ಬಿರೇನ್ ಸಿಂಗ್ ಇನ್ನೂ ವಜಾಗೊಂಡಿಲ್ಲ ಏಕೆಂದರೆ....
Photo : ಬಿರೇನ್ ಸಿಂಗ್ | PTI
ಮಣಿಪುರ ರಾಜ್ಯ ಕಳೆದ 80 ದಿನಗಳಿಂದ ಹಿಂಸಾಗ್ರಸ್ತವಾಗಿದೆ. 150ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ನೂರಾರು ಜನರು ಕಾಣೆಯಾಗಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಪ್ರತ್ಯೇಕ ಹಿಂಸಾಚಾರದ ಘಟನೆಗಳು ಆ ರಾಜ್ಯದಲ್ಲಿ ನಡೆದು ಹೋಗಿವೆ. ಇನ್ನೂ ಹಿಂಸಾಚಾರ ನಿಂತಿಲ್ಲ. ನೂರಾರು ಚರ್ಚ್ಗಳು, ಸಾವಿರಾರು ಮನೆಗಳು ಧ್ವಂಸವಾಗಿವೆ. 60 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ. ಈ ನಡುವೆ ಮೂವರು ಮಹಿಳೆಯರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ಮಾಡಿ ಆ ಪೈಕಿ ಒಬ್ಬರ ಸಾಮೂಹಿಕ ಅತ್ಯಾಚಾರ ನಡೆದ ಹೇಯ ಘಟನೆಯೂ ಬಯಲಿಗೆ ಬಂದಿದೆ.
ಮಹಿಳೆಯರು, ಮಕ್ಕಳು ಸಹಿತ ಸಾವಿರಾರು ಅಮಾಯಕರು ಅಲ್ಲಿ ದಿಕ್ಕೆಟ್ಟು ಕುಳಿತಿದ್ದಾರೆ. ಕಂಗಾಲಾಗಿದ್ದಾರೆ. ಹೇಗಾದರೂ ಇಲ್ಲಿ ಹಿಂಸಾಚಾರವನ್ನು ನಿಲ್ಲಿಸಿ ಎಂದು ಕಂಡಕಂಡವರನ್ನೆಲ್ಲ ಗೋಗರೆಯುತ್ತಿದ್ದಾರೆ. ದೇಶದ ಪ್ರಧಾನಿ, ಕೇಂದ್ರ ಗೃಹ ಸಚಿವರಲ್ಲಿ ಹೇಗಾದರೂ ಮಣಿಪುರದಲ್ಲಿ ಹಿಂಸಾಚಾರ ನಿಲ್ಲಿಸಿ ಎಂದು ಮನವಿ ಮಾಡದ ಗಣ್ಯರೇ ಇಲ್ಲ. ಸ್ವತಃ ಅಮಿತ್ ಶಾ ಅಲ್ಲಿಗೆ ಹೋಗಿ ಬಂದ ಮೇಲೆ ಹಿಂಸಾಚಾರ ನಿಲ್ಲುವ ಬದಲು ಇನ್ನಷ್ಟು ಹೆಚ್ಚಾಗಿದೆ. ಇದು ಕೇಂದ್ರ ಗೃಹ ಸಚಿವರುಗಳ ಇತಿಹಾಸದಲ್ಲೇ ಒಂದು ದಾಖಲೆ.
ಇಷ್ಟೆಲ್ಲಾ ಅನಾಹುತಗಳ ಕೇಂದ್ರ ಬಿಂದು ಆ ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್. ಅಲ್ಲಿ ಹಿಂಸಾಚಾರ ಪ್ರಾರಂಭವಾಗಲು ರಾಜಕೀಯವಾಗಿ ವೇದಿಕೆ ಸೃಷ್ಟಿಸಿದ್ದೇ ಈ ಬಿರೇನ್ ಸಿಂಗ್ ಹಾಗೂ ಅವರ ಆಡಳಿತ ವೈಖರಿ.
ಹಿಂಸಾಚಾರ ಪ್ರಾರಂಭವಾದ ಮೇಲಾದರೂ ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳಲಿಲ್ಲ. ಜವಾಬ್ದಾರಿಯುತವಾಗಿ ವರ್ತಿಸಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.
30 ಲಕ್ಷ ಜನಸಂಖ್ಯೆ ಇರುವ ಮಣಿಪುರದಂತಹ ಪುಟ್ಟ ರಾಜ್ಯದಲ್ಲಿ ಹಿಂಸಾಚಾರ ತಡೆಯುವುದು ಒಂದು ರಾಜ್ಯದ ಆಡಳಿತಕ್ಕೆ, ಪೊಲೀಸರಿಗೆ ಅಸಾಧ್ಯ ಅಲ್ಲವೇ ಅಲ್ಲ. ಆದರೆ ಹಿಂಸಾಚಾರ ತಡೆಯುವ, ಅನ್ಯಾಯ ಆಗದಂತೆ ನೋಡಿಕೊಳ್ಳುವ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದಿದ್ದರೆ, ಹಿಂಸಾಚಾರಕ್ಕೆ ಪರೋಕ್ಷ ಕುಮ್ಮಕ್ಕು ಕೊಡುವ ಧೋರಣೆಯೇ ಮುಖ್ಯಮಂತ್ರಿಗೆ ಇದ್ದರೆ ಹಿಂಸಾಚಾರ ನಿಲ್ಲುವುದು ಹೇಗೆ?
ಒಬ್ಬ ಜನಪ್ರತಿನಿಧಿ, ಒಬ್ಬ ಮುಖ್ಯಮಂತ್ರಿ ಹೇಗಿರಬಾರದು ಎಂಬುದಕ್ಕೆ ಸದ್ಯದ ಭಾರತೀಯ ರಾಜಕೀಯದಲ್ಲಿ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ ಈ ಬಿರೇನ್ ಸಿಂಗ್.
ಬಹುಸಂಖ್ಯಾತ ಮೈತೈ ಸಮುದಾಯಕ್ಕೆ ಸೇರಿದ ಈ ಬಿರೇನ್ ಸಿಂಗ್ ಯಾವುದೇ ಮುಲಾಜಿಲ್ಲದೆ, ತಾನಿರುವ ಹುದ್ದೆಯ ಘನತೆ, ಜವಾಬ್ದಾರಿಗಳನ್ನೆಲ್ಲ ಗಾಳಿಗೆ ತೂರಿ ಮೈತೈಗಳ ಜೊತೆ ತಾನಿದ್ದೇನೆ ಎಂದೇ ಗುರುತಿಸಿಕೊಂಡಿದ್ದಾರೆ. ಕುಕಿಗಳ ವಿರುದ್ಧ ಹೇಳಿಕೆ ನೀಡಿ ತನ್ನ ಪ್ರಜೆಗಳನ್ನೇ ತಾರತಮ್ಯದಿಂದ ನೋಡಿ ತನ್ನ ಹುದ್ದೆಗೆ ಕಳಂಕ ತಂದಿದ್ದಾರೆ.
ಬೇರೆ ಸಮುದಾಯ, ಬೇರೆ ಪಕ್ಷಗಳನ್ನು ಬಿಡಿ ಸ್ವತಃ ತಮ್ಮ ಪಕ್ಷದವರದ್ದೇ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಮುಖ್ಯಮಂತ್ರಿ ಬಿರೇನ್ ಸಿಂಗ್. ಅವರದೇ ಶಾಸಕರು ಪ್ರಧಾನಿಗೆ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ‘‘ಮುಖ್ಯಮಂತ್ರಿ ಸಂಪೂರ್ಣ ವಿಫಲವಾಗಿದ್ದಾರೆ, ನೀವೇ ಮಣಿಪುರವನ್ನು ಕಾಪಾಡಿ’’ ಎಂದು ಗೋಗರೆಯುತ್ತಿದ್ದಾರೆ. ಈಗಂತೂ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿದ್ದಾರೆ.
