ಹಿಂದುತ್ವವಾದಿ ರಾಜಕಾರಣಕ್ಕೆ ಜಾತಿ ಗಣತಿ ಆಧರಿತ ಮೀಸಲಾತಿ ಶ್ರೇಷ್ಠ ಪರಿಹಾರ
ದಲಿತರು, ಹಿಂದುಳಿದವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಮೂಲತಃ ಭಾರತದ ಮೂಲನಿವಾಸಿಗಳಾಗಿದ್ದು ಸಾವಿರಾರು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆ, ನ್ಯಾಯ ಮತ್ತು ಅಭಿವೃದ್ಧಿ ಅವಕಾಶಗಳಿಂದ ವಂಚಿತರಾಗಿದ್ದಾರೆ. ಬುದ್ಧ ಮತ್ತು ಸಾಮ್ರಾಟ್ ಅಶೋಕನ ಮಾರ್ಗದರ್ಶನದಲ್ಲಿ ಮೌರ್ಯ ಸಾಮ್ರಾಜ್ಯ ದೇಶವನ್ನು ಆಳಿ ಸುವರ್ಣ ಯುಗವನ್ನೇ ರೂಪಿಸಿದೆ. ಇದನ್ನು ಬಾಬಾ ಸಾಹೇಬರು ಕ್ರಾಂತಿ ಎಂಬುದಾಗಿ ಕರೆದರು. ಮೌರ್ಯರ ಕೊನೆಯ ದೊರೆ ಬೃಹದೃತನನ್ನು ಮನುವಾದದ ಪ್ರವರ್ತಕ ಪುಷ್ಯಮಿತ್ರ ಶುಂಗ ರಾಜಕೀಯ ಸಂಚನ್ನು ನಡೆಸಿ ಕೊಂದನಂತರ ಜರುಗಿದ ಮನುವಾದಿಗಳ ಅಬ್ಬರವನ್ನು ಅಂಬೇಡ್ಕರ್ ಪ್ರತಿ ಕ್ರಾಂತಿ ಎಂಬುದಾಗಿ ಪರಿಗಣಿಸಿದರು. ಮನುವಾದಿಗಳಿಂದಲೇ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳು ದುರ್ಬಲಗೊಂಡಿವೆ. ಸ್ವಾತಂತ್ರ್ಯಾ ನಂತರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವಶ್ರೇಷ್ಠ ಸಂವಿಧಾನವನ್ನು ರೂಪಿಸಿ ಸರ್ವರಿಗೂ ಸಮಬಾಳು - ಸರ್ವರಿಗೂ ಸಮಪಾಲು ಒದಗಿಸಿದರು. ಸಂವಿಧಾನದ ಆಶಯಗಳನ್ನು ಆಳುವವರು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಇಷ್ಟೊತ್ತಿಗೆ ಭಾರತವು ಪ್ರಬುದ್ಧ ಭಾರತವಾಗಿ ರೂಪುಗೊಳ್ಳುತ್ತಿತ್ತು.
