿದ್ದಂತೆ ಅನೇಕ ನಿರ್ಬಂಧಗಳಿಗೆ ಒಳಗಾಗುತ್ತಿದೆ. ನಾವು ನೆಟ್ಟು ಬೆಳೆಸಿದ ಮರ ಗಿಡಗಳ ಮೇಲೆ ನಮಗೆ ಹಕ್ಕುಗಳಿಲ್ಲದಂತಾಗಿದೆ. ಉತ್ತಿ, ಬಿತ್ತಿ ಬೆಳೆ ಬೆಳೆದು ಹೊಟ್ಟೆಹೊರೆದ ಭೂಮಿಗೆ ಬೇಲಿ ಹಾಕಲಾಗಿದೆ. ನಮ್ಮ ಹಿರಿಯರ ಸಮಾಧಿಗಳಿಗೆ, ನಮ್ಮ ದೇವರುಗಳ ಜಾಗಕ್ಕೆ ಹೋಗಲು ಸಾಧ್ಯವಾಗದಂತಾಗಿದೆ. ನಮಗೆ ನಮ್ಮ ಪಾರಂಪರಿಕ ವೃತ್ತಿ ಬಿಟ್ಟರೆ ಬೇರೆ ಬದುಕು ಗೊತ್ತಿಲ್ಲ. ದಯಮಾಡಿ ನಮ್ಮನ್ನು ಕಾಡಿನಿಂದ ಬೇರೆ ಮಾಡಬೇಡಿ. ನಮ್ಮ ಕೊನೆಯಾಸೆಯಂತೆ ನಮ್ಮ ಹೆಣವನ್ನು ನಮ್ಮ ಹಿರಿಯರು ಇರುವ ಜಾಗದಲ್ಲಿ ಹಾಕಲು ಅವಕಾಶ ಮಾಡಿಕೊಡಿ. ನಮ್ಮನ್ನು ನಮ್ಮ ವಂಶದವರೊಂದಿಗೆ ಸೇರಲು ಅನುವು ಮಾಡಿಕೊಡಿ’’ ಎಂದು ಇರುಳಿಗರು ಸರಕಾರದ ಮುಂದೆ ಅಂಗಲಾಚುತ್ತಿದ್ದಾರೆ. ಆದರೆ ಈ ಗೋಳಿನ ಕೂಗು ಅರಣ್ಯಕ್ಕೆ ಸೀಮಿತವಾಗಿ ಅರಣ್ಯರೋದನವಾಗಿಯೇ ಉಳಿದಿದೆ.
ಇವರೇ ಹೇಳುವಂತೆ ‘‘ಒಂದು ನೆಲೆ ಇಲ್ಲದ ನಮ್ಮ ಜೀವನ, ಊರಿಂದ ಊರು ತಿರುಗುವುದೇ ಆಗಿದೆ. ನಮ್ಮ ಸಂಬಂಧಿಕರು ಕೂಡ ಇಲ್ಲಿಯೇ ಪಕ್ಕದ ಹರೆಕಲ್ಲಿನ ಮೇಲೆ ಜೀವನ ಮಾಡುತ್ತಿದ್ದಾರೆ. ನಮ್ಮಂತೆೆ ಇನ್ನೂ ಸುಮಾರು ಕುಟುಂಬ ಇಡೀ ನಮ್ಮ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ವಾಸ ಮಾಡುತ್ತಿವೆ. ನಮಗ್ಯಾರು ಇದ್ದಾರೆ ಸ್ವಾಮಿ? ಒಂದು ನೆಲೆ ಇಲ್ಲ, ಒಂದು ಗುರುತು ಇಲ್ಲ. ಮಾಗಡಿ ತಾಲೂಕು ಮತ್ತದರ ಹತ್ತಿರ ಸ್ವಲ್ಪ ದಿನ ಇದ್ದೆವು. ಮಾಲಕರು ಅವರ ಕೆಲಸ ಮಾಡಿಸ್ಕೊಂಡ್ರು. ಮುಗಿದ ಮೇಲೆ ನಮ್ಮನ್ನು ಓಡಿಸಿದರು. ಈಗ ಇಲ್ಲಿಗೆ ಬಂದಿದ್ದೇವೆ. ಇವರೂ ಓಡಿಸಿದ್ರೆ ಮುಂದೂರು ನೋಡ್ಕೋತೀವಿ. ಇತ್ತೀಚೆಗಂತೂ ನಮ್ಮನ್ನು ಯಾರೂ ಮನೆ, ಮಠ-ದೇವಸ್ಥಾನಗಳ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಅದಕ್ಕೆ ಈ ಹುಲಿ ಕರಡಿಗಳು ವಾಸಮಾಡುವ ಜಾಗದಲ್ಲಿ ಇದ್ದೇವೆ. ಬೆಳಗ್ಗೆ ಹೇಗೋ ಆಗುತ್ತೆ. ಆದರೆ ಜೀವ ಕೈಲಿ ಹಿಡಿದು ಬದುಕುತ್ತೇವೆ. ರಾತ್ರಿ ಸಮಯದಲ್ಲಿ ಕರಡಿ, ಮಟ್ಕಾ(ಹುಲಿ) ನಮ್ಮ ಹತ್ತಿರಕ್ಕೆ ಬರುತ್ತವೆ, ನಾವು ಶಬ್ದಾಗಿಬ್ದಾ ಮಾಡ್ತಿವಿ, ಇಲ್ಲಾ ಬೆಂಕಿ ಹಚ್ಚಿ ಓಡಿಸ್ತೀವಿ. ಹೀಗೆ ಮಾಡ್ಕೊಂಡು ದಿನ ಕಳೀತಾ ಇದ್ದೀವಿ’’ ಎಂದು ಮುನಿಯಮ್ಮ ಮಡಿಲಲ್ಲಿ ಐದು ತಿಂಗಳ ಹಸುಗೂಸನ್ನು ಹಿಡಿದುಕೊಂಡು ತನ್ನ ನೋವನ್ನು ತೋಡಿಕೊಳ್ಳುತ್ತಾಳೆ. ಇನ್ನು ಮಾಗಡಿ ತಾಲೂಕಿನ ಹೂಜಿಗಲ್ಲು ಬೆಟ್ಟದ ಮೇಲೆ ಸುಮಾರು ಹತ್ತರಿಂದ ಹದಿನೈದು ಕುಟುಂಬಗಳು ಇವತ್ತಿಗೂ ಕುಡಿಯೋ ನೀರು, ವಿದ್ಯುತ್ ದೀಪ ಇತರ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಹಳ್ಳದ ನೀರು ಕುಡಿದುಕೊಂಡು ಆದಿಮಾನವರಂತೆ ಬದುಕುತ್ತಿದ್ದಾರೆ.
ಇದು ಕಣ್ಣಿಗೆ ಬಿದ್ದ ಇರುಳಿಗರ ಕಥೆಗಳಾದರೆ ಇನ್ನೂ ಎಷ್ಟೋ ಇರುಳಿಗರು ಕಬ್ಬಾಳು ಬೆಟ್ಟ, ಸಾವನದುರ್ಗ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ರಾಮದೇವರ ಬೆಟ್ಟ ಹಾಗೂ ಮದುಗಿರಿಯ ಬೆಟ್ಟಗಳಲ್ಲಿ ಅದಿಮಾನವರಂತೆ ಬದುಕುತ್ತಿದ್ದಾರೆ. ವಿಶೇಷ ಎಂದರೆ ರಾಮನಗರ ಜಿಲ್ಲೆಯಲ್ಲೇ ಎಸ್. ಟಿ. ಜನಾಂಗದಲ್ಲಿ ಬಹುಸಂಖ್ಯಾತರು ಇರುಳಿಗರೇ ಆಗಿದ್ದರೂ ಇವರಿಗೆ ಯಾವುದೇ ರಾಜಕೀಯ ಮತ್ತು ಸರಕಾರದ ಯೋಜನೆಗಳು ಸಿಗುತ್ತಿಲ್ಲ. ಕಾರಣ ಆಳುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಇವತ್ತಿನ ಡಿಜಿಟಲ್ ಪ್ರಜಾಪ್ರಭುತ್ವದ ಭಾರತದಲ್ಲಿ ಒಂದು ನೆಲೆ ಇಲ್ಲದೆ ಊರೂರು ಸುತ್ತಿ ಬಂಡೆಕಲ್ಲಿನ ಮೇಲೆ ಆದಿಮಾನವರ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಇರುಳಿಗರಿಗೆ ಈ ದೇಶದ ನಾಗರಿಕರು ಎಂದು ಹೇಳಿಕೊಳ್ಳಲು ಬೇಕಾದ ಯಾವುದೇ ಸರಕಾರಿ ದಾಖಲೆಗಳು ಇಲ್ಲ.
ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ, ‘‘ಗುಡಿಸಲು ಮುಕ್ತ ಭಾರತ’’, ‘‘ಗುಡಿಸಲು ಮುಕ್ತ ಕರ್ನಾಟಕ’’ ಎಂದು ಬೊಬ್ಬೆ ಹೊಡೆಯುತ್ತಾ, ನಾವು ಭಾರತವನ್ನು ಗುಡಿಸಲು ಮುಕ್ತ ದೇಶವಾಗಿಸಿದ್ದೇವೆ ಎಂದು ಸ್ವ ಘೋಷಿಸಿಕೊಂಡ ಆಳುವ ಸರಕಾರಗಳು ಇಂದಿಗೂ ಹೊತ್ತಿನ ಊಟಕ್ಕೆ ಹಾಗೂ ಒಂದಡಿ ಸೂರಿಗಾಗಿ ಪರಿತಪಿಸುತ್ತಿರುವ ಇರುಳಿಗ ಸಮುದಾಯದಂತಹ ಶೋಷಿತ ಮತ್ತು ಅಲ್ಪಸಂಖ್ಯಾತರನ್ನು ತಮ್ಮಂತೆ ಮನುಷ್ಯರು ಅಂದುಕೊಳ್ಳದೆ ಇರುವುದೇ ವಿಪರ್ಯಾಸ. ಈ ನಡುವೆ ಜಿಲ್ಲೆಗಳಲ್ಲಿ ಇರುಳಿಗರು ಇದ್ದಾರೆಯೇ? ಇವರ ಪರಿಸ್ಥಿತಿ ಹೀಗಿದೆಯಾ? ಎಂದು ಕೇಳಿ ಆಶ್ಚರ್ಯ ಪಡುವ ಅಧಿಕಾರಿಗಳು ನಮ್ಮಲ್ಲಿದ್ದಾರೆ. ‘‘ಒಂದು ತಲೆಮಾರಿನಿಂದ ನಾವು ಹೀಗೆ ಕಾಲ ಕಳೆಯುತ್ತಿದ್ದೇವೆ. ನಮ್ಮ ಮಕ್ಕಳನ್ನು ಎಲ್ಲರಂತೆ ಶಾಲೆಗೆ ಕಳುಹಿಸುವ ತವಕ ಇದೆ. ಏನು ಮಾಡೋದು? ನಮ್ಮ ಬದುಕು ಹೀಗೆ ಇದೆ. ಬೆಳಿಗ್ಗೆ ಹೇಗೋ ಕೂಲಿ ಮಾಡುವ ಜಾಗದಲ್ಲಿ ಜೀವನ ನಡೆಯುತ್ತದೆ. ಆದರೆ ರಾತ್ರಿ ಸಮಯದಲ್ಲಿ ಜೀವ ಕೈಯಲ್ಲಿ ಇಟ್ಟುಕೊಂಡು ಬದುಕುತ್ತಿದ್ದೇವೆ. ನಮ್ಮ ಚಿಕ್ಕ ಮಕ್ಕಳ ಬಗ್ಗೆ ನಮಗೆ ಹೆಚ್ಚು ಭಯ ಇದೆ, ಅವಕ್ಕೆ ಸರಿಯಾಗಿ ಹೊಟ್ಟೆಗೆ ಕೊಡಲು ಆಗುತ್ತಿಲ್ಲ. ನಮ್ಮ ದುಡಿಮೆ ನಮಗೆ ಸಾಕಾಗುತ್ತಿಲ್ಲ, ಏನು ಮಾಡುವುದೋ ಗೊತ್ತಿಲ್ಲ. ಇದರ ಮಧ್ಯೆ ಪೊಲೀಸ್ ಇಲಾಖೆ ನಮ್ಮನ್ನು ಇಂದಿಗೂ ಬ್ರಿಟಿಷ್ ಧೋರಣೆಯಿಂದ ನೋಡುತ್ತಾ ಎಲ್ಲೇ ಅಪರಾಧ ನಡೆದರೂ ನಮ್ಮನ್ನೇ ಹೊಣೆ ಮಾಡುತ್ತಿದ್ದಾರೆ, ಉಳ್ಳವರು ನಮ್ಮ ಮೇಲೆ ಷಡ್ಯಂತ್ರ ಮಾಡಿ ಕೇಸ್ ಹಾಕಿಸಿ ಎಂ.ಒ.ಬಿ.ಲಿಸ್ಟ್‌ನಲ್ಲಿ ಇರಿಸುವಂತೆ ಮಾಡಿದ್ದು ಈಗ ಪೊಲೀಸರು ನಮ್ಮನ್ನು ಸದಾ ಅನುಮಾನದ ರೀತಿಯಲ್ಲೇ ನೋಡುತ್ತಿದ್ದಾರೆ. ನಾವು ಕೈಮುಗಿದು ಕೇಳಿಕೊಳ್ಳುತ್ತೇವೆ, ನಮಗೆ ಒಂದು ಸೂರು ಕೊಡಿ ಜೊತೆಗೆ ಎಲ್ಲರಂತೆ ನಾವು ಬದುಕಲು ಅವಕಾಶ ಮಾಡಿಕೊಡಿ’’ ಎಂದು ಹಂಬಲಿಸುತ್ತಿದ್ದಾರೆ.
ಆದ್ದರಿಂದ, ಸರಕಾರ ಮತ್ತು ಸಂಬಂಧಿತ ಸಚಿವರು ಇರುಳರ ಸ್ಥಿತಿಯನ್ನು ಕೂಡಲೇ ಗಮನಿಸಿ ಅವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಾಗಿದೆ. ಅಲ್ಲದೆ ಒಂದು ಆಯೋಗ ರಚನೆ ಮಾಡಿ ವರದಿ ಪಡೆದು ಈ ಕುಟುಂಬಗಳಿಗೆ ನ್ಯಾಯ ಒದಗಿಸುವುದರೊಂದಿಗೆ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಕೊಡಿಸಬೇಕಾಗಿದೆೆ.
(ಲೇಖಕರು ಇರುಳಿಗ ಸಮಾಜದ ಡಾಕ್ಟರೇಟ್ ಪದವಿ ಪಡೆದ ಪ್ರಥಮ ವ್ಯಕ್ತಿ)