ಮುಸ್ಲಿಮ್ ಸಮುದಾಯದ 2ಬಿ ಮೀಸಲಾತಿ ರದ್ದು: ಅನುಮಾನಕ್ಕೆ ಎಡೆಮಾಡಿದ ಸರಕಾರಿ ಆದೇಶ
ಬೆಂಗಳೂರು, ಮಾ.30: ಹಿಂದುಳಿದ ವರ್ಗಗಳ 2ಬಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅವರನ್ನು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ(EWS)ಕ್ಕೆ ಸೇರಿಸಲು ರಾಜ್ಯ ಸರಕಾರ ಹೊರಡಿಸಿರುವ ಆದೇಶ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಭಾರತೀಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಯ ಚುನಾವಣೆಗೆ ಸಂಬಂಧಿಸಿ ಮಾ.29ರಂದು ಮಾದರಿ ನೀತಿ ಸಂಹಿತೆಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಿಂದಿನ ದಿನಾಂಕವನ್ನು ನಮೂದಿಸಿ ತರಾತುರಿಯಲ್ಲಿ ಮೀಸಲಾತಿ ಪುನರ್ ಹಂಚಿಕೆಯ ಆದೇಶ ಹೊರಡಿಸಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಮಾ.27ರಂದು ತಮ್ಮ ಮನೆಯ ಗೃಹ ಪ್ರವೇಶ ಹಿನ್ನೆಲೆಯಲ್ಲಿ ರಜೆ ಮೇಲೆ ತೆರಳಿದ್ದರು ಎಂದು ಹೇಳಲಾಗಿದೆ. ಆದರೆ, ಸರಕಾರಿ ಆದೇಶಕ್ಕೆ ಅವರು ಮಾ.27ರಂದೇ ಸಹಿ ಮಾಡಿರುವುದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.
ತುಳಸಿ ಮದ್ದಿನೇನಿ ಅವರ ಗೃಹ ಪ್ರವೇಶ ಸಮಾರಂಭದಲ್ಲಿ ಅನೇಕ ಐಎಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಅವರು ಅವತ್ತು ರಜೆಯಲ್ಲಿದ್ದ ಕಾರಣ, ಕರ್ತವ್ಯದಲ್ಲಿ ಇರಲಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.
ಮೀಸಲಾತಿ ಪುನರ್ ಹಂಚಿಕೆ ಸಂಬಂಧಿಸಿದಂತೆ ಮಾ.24ರಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ ಕಡತವು ಮಾ.29ರವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಬಳಿಯೆ ಇತ್ತು ಎಂದು ಮೂಲಗಳು ತಿಳಿಸಿವೆ.
ಭಾರತ ಚುನಾವಣಾ ಆಯೋಗವು ಮಾ.29ರಿಂದಲೇ ಜಾರಿಗೆ ಬರುವಂತೆ ನೀತಿ ಸಂಹಿತೆ ಘೋಷಣೆ ಮಾಡಿದ್ದರಿಂದ ಸರಕಾರವು ಹಿಂದಿನ ದಿನಾಂಕವನ್ನು ನಮೂದಿಸಿ ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ. ಎಸ್ಸಿ-ಎಸ್ಟಿ ಮತ್ತು ಕೇಂದ್ರ ಸರಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿಗಳ ಅರ್ಹ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಹಾಗೂ ಉದ್ಯೋಗಕ್ಕಾಗಿ ಶೇ.10ರಷ್ಟು ಮೀಸಲಾತಿಯನ್ನು EWS ಕೋಟದಲ್ಲಿ ಕಲ್ಪಿಸಲಾಗಿದೆ.
ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಆ ಮೀಸಲಾತಿಯನ್ನು ಲಿಂಗಾಯತ ಹಾಗೂ ಒಕ್ಕಲಿಗರಿಗೆ ಶೇ.2ರಷ್ಟು ಹಂಚಿಕೆ ಮಾಡಲು ಸಚಿವ ಸಂಪುಟ ತೀರ್ಮಾನ ಮಾಡಿತು. ಅಲ್ಲದೆ, ಮುಸ್ಲಿಮ್ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಇಡಬ್ಲ್ಯೂಎಸ್ ಕೋಟಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿತ್ತು. ಮೀಸಲಾತಿ ಮರು ಹಂಚಿಕೆಯಿಂದಾಗಿ ಹೊಸದಾಗಿ ಸೃಜಿಸಲಾದ ಪ್ರವರ್ಗ 2ಸಿ ಅಡಿಯಲ್ಲಿ ಒಕ್ಕಲಿಗರಿಗೆ ಶೇ.4 ರಿಂದ 6 ಹಾಗೂ 2ಡಿ ಅಡಿಯಲ್ಲಿ ಲಿಂಗಾಯತರಿಗೆ ಶೇ.5ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಳವಾದಂತಾಗಿದೆ.
ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂ.ಗಳಿಗಿಂತ ಕಡಿಮೆ ಇರುವಂತಹ ವ್ಯಕ್ತಿಯು ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯವನ್ನು ಪಡೆಯಲು ಅರ್ಹನಾಗಿರುತ್ತಾನೆ.