'PayCM' ಡಿಜಿಟಲ್ ಆ್ಯಪ್ ಶೀಘ್ರ ಅನುಷ್ಠಾನಕ್ಕೆ ತರುವಂತೆ ಸಿಎಂಗೆ ಮೇಲ್ಮನೆ ಮಾಜಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಪತ್ರ
ಎಂ.ಕೆ ಪ್ರಾಣೇಶ್ | ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ‘ಪೇ ಸಿಎಂ’ ಕ್ಯೂಆರ್ ಕೋಡ್ ಪೋಸ್ಟರ್ ಅಂಟಿಸುವ ಅಭಿಯಾನದ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರ ಬೆನ್ನಲ್ಲೇ "PayCM" Pay to Chief Minister Relief Fund ಹೆಸರಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ವ್ಯಾಪ್ತಿಗೆ ತರುವಂತೆ ಮಾಜಿ ಉಪಸಭಾಪತಿ ಎಂ.ಕೆ ಪ್ರಾಣೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಎಂ.ಕೆ.ಪ್ರಾಣೇಶ್ ಅವರ ಪತ್ರದಲ್ಲೇನಿದೆ ?
'21ನೇ ಶತಮಾನವು ಡಿಜಿಟಲ್ ಯುಗವಾಗಿ ಬದಲಾಗಿದ್ದು, ಪ್ರಸ್ತುತ ಡಿಜಿಟಲ್ ತಂತ್ರಜ್ಞಾನವು ತನ್ನ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತಾ ಸಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಕಾರಣ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ಮಾಡುವ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ಮಾಡುವ ಮುಖಾಂತರ "PayCM" Pay to Chief Minister Relief Fund (CMRF) ಎಂಬ ಹೆಸರಿನಲ್ಲಿ ಕಿಯೋನಿಕ್ಸ್ನಂತಹ ಸಂಸ್ಥೆ ವತಿಯಿಂದ ಒಂದು ಡಿಜಿಟಲ್ ಪೇಮೆಂಟ್ ಆ್ಯಪ್ನ್ನು ಸಿದ್ಧಪಡಿಸಬೇಕು. ಈ ಆ್ಯಪ್ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಸಂಕಷ್ಟದಲ್ಲಿರುವ ರಾಜ್ಯದ ಬಡ ಕುಟುಂಬಗಳ ನೆರವಿಗೆ ಧಾವಿಸಲು ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
''ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸರ್ಕಾರ ನೊಂದ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಐಟಿ ಬಿಟಿ ಕಂಪನಿಗಳಿಂದ, ಸಿ.ಎಸ್.ಆರ್. ಫಂಡ್ನಿಂದ ಮತ್ತು ದಾನಿಗಳಿಂದ ದೇಣಿಗೆ ಸಂದಾಯವಾಗುತ್ತಿದ್ದು, ನೆರವು ನೀಡಲು ಆಸಕ್ತ ಸಾರ್ವಜನಿಕರಿಗೆ, ಯುವ ಪೀಳಿಗೆಯವರಿಗೆ ಅನುಕೂಲವಾಗುವಂತೆ ಮತ್ತು ಮುಂದಿನ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ಡಿಜಿಟಲ್ ವ್ಯಾಪ್ತಿಗೆ ತರಲು ಸರ್ಕಾರ ಕ್ರಮಕೈಗೊಂಡಲ್ಲಿ, ಹೆಚ್ಚಿನ ದೇಣಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರಕಾರದ ಕ್ರಮಕ್ಕಾಗಿ ಕಾಯುತ್ತಿರುವ ಕನ್ನಡ ನಾಡಧ್ವಜ
'ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ "PayCM Pay to Chief MinisterRelief Fund (CMRF) ಎಂಬ ಡಿಜಿಟಲ್ ಅನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ' ಎಂದು ಎಂ.ಕೆ ಪ್ರಾಣೇಶ್ ಪತ್ರದಲ್ಲಿ ತಿಳಿಸಿದ್ದಾರೆ.