ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ: ಸಿ.ಪಿ.ಯೋಗೇಶ್ವರ್ ಮಾತನಾಡಿದ್ದೆನ್ನಲಾದ ಆಡಿಯೋ ವೈರಲ್
"ಜನಾಭಿಪ್ರಾಯದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಆದರೂ ನಾವೇ ಸರಕಾರ ರಚನೆ ಮಾಡುತ್ತೇವೆ"
ರಾಮನಗರ, ಜ.14: "ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರಕಾರ ರಚನೆ ಮಾಡುತ್ತೇವೆ. ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ, ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ...." ಇದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (C.P.Yogeshwar) ಮಾತನಾಡಿದ್ದೆನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮಿತ್ ಶಾ ಅವರನ್ನು ರೌಡಿಗೆ ಹೋಲಿಕೆ, ಸ್ವಪಕ್ಷದ ವಿರುದ್ಧ ಟೀಕೆ, ಜೆಡಿಎಸ್ ರಾಜಕೀಯ ಭವಿಷ್ಯದ ಬಗ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಕರ್ನಾಟಕದಿಂದ ದಿಲ್ಲಿ ರಾಜಕಾರಣದ ವರೆಗಿನ ಹಲವು ವಿಚಾರಗಳು ವೈರಲ್ ಆಡಿಯೋದಲ್ಲಿ ಕೇಳಿ ಬರುತ್ತಿದೆ.
ಸಿ.ಪಿ.ಯೋಗೇಶ್ವರ್ ಅವರೆದ್ದನ್ನಲಾದ ಈ ಮಾತುಕತೆಯ ಆಡಿಯೋ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ವೈರಲ್ ಆಡಿಯೋದಲ್ಲಿ ಏನಿದೆ?
2023ರ ಚುನಾವಣೆಯಲ್ಲಿ ಜೆಡಿಎಸ್‌ನ 20 ಅಭ್ಯರ್ಥಿಗಳು ಸೋಲುತ್ತಾರೆ. ಇದರಲ್ಲಿ ಗುಬ್ಬಿ ಶ್ರೀನಿವಾಸ, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಬೆಂಗಳೂರಿನ ಗನ್ ಮಂಜು, ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ, ಮಳವಳ್ಳಿ ಅನ್ನದಾನಿ, ಮದ್ದೂರು ಡಿ.ಸಿ.ತಮ್ಮಣ್ಣ, ಮಂಡ್ಯ ಶ್ರೀನಿವಾಸ್, ಕೆ.ಆರ್.ನಗರದ ಸಾ.ರಾ.ಮಹೇಶ್ ಹೀನಾಯವಾಗಿ ಸೋಲುತ್ತಾರೆ. ರಾಮನಗರದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದರಲ್ಲಿ ಜೆಡಿಎಸ್ ಸೋಲುತ್ತದೆ. ಉತ್ತರ ಕರ್ನಾಟದಲ್ಲಿ 5 ಜೆಡಿಎಸ್ ಶಾಸಕರು ಇದ್ದಾರೆ. ಈ ಪೈಕಿ ಮೂರು ಜನ ವಾಶ್ ಔಟ್ ಆಗ್ತಾರೆ. ಬಂಡೆಪ್ಪ ಕಾಶಪ್ಪನವರ್ ಜತೆಗೆ ಇನ್ನೊಬ್ಬ ಗೆಲ್ಲಬಹುದು ಅಷ್ಟೆ.