ಆದರೆ ಭಾರತದಲ್ಲಿ ವರ್ಣವ್ಯವಸ್ಥೆಯನ್ನು ಬಲಪಡಿಸಿದ ವೈದಿಕಶಾಹಿ ಮತ್ತು ಅರ್ಥವ್ಯವಸ್ಥೆಯನ್ನು ನಿಯಂತ್ರಿಸಿದ ಬಂಡವಾಳಶಾಹಿ ದಲಿತರು ಮತ್ತು ಶೋಷಿತ ಸಮುದಾಯಗಳನ್ನು ವೇದ, ಉಪನಿಷತ್ತು, ಭಗವದ್ಗೀತೆ, ಮನುಧರ್ಮಶಾಸ್ತ್ರ ಮೊದಲಾದವುಗಳ ಮೂಲಕ ಅಮಾನುಷವಾಗಿ ದಮನಗೊಳಿಸಿತು. ಸುದೀರ್ಘ ಕಾಲದ ಲಂಬ ಸಾಮಾಜಿಕ ವ್ಯವಸ್ಥೆಯನ್ನು ಉಳಿಸಿಕೊಂಡು ಪ್ರಕೃತಿ ಧರ್ಮ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿ ಭಾರತದ ಮೂಲ ನಿವಾಸಿಗಳನ್ನು ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾತಂತ್ಯ ಮತ್ತು ರಾಜ್ಯಾಧಿಕಾರಗಳಿಂದ ದುರುದ್ದೇಶ ಪೂರ್ವಕವಾಗಿ ಪ್ರಭುತ್ವವಾದಿಗಳು ದೂರವಿಟ್ಟಿದ್ದಾರೆ. ಇಂತಹ ಐತಿಹಾಸಿಕ ಅನ್ಯಾಯದ ವಿರುದ್ಧ ಬಂಡೆದ್ದ ಚಾರ್ವಾಕ, ಬುದ್ಧ, ಬಸವ, ಫುಲೆ, ಪೆರಿಯಾರ್, ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಮೊದಲಾದ ಧೀಮಂತ ಚಿಂತಕರು, ದಾರ್ಶನಿಕರು ಮತ್ತು ಸಮಾಜ ಸುಧಾರಕರು ಭಾರತದಲ್ಲಿ ಅವ್ಯವಸ್ಥೆ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದಾರೆ. ಇವರ ಹೋರಾಟಗಳ ಕಾರಣದಿಂದಾಗಿ ಮನುವಾದದ ವಿರುದ್ಧ ಮಾನವತಾವಾದ, ಜಾತೀಯತೆ ವಿರುದ್ಧ ಜಾತ್ಯತೀತತೆ, ಏಕತ್ವದ ವಿರುದ್ಧ ಬಹುತ್ವ ಮತ್ತು ಏಕಸ್ವಾಮ್ಯದ ವಿರುದ್ಧ ಅಧಿಕಾರ ವಿಕೇಂದ್ರೀಕರಣ ಎಂಬ ಜೀವನ ಮೌಲ್ಯಗಳು ಗಟ್ಟಿಗೊಂಡಿವೆ.
ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರು ಮೊಗಲ್ ಆಡಳಿತದ ನಂತರ ಭಾರತಕ್ಕೆ ಬಂದು ಅವೈದಿಕರು ಮತ್ತು ದಮನಿತ ಜನವರ್ಗಗಳಿಗೆ ವಿದ್ಯೆ, ಆರೋಗ್ಯ, ಉದ್ಯೋಗ, ಮಾನವ ಹಕ್ಕು, ಸಾಮಾಜಿಕ ಸುರಕ್ಷತೆ ಮೊದಲಾದವುಗಳನ್ನು ಒದಗಿಸಿದರು. ಅವರು ಬರುವುದಕ್ಕೆ ಮುಂಚೆ ಬ್ರಾಹ್ಮಣರು, ವೈಶ್ಯರು ಮತ್ತು ಕ್ಷತ್ರಿಯರು ಶಿಕ್ಷಣ, ಆರ್ಥಿಕತೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಯಾವುದೇ ಯೋಗ್ಯತೆ ಮತ್ತು ಸಾಮರ್ಥ್ಯಗಳಿಲ್ಲದಿದ್ದರೂ ತಮ್ಮ ನಿರಂಕುಶ ಪ್ರಭುತ್ವ ಮತ್ತು ಏಕಸ್ವಾಮ್ಯಗಳನ್ನು ಮುಂದುವರಿಸಿದರು.
