‘ಭಾರತ್‌ನೆಟ್’- ಗೋಲಾಗದಿದ್ದದ್ದಕ್ಕೆ ಗೋಲ್‌ಪೋಸ್ಟ್ ಖಾಸಗೀಕರಣ?!
ಕಳೆದ ಶುಕ್ರವಾರ (ಆಗಸ್ಟ್ 4) ಭಾರತ ಸರಕಾರವು ದೇಶದಾದ್ಯಂತ ಇರುವ ಸುಮಾರು 6.4 ಲಕ್ಷ ಹಳ್ಳಿಗಳಿಗೆ ಇಂಟರ್‌ನೆಟ್ ಸಂಪರ್ಕ ಒದಗಿಸುವುದಕ್ಕಾಗಿ 1.39 ಲಕ್ಷ ಕೋಟಿ ರೂ. ವೆಚ್ಚದಲ್ಲಿ ತನ್ನ ‘ಭಾರತ್‌ನೆಟ್’ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಲಿದೆ ಎಂಬ ಸುದ್ದಿಯನ್ನು ಬಹುತೇಕ ಎಲ್ಲ ಮಾಧ್ಯಮಗಳೂ ಆದ್ಯತೆ ನೀಡಿ ಪ್ರಕಟಿಸಿದ್ದವು. ಇಲ್ಲಿಯ ತನಕ ಕೇವಲ 1.94 ಲಕ್ಷ ಗ್ರಾಮಗಳಿಗೆ ಮಾತ್ರ ಇಂಟರ್‌ನೆಟ್ ಸೌಲಭ್ಯ ತಲುಪಿದೆ. ಇನ್ನುಳಿದ ಗ್ರಾಮಗಳಿಗೆ ಮುಂದಿನ ಎರಡೂವರೆ ವರ್ಷಗಳಲ್ಲಿ ಖಾಸಗಿ ಸಹಯೋಗದೊಂದಿಗೆ ಇಂಟರ್‌ನೆಟ್ ಸೌಲಭ್ಯ ತಲುಪಿಸಲಾಗುವುದು ಎಂದು ಸರಕಾರ ಹೇಳಿದೆ. ಮೇಲ್ನೋಟಕ್ಕೆ, ಡಿಜಿಟಲ್ ಇಂಡಿಯಾ ಆಗುವ ನಿಟ್ಟಿನಲ್ಲಿ ಅದ್ಭುತ ತೀರ್ಮಾನ ಇದು.
ಬಹಳ ಎಚ್ಚರಿಕೆಯಿಂದ ಶಬ್ದಗಳನ್ನು ಬಳಸಿ, ಗೋಲ್‌ಪೋಸ್ಟನ್ನೇ ಬದಲಾಯಿಸುವ ಮೂಲಕ, ಆಗದಿರುವ ಗೋಲನ್ನು ಸಮರ್ಥಿಸಿಕೊಳ್ಳುವ ಭಾರತ ಸರಕಾರದ ನೈಪುಣ್ಯಕ್ಕೆ ಇದು ಮಗದೊಂದು ಉದಾಹರಣೆ. ಈ ರೀತಿ ಗೋಲ್ ಪೋಸ್ಟ್ ಬದಲಾವಣೆಗಳಲ್ಲಿ ಈಗವರು ಬಹುತೇಕ ಒಂದು ದಶಕದ ಅನುಭವಿಗಳು. ಖಾಸಗಿಯವರ ಪರವಾಗಿ ನಡೆಯುತ್ತಿರುವ ಈ ಆಟವನ್ನು ಗ್ರಹಿಸಲು ಈ ಯೋಜನೆ ಆರಂಭದಿಂದ ಸಾಗಿಬಂದ ಹಾದಿಯನ್ನೊಮ್ಮೆ ನೋಡಬೇಕು.
ಭಾರತ್‌ನೆಟ್ ಹಂತ 1
ಈ ಯೋಜನೆ ಆರಂಭಗೊಂಡದ್ದು ಯುಪಿಎ-2 ಸರಕಾರದ ಅವಧಿಯಲ್ಲಿ. 2011ರಲ್ಲಿ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಎಂಬ ಹೆಸರಿನಲ್ಲಿ ಅದು ಆರಂಭಗೊಂಡಿತು. 2012ರಲ್ಲಿ ಇದರ ಅನಷ್ಠಾನಕ್ಕಾಗಿ ಬಿಬಿಎನ್‌ಎಲ್ ಎಂಬ ವಿಶೇಷೋದ್ದೇಶ ಸಂಸ್ಥೆ (ಎಸ್‌ಪಿವಿ) ಸ್ಥಾಪನೆ ಆಯಿತು. ಆದರೆ, 2014ರ ತನಕ ಈ ಯೋಜನೆಯಲ್ಲಿ ಆದ ಕೆಲಸ ಎಂದರೆ ಕೇವಲ 350 ಕಿ.ಮೀ. ಆಫ್ಟಿಕಲ್ ಫೈಬರ್ ಜಾಲವನ್ನು ಹರಡಿದ್ದು. 2014ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ, ಈ ಯೋಜನೆಯನ್ನು ‘ಭಾರತ್‌ನೆಟ್’ ಎಂಬ ಹೆಸರಿನಲ್ಲಿ ಭರ್ಜರಿಯಾಗಿ ಮಾರುಕಟ್ಟೆ ಮಾಡಿತು. ಭಾರತ್‌ನೆಟ್ ಯೋಜನೆಯ ಮೊದಲ ಹಂತದಲ್ಲಿ, ಸಾರ್ವಜನಿಕ ವಲಯದ ಬಿಎಸ್‌ಎನ್‌ಎಲ್, ಖಚಿiಟಖಿeಟ, ಪವರ್‌ಗ್ರಿಡ್ ಕಾರ್ಪೊರೇಷನ್ (ಪಿಜಿಸಿಐಎಲ್) ಸಂಸ್ಥೆಗಳು ಈಗಾಗಲೇ ಹೊಂದಿರುವ ಆಪ್ಟಿಕಲ್ ಫೈಬರ್ ಜಾಲದ ಮೂಲಕವೇ ದೇಶದ 2,38,054 ಗ್ರಾಮಪಂಚಾಯತ್‌ಗಳ ಪೈಕಿ 1,25,000 ಪಂಚಾಯತ್‌ಗಳಿಗೆ ಇಂಟರ್‌ನೆಟ್ ಸಂಪರ್ಕ ಒದಗಿಸುವ ಉದ್ದೇಶ ಹೊಂದಲಾಗಿತ್ತು. 2017ರ ಡಿಸೆಂಬರ್ ಹೊತ್ತಿಗೆ ಈ ಗುರಿ ತಲುಪಲಾಯಿತು.
