ವಲಸಿಗರಿಗೆ ಅತ್ಯುತ್ತಮ ನಗರ ಸ್ಪೇನ್ ನ ವೆಲೆನ್ಸಿಯಾ, ದುಬೈ: ವರದಿ
ಹೊಸದಿಲ್ಲಿ: ಮೂರು ಖಂಡಗಳಲ್ಲಿರುವ ಮೂರು ಪ್ರತ್ಯೇಕ ನಗರಗಳು ವಲಸಿಗರಿಗೆ ಜೀವಿಸಲು ಮತ್ತು ಕೆಲಸ ಮಾಡಲು ಅತ್ಯುತ್ತಮ ನಗರಗಳಾಗಿವೆ ಎಂದು ಇಂಟರ್‌ನೇಷನ್ಸ್ ಎಕ್ಸ್‌ಪ್ಯಾಟ್ ಸಿಟಿ ರ್ಯಾಂಕಿಂಗ್ ಲಿಸ್ಟ್ 2022 ಎಂಬ ಸಮೀಕ್ಷೆ ಕಂಡುಕೊಂಡಿದೆ.
ಈ ಸಮೀಕ್ಷೆಯ ಪ್ರಕಾರ ಸ್ಪೇನ್ ದೇಶದ ವೆಲೆನ್ಸಿಯಾ (Valencia) ನಗರವು ಜೀವನದ ಗುಣಮಟ್ಟ, ಸಾರ್ವಜನಿಕ ಸಾರಿಗೆ ಮತ್ತು ಕ್ರೀಡಾ ಅವಕಾಶಗಳನ್ನು ಪರಿಗಣಿಸಿದಾಗ ಅತ್ಯುತ್ತಮ ನಗರವಾಗಿದ್ದರೆ, ಹೊಸ ವಲಸಿಗರಿಗೆ ದೊರೆಯುವ ಉತ್ತಮ ಸ್ವಾಗತದ ಕಾರಣ ದುಬೈ (Dubai) ಕೂಡ ಅತ್ಯುತ್ತಮ ನಗರವೆಂದು ಪರಿಗಣಿತವಾಗಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮೆಕ್ಸಿಕೋ (Mexico) ನಗರವಿದ್ದು ಇಲ್ಲಿ ಎಲ್ಲಾ ಸೌಲಭ್ಯಗಳೂ ಜನರ ಕೈಗೆಟಕುವ ಮಿತ ದರಗಳಲ್ಲಿರುವುದು ಇದಕ್ಕೆ ಕಾರಣವಾಗಿದೆ.
ಈ ಸುಮಾರು 50 ನಗರಗಳ ಪಟ್ಟಿಯಲ್ಲಿ ಜೊಹಾನೆಸ್‌ಬರ್ಗ್ ಕೊನೆಯ ಸ್ಥಾನದಲ್ಲಿದೆ. ಹಾಗೂ ಈ ನಗರವು ದುಬಾರಿಯಾಗಿದೆಯಲ್ಲದೆ ಅಸುರಕ್ಷಿತವಾಗಿದೆ ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಂದ ಬಂದಿದೆ.
ಜೊಹಾನೆಸ್‌ಬರ್ಗ್‌ಗಿಂತ ಮೇಲಿನ ಸ್ಥಾನದಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್ ಮತ್ತು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಕೂಡ ಇದ್ದು ಇವುಗಳು ಈ ಪಟ್ಟಿಯಲ್ಲಿ ಕೆಳಗಿನ ಹಂತದ ಸ್ಥಾನಗಳನ್ನು ಪಡೆಯಲು ಕಾರಣ ಅಲ್ಲಿ ವಸತಿ ಸೌಲಭ್ಯ ಎಲ್ಲರ ಕೈಗೆಟಕುವಂತಿಲ್ಲದೇ ಇರುವುದಾಗಿದೆ.
ಈ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದ ಮಿಯಾಮಿ ನಗರವು ಉತ್ತರ ಅಮೆರಿಕಾ ನಗರಗಳ ಪೈಕಿ ಅತ್ಯುನ್ನತ ಸ್ಥಾನದಲ್ಲಿದ್ದರೆ ನ್ಯೂಯಾರ್ಕ್ ನಗರ 16ನೇ ಸ್ಥಾನದಲ್ಲಿದೆ. ಟೊರೊಂಟೋ ನಗರ 19ನೇ ಸ್ಥಾನ ಪಡೆದಿದೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್ ರಾಜಧಾನಿ ಲಂಡನ್ 40ನೇ ಸ್ಥಾನದಲ್ಲಿದೆ. ಏಷ್ಯಾ ಖಂಡದ ನಗರಗಳನ್ನು ಪರಿಗಣಿಸಿದಾಗ, ಬ್ಯಾಂಕಾಕ್ ಆರನೇ ಸ್ಥಾನದಲ್ಲಿದೆ. ನಗರದಲ್ಲಿ ಜೀವನ ನಡೆಸುವುದು ಅಷ್ಟೊಂದು ದುಬಾರಿಯಲ್ಲದ ಕಾರಣ ಪಟ್ಟಿಯಲ್ಲಿ ಬ್ಯಾಂಕಾಕ್ ಉತ್ತಮ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ 8ನೇ ಸ್ಥಾನದಲ್ಲಿ ಮತ್ತು ಸಿಂಗಾಪುರ 10ನೇ ಸ್ಥಾನದಲ್ಲಿದೆ.
ಈ ಪಟ್ಟಿ ಸಿದ್ಧಪಡಿಸಲು ಇಂಟರ್‌ನೇಷನ್ಸ್ 181 ದೇಶಗಳ 11,970 ವಲಸಿಗರ ಅಭಿಪ್ರಾಯ ಸಂಗ್ರಹಿಸಿತ್ತು.