‘‘ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ’’ ಎಂದು ಬೊಬ್ಬಿಡುವ ಸಂಘ ಪರಿವಾರಿಗಳು ಮೂಲಭೂತವಾಗಿ ಮೂಲನಿವಾಸಿಗಳ ಸಮಾನತೆ, ಸ್ವಾತಂತ್ರ್ಯ, ಮೀಸಲಾತಿ ಮತ್ತು ಅಭಿವೃದ್ಧಿಗಳ ಪರಮ ವಿರೋಧಿಗಳು. ಇಂದು ನಮ್ಮನ್ನು ಆಳುತ್ತಿರುವ ರಾಷ್ಟ್ರೀಯ ವಿಧ್ವಂಸಕರ ಕೂಟವನ್ನು ಮತ್ತಷ್ಟು ಸಹಿಸಿಕೊಂಡರೆ ಭಾರತದ ಸಂವಿಧಾನ ಮತ್ತು ಪ್ರಜಾಸತ್ತೆಗಳು ಉಳಿಯುವುದಿಲ್ಲ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಡಬೇಕು. ಮನುವಾದಿ ಮನಸ್ಥಿತಿ ಮತ್ತು ಹುನ್ನಾರಗಳಿಂದಾಗಿ ಭಾರತದ ಬಹುಜನರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಇಂದಿಗೂ ನೀಡುವ ಸ್ಥಿತಿಯಲ್ಲಿ ಇಲ್ಲದೆ ಬೇಡುವ ಸ್ಥಿತಿಯಲ್ಲಿ ಮುಂದುವರಿದಿದ್ದಾರೆ.
ಇಂತಹ ದೈನೇಸಿ ಸ್ಥಿತಿಯಿಂದ ಭಾರತದ ಬಹುಜನರನ್ನು ಪಾರು ಮಾಡುವ ನಿಟ್ಟಿನಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರು ಭೂಸುಧಾರಣೆ ಕಾನೂನಿನ ಮುಖಾಂತರ ಉಳುವ ರೈತರಿಗೆ ಭೂಮಿ ಹಕ್ಕು, ಕಾರ್ಮಿಕರಿಗೆ ಉದ್ಯೋಗಾವಕಾಶಗಳು, ಬಡವರ ಆರ್ಥಿಕತೆಯನ್ನು ಸುಧಾರಿಸಲು ಬ್ಯಾಂಕುಗಳ ರಾಷ್ಟ್ರೀಕರಣ, ಉದ್ಯೋಗದಲ್ಲಿ ಮೀಸಲಾತಿ, ಜೀವವಿಮೆ ಸೌಲಭ್ಯ ಮೊದಲಾದವುಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು ಬಲಪಡಿಸಲು ಶ್ರಮಿಸಿದರು. ಅವರು ಅಂದು ಬಡತನ ನಿರ್ಮೂಲನೆಗೆ ಬದ್ಧರಾಗಿದ್ದರೆ ಇಂದು ನಮ್ಮನ್ನು ಆಳುತ್ತಿರುವ ಮನುವಾದಿಗಳು ಬಡವರನ್ನೇ ನಿರ್ಮೂಲನಗೊಳಿಸುವ ಕೆಟ್ಟ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅಂದು ಇಂದಿರಾಗಾಂಧಿ ದೀನ ದುರ್ಬಲರ ಏಳಿಗೆಗಾಗಿ ಬಿ.ಪಿ. ಮಂಡಲ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯವನ್ನು ವಿಸ್ತರಿಸಲು ರೂಪು ರೇಷೆಗಳನ್ನು ಸಿದ್ಧಪಡಿಸಲು ಪ್ರಯತ್ನಿಸಿದರು. ಅವರ ನಂತರ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಮೀಸಲಾತಿ ಸೌಲಭ್ಯವನ್ನು ಒದಗಿಸಿದರು. ಅಂದು ಮಂಡಲ್-ಕಮಂಡಲ್ ಸಂಘರ್ಷ 1990ರ ದಶಕದಲ್ಲಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿತ್ತು. ಮಂಡಲ್ ಆಯೋಗದ ವರದಿಯನ್ನು ತೀವ್ರವಾಗಿ ವಿರೋಧಿಸಿದ ಮನುವಾದಿಗಳು ಇಂದು ದೇಶವನ್ನು ಆಳುತ್ತಿರುವುದು ಬಹುದೊಡ್ಡ ವಿಪರ್ಯಾಸವಾಗಿದೆ.