ಮಣಿಪುರದಲ್ಲಿ ಬಿಜೆಪಿಯ ಸಚಿವರು, ಶಾಸಕರೂ ಸುರಕ್ಷಿತರಲ್ಲ. ಅವರ ಮನೆಗಳಿಗೇ ಬೆಂಕಿ ಬಿದ್ದಿದೆ. ಮಣಿಪುರದಲ್ಲಿರುವ ದೇಶದ ನಿವೃತ್ತ ಹಿರಿಯ ಸೇನಾಧಿಕಾರಿಗಳು ಬಿರೇನ್ ಸಿಂಗ್ ನೇತೃತ್ವದ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಸರಕಾರಕ್ಕೆ ಹೇಳುತ್ತಲೇ ಬಂದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾಗಿ ಮಣಿಪುರವನ್ನು ಕಾಪಾಡಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ.
ಈ ಎಲ್ಲ ಘೋರ ವೈಫಲ್ಯ ಹಾಗೂ ಪಕ್ಷಪಾತಿ ಕಾರ್ಯವೈಖರಿಗೆ ಕಳಶವಿಟ್ಟಂತೆ ಬಿರೇನ್ ಸಿಂಗ್ ಮೊನ್ನೆ ಒಂದು ಅತ್ಯಂತ ನಾಚಿಕೆಗೇಡಿನ ಹೇಳಿಕೆ ಕೊಟ್ಟಿದ್ದಾರೆ. ಮಹಿಳೆಯರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಮೆರವಣಿಗೆ ಮಾಡಿದ ಬಗ್ಗೆ ‘‘ಇಂತಹ ನೂರಾರು ಘಟನೆಗಳು ನಡೆಯುತ್ತವೆ’’ ಎಂದಿದ್ದಾರೆ!. ಒಬ್ಬ ಮುಖ್ಯಮಂತ್ರಿ ಇದಕ್ಕಿಂತ ಕೆಟ್ಟ ಹೇಳಿಕೆ ಕೊಡಲು ಸಾಧ್ಯವೇ?
ಈ ಹೇಳಿಕೆ ಕೊಟ್ಟ ಮೇಲಂತೂ ತನ್ನ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯುವ ನೈತಿಕತೆಯನ್ನು ಬಿರೇನ್ ಸಿಂಗ್ ಕಳೆದುಕೊಂಡಿದ್ದಾರೆ. ಅವರಿಗೆ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ಒಂದಿಷ್ಟೂ ನೈತಿಕ ಹಕ್ಕಿಲ್ಲ. ಆದರೂ ಅವರು ಆ ಸ್ಥಾನದಲ್ಲಿ ಇನ್ನೂ ಮುಂದುವರಿದಿದ್ದಾರೆ
ರಾಜ್ಯದ ಜನರಿಗೆ ಅವರು ಬೇಡ. ಅವರದೇ ಪಕ್ಷದ ಶಾಸಕರಿಗೂ ಅವರು ಬೇಡ. ಈ ದೇಶದ ಜನರಂತೂ ಪಕ್ಷ ಭೇದ ಮರೆತು ಅಲ್ಲಿನ ಮುಖ್ಯಮಂತ್ರಿಯನ್ನು ಬದಲಾಯಿಸಿ ಎಂದು ಹೇಳುತ್ತಿದ್ದಾರೆ. ಹಿರಿಯ ನಿವೃತ್ತ ಸೇನಾಧಿಕಾರಿಗಳು ಮಣಿಪುರದಲ್ಲಿ ಸರಕಾರವೇ ಇಲ್ಲದ ಸ್ಥಿತಿಯಿದೆ ಎಂದು ಹೇಳಿದ್ದಾರೆ. ಆದರೂ ಬಿರೇನ್ ಸಿಂಗ್ ಇನ್ನೂ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಕಾರಣವೇನು?
ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಅವರು ಸೋಮವಾರದ ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಬರೆದ ವಿಶೇಷ ಮುಖಪುಟ ಲೇಖನದಲ್ಲಿ ಹೇಳುವ ಪ್ರಕಾರ ಕೇವಲ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗಿರುವ ಅನಿವಾರ್ಯತೆಯಿಂದಾಗಿಯೇ ಬಿರೇನ್ ಸಿಂಗ್ ತಮ್ಮ ಹುದ್ದೆಯಲ್ಲಿ ಇನ್ನೂ ಮುಂದುವರಿದಿದ್ದಾರೆ.
ಇದಕ್ಕೆ ರಾಮಚಂದ್ರ ಗುಹಾ ಅವರು ನೀಡುವ ಕಾರಣಗಳು ಹೀಗಿವೆ:
2023ರಲ್ಲಿ ಮಣಿಪುರದಲ್ಲಿ ನಡೆದಿರುವ ಹಿಂಸಾಚಾರವು 2002ರಲ್ಲಿ ಗುಜರಾತಿನಲ್ಲಿ ನಡೆದಿದ್ದ ಹಿಂಸಾಚಾರದಷ್ಟೇ ಘೋರವಾಗಿದೆ. ಎರಡೂ ರಾಜ್ಯಗಳಲ್ಲಿ ಸಾಮಾನ್ಯವಾಗಿ ಆಡಳಿತಗಳು ಮತ್ತು ನಿರ್ದಿಷ್ಟವಾಗಿ ಮುಖ್ಯಮಂತ್ರಿಗಳು ಬಹುಸಂಖ್ಯಾತ ಸಮುದಾಯದ ಪರವಾಗಿದ್ದಾರೆ ಅಥವಾ ಅದರೊಂದಿಗೆ ಗುರುತಿಸಿಕೊಂಡಿದ್ದಾರೆ.
ಮಣಿಪುರದಲ್ಲಿ ಮೈತೈಗಳು ರಾಜ್ಯದ ಜನಸಂಖ್ಯೆಯ ಶೇ.53ರಷ್ಟಿದ್ದರೆ, ಕುಕಿಗಳು ಶೇ.16ರಷ್ಟಿದ್ದಾರೆ. ಇನ್ನೊಂದು ಪ್ರಮುಖ ಸಮುದಾಯವಾಗಿರುವ ನಾಗಾಗಳು ಶೇ.24ರಷ್ಟಿದ್ದಾರೆ. ಗುಜರಾತಿನಲ್ಲಿ ಹಿಂದೂಗಳು ರಾಜ್ಯದ ಜನಸಂಖ್ಯೆಯ ಶೇ.88ರಷ್ಟಿದ್ದರೆ, ಮುಸ್ಲಿಮರು ಕೇವಲ ಶೇ.10ರಷ್ಟಿದ್ದಾರೆ. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಅನುಪಾತ ಮಣಿಪುರದಲ್ಲಿ ಸುಮಾರು 3.3:1 ಆಗಿದ್ದರೆ, ಗುಜರಾತ್ನಲ್ಲಿ ಅಂದಾಜು 8.8:1 ಆಗಿದೆ.
ಹಾಗಾಗಿಯೇ ಮಣಿಪುರದಲ್ಲಿ ಹಿಂಸಾಚಾರ ಏಕಪಕ್ಷೀಯವಾಗಿಲ್ಲ. ಕುಕಿಗಳು ತೀರಾ ಕಡಿಮೆ ಇಲ್ಲದೆ ಇರುವುದರಿಂದ ಅವರೂ ಅಲ್ಲಲ್ಲಿ ಹಿಂಸಾಚಾರದಲ್ಲಿ ಭಾಗವಹಿಸಿದ್ದಾರೆ.
ಮುಖ್ಯವಾಗಿ ಮಣಿಪುರದಲ್ಲಿ ಮೈತೈಗಳ ಜನಸಂಖ್ಯಾ ಪ್ರಾಬಲ್ಯವು ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿದೆ. ಅಲ್ಲಿ ಸಾಮಾನ್ಯವಾಗಿ ಮುಖ್ಯ ಮಂತ್ರಿಗಳು ಮೈತೈ ಸಮುದಾಯದವರೇ ಆಗಿರುತ್ತಾರೆ ಹಾಗೂ ಕುಕಿ ಅಥವಾ ನಾಗಾಗಳಿಗಿಂತ ಹೆಚ್ಚು ಸಚಿವರಿರುತ್ತಾರೆ, ಅಲ್ಲದೆ ಅವರಿಗೆ ಪ್ರಮುಖ ಖಾತೆಗಳು ದೊರೆಯುವ ಸಾಧ್ಯತೆಯೂ ಹೆಚ್ಚು.
