'ಪ್ರತಿ ತಿಂಗಳು ಮೋದಿ ಬೆಂಗಳೂರಿಗೆ ಬರಲಿ' ಎಂದು ಆಗ್ರಹಿಸಿ ಚಳವಳಿ ನಡೆಸಿದ ಆಪ್ ಮುಖಂಡರ ಬಂಧನ
ಬೆಂಗಳೂರು, ನ.10: ಪ್ರಧಾನಿ ನರೇಂದ್ರ ಮೋದಿ ಆಗಮಿಸಲು ಒಂದೆರಡು ದಿನಗಳಿರುವಾಗ ಮಾತ್ರ ರಸ್ತೆ ದುರಸ್ತಿ ಮಾಡಬೇಕೆಂದು ರಾಜ್ಯ ಸರಕಾರ ಹಾಗೂ ಬಿಬಿಎಂಪಿ ನಿರ್ಧರಿಸಿದೆ. ಆದುದರಿಂದ, ಬೆಂಗಳೂರಿನ ರಸ್ತೆಗಳು ಸದಾ ಕಾಲ ಚೆನ್ನಾಗಿರಬೇಕೆಂದರೆ ಮೋದಿ ತಿಂಗಳಿಗೊಮ್ಮೆ ಬರುತ್ತಿರಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವಿನೂತನ ಚಳವಳಿ ನಡೆಸಿತು.
ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ರಸ್ತೆಯಲ್ಲಿ ಹಾಗೂ ಮಧ್ಯಾಹ್ನ ಮಲ್ಲೇಶ್ವರಂನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸರಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ರೈಲು ನಿಲ್ದಾಣದ ಸಮೀಪ ಪ್ರತಿಭಟಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಾಲುಸಾಲು ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡರೂ ಸರಕಾರ ತಲೆಕೆಡಿಸಿಕೊಂಡಿರಲಿಲ್ಲ. ಈಗ ಮೋದಿ ಬರುತ್ತಾರೆಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸಂಚರಿಸುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಿ, ಉಳಿದ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೋದಿಯನ್ನು ಮೆಚ್ಚಿಸಿ, ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗುವುದೇಬಸವರಾಜ ಬೊಮ್ಮಾಯಿಯವರ ಏಕೈಕ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಅವರು ದೂರಿದರು.
ಮೋದಿ ಬರುತ್ತಾರೆಂದು ಮುಚ್ಚಿದ ಗುಂಡಿಗಳು ಅವರು ದಿಲ್ಲಿಗೆ ವಾಪಸಾದ ಕೆಲವೇ ದಿನಗಳಲ್ಲಿ ಮತ್ತೆ ಬಾಯಿ ತೆರೆಯಲಿವೆ. ಗುಣಮಟ್ಟ ಕಾಯ್ದುಕೊಳ್ಳದೇ ಅವರಸರದಲ್ಲಿ ಮಾಡಿದ ಕಾಮಗಾರಿಗಳು ಒಂದು ತಿಂಗಳು ಬಾಳಿಕೆ ಬರುವುದೂ ಅನುಮಾನ. ಮೋದಿ ಈ ಹಿಂದೆ ರಾಜ್ಯಕ್ಕೆ ಬಂದಾಗಲೂ ನಾವಿದನ್ನು ಗಮನಿಸಿದ್ದೇವೆ. ಆದುದರಿಂದ, ಮೋದಿ ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಎಲ್ಲ ರಸ್ತೆಗಳಲ್ಲಿ ಸಂಚರಿಸಬೇಕು. ಇಲ್ಲದಿದ್ದರೆ ಇಲ್ಲಿನ ಸಿಎಂ, ಸಚಿವರು ಹಾಗೂ ಶಾಸಕರು ನಿದ್ರಾವಸ್ಥೆಯಲ್ಲಿ ಇರುತ್ತಾರೆ ಎಂದು ಮೋಹನ್ ದಾಸರಿ ಹೇಳಿದರು.
ಪಕ್ಷದ ನಾಯಕರಾದ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಅಂಜನಾ ಗೌಡ, ಅಶೋಕ್ ಮೃತ್ಯುಂಜಯ, ಗೋಪಿನಾಥ್ ಮತ್ತಿತರ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.