ಭಾರತ್‌ನೆಟ್ ಹಂತ 2
ಎನ್‌ಡಿಎ ಸರಕಾರ 2018ರ ಹೊತ್ತಿಗೆ ತನ್ನ ಎರಡನೇ ಅವಧಿಗಾಗಿ ತಯಾರಿ ಆರಂಭಿಸುವಾಗ, ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹೊತ್ತಿಗೆ, ಅಂದರೆ, 2022ರ ಹೊತ್ತಿಗೆ ತಾನು ಏನೇನು ಸಾಧಿಸಿರಬೇಕೆಂದು ಮಾಡಿಕೊಂಡ ಪಟ್ಟಿಯಲ್ಲಿ, 2022-23ರ ಹೊತ್ತಿಗೆ ಭಾರತದ ಎಲ್ಲ 2,38,054 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಒಎಫ್‌ಸಿ ಅಥವಾ ಉಪಗ್ರಹ ಆಧರಿತ ಇಂಟರ್‌ನೆಟ್ ಸಂಪರ್ಕ ತಲುಪಬೇಕು ಎಂದು ನಿರ್ಧರಿಸಿಕೊಂಡಿತ್ತು. ಈ ಯೋಜನೆ ಎಷ್ಟು ವಿಸ್ತೃತವಾಗಿತ್ತೆಂದರೆ, 12 ರಾಜ್ಯಗಳಲ್ಲಿ ರಾಜ್ಯ ಸರಕಾರಗಳ ಸಹಯೋಗದಲ್ಲಿ, ನಾಲ್ಕು ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್ ಮೂಲಕ, ಎರಡು ರಾಜ್ಯಗಳಲ್ಲಿ ಖಾಸಗಿ ಸಹಕಾರದಲ್ಲಿ ಮತ್ತು ಸಂಪರ್ಕ ಕಷ್ಟವಿರುವ 3,753 ಗ್ರಾಮ ಪಂಚಾಯತ್‌ಗಳಿಗೆ ಬಿಬಿಎನ್‌ಎಲ್ ಮೂಲಕ ಮತ್ತು 1,408 ಗ್ರಾಮ ಪಂಚಾಯತ್‌ಗಳಿಗೆ ಬಿಎಸ್‌ಎನ್‌ಎಲ್ ಮೂಲಕ ಉಪಗ್ರಹ ಆಧರಿತ ಇಂಟರ್‌ನೆಟ್ ಸಂಪರ್ಕ ನೀಡುವುದೆಂದು ತೀರ್ಮಾನಿಸಿ, ಅದಕ್ಕೆ 42,068 ಕೋಟಿ ರೂ. ವ್ಯಯಿಸಲಾಗಿತ್ತು.
ಆದರೆ, ಈಗ 2023 ಜುಲೈ ಅಂತ್ಯಕ್ಕೆ, ದೇಶದಲ್ಲಿ ಇನ್ನೂ 42,434 ಗ್ರಾಮಗಳಿಗೆ ಇಂಟರ್‌ನೆಟ್ ಸಂಪರ್ಕ ತಲುಪುವುದು ಬಾಕಿ ಇದೆ. ತನ್ನ ಎರಡನೇ ಅವಧಿಯಲ್ಲಿ ಎನ್‌ಡಿಎ ಸರಕಾರ, ಬಹಳ ಹೆಣಗಾಡಿ ಸಂಪರ್ಕ ಪೂರೈಸಿದ್ದು ಕೇವಲ 70,620 ಗ್ರಾಮಗಳಿಗೆ.
ಗೋಲ್‌ಪೋಸ್ಟ್ ಬದಲಾಯಿಸಿದ್ದು
ತಾನು ಗುರಿ ತಲುಪದಿರುವುದನ್ನು ಮನಗಂಡಿರುವ ಸರಕಾರ, ಈಗ ತನ್ನ ಗೋಲ್‌ಪೋಸ್ಟನ್ನೇ ಬದಲಾಯಿಸಿಕೊಂಡಿದೆ. 2,38,054 ಗ್ರಾಮಪಂಚಾಯತ್‌ಗಳ ಬದಲು, ದೇಶದ 6.4 ಲಕ್ಷ ಹಳ್ಳಿಗಳಲ್ಲಿ ಏಳು ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಈಗ 1.39 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿದೆ. ಗ್ರಾಮಮಟ್ಟದ ಕೇಬಲ್ ಆಪರೇಟರ್‌ಗಳನ್ನು (ವಿಎಲ್‌ಇ) ಬಳಸಿಕೊಂಡು, ಅವರ ಮೂಲಕ ಮುಂದಿನ ಎರಡೂವರೆ ವರ್ಷಗಳಲ್ಲಿ ಪ್ರತೀ ಮನೆಗೆ ತಲುಪುವ ಉದ್ದೇಶ ಈ ಹೊಸ ಗೋಲ್‌ಪೋಸ್ಟಿನದು.
ಹೀಗೆ ಗೋಲ್‌ಪೋಸ್ಟ್ ಬದಲಾದುದರಿಂದ ಎರಡು ಲಾಭಗಳು.