ಮಣಿಪುರದ ಈಗಿನ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮೈತೈ ಆಗಿದ್ದಾರೆ ಮತ್ತು ತಾನು ಮೈತೈ ಪರ ಎಂದು ಹೇಳಿಕೊಳ್ಳಲು ಸಂಕೋಚ ಪಡುವುದಿಲ್ಲ. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರದ ಮೂರು ತಿಂಗಳುಗಳಲ್ಲಿ ಅವರು ಹಲವಾರು ಸ್ಪಷ್ಟ ಪಕ್ಷಪಾತಿ ಹೇಳಿಕೆಗಳನ್ನು ನೀಡಿದ್ದಾರೆ.
ಯಾವುದೇ ಕುಕಿಗಳು ಪ್ರವೇಶಿಸಲಾಗದ ಕಣಿವೆ ವಿಭಾಗ ಮತ್ತು ಮೈತೈಗಳು ದೂರವಿರಬೇಕಾದ ಗುಡ್ಡಗಾಡು ವಿಭಾಗವಾಗಿ ರಾಜ್ಯದ ವಿಭಜನೆಯನ್ನು ಅವರು ಮೌನವಾಗಿ ಅನುಮೋದಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರಕಾರದ ಜವಾಬ್ದಾರಿ. ಆದರೂ ಸರಕಾರಿ ಶಸ್ತ್ರಾಸ್ತ್ರಗಳ ಲೂಟಿಯನ್ನು, ಅಮಾಯಕ ನಾಗರಿಕರ ಹತ್ಯೆಗಳನ್ನು ಮತ್ತು ಮಹಿಳೆಯರ ಅತ್ಯಾಚಾರಗಳನ್ನು ತಡೆಯಲು ಮುಖ್ಯಮಂತ್ರಿ ಸಿದ್ಧರಿಲ್ಲ ಅಥವಾ ಅವರಿಗೆ ಸಾಧ್ಯವಾಗುತ್ತಿಲ್ಲ.
ಕಳೆದ ದಶಕಗಳಲ್ಲಿ ಪಂಜಾಬ್, ಕಾಶ್ಮೀರ ಮತ್ತು ಗುಜರಾತ್ನಲ್ಲಿ ಮತೀಯ ಹಿಂಸಾಚಾರಗಳಿಂದ ಉಂಟಾಗಿದ್ದ ಗಾಯಗಳ ಕಲೆಗಳು ಇನ್ನೂ ಸರಿಯಾಗಿ ಮಾಸಿಲ್ಲ. ಮಣಿಪುರದಲ್ಲಿ ಮೇಲ್ನೋಟಕ್ಕೆ ಸ್ಥಿತಿ ಇನ್ನೂ ಮಸುಕಾಗಿದೆ. ಜನಾಂಗೀಯ ಸಂಘರ್ಷವು ರಾಜ್ಯದ ಸಾಮಾಜಿಕ ಸ್ವರೂಪಕ್ಕೆ ಮತ್ತು ರಾಜಕೀಯ ಸಮಗ್ರತೆಗೆ ಆಳವಾದ ಮತ್ತು ಪ್ರಾಯಶಃ ಸರಿಪಡಿಸಲಾಗದ ಹಾನಿಯನ್ನುಂಟು ಮಾಡಿದೆ.
ಈಗ ಮಣಿಪುರ ಜನಾಂಗೀಯ ಸಂಘರ್ಷದ ಪರಿಣಾಮಗಳು ಇತರ ರಾಜ್ಯಗಳಲ್ಲಿಯೂ, ವಿಶೇಷವಾಗಿ ಮಿಜೋರಾಮ್ನಲ್ಲಿ ಕಂಡುಬರುತ್ತಿದೆ. ಕುಕಿಗಳು ಅಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಮತ್ತು ಮೈತೈಗಳನ್ನು ಅಲ್ಲಿಂದ ಕಾಲು ಕೀಳುವಂತೆ ಸೂಚಿಸಲಾಗುತ್ತಿದೆ.
