ಹಿಂದುಳಿದ ವರ್ಗವೂ ಮಂಡಲ್ ಮೊಕದ್ದಮೆಯೂ
ಕೆ.ಎನ್. ಲಿಂಗಪ್ಪ
ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಭಾರತೀಯ ನಾಗರಿಕರಲ್ಲಿನ ಹಿಂದುಳಿದ ವರ್ಗಗಳ ಪಾಲಿಗೆ ನವೆಂಬರ್16,1992 ಅನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಯಾಕೆಂದರೆ ಅಂದು ಸರ್ವೋಚ್ಚ ನ್ಯಾಯಾಲಯ ಮಂಡಲ್ ವರದಿ ಅನುಸರಿಸಿ ಹಿಂದುಳಿದ ವರ್ಗದವರಿಗೆ ಪ್ರಭುತ್ವದ ಅಧೀನದಲ್ಲಿರುವ ಸೇವೆಗಳ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಭಾರತ ಸರಕಾರ ಹೊರಡಿಸಿದ ಆದೇಶವನ್ನು 9 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠ ಎತ್ತಿ ಹಿಡಿದ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ವಿಷಯದಲ್ಲಿ ಇದೇ ಅಂತಿಮ (?) ಎನ್ನಬಹುದಾದ ತೀರ್ಪು ಬಂದ ಮಹತ್ವದ ದಿನ. ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಈ ತೀರ್ಪು ಮೈಲಿಗಲ್ಲಾಗುಳಿದು ಹಿಂದುಳಿದ ವರ್ಗಗಳ ಕುರಿತು ಹೊಸ ಭಾಷ್ಯವನ್ನೇ ಬರೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸ್ವತಂತ್ರ ಭಾರತದ ಪ್ರಾರಂಭಿಕ ವರ್ಷಗಳಲ್ಲಿ ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ಆಯೋಗ ಕೊಟ್ಟ ವರದಿ ಅನುಚ್ಛೇದ 15(4)ಕ್ಕೆ ಅನುಗುಣವಾಗಿಲ್ಲ ಎಂದು ಸರಕಾರ ಅದನ್ನು ತಿರಸ್ಕರಿಸಿತು. ಆನಂತರದಲ್ಲಿ ಅಂದರೆ ಸಂವಿಧಾನ ಜಾರಿಗೆ ಬಂದ 28 ವರ್ಷಗಳ ನಂತರ 1978ರಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಅದು ಕ್ಲಪ್ತ ಕಾಲದಲ್ಲಿ ವರದಿಯನ್ನೇನೋ ಸಲ್ಲಿಸಿತು. ಆದರೆ ವರದಿ ಜಾರಿಗೆ ಬರಲು ಹತ್ತು ವರ್ಷಗಳೇ ಸಂದು ಹೋದವು. ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರು ಆಗಸ್ಟ್ 13, 1990 ರಲ್ಲಿ ಮಂಡಲ್ ಶಿಫಾರಸಿನಂತೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರದ ಹುದ್ದೆಗಳಿಗೆ ಅನ್ವಯಿಸುವಂತೆ ಶೇ.27ರಷ್ಟು ಮೀಸಲಾತಿಯನ್ನು ಅನುಷ್ಠಾನದಲ್ಲಿ ತಂದರು.
ದುರಂತವೆಂದರೆ ಮೀಸಲಾತಿ ಅನುಷ್ಠಾನವು, ಯುವಕರಿಂದ ವ್ಯಾಪಕ ಪ್ರತಿಭಟನೆ, ಆತ್ಮಾಹುತಿ ಮತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿಗೆ ಕಾರಣವಾಯಿತು. ಇದೇ ಸಮಯದಲ್ಲಿ ರಿಟ್ ಅರ್ಜಿಗಳು ಕೂಡಾ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಪ್ರಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ, ನ್ಯಾ.ಕೆ.ಎನ್. ಸಿಂಗ್ ಮತ್ತು ನ್ಯಾ.ಎಂ.ಎಚ್. ಕಾನೀಯ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ‘ಮೀಸಲಾತಿ ಸಂಬಂಧ ಅಂತಿಮವಾಗಿ ಅದರ ಕಾನೂನಿನ ಸ್ಥಾನವನ್ನು ನಿರ್ಣಯಿಸಲು’ ಅದನ್ನು 9 ಮಂದಿ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಯಿತು. ಕಾರಣ, ಇದೇ ವಿಷಯದ ಮೇಲೆ ಈ ಮುನ್ನ ಇದೇ ನ್ಯಾಯಾಲಯದಿಂದ ಏಕ ತೆರನಾದ ತೀರ್ಪು ಬಂದಿರಲಿಲ್ಲ. ಇದೇ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಸಲ್ಲಿಸಿದ ಮನವಿ ಮೇರೆಗೆ ಐದು ಮಂದಿ ನ್ಯಾಯಾಧೀಶರ ಪೀಠವು ಅಕ್ಟೋಬರ್ 1, 1990ರಂದು ಕೇಂದ್ರ ಸರಕಾರ ಹೊರಡಿಸಿದ್ದ ಆಗಸ್ಟ್ 13, 1990ರ ಅಧಿಕೃತ ಜ್ಞಾಪನಕ್ಕೆ ಅಂತಿಮ ತೀರ್ಪು ಹೊರ ಬರುವವರೆಗೆ ಜಾರಿಯಲ್ಲಿ ಇರುತ್ತದೆ ಎಂದು ತಡೆಯಾಜ್ಞೆ ವಿಧಿಸಿತು.
