ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು, ಅ.31: ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದಿಂದ 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲಾತಿಗಳಲ್ಲಿ ಅಪೂರ್ಣ ಮಾಹಿತಿ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ದೂರು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ಸಲ್ಲಿಸಿರುವ ಅವರು, ರಮೇಶ್ ಜಾರಕಿಹೊಳಿ ಈ ಎರಡು ಚುನಾವಣೆಗಳ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರಗಳಲ್ಲಿ ಅಪೂರ್ಣವಾದ ಮಾಹಿತಿ ನೀಡುವುದರ ಜೊತೆಗೆ, ದುರುದ್ದೇಶ ಪೂರ್ವಕವಾಗಿ ಅನೇಕ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಆಸ್ತಿ ಮತ್ತು ಜವಾಬ್ದಾರಿ ತಕ್ತೆಯಲ್ಲಿ ಸುಳ್ಳು ಅಂಕಿ ಅಂಶಗಳನ್ನು ನಮೂದಿಸಿದ್ದಾರೆ. ಇವರ ಕುಟುಂಬದ ಸದಸ್ಯರು ನಿರ್ದೇಶಕರಾಗಿ ಇರುವ ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಾರ್ಖಾನೆ ಸುಮಾರು 578 ಕೋಟಿ ರೂ.ಸಾಲ ಮಾಡಿದ್ದು, ಇದರ ವಿವರಗಳನ್ನು ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಲಕ್ಷ್ಮಣ್ ದೂರಿದ್ದಾರೆ.
ರೈತರಿಗೆ ಸುಮಾರು 50 ಕೋಟಿ ರೂ., ಆದಾಯ ತೆರಿಗೆ ಇಲಾಖೆಗೆ 150 ಕೋಟಿ ರೂ. ಪಾವತಿ ಮಾಡಬೇಕಾಗಿರುವ ವಿವರವನ್ನು ನೀಡಿಲ್ಲ. ಬಾಕಿ ಹಣ ಪಾವತಿ ಮಾಡುವ ಸಂಬಂಧ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದು 2019ರ ನ.28ರಂದು ಸಾಲದ ಹಣದ ಶೇ.50ರಷ್ಟನ್ನು ಆರು ವಾರದಲ್ಲಿ ಪಾವತಿ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ ಇಲ್ಲಿಯವರೆಗೆ ಹಣ ಪಾವತಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ವ್ಯವಹಾರ, ಅಪೆಕ್ಸ್ ಬ್ಯಾಂಕಿನಲ್ಲಿ ಸಾಲ ಪಡೆದಿರುವುದು, ಕುಟುಂಬದ ಸದಸ್ಯರ ಸಾಲದ ವ್ಯವಹಾರಗಳು, ಬೇರೆ ಬೇರೆ ಬ್ಯಾಂಕುಗಳಲ್ಲಿ ಪಡೆದಿರುವ ಸಾಲಗಳ ವಿವರಗಳನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ನೀಡದೆ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಅವರು ಅಪರಾಧ ಎಸಗಿದ್ದಾರೆ ಎಂದು ಲಕ್ಷ್ಮಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ರಮೇಶ್ ಜಾರಕಿಹೊಳಿ ಸಲ್ಲಿಸಿರುವ ಸುಳ್ಳು ಪ್ರಮಾಣ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣವನ್ನು ಸಿಬಿಡಿಟಿ ಗೆ ಮತ್ತು ಈ.ಡಿಗೆ ವರ್ಗಾಯಿಸಬೇಕು ಎಂದು ಲಕ್ಷ್ಮಣ್ ಕೋರಿದ್ದಾರೆ.
ಅವರ ಕುಟುಂಬದ ಸದಸ್ಯರು ಭಾಗಿಯಾಗಿರುವ ಸುಮಾರು 578 ಕೋಟಿ ರೂ.ಗಳ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯ ವ್ಯವಹಾರಗಳನ್ನು ರಮೇಶ್ ಜಾರಕಿಹೊಳಿ ಪ್ರಮಾಣ ಪತ್ರದಲ್ಲಿ ವಿವರವಾಗಿ ನಮೂದಿಸದೆ ಬಚ್ಚಿಟ್ಟು ಅಪರಾಧ ಎಸಗಿದ್ದಾರೆ. ಚುನಾವಣಾ ಆಯೋಗವು ಈ ಪ್ರಕರಣವನ್ನು ಉದ್ದೇಶಪೂರ್ವಕ ಅಪರಾಧವಾಗಿ ಪರಿಗಣಿಸಿ ಆದ್ಯತೆಯ ಮೇಲೆ ತನಿಖೆಗೆ ವಹಿಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಚುನಾವಣಾ ಅಧಿಕಾರಿಗೆ ದೂರು ನೀಡುವ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.