ಹಿಂಸಾಚಾರ ಇಷ್ಟು ಭೀಕರವಾಗಿದ್ದು, ಮುಂದುವರಿಯುತ್ತಲೇ ಇದ್ದರೂ ಅದನ್ನು ತಡೆಯಲು ಮಣಿಪುರದ ಮುಖ್ಯಮಂತ್ರಿಗಳು ಎಷ್ಟೊಂದು ನಿರಾಸಕ್ತರಾಗಿದ್ದಾರೆ ಎನ್ನುವುದನ್ನು ಪರಿಗಣಿಸಿದರೆ ಅವರೇಕೆ ಇನ್ನೂ ಆ ಹುದ್ದೆಯಲ್ಲಿದ್ದಾರೆ?
ಈ ಪ್ರಶ್ನೆಯನ್ನು ಸಂಸತ್ತಿನಲ್ಲಿ ಪ್ರತಿಪಕ್ಷ ಸಂಸದರು ಮಾತ್ರವಲ್ಲ, ನಮ್ಮ ನಾಡಿನಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಬಯಸುವ ಪ್ರತಿಯೊಬ್ಬ ನಾಗರಿಕರೂ ಕೇಳುತ್ತಿದ್ದಾರೆ. ಮುಖ್ಯಮಂತ್ರಿಯನ್ನು ವಾರಗಳ ಹಿಂದೆಯೇ ಹುದ್ದೆಯಿಂದ ವಜಾಗೊಳಿಸಬೇಕಿತ್ತು, ಆದರೂ ಕೇಂದ್ರ ಸರಕಾರದಲ್ಲಿನ ತನ್ನ ಧಣಿಗಳ ಆಶೀರ್ವಾದದೊಂದಿಗೆ ಅವರಿನ್ನೂ ಅಧಿಕಾರದಲ್ಲಿದ್ದಾರೆ.
ತಾವು ತಪ್ಪುಮಾಡಿದ್ದೇವೆ ಎಂದು ಒಪ್ಪಿಕೊಳ್ಳಲು ಮೋದಿ ಆಡಳಿತ ಸಂಪೂರ್ಣ ನಿರಾಕರಿಸುವುದು ಬಿರೇನ್ ಸಿಂಗ್ ಅಧಿಕಾರದಲ್ಲಿರಲು ಒಂದು ಪ್ರಮುಖ ಕಾರಣ. ಇದು ಈ ಹಿಂದೆ ಹಲವಾರು ಬಾರಿ ಸಾಬೀತಾಗಿದೆ. ಮೋದಿ ಸರಕಾರ ಅದೆಷ್ಟೇ ದೊಡ್ಡ ಪ್ರಮಾದ ಮಾಡಿದರೂ, ಅದರ ಪರಿಣಾಮ ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದರೂ ಅದು ತಪ್ಪುಎಂದು ಒಪ್ಪಿಕೊಳ್ಳುವುದೇ ಇಲ್ಲ.
ನೋಟು ನಿಷೇಧದಿಂದಾಗಿ ಆದ ಆರ್ಥಿಕ ನಷ್ಟಗಳು, ಕೋವಿಡ್ ಸಂದರ್ಭದಲ್ಲಿ ಸರಿಯಾದ ಯೋಜನೆಯಿಲ್ಲದ ಲಾಕ್ಡೌನ್ಗಳಿಂದ ಉಂಟಾದ ಸಾಮಾಜಿಕ ಸಂಕಷ್ಟಗಳು, ಚೀನಾ ಸೇನೆಯಿಂದ ಭಾರತದ ಸಾವಿರಾರು ಚದರ ಕಿ.ಮೀ.ಗಳಷ್ಟು ಭೂಪ್ರದೇಶದ ಅತಿಕ್ರಮಣ - ಈ ಎಲ್ಲ ವೈಫಲ್ಯಗಳು ಮೋದಿ ಸರಕಾರದ ನೀತಿಯಲ್ಲಿ ಯಾವುದೇ ಬದಲಾವಣೆಗಳಿಗೆ ಕಾರಣವಾಗಲಿಲ್ಲ.