1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಸರಕಾರ ಬದಲಾಯಿತು. ಬದಲಿ ಸರಕಾರದ ನಿಲುವನ್ನು ವಿಷಯದ ಮೇಲೆ ಸ್ಪಷ್ಟಪಡಿಸಲು ನ್ಯಾಯಾಲಯ ಕೇಳಿತು. ಆದರೆ ಸರಕಾರವು ತನ್ನ ನಿಲುವನ್ನು ಬದಲಾಯಿಸದೆ ಮತ್ತು ಮೊದಲಿನ ಅಧಿಕೃತ ಜ್ಞಾಪನವನ್ನು ಸ್ವಲ್ಪಬದಲಾವಣೆಗೆ ಒಳಪಡಿಸಿ ಸೆಪ್ಟಂಬರ್ 25,1991ರಂದು ಮತ್ತೊಂದು ಜ್ಞಾಪನ ಹೊರಡಿಸಿತು. ಅದು ‘ಕೆನೆ ಪದರ’ದವರನ್ನು ಮೀಸಲಾತಿಯಿಂದ ಹೊರಗಿಡುವ ಅಧಿಕೃತ ಜ್ಞಾಪನವಾಗಿತ್ತು. ಅಷ್ಟೇ ಅಲ್ಲದೆ, ಆರ್ಥಿಕ ದುರ್ಬಲ ವರ್ಗದವರಿಗೂ ಶೇ.10ರಷ್ಟು ಮೀಸಲಾತಿ ನೀಡಿ ಯಾವುದೇ ವಿಧದ ಮೀಸಲಾತಿಗೆ ಒಳಪಡದವರಿಗಾಗಿ, ಮತ್ತೊಂದು ಅಧಿಕೃತ ಜ್ಞಾಪನವನ್ನೂ ಹೊರಡಿಸಿತು.
ಈ ಜ್ಞಾಪನದ ಸಂವಿಧಾನ ಬದ್ಧತೆಯನ್ನು ಕೂಡಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 9 ಮಂದಿ ನ್ಯಾಯಾಧೀಶರ ಪೀಠದಲ್ಲಿ ವಿಚಾರಣೆ ಪ್ರಾರಂಭವಾಯಿತಾದರೂ ಪೀಠ ತಡೆಯಾಜ್ಞೆ ತೆರವು ಗೊಳಿಸಲು ನಿರಾಕರಿಸಿತು. ನ್ಯಾ.ಜೀವನ ರೆಡ್ಡಿಯವರ ಪ್ರಮುಖ ತೀರ್ಪೊಂದನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳನ್ನು ಮರು ರೂಪಿಸಲಾಯಿತು. ಹೀಗೆ ಒಟ್ಟು 14 ಪ್ರಶ್ನಾವಳಿಗಳು ವಿಚಾರಣೆಗಾಗಿ ಪೀಠದ ಮುಂದೆ ಬಂದವು.
9 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆದು ಪ್ರಶ್ನಿತ ಆಗಸ್ಟ್ 13, 1990ರ ಅಧಿಕೃತ ಜ್ಞಾಪನದ ಸಂವಿಧಾನ ಬದ್ಧತೆ, ನ್ಯಾಯ ಸಮ್ಮತತೆ ಮತ್ತು ಜಾರಿಗೊಳಿಸುವಿಕೆ ಕುರಿತು ನ್ಯಾಯಪೀಠ 4:2:3ರ ಅನುಪಾತದಂತೆ ಪೂರ್ವಭಾವಿಯಾಗಿ ಮಾಡಲೇಬೇಕಾದ ಕೆಲವು ಷರತ್ತುಗಳೊಡನೆ ಅದನ್ನು ಎತ್ತಿ ಹಿಡಿಯಿತು. ಆದರೆ ಆರ್ಥಿಕ ದುರ್ಬಲರಿಗಾಗಿ ನೀಡಿದ್ದ ಶೇ.10ರ ಮೀಸಲಾತಿಯ ಸೆಪ್ಟಂಬರ್ 25,1991ರ ಅಧಿಕೃತ ಜ್ಞಾಪನವನ್ನು ಸಂವಿಧಾನ ವಿರೋಧಿ ಎಂದು ಘೋಷಿಸಿತು.