ನೂತನ ಸಹಸ್ರ ಮಾನದಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.25ರಷ್ಟು ದಲಿತರು ಮತ್ತು ಶೇ. 60ಕ್ಕೂ ಹೆಚ್ಚು ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ವಾಸಿಸುತ್ತಿದ್ದಾರೆ. ಇವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ. ರಾಜಕೀಯ ಮೀಸಲಾತಿಯಿಂದ ದಮನಿತ ಸಮುದಾಯಗಳ ಪರಿವರ್ತನೆ ಮತ್ತು ಪ್ರಗತಿ ಸಾಧ್ಯವಿಲ್ಲ. ವಾಸ್ತವವಾಗಿ ದಲಿತರು ಮತ್ತು ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಪೂರಕವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯವನ್ನು ಜಾರಿಗೊಳಿಸಿ ಸಾಮಾಜಿಕ ನ್ಯಾಯ ವಿತರಿಸುವುದು ಸಮಕಾಲೀನ ಸಂದರ್ಭದಲ್ಲಿ ಔಚಿತ್ಯಪೂರ್ಣವಾಗಿದೆ. ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಆಡಳಿತಕ್ಕೆ ಮಾನವ ಸ್ಪರ್ಷ ನೀಡಿದ ಸಿದ್ದರಾಮಯ್ಯ 2013-2018ರ ಅವಧಿಯಲ್ಲಿ ನ್ಯಾಯಮೂರ್ತಿ ಕಾಂತರಾಜ್ ನೇತೃತ್ವದಲ್ಲಿ ದಮನಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ನೀಡಲು ಭೂಮಿಕೆಯನ್ನು ಸಿದ್ಧಪಡಿಸಿದರು. ಅವರ ನಂತರ ಕರ್ನಾಟಕದಲ್ಲಿ ರಾಜಕೀಯ ಅಧಿಕಾರಗಳಿಸಿದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಸಾಮಾಜಿಕ ಕಾಳಜಿ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆಯಿಂದ ಕಾಂತರಾಜ್ ಸಮಿತಿ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲ.
ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿಗಳು ರಾಜಕೀಯವಾಗಿ ಒಗ್ಗೂಡುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜಾತ್ಯತೀತ ಎಂದು ಅಬ್ಬರಿಸುವ ಮಾಜಿ ಪ್ರಧಾನಿ ದೇವೇಗೌಡರು ಬದುಕಿನ ಮುಸ್ಸಂಜೆಯಲ್ಲಿ ಕೋಮುವಾದಿಗಳ ಸಹವಾಸದಿಂದ ರಾಜಕೀಯವಾಗಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.
ಈಗ ಹಿಂದುತ್ವವೆಂಬ ರಾಜಕೀಯ ಸಿದ್ಧಾಂತ ಮತ್ತು ರಾಮ ಮಂದಿರ ನಿರ್ಮಾಣವೆಂಬ ಧಾರ್ಮಿಕ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಭಾರತೀಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡುವ ಭ್ರಮೆಯಲ್ಲಿರುವ ಕೋಮುವಾದಿಗಳ ಹುನ್ನಾರವನ್ನು ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಅಹಿಂಸಾತ್ಮಕವಾಗಿ ಮತ್ತು ಪ್ರಜಾಸತಾತ್ಮಕವಾಗಿ ನಿಷ್ಕ್ರಿಯಗೊಳಿಸುವ ಬಹುದೊಡ್ಡ ಅಸ್ತ್ರವೆಂದರೆ ಜನಗಣತಿ ವರದಿಯನ್ನು ಆಧರಿಸಿ ಬಹುಜನ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ರಾಜಕಾರಣ ಮೊದಲಾದ ಕ್ಷೇತ್ರಗಳಲ್ಲಿ ನ್ಯಾಯೋಚಿತ ಪಾಲು ನೀಡುವುದೇ ಆಗಿದೆ. ಸಿದ್ದರಾಮಯ್ಯ ನವರು ಆದಷ್ಟು ಬೇಗ ಕರ್ನಾಟಕದಲ್ಲಿ ಕಾಂತರಾಜ್ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಅವರ ಹಿಂದೆ ಬಹುಜನ ಬಂಧುಗಳು ಅಖಂಡವಾಗಿ ನಿಲ್ಲಬೇಕು.