ಬಿಜೆಪಿಯ ಪವರ್ ಫುಲ್ ಜೋಡಿ ಚುನಾವಣಾ ಹೊರೆ ಎಂದು ಕಂಡರೆ ಯಾವುದೇ ಸಿಎಂ ಅನ್ನು ತಕ್ಷಣ ಬದಲಾಯಿಸುತ್ತದೆ. ಆದರೆ ಈಗ ಬಿರೇನ್ ಸಿಂಗ್ರನ್ನು ವಜಾಗೊಳಿಸಿದರೆ ಅವರು ಮತ್ತು ಅವರ ಪಕ್ಷವು ಬಿಕ್ಕಟ್ಟನ್ನು ತಪ್ಪಾಗಿ ನಿರ್ವಹಿಸಿದೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ.
ಅಲ್ಲದೆ ಬಿಜೆಪಿ ಹೊಸ ಮುಖ್ಯಮಂತ್ರಿಯನ್ನು ನೇಮಕ ಗೊಳಿಸಿದರೆ ಅದರ ಬೆನ್ನಿಗೇ ಕೇಂದ್ರ ಗೃಹಸಚಿವರ ರಾಜೀನಾಮೆಗೆ ಆಗ್ರಹವೂ ಕೇಳಿಬರಬಹುದು.
ಇದು ನ್ಯಾಯಸಮ್ಮತ ಬೇಡಿಕೆಯೂ ಹೌದು ಎನ್ನುತ್ತಾರೆ ರಾಮಚಂದ್ರ ಗುಹಾ.
ಗೃಹ ಸಚಿವರು ಮಣಿಪುರಕ್ಕೆ ಒಮ್ಮೆ ಭೇಟಿ ನೀಡಿದ್ದರಾದರೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೂ ಪ್ರಧಾನಿ ಬಳಿಕ ನಂಬರ್ ಟು ಆಗಿರುವ ಅಮಿತ್ ಶಾ ಅವರ ರಾಜೀನಾಮೆ ಕೇಳುವ ಧೈರ್ಯ ಬಿಜೆಪಿಯಲ್ಲಿ ಯಾರಿಗೂ ಇಲ್ಲ.
ಅಂತಿಮವಾಗಿ ಮತ್ತು ಪ್ರಾಯಶಃ ಅತ್ಯಂತ ನಿರ್ಣಾಯಕವಾಗಿ, ಮಣಿಪುರದ ಹಾಲಿ ಮುಖ್ಯಮಂತ್ರಿಯನ್ನು ವಜಾಗೊಳಿಸುವುದು 2002ರ ದಂಗೆಗಳ ಬಳಿಕ ಗುಜರಾತ್ ಮುಖ್ಯಮಂತ್ರಿಯನ್ನು ವಜಾಗೊಳಿಸುವಲ್ಲಿ ಬಿಜೆಪಿಯ ವೈಫಲ್ಯದ ಕುರಿತು ಅಹಿತಕರ ಪ್ರಶ್ನೆಗಳಿಗೆ ಕಾರಣವಾಗುತ್ತದೆ.
ಎಲ್ಲರಿಗೂ ಗೊತ್ತಿರುವಂತೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ‘ರಾಜಧರ್ಮ’ವನ್ನು ಪಾಲಿಸದೆ ಇದ್ದಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಛೀಮಾರಿ ಹಾಕಿದ ಬಳಿಕ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಸಲು ಬಯಸಿದ್ದರು. ಆದರೆ ಹಾಗೆ ಮಾಡದಂತೆ ಎಲ್.ಕೆ.ಅಡ್ವಾಣಿ ಮತ್ತು ಅರುಣ್ ಜೇಟ್ಲಿಯವರಂತಹ ಹಿರಿಯ ಸಂಪುಟ ಸಹೋದ್ಯೋಗಿಗಳು ಅವರ ಮನವೊಲಿಸಿದ್ದರು.
ಆಗ ಗುಜರಾತಿನಲ್ಲಿಯ ಮತ್ತು ಈಗ ಮಣಿಪುರದಲ್ಲಿನ ಬೆಳವಣಿಗೆಗಳು ಸದ್ಯ ಅತ್ಯಂತ ನಿಕಟವಾಗಿವೆ. ತನ್ನದೇ ಹಿಂದಿನ ಆ ಕಹಿ ನೆನಪಿನಿಂದಾಗಿ ಪ್ರಧಾನಿಯವರಿಗೆ ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆ ಕೇಳಲು ಸಾಧ್ಯವಿಲ್ಲ. ರಾಜಧರ್ಮವನ್ನು ಪಾಲಿಸುವಂತೆ ಮಣಿಪುರ ಮುಖ್ಯಮಂತ್ರಿಗೆ ಸೂಚಿಸಲೂ ಅವರಿಗೆ ಸಾಧ್ಯವಿಲ್ಲ.
