ಬೆಂಗಳೂರು | ಪೊಲೀಸರ ವಶದಲ್ಲಿದ್ದ ದಲಿತ ಯುವಕ ಸಾವು:ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ
ಬೆಂಗಳೂರು, ಜ.5: ದಲಿತ ಯುವಕನೋರ್ವ ಪೊಲೀಸರ ವಶದಲ್ಲಿರುವಾಗಲೇ ಸಾವನ್ನಪ್ಪಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಆರೋಪಿ ವಿನೋದ್‍ನನ್ನು ನಿನ್ನೆ ಬಂಧಿಸಿದ ನಗರದ ಕಾಟನ್‍ಪೇಟೆ ಠಾಣಾ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಬೆಳಗ್ಗೆ ವಿನೋದ್ ಜ್ಞಾನತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಆರೋಪಿ ವಿರುದ್ಧ 2017 ರಲ್ಲಿ ಕಾಟನ್ ಪೇಟೆ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಅದರಂತೆ ಬುಧವಾರ ಸಂಜೆ ಆತನನ್ನು ಪೊಲೀಸರುಬಂಧಿಸಿ ಠಾಣೆಗೆ ಕರೆದುಕೊಂಡುಬಂದಿದ್ದಾರೆ.
ರಾತ್ರಿವೇಳೆ ಠಾಣೆಯಲ್ಲಿ ಮಲಗಿದ್ದಾನೆ. ಗುರುವಾರ ನಸುಕಿನ ಜಾವ 3:45 ವೇಳೆಗೆ ನಮ್ಮ ಸಿಬ್ಬಂದಿ ಹೋಗಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತನಿಗೆ ಪ್ರಜ್ಞೆ ಇರಲಿಲ್ಲ. ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಮಾರ್ಗಮಧ್ಯದಲ್ಲೇ ಆರೋಪಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದರು.
ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಸ್ಟೋಡಿಯಲ್ ಪ್ರಕರಣದ ಎಲ್ಲ ಮಾರ್ಗಸೂಚಿಗಳನ್ನು ನಾವು ಪಾಲಿಸಿದ್ದೇವೆ. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದರು.