ಎನ್ಸಿಎಫ್ ಮತ್ತು ಪೊಸಿಶನ್ ಪೇಪರ್ಸ್ ಪಠ್ಯಗಳ ಬ್ರಾಹ್ಮಣೀಕರಣ
ಕರ್ನಾಟಕದ ಹಿಂದಿನ ಬಿಜೆಪಿ ಸರಕಾರವು ‘ಎನ್ಇಪಿ 2020’ ಶಿಫಾರಸಿನ ಅಡಿಯಲ್ಲಿ, ಹೊಸ ‘ಎನ್ಸಿಎಫ್’ (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ರಚನೆ ಪ್ರಕ್ರಿಯೆಯ ಭಾಗವಾಗಿ ‘ಪೊಸಿಶನ್ ಪೇಪರ್ಸ್’ (ಪೊಪೇ) ರೂಪಿಸಲು ಸಮಿತಿಯನ್ನು ರಚಿಸಿತ್ತು. ಒಂಭತ್ತು ಸದಸ್ಯರ ಈ ಸಮಿತಿಯು 27 ಪೊಪೇ ಬಿಡುಗಡೆ ಮಾಡಿದೆ. ಶಿಕ್ಷಣದಲ್ಲಿ ತತ್ವಶಾಸ್ತ್ರ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನ, ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರ, ಸಮಾಜ ವಿಜ್ಞಾನದಲ್ಲಿ ಶಿಕ್ಷಣ, ಕಲಾ ಶಿಕ್ಷಣ, ವೃತ್ತಿಪರ ಶಿಕ್ಷಣ, ವಿಜ್ಞಾನ ಶಿಕ್ಷಣ, ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ, ಭಾಷಾ ಶಿಕ್ಷಣ, ಪರಿಸರ ಶಿಕ್ಷಣ, ಆರೋಗ್ಯ ಮತ್ತು ಯೋಗಕ್ಷೇಮ, ಭಾರತದ ಜ್ಞಾನ, ಲಿಂಗತ್ವ ಶಿಕ್ಷಣ, ವೌಲ್ಯ ಶಿಕ್ಷಣ, ಸಮಯೋಜಿತ ಶಿಕ್ಷಣ, ಶಿಕ್ಷಕರ ಶಿಕ್ಷಣ, ಒಳಗೊಂಡಂತೆ 27 ‘ಪೊಪೇ’ಗಳಿವೆ. ಲಿಂಕ್ನ್ನು ಬಳಸಿಕೊಂಡು ಈ ‘ಪೊಪೇ’ಗಳನ್ನು ಓದಬಹುದು ಮತ್ತು ಪರಾಮರ್ಶಿಸಬಹುದು.
ಈ ಪೊಪೇಗಳಲ್ಲಿ ಒಂದಾದ ‘ಭಾರತದ ಜ್ಞಾನ’ ಕುರಿತಾದ 32 ಪುಟಗಳ ಕರಡನ್ನು ಓದಿದಾಗ ಎನ್ಇಪಿ ಹೆಸರಿನಲ್ಲಿ ಶಿಕ್ಷಣ ಬ್ರಾಹ್ಮಣೀಕರಣದ ಪೂರ್ವ ಸಿದ್ಧತೆಗಳು ಬಯಲಾಗುತ್ತದೆ. ಈ ಸಮಿತಿಯಲ್ಲಿ ಡಾ ವಿ. ರಾಮನಾಥನ್ ಅಧ್ಯಕ್ಷರಾಗಿದ್ದಾರೆ. ಇವರ ಶೈಕ್ಷಣಿಕ ಹಿನ್ನಲೆ ಮತ್ತು ಅನುಭವದ ಮಾಹಿತಿ ಲಭ್ಯವಿಲ್ಲ. ಅಂತರ್ಜಾಲ ತಾಣದಲ್ಲಿ ಹುಡುಕಿದಾಗ ಬನಾರಸ್ ಹಿಂದೂ ವಿವಿಯ ಐಐಟಿನಲ್ಲಿ ಸಹಾಯಕ ಪ್ರಾಧ್ಯಾಪಕರು ಎಂದು ಮಾಹಿತಿ ದೊರಕುತ್ತದೆ. ಇದು ನಿಜವಾಗಿದ್ದರೆ ‘ಭಾರತದ ಜ್ಞಾನ’ದಂತಹ ಬಹು ಮುಖ್ಯ ದಸ್ತಾವೇಜಿಗೆ ಒಬ್ಬ ಸಹಾಯಕ ಪ್ರಾಧ್ಯಾಪಕರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ಉಳಿದಂತೆ ಈ ಸಮಿತಿಯ ಸದಸ್ಯರ ಪೈಕಿ ವಿನಾಯಕ ರಜತ ಭಟ್ ಎನ್ನುವವರು ಆರೆಸ್ಸೆಸ್ನ ಸಿದ್ಧಾಂತವನ್ನು ಬೆಂಬಲಿಸುವ ‘ಚಾಣಕ್ಯ ವಿವಿ’ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದಂತೆ ಆರು ಸದಸ್ಯರು ಮತ್ತು ಒಬ್ಬ ಸಂಯೋಜಕರಿದ್ದಾರೆ. ಈ ಸಮಿತಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಿದ್ದಾರೆಯೇ ಎನ್ನುವ ಮಾಹಿತಿಯೂ ದೊರಕುತ್ತಿಲ್ಲ. ‘ಭಾರತದ ಜ್ಞಾನ’ದ ಕುರಿತು ಬರೆಯಲು ಈ ಸದಸ್ಯರ ಅರ್ಹತೆಗಳೇನು ಎನ್ನುವ ಪ್ರಶ್ನೆಗೆ ಉತ್ತರಗಳು ದೊರಕುವುದಿಲ್ಲ. ಸಾರಾಂಶದಲ್ಲಿ ಸಮಿತಿಯ ರಚನೆಯ ಸ್ವರೂಪವೇ ಆರೆಸ್ಸೆಸ್ನ ಅಂಗ ರಚನೆಯಂತಿದೆ. ಭಾರತವು ಮುಸ್ಲಿಮರ ಆಡಳಿತವನ್ನು ಒಳಗೊಂಡಂತೆ ಸಾವಿರ ವರ್ಷಗಳ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿತ್ತು ಎನ್ನುವ ಸುಳ್ಳನ್ನು ಪದೇ ಪದೇ ಪುನರಾವರ್ತಿಸುವುದು ಇವರ ಕಾರ್ಯಸೂಚಿಯನ್ನು ವಿವರಿಸುತ್ತದೆ. ವಸಾಹತುಶಾಹಿ ವ್ಯವಸ್ಥೆಯಿಂದ ವಸಾಹತೋತ್ತರ ವ್ಯವಸ್ಥೆಯಲ್ಲಿರುವ ಇಂಡಿಯಾ ದೇಶವು ಆರೆಸ್ಸೆಸ್ನ ಬ್ರಾಹ್ಮಣೀಕರಣದ ನವ ವಸಾಹತುಶಾಹಿಯ ಹೊಸ್ತಿಲಲ್ಲಿದೆ. ಈ ‘ಪೊಪೇ’ನ ವಿಷಯಗಳ ಆಯ್ಕೆ ಮತ್ತು ಮಂಡನೆ ಇದನ್ನು ಪುಷ್ಟೀಕರಿಸುತ್ತದೆ. ‘ಪೊಪೇ’ ಕಾರ್ಯಸೂಚಿಗಳು
‘ಪೊಪೇ’ ಮುಖ್ಯ ದಸ್ತಾವೇಜು ‘ಭಾರತದ ಜ್ಞಾನ’ವನ್ನು ಕೂಲಂಕಷವಾಗಿ ಓದಿದಾಗ ಇದರ ಅಂತರಂಗ ಮತ್ತು ಬಹಿರಂಗ ಉದ್ದೇಶಗಳಾದ ಆರೆಸ್ಸೆಸ್ನ ಚಾತುರ್ವರ್ಣ ಸಿದ್ಧಾಂತ ಪ್ರತಿಪಾದನೆ, ಶಿಕ್ಷಣ ಬ್ರಾಹ್ಮಣೀಕರಣದ ಹುನ್ನಾರಗಳು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತದೆ. ಈ ಭಾರತದ ಜ್ಞಾನ ಸಮಿತಿಯ ಅಭಿಪ್ರಾಯಗಳು, ಸಲಹೆಗಳು ಈ ಕೆಳಗಿನಂತಿವೆ: ಆರಂಭದಿಂದಲೇ ‘‘ಭಾರತವೆಂದರೆ ಏನು?’’ ಎನ್ನುವ ಪ್ರಶ್ನೆ ಕೇಳುತ್ತಾ ವಿಷ್ಣು ಪುರಾಣದಲ್ಲಿ ಬರುವ ಉತ್ತರದಲ್ಲಿ ಸಾಗರಗಳ ದಕ್ಷಿಣದಲ್ಲಿ ಹಿಮಾಲಯಗಳ ಪ್ರದೇಶವೆಂದು ಉಲ್ಲೇಖಿಸುತ್ತಾರೆ. ಜೊತೆಗೆ ಸಂಗಂ ಸಾಹಿತ್ಯದಿಂದಲೂ ಉದಾಹರಿಸುತ್ತಾರೆ. ಶ್ರೀ ರಾಮಚಂದ್ರ ಹೇಳಿದ್ದಾರೆ ಎಂದು ‘‘ಜನನಿ ಜನ್ಮ ಭೂಮಿ, ಸ್ವರ್ಗಾದಯಿ..’’ ಸಾಲುಗಳನ್ನು, ಬಂಕಿಮಚಂದ್ರ ಚಟರ್ಜಿಯವರ ‘ವಂದೇಮಾತರಂ’ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಇದು ‘ಭಾರತ ಮಾತೆ’ಯ ಕಲ್ಪನೆ ಎಂದು ಹೇಳುತ್ತಾರೆ. ಇಂಡಾಲಜಿಸ್ಟ್ ಸಿಲ್ವಿಯನ್ ಲೆವಿಯವರ ‘‘ಪರ್ಸಿಯಾದಿಂದ ಚೀನಾದ ಸಮುದ್ರದವರೆಗೆ ಸೈಬಿರಿಯಾದ ಮುಂಜುಗಡ್ಡೆಯಿಂದ ಜಾವಾ ಮತ್ತು ಬೋರ್ನಿಯೋವರೆಗೆ ಭಾರತ ಮಾತೆ ತನ್ನ ನಾಗರಿಕತೆ ಮತ್ತು ವಿಚಾರಗಳನ್ನು ಬಿತ್ತಿದ್ದಾಳೆ..’’ ಎನ್ನುವ ಸಾಲುಗಳನ್ನು ಉದ್ಧರಿಸುತ್ತಾರೆ. ‘ಸ್ವಾತಂತ್ರ್ಯದ ನಂತರದ ಕೇಂದ್ರ ಮತ್ತು ರಾಜ್ಯ ಶಿಕ್ಷಣ ಪದ್ಧತಿಯು ಸೆಕ್ಯುಲರಿಸಂನ ಹೆಸರಿನಲ್ಲಿ ಇಲ್ಲಿನ ಪ್ರಾಚೀನ ಭಾರತದ ಭವ್ಯ ಪರಂಪರೆಯನ್ನು ತಿರಸ್ಕರಿಸಿದ್ದಾರೆ, ನಮ್ಮ ಬೇರುಗಳನ್ನು ಕಿತ್ತು ಹಾಕಿದ್ದಾರೆ. ಇಂದಿನ ಯುವಜನತೆಗೆ ಭಾರತದ ಹಿಂದಿನ ವೈಭವ, ಆ ಜ್ಞಾನ ಪರಂಪರೆ ಗೊತ್ತಿಲ್ಲ’ ಎಂದು ಬರೆಯುತ್ತಾರೆ. ಎಸ್. ರಾಧಾಕೃಷ್ಣನ್, ವಿವೇಕಾನಂದ ಅವರ ಬರಹಗಳ ಸಾಲುಗಳನ್ನು ಪ್ರಸ್ತಾಪಿಸುತ್ತಾ ಸುನೀತಾ ಶ್ರೀಧರನ್ ಎಂಬವರ ‘‘ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಈ ಪಾರಂಪರಿಕ ಜ್ಞಾನವನ್ನು ದಾಟಿಸುತ್ತಾ ಬರಲಾಗಿದೆ’’ ಎನ್ನುವ ಮಾತುಗಳನ್ನು ಉಲ್ಲೇಖಿಸುತ್ತಾರೆ. ಶಾಲಾ ಶಿಕ್ಷಣದ ಮುಖ್ಯವಾದ ವಿಚಾರವೆಂದರೆ ಪ್ರತಿಯೊಬ್ಬರಿಗೂ ತಮ್ಮ ಅಸ್ಮಿತೆಯೆಂದರೆ ಅದು ಅವರ ದೇಶ, ಪ್ರತಿಯೊಬ್ಬರೂ ತಮ್ಮ ದೇಶದ ರಾಯಭಾರಿಗಳು. ಇವರಿಗೆ (ಹಿಂದೂಗಳಿಗೆ) ತಮ್ಮ ದೇಶದ ಕುರಿತಾದ ಜ್ಞಾನವಿರಬೇಕಾಗುತ್ತದೆ ಎಂದು ಹೇಳುತ್ತಾರೆ. ಸಾವಿರಾರು ವರ್ಷಗಳಿಂದ ಭಾರತವು ಜ್ಞಾನವನ್ನು ಕೊಡುತ್ತಲೇ ಬಂದಿದೆ ಎಂದು ಬರೆದುಕೊಂಡು ಹೆಮ್ಮೆ ಪಡುತ್ತಾರೆ. ಈ ಮೂಲಕ ಭಾರತೀಯ ಜ್ಞಾನದ ಹೆಸರಿನಲ್ಲಿ ‘ಬ್ರಾಹ್ಮಣೀಯತೆ’ ಸಿದ್ಧಾಂತಕ್ಕೆ ಪೀಠಿಕೆ ಹಾಕುತ್ತಾರೆ. ಆರ್ಯಭಟ, ಭಾಸ್ಕರ ಪುಸ್ತಕಗಳಲ್ಲಿ ಭಾರತದ ಗಣಿತಜ್ಞರು, ಖಗೋಳಶಾಸ್ತ್ರಜ್ಞರ ಕುರಿತಾದ ಮಾಹಿತಿಗಳಿದ್ದವು. ಆದರೆ ಈ ಪಠ್ಯಪುಸ್ತಕಗಳನ್ನು ನಿರ್ಲಕ್ಷಿಸಿ, ಅದರ ವಿಚಾರಗಳಿಗೆ ಮಹತ್ವ ಕೊಡದೆ ಟ್ರಂಕ್ನಲ್ಲಿ ಮುಚ್ಚಿಟ್ಟದ್ದರು. ಈಗ ಇದನ್ನು ತೆರೆದು ಭಾರತದ ಜ್ಞಾನವನ್ನು ಮರಳಿ ಬೋಧಿಸಬೇಕಾಗಿದೆ ಎಂದು ಹೇಳುತ್ತಾರೆ. ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಆರ್ಯಭಟರ ಕೊಡುಗೆ, ಕುಟ್ಟಕರ ಬೀಜಗಣಿತವನ್ನು ಸಹ ಮರೆಮಾಚಿದ್ದಾರೆ ಎಂದು ಬರೆಯುತ್ತಾರೆ. ಪ್ರಾಚೀನ ಭಾರತದ ಸಂಖ್ಯಾಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಲಿಲ್ಲ. ಭೂತ ಸಾಂಖ್ಯ, ಕಥಪಾಯಡಿ ಸಾಂಖ್ಯದಂತಹ ಪಠ್ಯಗಳನ್ನು ಬೋಧಿಸಲಿಲ್ಲ. ಇವು ಭಾರತದ ಜ್ಞಾನ ಪರಂಪರೆಯ ಹೆಗ್ಗುರುತುಗಳು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳ ಆರ್ಥಿಕ ಭವಿಷ್ಯಕ್ಕೆ ಇದು ಅತ್ಯವಶ್ಯಕ ಎಂದು ವಿವರಿಸುತ್ತಾರೆ. ಇಂದು ವಿದ್ಯಾರ್ಥಿಗಳು ಪಶ್ಚಿಮ ಮೂಲದ ವಿಜ್ಞಾನವನ್ನು ಕಲಿಯುತ್ತಾರೆ. ಇದು ತಪ್ಪಲ್ಲವಾದರೂ ಪ್ರಾಚೀನ ಭಾರತದ ವೈಜ್ಞಾನಿಕ ಪಠ್ಯಗಳನ್ನು, ಆಚರಣೆಗಳನ್ನು ಓದದೆ ಜ್ಞಾನದಿಂದ ವಂಚಿತರಾಗುತ್ತಾರೆ. ವೈಸೇಸಿಕರಂತಹ ಗಣಿತಜ್ಞರನ್ನು, ಸಮಾಜ ಶಾಸ್ತ್ರದಲ್ಲಿ ರುದ್ರಮದೇವಿಯಂತಹ ರಾಣಿಯರ ಕುರಿತಾದ ಪಠ್ಯಗಳಿಂದ ವಂಚಿತರಾಗಿದ್ದಾರೆ.. ಒನಕೆ ಓಬವ್ವ, ಚೆನ್ನಭೈರವದೇವಿ...ಯವರನ್ನು ನಿರ್ಲಕ್ಷಿಸಿದ್ದಾರೆ... ಹೀಗೆ ಈ ಆರೆಸ್ಸೆಸ್ ಸಮಿತಿಯ ಭಾರತೀಯ ಜ್ಞಾನದ ಪಟ್ಟಿ ಕುರಿತಾದ ಹಳಹಳಿಕೆ ಮುಂದುವರಿಯುತ್ತದೆ. ನಂತರದ ಪುಟಗಳಲ್ಲಿ ‘ಇದುವರೆಗಿನ ಶಿಕ್ಷಣದಲ್ಲಿ ಭಾರತೀಯ ಧರ್ಮ ಪರಂಪರೆಯನ್ನು ಬೋಧಿಸಲಿಲ್ಲ, 1860-1910ರ ಇತಿಹಾಸವನ್ನು ಬೋಧಿಸಲಿಲ್ಲ. ಅವಧಾನ, ಅಷ್ಠಾವಧಾನ, ಶತಾವಧಾನ, ಸಹಸ್ರಾವಧಾನದಂತಹ ಘನವೆತ್ತ ಜ್ಞಾನವನ್ನು ಬೋಧಿಸಲಿಲ್ಲ. ಸಮಾಜ ಶಾಸ್ತ್ರದಲ್ಲಿ ಆಚಾರ್ಯ ವಿದ್ಯಾರಣ್ಯರ ಕುರಿತು ಸಣ್ಣ ಪ್ರಮಾಣದಲ್ಲಿ ಹೇಳಿದ್ದಾರೆ. ಆದರೆ ಅವರು ಹರಿಹರ ಮತ್ತು ಬುಕ್ಕರನ್ನು ಹುಡುಕಿ ಬೆಳೆಸಿರುವುದನ್ನು ಹೇಳಲಿಲ್ಲ. ಆದರೆ ಪ್ರತೀ ಅಧ್ಯಾಯದಲ್ಲಿ ಕ್ರಿಶ್ಚಿಯಾನಿಟಿ, ಇಸ್ಲಾಮ್ ಧರ್ಮಗಳ ಕುರಿತಾದ ಪಠ್ಯಗಳಿವೆ, ಯುರೋಪಿಯನ್ ರಾಷ್ಟ್ರಗಳಲ್ಲಿನ ಹತ್ಯಾಕಾಂಡಗಳ ಕುರಿತು ಪಠ್ಯಗಳಿವೆ. ಶತಮಾನಗಳಿಂದ ನಡೆದ ಹಿಂದೂಗಳ ಹತ್ಯಾಕಾಂಡದ ಕುರಿತು ಪಠ್ಯಗಳಿಲ್ಲ’ ಎಂಬ ದೂರುಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದವಾಗಿ ಬೆಳೆಯುತ್ತದೆ. ಸಾರಾಂಶದಲ್ಲಿ ಈ ಸಮಿತಿಯು ವರ್ಣಾಶ್ರಮ-ಬ್ರಾಹ್ಮಣೀಕರಣ ವ್ಯವಸ್ಥೆಯ ಪರವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ‘ಭಾರತದ ಜ್ಞಾನ’ದ ಹೆಸರಿನಲ್ಲಿ ತನ್ನ ಸಾಂಸ್ಕೃತಿಕ ಬಂಡವಾಳವನ್ನು ಸ್ಥಾಪಿಸಿಕೊಳ್ಳುವುದು ಇವರ ಅಜೆಂಡಾ ಎನ್ನುವುದು ಸ್ಪಷ್ಟವಾಗುತ್ತದೆ
ಮತಧರ್ಮದ ಕುರಿತು ಬರೆಯುತ್ತಾ ‘ಧಾರ್ಮಿಕ ವಿಚಾರಗಳ ಕುರಿತು ಹೇಳಲು ಪ್ರಾರಂಭಿಸಿದೊಡನೆ ವಿವಾದ ಶುರುವಾಗುತ್ತದೆ. ಉದಾಹರಣೆಗೆ ನಮ್ಮ ಆಯುರ್ವೇದ, ಅರ್ಥಶಾಸ್ತ್ರದಂತಹ ಶಾಸ್ತ್ರಗಳ ಇತಿಹಾಸವನ್ನು ಚರ್ಚಿಸುವಾಗ ಅದು ಬ್ರಹ್ಮ, ಶಿವ, ಬೃಹಸ್ಪತಿ, ಇಂದ್ರರಿಂದ ಪ್ರಾರಂಭವಾಗುತ್ತದೆ. ಇವರು ವಿದ್ವಾಂಸರೂ ಹೌದು ಜೊತೆಗೆ ನಮ್ಮ ಪರಂಪರೆಯ ಪ್ರಕಾರ ದೇವರುಗಳು ಸಹ. ಭಾರತದ ಜ್ಞಾನದ ಕುರಿತು ಅಧ್ಯಯನಕ್ಕೆ ಇದು ತುಂಬಾ ಮುಖ್ಯವಾದ ಆಕರವಾಗಿದೆ. ಜೊತೆಗೆ ಸಂಸ್ಕೃತ ಭಾಷೆಯನ್ನು ನಿರ್ಲಕ್ಷಿಸಿರುವುದು ಸಹ ಒಂದು ತೊಡಕಾಗಿದೆ. ಸಂಸ್ಕೃತ ಭಾಷೆಯ ಸಹಾಯವಿಲ್ಲದೆ ಭಾರತದ ಜ್ಞಾನವನ್ನು ಪರಿಚಯಿಸಲು ಸಾಧ್ಯವಿಲ್ಲ. ಇದೂ ಸಹ ಒಂದು ಸವಾಲಾಗಿದೆ’ ಎಂದು ಕಟ್ಟರ್ ಜಾತಿವಾದಿಗಳಂತೆ ಬರೆಯುತ್ತಾರೆ. ಇಲ್ಲಿ ಬ್ರಾಹ್ಮಣ ಸಮಾಜದ ಆಚಾರಗಳು