ಇದು ರಾಮಚಂದ್ರ ಗುಹಾ ಅವರು ಹೇಳುವ ಕಾರಣ.
ಅವರ ಪ್ರಕಾರ ಇಂದು ಮಣಿಪುರದಲ್ಲಿಯ ಸ್ಥಿತಿಯು 1980ರ ದಶಕದಲ್ಲಿ ಪಂಜಾಬ್, 1990ರ ದಶಕದಲ್ಲಿ ಜಮ್ಮು-ಕಾಶ್ಮೀರ ಮತ್ತು 2000ದ ದಶಕದಲ್ಲಿ ಗುಜರಾತ್ ಎದುರಿಸಿದ್ದ ಸ್ಥಿತಿಗಿಂತ ಹೆಚ್ಚು ಗಂಭೀರವಾಗಿದೆ. ಪ್ರಸ್ತುತ ಪರಸ್ಪರ ಕಟ್ಟಾ ವಿರೋಧಿಗಳಾಗಿರುವ ಸಮುದಾಯಗಳ ನಡುವಿನ ಬಿರುಕನ್ನು ಮುಚ್ಚುವ ಮೊದಲ ಹೆಜ್ಜೆಯಾಗಿ, ಸರಕಾರದ ಸಾಮಾಜಿಕ ನಂಬಿಕೆ ಮತ್ತು ಅಧಿಕಾರದ ಮರುಸ್ಥಾಪನೆ ಆರಂಭಿಸಲು ಹಾಲಿ ಮುಖ್ಯಮಂತ್ರಿಯನ್ನು ಬದಲಿಸುವುದು ಮೊದಲ ಕಡ್ಡಾಯ ಹೆಜ್ಜೆಯಾಗಿದೆ.
ನೈತಿಕತೆ ಮತ್ತು ವಾಸ್ತವಿಕತೆ -ಇವೆರಡೂ ದೃಷ್ಟಿಯಲ್ಲಿ ಬಿರೇನ್ ಸಿಂಗ್ ತಮ್ಮ ಹುದ್ದೆಯಿಂದ ಕೂಡಲೇ ಕೆಳಗಿಳಿಯಬೇಕು.
ದುರಂತವೆಂದರೆ ಈಗ ಹೀಗಾಗುವ ಸಾಧ್ಯತೆಯಿಲ್ಲ ಎನ್ನುತ್ತಾರೆ ಗುಹಾ. ಏಕೆಂದರೆ ಸಿಂಗ್ ಅನಿವಾರ್ಯ ಕಾರಣಗಳಿಂದಾಗಿ ದೇಶದ ಇಬ್ಬರು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಾದ ಪ್ರಧಾನಿ ಮತ್ತು ಗೃಹಸಚಿವರ ಸಂಪೂರ್ಣ ರಕ್ಷಣೆಯಲ್ಲಿದ್ದಾರೆ.
ಸುಮಾರು 15 ಲಕ್ಷದಷ್ಟು ಕೇಂದ್ರ ರಕ್ಷಣಾ ಪಡೆಗಳ ಸಿಬ್ಬಂದಿ ಇರುವ ಪ್ರಧಾನಿ ಮತ್ತು ಗೃಹ ಸಚಿವರು 30 ಲಕ್ಷ ಜನಸಂಖ್ಯೆ ಇರುವ ಒಂದು ರಾಜ್ಯದಲ್ಲಿ ಹಿಂಸಾಚಾರ ತಡೆಯಲು 80 ದಿನಗಳಾದರೂ ವಿಫಲವಾಗಿದ್ದನ್ನು ಈ ದೇಶ ಇನ್ನೂ ನೋಡುತ್ತಾ ನಿಂತಿದೆ.