ಬಹುಮತದ ತೀರ್ಪು
ಗೌರವಾನ್ವಿತ ನ್ಯಾಯಾಧೀಶರಾದ ಎಂ.ಎಚ್. ಕನೀಯ, ಎಂ.ಎನ್. ವೆಂಕಟಾಚಲಯ್ಯ, ಎ.ಎಂ ಅಹಮದಿ ಮತ್ತು ಬಿ.ಪಿ. ಜೀವನ್ ರೆಡ್ಡಿ ಇವರು ವಿವಿಧ ಪ್ರಶ್ನೆಗಳಿಗೆ ನೀಡಿರುವ ಬಹುಮತದ ತೀರ್ಪಿನ ಉತ್ತರಗಳ ಸಂಕ್ಷಿಪ್ತ ರೂಪ ಹೀಗಿದೆ: ಅನುಚ್ಛೇದ 16(4)ರಲ್ಲಿನ ಅಂಶವನ್ನು ಅನುಷ್ಠಾನಗೊಳಿಸಲು ಶಾಸನವೇ ಆಗಬೇಕಿಲ್ಲ; ಬದಲಾಗಿ ಕಾರ್ಯಕಾರಿ ಆದೇಶದ ಮೂಲಕವೂ ಕಾರ್ಯರೂಪಕ್ಕೆ ತರಬಹುದಾಗಿದೆ. ಭಾರತೀಯ ನಾಗರಿಕರಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಿಶ್ಶೇಷವಾಗಿ ಅನುಚ್ಛೇದ 16(4)ರಲ್ಲಿನ ಅಂಶವೇ ಅಗತ್ಯತೆಯನ್ನು ಪೂರೈಸುತ್ತದೆ. ಸಾಮಾಜಿಕವಾಗಿ ಜಾತಿ ಹಿಂದುಳಿದಿದ್ದರೆ ಅನುಚ್ಛೇದ 16 (4)ರ ಉದ್ದೇಶಕ್ಕೆ ಹಿಂದುಳಿದ ವರ್ಗವಾಗುತ್ತದೆ. ಕೆನೆಪದರದವರನ್ನು ಮೀಸಲಾತಿಯಿಂದ ಹೊರಗಿಡಬೇಕು.ಯಾವುದಾದರೂ ವರ್ಗಕ್ಕೆ ಸಾಕಷ್ಟು ಪ್ರಾತಿನಿಧ್ಯ ಇದೆ ಅಥವಾ ಇಲ್ಲವೇ ಎಂಬುದನ್ನು ಸರಕಾರ ತನ್ನ ತೃಪ್ತಿಗೆ ಅನುಗುಣವಾಗಿ ಪರಿಶೀಲಿಸಿ ಅಂಥವುಗಳನ್ನು ಮೀಸಲಾತಿಯಿಂದ ಹೊರಗಿಡಬೇಕು. ಕೇವಲ ಆರ್ಥಿಕ ಸ್ಥಿತಿ ಆದರಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಬಾರದು. ಹಿಂದುಳಿದ ವರ್ಗಗಳನ್ನು ಅತಿ ಹೆಚ್ಚು ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ಎಂದು ವರ್ಗೀಕರಿಸಲು ಯಾವುದೇ ಅಡಚಣೆ ಇಲ್ಲ. ಒಟ್ಟಾರೆ ಮೀಸಲಾತಿ ಕೋಟಾ ಶೇ.50ರಷ್ಟನ್ನು ಮೀರಿ ಹೋಗುವ ಹಾಗಿಲ್ಲ. ಅನುಚ್ಛೇದ 16 (4)ರಲ್ಲಿ ಭಡ್ತಿ ನೀಡಲು ಮೀಸಲಾತಿಗೆ ಅವಕಾಶವಿದೆ ಎಂದು ತಿಳಿಯಬಾರದು. ಹಾಗೂ ಮೀಸಲಾತಿ ಪಟ್ಟಿಯಿಂದ ಜಾತಿಗಳನ್ನು ಹೊರಗಿಡಲು ಅಥವಾ ಒಳಸೇರಿಸಲು ಅನುಕೂಲವಾಗುವಂತೆ ಶಾಶ್ವತ ಆಯೋಗಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ರಚಿಸಬೇಕು ಎಂಬವುಗಳೇ ತೀರ್ಪಿನ ಮುಖ್ಯಾಂಶಗಳು.