ಪ್ರಮುಖವಾಗಿ ಪರಿಗಣಿಸಲ್ಪಟ್ಟು ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ ಶ್ರಮಣ, ಅವೈದಿಕ, ಅಚಲ, ಬೌದ್ಧ, ಸೂಫಿ, ಅವಧೂತ ಮುಂತಾದ ನೆಲಮೂಲ ಪರಂಪರೆಗಳು ಸಂಪೂರ್ಣವಾಗಿ ಮರೆಗೆ ಸರಿಸಲ್ಪಟ್ಟಿವೆ. ಗಣಿತದಲ್ಲಿ ಪೈಥಾಗೊರಸ್ ಪ್ರಮೇಯ, ನ್ಯೂಟನ್ ತಲೆ ಮೇಲೆ ಸೇಬು ಹಣ್ಣು ಬೀಳುವ ಗುರುತ್ವಾಕರ್ಷಣೆ ಪ್ರಮೇಯ ಎಲ್ಲವೂ ‘ನಕಲಿ ಸುದ್ದಿಗಳು’ ಎಂದು ಶರಾ ಬರೆಯುತ್ತಾರೆ. ಆರೆಸ್ಸೆಸ್ನ ಅನುಸಾರ ಕಳೆದ ದಶಕಗಳಿಂದ ಭಾರತದಲ್ಲಿ ಶೈಕ್ಷಣಿಕವಾಗಿ ಅನ್ಯಾಯವಾಗಿದೆ. ಈ ಸಂಘಟನೆಯನ್ನು ಅನಧಿಕೃತವಾಗಿ ಪ್ರತಿನಿಧಿಸುವ ಸಮಿತಿಯು ಇದನ್ನು ಸರಿಪಡಿಸಲು ಅನೇಕ ಶಿಫಾರಸುಗಳನ್ನು ಮಾಡಿದೆ. ಬಹುಶಿಸ್ತೀಯ ಶಿಕ್ಷಣವನ್ನು ಬೆಂಬಲಿಸಿದ್ದಾರೆ. ಸಾವಿರಾರು ವರ್ಷಗಳ ಈ ಅನ್ಯಾಯವನ್ನು ಸರಿಪಡಿಸಲು ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಂಸ್ಕೃತ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎನ್ನುವುದು ಇವರ ಆಗ್ರಹವಾಗಿದೆ. ಸಂಸ್ಕೃತ ಭಾರತೀಯ ಭಾಷೆ ಎಂದು ಘೋಷಿಸಿದ್ದಾರೆ. ‘ಇಲ್ಲಿನ ಸೆಕ್ಯುಲರ್ಗಳು ಮಾಡಿದ ತಪ್ಪುಗಳಿಗೆ ಸಂಸ್ಕೃತ ಭಾಷೆಯೊಂದೇ ಪರಿಹಾರ’ ಎಂದು ಖಡಾಖಂಡಿತವಾಗಿ ಮಂಡಿಸುತ್ತಾರೆ. ಜ್ಞಾನವು ಹೇಗೆ ರೂಪುಗೊಂಡಿತು ಎಂದು ಕಲಿಯಲು ಜ್ಞಾನ ಮೀಮಾಂಸೆಯನ್ನು ಅಧ್ಯಯನ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ. ಮಹಾಭಾರತದ ಶಾಂತಿಪರ್ವ, ರಾಮಾಯಣ, ಅರ್ಥಶಾಸ್ತ್ರಗಳನ್ನು ಆರ್ಥಿಕತೆಯ ಹಿನ್ನೆಲೆಯಲ್ಲಿ ಬೋಧಿಸಬೇಕು. ನಾಗರಿಕತೆಯ ವಿಭಾಗದಲ್ಲಿ ಅಧ್ಯಕ್ಷಪ್ರಕಾರ, ಅರ್ಥಶಾಸ್ತ್ರದ ಧರ್ಮಸ್ತೀಯವನ್ನು ಬೋಧಿಸಬೇಕು. ಜೀವಶಾಸ್ತ್ರದಲ್ಲಿ ಪಂಚ ಮಹಾಭೂತ, ತ್ರಿದೋಶ ಸಿದ್ಧಾಂತ, ಆರು ರಸ ಹೀಗೆ ತಮ್ಮ ಮನಸ್ಸಿಗೆ ತೋಚಿದ್ದನ್ನು ಸೂಚಿಸುತ್ತಾ ಹೋಗಿದ್ದಾರೆ. ಇತಿಹಾಸದ ಪಠ್ಯಕ್ರಮ ಕುರಿತಂತೆ ಸಂಪೂರ್ಣವಾಗಿ ಆರೆಸ್ಸೆಸ್ ಸಿದ್ಧಾಂತಗಳನ್ನು ಶಿಫಾರಸು ಮಾಡಿದ್ದಾರೆ. ಸಾರಾಂಶದಲ್ಲಿ ಇಡೀ ಪುಟಗಳ ತುಂಬಾ ಜ್ಞಾನದ ಹೆಸರಿನಲ್ಲಿ ಬೂಸಾವನ್ನು ತುಂಬಿದ್ದಾರೆ