ಮೊದಲನೆಯದಾಗಿ, ಗುರಿ ತಲುಪುವಲ್ಲಿ ವೈಫಲ್ಯ ಈಗ ಅಡಿ ಬಿತ್ತು.
ಎರಡನೆಯದಾಗಿ, ತನಗೆ ಪ್ರಿಯರಾದ ಖಾಸಗಿ ವಲಯದವರಿಗೆ ತಾನು ಸಿದ್ಧಪಡಿಸಿರುವ ಕೇಬಲ್ ಜಾಲ ವ್ಯವಸ್ಥೆಯನ್ನು ತಟ್ಟೆಯಲ್ಲಿಟ್ಟು ನೀಡಲು ಇದು ಸದವಕಾಶ.
ಇದು ಅರ್ಥ ಆಗಬೇಕದ್ದರೆ ಹಿಂದಿನ ಕೆಲವು ಬೆಳವಣಿಗೆಗಳನ್ನು ಗಮನಿಸಬೇಕು. 2021ರಲ್ಲಿ ಬಿಬಿಎನ್‌ಎಲ್ ಮೂವತ್ತು ವರ್ಷಗಳ ಅವಧಿಗೆ 16 ರಾಜ್ಯಗಳಲ್ಲಿ ಒಎಫ್‌ಸಿ ಜಾಲ ಅಳವಡಿಸಲು ಜಾಗತಿಕ ಟೆಂಡರ್ ಕರೆದಿತ್ತು ಮತ್ತು ಅದಕ್ಕಾಗಿ ಭಾರತ ಸರಕಾರ 19,041 ಕೋಟಿ ರೂ.ಗಳ ನಷ್ಟ ಭರ್ತಿ (ವಯಬಲಿಟಿ ಗ್ಯಾಪ್ ಫಂಡಿಂಗ್) ಮಾಡಿಕೊಡಲು ಒಪ್ಪಿತ್ತು. ವಿನ್ಯಾಸ, ರಚನೆ, ಹೂಡಿಕೆ, ನಿರ್ವಹಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ತತ್ವದ ಈ ಟೆಂಡರ್ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ 2022ರ ಫೆಬ್ರವರಿಯಲ್ಲಿ ಅರ್ಹ ಬಿಡ್ಡುದಾರರಿಲ್ಲದೆ ರದ್ದುಗೊಂಡಿತ್ತು.
ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ಈಗಾಗಲೇ ಶೇ. 50ರ ಮೇಲೆ ಹಿಡಿತ ಹೊಂದಿರುವ ಅಂಬಾನಿ ಬಳಗ (ಜಿಯೋ) ಮತ್ತು ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿರುವ ಅದಾನಿ ಬಳಗ (ಎಡಿಎನ್‌ಎಲ್) ಮತ್ತಿತರ ಕಾರ್ಪೊರೇಟ್‌ಗಳು ಈಗಾಗಲೇ ತಳಮಟ್ಟದಲ್ಲಿ ಅಸ್ಥಿತ್ವದಲ್ಲಿರುವ ಸಣ್ಣಪುಟ್ಟ ಕೇಬಲ್ ಆಪರೇಟರ್ ಜಾಲಗಳ ಮೇಲೆ ಮಾರುಕಟ್ಟೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿವೆ. ಹಾಗಾಗಿ, ಬಿಬಿಎನ್‌ಎಲ್ ಈಗ ಸಾರ್ವಜನಿಕ ತೆರಿಗೆ ದುಡ್ಡಿನಲ್ಲಿ ದೇಶಾದ್ಯಂತ ಹಾಕಿರುವ 6,47,759 ಕಿಮೀ ಉದ್ದದ ಒಎಫ್‌ಸಿ ಜಾಲ ಇನ್ನು ಈ ಹೊಸ ಯೋಜನೆಯಡಿ ವಿಎಲ್‌ಇಗಳ ಮೂಲಕ ನಿಜಕ್ಕೂ ಯಾರ ಹಿಡಿತಕ್ಕೆ ಹೋಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.