ನ್ಯಾ.ಪಿ.ಬಿ.ಸಾವಂತ್ ಮತ್ತು ನ್ಯಾ.ರತ್ನವೇಲು ಪಾಂಡಿಯನ್ ಕೆಲವೊಂದು ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರ ನೀಡಿದ್ದಾರಾದರೂ, ಅಧಿಕೃತ ಜ್ಞಾಪನಗಳಲ್ಲಿ ಹಿಂದುಳಿದ ವರ್ಗಗಳಿಗೆ ಸರಕಾರದ ಹುದ್ದೆಗಳಿಗೆ ಮೀಸಲಾತಿ ನೀಡಿರುವುದನ್ನು ತಮ್ಮ ತೀರ್ಪಿನಲ್ಲಿ ವಿರೋಧಿಸದೆ ಮೇಲಿನ ನಾಲ್ಕು ಮಂದಿ ನ್ಯಾಯಮೂರ್ತಿಗಳ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ,
ನ್ಯಾಯಮೂರ್ತಿಗಳಾದ ಆರ್.ಎಂ.ಸಹಾಯಿ, ಕುಲದೀಪ್ ಸಿಂಗ್ ಮತ್ತು ಟಿ.ಕೆ. ತೊಮ್ಮನ್ ಅವರು ಪ್ರತ್ಯೇಕವಾಗಿ ಎಲ್ಲಾ ಪ್ರಶ್ನೆಗಳಿಗೂ ತಮ್ಮದೇ ಆದ ದೃಷ್ಟಿಕೋನದಲ್ಲಿ ಉತ್ತರ ನೀಡಿರುವರು. ಕೇಂದ್ರ ಸರಕಾರದ ಎರಡು ಅಧಿಕೃತ ಜ್ಞಾಪನ(ಆಗಸ್ಟ್ 13, 1990 ಮತ್ತು ಸೆಪ್ಟಂಬರ್ 25, 1991)ಗಳನ್ನು ಭಾರತ ಸರಕಾರ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಒಟ್ಟಾಗಿ ಅಭಿಪ್ರಾಯ ಪಟ್ಟಿದ್ದಾರೆ. ಕಾರಣ, ಸಂವಿಧಾನದ ಅನುಚ್ಛೇದ 16ರ ಉದ್ದೇಶಕ್ಕೆ ಭಾರತೀಯ ನಾಗರಿಕರಲ್ಲಿ ಹಿಂದುಳಿದ ವರ್ಗಗಳನ್ನು ಸಮಂಜಸವಾಗಿ ಗುರುತಿಸಿರುವುದಿಲ್ಲ. ಈ ವಿದ್ಯಮಾನದ ಹಿನ್ನೆಲೆಯಲ್ಲಿ, ಅವರು, ತಮ್ಮ ತೀರ್ಪಿನಲ್ಲಿ ನೀಡಿರುವ ನಿರ್ದೇಶನ ಮತ್ತು ತತ್ವಾಂಶಗಳನ್ನು ಅನುಸರಿಸಿ ನಾಗರಿಕರಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು, ಅನುಚ್ಛೇದ 16 (4)ಕ್ಕೆ ಅನ್ವಯಿಸುವಂತೆ ಮರುಪರೀಕ್ಷಿಸಬೇಕು ಎಂದು ಭಾರತ ಸರಕಾರಕ್ಕೆ ನಿರ್ದೇಶನ ನೀಡಿರುವರು. 9 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ಆರು ಮಂದಿ ನ್ಯಾಯಾಧೀಶರು ಮೀಸಲಾತಿಗಾಗಿ ಹೊರಡಿಸಿರುವ ಅಧಿಕೃತ ಜ್ಞಾಪನಗಳನ್ನು ಎತ್ತಿ ಹಿಡಿದಿರುವರು. ಆದರೆ ಮೂರು ಮಂದಿ ನ್ಯಾಯಾಧೀಶರು ಹಿಂದುಳಿದ ವರ್ಗಗಳನ್ನು ಗುರುತಿಸಿರುವಿಕೆ ಸಮರ್ಪಕವಾಗಿಲ್ಲ ಎಂದು ತೀರ್ಪಿನಲ್ಲಿ ಹೇಳಿರುವರೇ ವಿನಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು ಸಂವಿಧಾನ ವಿರೋಧಿ ಎಂದು ಹೇಳಿರುವುದಿಲ್ಲ ಎಂಬುದು ಮಹತ್ವ ಪಡೆದು ಕೊಳ್ಳುವುದು.
ಮಂಡಲ್ ತೀರ್ಪಿನ ನಂತರ ಸರ್ವೋಚ್ಚ ನ್ಯಾಯಾಲಯದ ಶಿಫಾರಸಿನಂತೆ ಭಾರತ ಸರಕಾರ ಮಂಡಲ್ ಆಯೋಗದ ವರದಿಯನ್ನು ಆಧರಿಸಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ:
ಭಾರತ ಸರಕಾರ ನಾಗರಿಕರಲ್ಲಿನ ಹಿಂದುಳಿದ ವರ್ಗಗಳಲ್ಲಿ ಬರುವ ಕೆನೆಪದರದವರನ್ನು ಮೀಸಲಾತಿಯಿಂದ ಹೊರಗಿಡುವ ದಿಸೆಯಲ್ಲಿ ನ್ಯಾ. ಆರ್.ಎನ್. ಪ್ರಸಾದ್ ತಜ್ಞ ಸಮಿತಿ ನೇಮಿಸಿ ಅದರಿಂದ ಮಾರ್ಚ್ 15,1993ರಂದು ವರದಿ ಪಡೆಯುವುದು.
ತಜ್ಞ ಸಮಿತಿ ವರದಿ ಆಧರಿಸಿ ಭಾರತ ಸರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ನಿಗದಿಪಡಿಸಿ ಸೆಪ್ಟಂಬರ್ 8, 1993ರಂದು ಅಧಿಕೃತ ಜ್ಞಾಪನ ಹೊರಡಿಸುವುದು
ಭಾರತ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ,1993 ಅನ್ನು ಆಗಸ್ಟ್ 14, 1993 ರಂದು ಜಾರಿಗೆ ತಂದು ಶಾಶ್ವತ ಆಯೋಗವನ್ನು ರಚಿಸುವುದು(ಸಂವಿಧಾನದ 102ನೇ ತಿದ್ದುಪಡಿಯ ನಂತರ ಕಾಯ್ದೆ ರದ್ದಾಗಿದೆ). ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಯೋಗ ರಚನೆ ಮಾಡುವುದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳಿಗೂ ಅನ್ವಯಿಸುವುದು. ಅದರಂತೆ ಅವುಗಳೆಲ್ಲವೂ ಆಯೋಗ ರಚಿಸಿವೆ.
ಭಾರತ ಸರಕಾರ 9ನೇ ಯೋಜನೆ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಉನ್ನತಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಅವಶ್ಯಕ ಕ್ರಮ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣದ ಅಭಿವೃದ್ಧಿಗೆ ಅವಕಾಶ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ವೈಯಕ್ತಿಕ ತರಬೇತಿ ನೀಡಲು ಅಗತ್ಯ ಕ್ರಮ, ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕ್ರಮ ಕೈಗೊಂಡು, ಆ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮತ್ತು ಹಿಂದುಳಿದ ವರ್ಗಗಳ ನಾಗರಿಕರಿಗೆ ಆರ್ಥಿಕವಾಗಿ ಚೈತನ್ಯ ತುಂಬಲು ಪೂರಕವಾಗುವಂತೆ ಕೈಗೊಂಡ ಭಾರತ ಸರಕಾರದ ಕ್ರಮ ಹಿಂದುಳಿದ ವರ್ಗಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಪ್ರಗತಿ ಕಾಣಲು ಸಹಾಯಕವಾಯಿತು.
ಮಂಡಲ್ ವರದಿ ಅನುಸರಿಸಿ ಮೀಸಲಾತಿ ಸೌಲಭ್ಯ ಮತ್ತು ಇನ್ನಿತರ ಸವಲತ್ತುಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಒದಗಿಸುವಂತಾಗಲು ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಪ್ರಮುಖರು ಹಾಗೂ ಕಾರಣಕರ್ತರು. ಸಂಸತ್ತಿನಲ್ಲಿ ವರದಿ ಅನುಷ್ಠಾನದ ಬಗ್ಗೆ ಘೋಷಿಸುವಾಗ ಅತ್ಯಂತ ಸಂತಸ ಪಟ್ಟವರು ಅವರು. ಆದರೆ ಅದೇ ಹಿಂದುಳಿದ ವರ್ಗ ವಿ.ಪಿ. ಸಿಂಗ್‌ರನ್ನು ಮರೆತಿದೆ. ಮರೆತಿರುವುದು ವಿಪರ್ಯಾಸವಲ್ಲವೇ?