ಭಾರತೀಯ ಕ್ಲಾಸಿಕ್ ಸಾಹಿತ್ಯ ವಿಭಾಗದಲ್ಲಿ ಹನುಮಾನ್-ಸೀತಾ ಸಂವಾದ, ರಾವಣ-ಹನುಮಾನ್ಸಂವಾದ, ವಾಲಿ-ಸುಗ್ರೀವ ಸಂವಾದ, ಕೃಷ್ಣ-ಧೃತರಾಷ್ಟ್ರ ಸಂವಾದ ಪಠ್ಯಗಳು ಒಳಗೊಳ್ಳಬೇಕೆಂದು ಹೇಳಿದ್ದಾರೆ. ಸ್ಮತಿ ಅಧ್ಯಯನದಲ್ಲಿ ಮನುಸ್ಮತಿಯಲ್ಲಿರುವ ಅನೇಕ ಒಳ್ಳೆಯ ಅಂಶಗಳನ್ನು ಬೋಧಿಸಬೇಕೆಂದು ಒತ್ತಾಯಿಸಿದ್ದಾರೆ. ಬ್ರಾಹ್ಮಣರ ಸೃಷ್ಟಿಯಾಗಿರುವ ವರ್ಣಾಶ್ರಮ ಪದ್ಧತಿಯ ಉಪ ಉತ್ಪನ್ನವಾದ ಜಾತಿ ವ್ಯವಸ್ಥೆಯ ಮೂಲಕ ಅಂತ್ಯಜರನ್ನು ಶೋಷಣೆ ಮಾಡುವಂತಹ ಸಮಾಜವನ್ನು ಪೋಷಿಸಿದ್ದ ಗುಪ್ತರ ಆಡಳಿತವನ್ನು ಭಾರತೀಯ ನಾಗರಿಕತೆಯನ್ನು ರೂಪಿಸಿದ ಕಾಲವೆಂದು ಬೋಧಿಸಲು ಶಿಫಾರಸು ಮಾಡುತ್ತಾರೆ. ಬ್ರಿಟಿಷರಿಗೂ ಮುಂಚೆ ಚಾಲ್ತಿಯಲ್ಲಿದ್ದ ದೇವಾಲಯ ಕೇಂದ್ರಿತ ಶಿಕ್ಷಣವನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಅಂದರೆ ನಿರ್ವಸಾಹತೀಕರಣದ ಹೆಸರಿನಲ್ಲಿ ಶಿಕ್ಷಣವನ್ನು ಬ್ರಾಹ್ಮಣೀಕರಣಗೊಳಿಸುವುದು ‘ಭಾರತದ ಜ್ಞಾನ’ ದಸ್ತಾವೇಜಿನ ಉದ್ದೇಶವಾಗಿದೆ. ಬ್ರಾಹ್ಮಣಶಾಹಿ ಯಾಜಮಾನ್ಯವನ್ನು ಪುನರ್ಸ್ಥಾಪಿಸುವುದಕ್ಕಾಗಿ ಎನ್ಇಪಿ 2020ಯನ್ನು ಬಳಸಿಕೊಳ್ಳುತ್ತಿದ್ದಾರೆ. ಆರೋಗ್ಯ ಮತ್ತು ಸುಸ್ಥಿರತೆಗೆಂದು ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದು ತಾರತಮ್ಯವನ್ನು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಂಸ ಸೇವನೆಯಿಂದ ಜೀವನ ಅಸ್ತವ್ಯಸ್ತವಾಗುತ್ತದೆ. ನಿಮ್ಹಾನ್ಸ್ನಲ್ಲಿ ಪ್ರೊಪೆಸರ್ ಆಗಿರುವ ಜಾಣ್ ವಿಜಯ್ ಸಾಗರ್ ಅಧ್ಯಕ್ಷತೆಯ ಈ ಸಮಿತಿಯು ಸಾತ್ವಿಕ ಆಹಾರ ಸೇವಿಸಲು ಶಿಫಾರಸು ಮಾಡುತ್ತದೆ. ಬುನಾದಿ ಹಂತದ ಮಾನಸಿಕ-ಭೌತಿಕ ಆರೋಗ್ಯ ಕೋರ್ಸ್ಗಳ ಜೊತೆಗೆ ವೇದ ಮಂತ್ರಗಳು, ಭಗವದ್ಗೀತೆ, ಯೋಗ, ಪ್ರಾಣಾಯಾಮ ಮುಂತಾದವುಗಳನ್ನು ಬೋಧಿಸಬೇಕೆಂದು ಹೇಳಿದ್ದಾರೆ. ಮಂತ್ರ, ಶ್ಲೋಕ ಪಠಣಗಳು ಪಠ್ಯಕ್ರಮದ ಭಾಗವಾಗಿರಬೇಕೆಂದು ಒತ್ತಾಯಿಸಿದ್ದಾರೆ. ಹಿಂದೂ ದೇವತೆಗಳಾದ ಹನುಮಾನ್, ಭೀಮನ ಕತೆಗಳನ್ನು ಬೋಧಿಸುವುದರ ಮೂಲಕ ಮಕ್ಕಳ ಮನಸ್ಸನ್ನು ವಿಕಸಿತಗೊಳಿಸಬಹುದು ಎಂಬುದು ಈ ಸಮಿತಿಯ ಅಭಿಪ್ರಾಯ. ಯಾವುದೇ ವಿವೇಕ, ಸಾಮಾನ್ಯ ಕನಿಷ್ಠ ಜ್ಞಾನವಿಲ್ಲದ ಈ ಸಮಿತಿಯು ಅತ್ಯಂತ ಅಮಾನವೀಯವಾಗಿ ಈ ವರದಿ ಸಿದ್ಧಪಡಿಸಿದೆ. ಇಲ್ಲಿ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯನ್ನು ನಿರಾಕರಿಸಿದ್ದಾರೆ. ಇವರು ಶಿಫಾರಸು ಮಾಡುವ ವಿಚಾರಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಕೇವಲ ಕೇಶವಕೃಪಾದ ಮಾರ್ಗಸೂಚಿಗಳಿಗೆ ಬದ್ಧರಾಗಿ ದಸ್ತಾವೇಜು ರೂಪಿಸಿದ್ದಾರೆ. ಮೇಲ್ಜಾತಿ ಸಸ್ಯಾಹಾರಿಗಳನ್ನು ಕೇಂದ್ರವಾಗಿಟ್ಟುಕೊಂಡು ದಸ್ತಾವೇಜು ಮಂಡಿಸಿರುವ ಈ ಸಮಿತಿಯು ಮಾಂಸಾಹಾರವನ್ನು ಕೀಳು ಎಂಬಂತೆ ಚಿತ್ರಿಸಿರುವುದು ಅವರ ಕೀಳುಮಟ್ಟದ ಮನಸ್ಥಿತಿಯ ದ್ಯೋತಕವಾಗಿದೆ. ಅಪೌಷ್ಟಿಕತೆಯಂತಹ ಸಂಕೀರ್ಣ ಸಮಸ್ಯೆಯನ್ನು ಕೇವಲ ವೈದ್ಯಕೀಯ ವಿಷಯ ಎಂಬಂತೆ ತೇಲಿಸಿ ಅದರ ಸಮಾಜೋ-ಆರ್ಥಿಕ ಆಯಾಮ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದು ಇಂತಹ ಅಸೂಕ್ಷ್ಮ, ಜೀವವಿರೋಧಿ ದಸ್ತಾವೇಜು ಎನ್ನುವುದರಲ್ಲಿ ಅನುಮಾನವಿಲ್ಲ.
ಈ ‘ಪೊಪೇ’ಯನ್ನು ಕರ್ನಾಟಕ ಎನ್ಇಪಿ ಕಾರ್ಯಪಡೆಯ ಅಧ್ಯಕ್ಷ ಮದನ್ ಗೋಪಾಲ್ ಅವರು ಸಮರ್ಥಿಸಿಕೊಂಡಿದ್ದಾರೆ. ಅಂತಿಮವಾಗಿ ವೈಜ್ಞಾನಿಕ ಮನೋಧರ್ಮ, ಆಧುನಿಕ ಪ್ರಜ್ಞೆ, ವೈಚಾರಿಕತೆ ಮತ್ತು ಸೆಕ್ಯುಲರಿಸಂನ್ನು ಸಂಪೂರ್ಣವಾಗಿ ತಿರಸ್ಕರಿಸಿ ಶಿಕ್ಷಣ ವ್ಯವಸ್ಥೆಯನ್ನು ಭಾರತೀಕರಣದ ನೆಪದಲ್ಲಿ ಬ್ರಾಹ್ಮಣೀಕರಣಗೊಳಿಸುವುದು ಈ ಪೊಸಿಶನ್ ಪೇಪರ್ಸ್ ಸಮಿತಿಗಳ ಮುಖ್ಯ ಉದ್ದೇಶವಾಗಿದೆ. ಇಡೀ ಎನ್ಇಪಿ 2020 ಕರಡಿನಲ್ಲಿ ಈ ಭಾಗವು ಅತ್ಯಂತ ಅಪಾಯಕಾರಿಯಾಗಿದೆ.