ತುಮಕೂರು ಜಿಲ್ಲೆಯ ವೀರಭದ್ರಯ್ಯ ಅವರ ಪತ್ನಿ, ಬೇಲೂರು ಲಿಂಗೇಶ್ ಸೋಲ್ತಾರೆ. ನಮ್ಮ ಜಿಲ್ಲಾ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಗೆಲ್ಲುತ್ತಾನೆ. ಚಿಂತಾಮಣಿಯಲ್ಲಿ ಸಖತ್ ಫೈಟ್ ಇದೆ. ಅದರಲ್ಲಿ ರೆಡ್ಡಿ ಔಟ್ ಆಗ್ತಾನೆ. ಸಕಲೇಶಪುರದಲ್ಲಿ ಕುಮಾರಸ್ವಾಮಿ ಇದ್ದ. ಅಲ್ಲಿ ನಮ್ಮ ಕ್ಯಾಂಡಿಡೇಟ್ 2 ಸಾವಿರದಲ್ಲಿ ಸೋತ. ನಾನೇ ಅವನಿಗೆ ಬಿ ಫಾರಂ ನೀಡಿದ್ದೆ ಈ ಭಾರಿಯು ಅವನು ಔಟ್. ಇದೆಲ್ಲ ರಫ್ ಕಾಫಿ ಅಷ್ಟೆ. ಸಾ.ರಾ. ಮಹೇಶ್ ಸೋಲಿಗೆ ಆತನೇ ಕಾರಣ. ಆತ ಗೆದ್ದಿರುವುದೇ ಕಡಿಮೆ ಅಂತರದಿಂದ. ಅಲ್ಲಿ ಇಬ್ಬರು ಒಕ್ಕಲಿಗರು ಇದ್ದಾರೆ. ಸಾರಾ ವಿರುದ್ಧ ಕಾಂಗ್ರೆಸ್ ಗೆಲ್ಲಬಹುದು.
ಮೈಸೂರು ಭಾಗದಲ್ಲಿ ನಾವು, ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ಮಾಡಿದ್ರು ನನ್ನ ಅಭಿಪ್ರಾಯದ ಪ್ರಕಾರ ಬಿಜೆಪಿ ಸರಕಾರ ಬರೋದಿಲ್ಲ. ಜನಾಭಿಪ್ರಾಯದ ಮೂಲಕವು ಬಿಜೆಪಿ ಬರೋದಿಲ್ಲ ಆದರೆ, ನಾವು ಸರಕಾರ ರಚನೆ ಮಾಡ್ತಿವಿ. ಮಾವಿನ ಹಣ್ಣನ್ನು ಮರದಲ್ಲೇ ಹಣ್ಣು ಮಾಡೋಕೊ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡೋಕು ವ್ಯತ್ಯಾಸ ಇದೆ. ನಾವು ಎರಡಕ್ಕೂ ರೆಡಿ ಇದ್ದೀವಿ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟೋಕೆ ಅವರ ಲೀಡರ್‌ಗಳಿಗೆ ಇಷ್ಟ ಇಲ್ಲ. ಡಾ.ಪರಮೇಶ್ವರ್ ಸಹ ಇವರಲಿ ಒಬ್ಬರು.
ಡಿ.ಕೆ.ಶಿವಕುಮಾರ್ ಸ್ಟ್ರೈಟ್ ಕಾಂಪಿಟೇಟಿವ್. ಅವರು ನಾನೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದಕ್ಕೆ ನಮಗೇನು ಸಮಸ್ಯೆ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರು ನೇರ ಸ್ಪರ್ಧಿಗಳು. ನಾವು ಸಂಕ್ರಾಂತಿ ಆದ ಮೇಲೆ ಬಹಳ ಡೆವಲಪ್ ಮೆಂಟ್ ಮಾಡುತ್ತೇವೆ. ಮೈಸೂರು ಭಾಗದಲ್ಲಿ ಕಾಂಗ್ರಸಿಗರು ಬಹಳ ಮಂದಿ ಬಿಜೆಪಿಗೆ ಬರುತ್ತಾರೆ. ಅವರಿಂದ ನಾಲ್ಕೈದು ಕ್ಷೇತ್ರದಲ್ಲಿ ನಮಗೆ ಪ್ಲಸ್ ಆಗುತ್ತೆ ಮಂಡ್ಯ ಕೋಲಾರದಿಂದ ಒಬ್ಬರು ನಮ್ಮ ಕಡೆಗೆ ಬರ್ತಾರೆ. ಏಳೆಂಟು ಬಾರಿ ಸೆಂಟ್ರಲ್ ಮಿನಿಸ್ಟರ್ ಆಗಿದ್ದವರು ಬರ್ತಾರೆ. ನಮ್ಮ ಬಳಿ ಎಲ್ಲ ಮಾಹಿತಿ ಇದೆ. ನಾಳೆ ನಾಳಿದ್ದು ಕ್ಲಾರಿಟಿ ಸಿಗುತ್ತೆ. ಎಲೆಕ್ಷನ್ ಬಳಿಕ ಆಪರೇಷನ್ ಕಮಲ ಮಾಡೋದಿಲ್ಲ, ಎಲೆಕ್ಷನ್ ಗೂ ಮೊದಲೇ ಆಪರೇಷನ್ ಕಮಲ ಮಾಡ್ತಿವಿ.
ಸಿದ್ದರಾಮಯ್ಯ ಕೋಲಾರದಿಂದ ಸೋಲ್ತಾರೆ ಎಂದು ನಾನು ಹೇಳೋದಿಲ್ಲ. ಮುಖ್ಯಮಂತ್ರಿಯಾಗಿದ್ದವರನ್ನು ನನ್ನ ಬಾಯಿಂದ ಸೋಲ್ತಾರೆ ಅಂತಾ ಏಕೇ ಹೇಳಲಿ? ಸಿದ್ದರಾಮಯ್ಯ ಗೆಲ್ಲಲಿ. ಅವರು ಗೆಲುವೇ ಅವರಿಗೆ ತೊಂದರೆ, ಅವರು ಗೆದ್ದರಷ್ಟೆ ಮುಖ್ಯಮಂತ್ರಿ ಆಗೋದು? ಅವರ ಕೊನೆ ಪ್ರಯತ್ನ. ಕಾಂಗ್ರೆಸ್‌ನಲ್ಲಿ ಪಾಪುಲರ್ ಲೀಡರ್ ಎಂದರೆ ಸಿದ್ದರಾಮಯ್ಯ.
ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡ್ತಿದ್ದಿನಿ. ಅಶೋಕ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ನಿಲ್ಲಲ್ಲಿ. ಅಶ್ವತ್ಥನಾರಾಯಣ ಅವರು ಕುಮಾರಸ್ವಾಮಿ ಮಗನ ವಿರುದ್ಧ ನಿಲ್ಲಲಿ ಇದೊಂದು ಹೋರಾಟ ಆಗ್ಲಿ. ನಾನು ಸೋತರೂ ನನ್ನ ಮಂತ್ರಿ ಮಾಡ್ಲಿಲ್ಲವಾ? ಹಂಗೇ ಅವರನ್ನು ಮಂತ್ರಿ ಮಾಡ್ತಾರೆ.
ಅಮಿತ್ ಶಾ ಹೇಳಿದ್ದಾರೆ. ಹೊಂದಾಣಿಕೆ ರಾಜಕೀಯ ಬೇಡ ಅಂತಾ. ಅಮಿತ್ ಶಾ ಒಂಥರಾ ರೌಡಿಸಂ ಕಣಯ್ಯ. ಪಾರ್ಟಿ ವಿರುದ್ಧ ಯಾರಾದರೂ ಮಾತನಾಡಿದರೆ ಅಷ್ಟೆ ಅವರ ಕಥೆ. ನಮ್ಮನೆಲ್ಲ ಮೊನ್ನೆ ಕರೆದು ಅವರು ಹೇಳಿದ್ದಾರೆ. ಪಾರ್ಟಿ ವಿರುದ್ಧ ಯಾರ‍್ಯಾರು ದ್ರೋಹ ಮಾಡ್ತಿದ್ದೀರಾ ಎಂದು ಗೊತ್ತು ಎಂದು ನೀಟಾಗಿ ಹೇಳಿದ್ದಾರೆ.
ಇದೆಲ್ಲ ಹೊಂದಾಣಿಕೆ ರಾಜಕಾರಣ ಅಂತಾ ಜನರಲ್ಲಿ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಏನೇ ಆಗಲಿ ಬಿಜೆಪಿ ಸರಕಾರ ರಚನೆಯಾಗುತ್ತದೆ.