ಡಾ.ರಾಜ್‌ಕುಮಾರ್ ಜನ್ಮದಿನ: 'ಅಣ್ಣಾವ್ರ' ಕುರಿತ ಕುತೂಹಲಕಾರಿ 10 ಪ್ರಮುಖ ವಿಚಾರಗಳು
ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಅಪ್ರತಿಮ ನಾಯಕ ಡಾ. ರಾಜ್ ಕುಮಾರ್ ರವರ 93ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ರಾಜ್‌ಕುಮಾರ್ ಎಪ್ರಿಲ್ 24, 1929ರಂದು ಬಡಕುಟುಂಬವೊಂದರಲ್ಲಿ ಜನಿಸಿ, ಬಳಿಕ ಕನ್ನಡ ಚಿತ್ರರಂಗದ ಅಗ್ರಗಣ್ಯರಾಗಿ ಮೂಡಿ ಬಂದರು. ಕರ್ನಾಟಕದಲ್ಲಿ ಅಣ್ಣಾವ್ರು ಎಂದೇ ಖ್ಯಾತರಾಗಿದ್ದ ಅವರಿಗೆ ʼನಟ ಸಾರ್ವಭೌಮʼ, ಬಂಗಾರದ ಮನುಷ್ಯ, ವರನಟ ಸೇರಿದಂತೆ ಹಲವು ಬಿರುದುಗಳು ದೊರೆತಿದ್ದವು.
ಕನ್ನಡ ಚಿತ್ರರಂಗದ ದಂತಕಥೆ ರಾಜ್ ಕುಮಾರ್ ರ ಕುರಿತು ಕುತೂಹಲಕಾರಿಯಾದ ಕೆಲ ಪ್ರಮುಖ ಮಾಹಿತಿಗಳು ಇಲ್ಲಿವೆ.
1. ಗಾಜನೂರಿನಲ್ಲಿ ಹುಟ್ಟಿದ್ದ ರಾಜ್ ಕುಮಾರ್ ರ ಮೊದಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಎಂದಾಗಿತ್ತು. ಅವರು ಹುಟ್ಟಿದ್ದು, ಬೆಳೆದಿದ್ದು ಬಡ ಕುಟುಂಬದಲ್ಲಾಗಿತ್ತು.
2. ಮೂರನೇ ತರಗತಿಯವರೆಗೆ ಮಾತ್ರ ರಾಜ್ ಕುಮಾರ್ ಶಾಲೆ ಕಲಿತಿದ್ದರು. ಬಳಿಕ ಅವರ ತಂದೆಯಂತೆ ಹಲವು ಊರುಗಳಿಗೆ ಪ್ರಯಾಣಿಸುತ್ತಾ ನಟಿಸಬೇಕೆಂಬ ಅದಮ್ಯ ಆಸೆಯನ್ನು ಹೊತ್ತುಕೊಂಡಿದ್ದರು.
3. ಬೇಡರ ಕಣ್ಣಪ್ಪ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ನಟಿಸಿ ಪ್ರಸಿದ್ಧರಾಗುವ ಮುಂಚೆ ರಾಜ್ ಕುಮಾರ್ ಸಪ್ತರ್ಷಿಗಳಲ್ಲಿ ಓರ್ವನಾಗಿ 1952ರಲ್ಲಿ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಿದ್ದರು. ಅದೊಂದು ಅತೀಸಣ್ಣ ಪಾತ್ರವಾಗಿತ್ತು.
4. ಸಾಮಾನ್ಯವಾಗಿ ಅವರು ವಿಲನ್ ಗಳನ್ನು ಸದೆಬಡಿಯುವ ಹೀರೋ ಆಗಿಯೇ ನಟಿಸುತ್ತಿದ್ದರು. ಆದರೆ ಅವರು ಪರದೆಯಲ್ಲಿ ಎಂದಿಗೂ ಸಿಗರೇಟ್ ಸೇದಿರಲಿಲ್ಲ. ಅಪರೂಪವೆಂಬಂತೆ ಕೆಲವೊಂದು ಬಾರಿ ಕುಡುಕನ ಪಾತ್ರದಲ್ಲಿ ನಟಿಸಿದ್ದರು. ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ವಿಲನ್ ಪಾತ್ರವನ್ನು ಮಾಡಿಯೇ ಇರಲಿಲ್ಲ.
5. ಕರ್ನಾಟಕದಲ್ಲಿ 'ಅಣ್ಣಾವ್ರು' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಏಕೈಕ ನಟ ರಾಜ್ ಕುಮಾರ್ ಆಗಿದ್ದರು.
6. ಜುಲೈ 30, 2000ದಲ್ಲಿ ರಾಜ್ ಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ತಮಿಳುನಾಡು ಸಮೀಪದ ಕಾಡಿನಲ್ಲಿ ಅವರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. 109 ದಿನಗಳ ಬಳಿಕ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಗಾಗಿ ಹಣ ಪಾವತಿಸಲಾಗಿತ್ತು ಎಂಬ ವರದಿಯನ್ನು ಅವರು ಅಲ್ಲಗಳೆದಿದ್ದರು.
7. ರಾಜ್‌ಕುಮಾರ್ ನಾಟಕದಲ್ಲಿ ಅಭಿನಯಿಸುತ್ತಿದ್ದ ಸಂದರ್ಭಗಳಲ್ಲಿ ಅವರು ಸಂಗೀತದಲ್ಲಿ ತರಬೇತಿ ಪಡೆದಿದ್ದರು. 1974ರಿಂದ ಅವರು ತಮ್ಮ ಸಿನಿಮಾಗಳಿಗೆ ತಾವೇ ಹಾಡುತ್ತಿದ್ದರು.
8. ಕನ್ನಡ ಸಿನಿಮಾ ಇತಿಹಾಸದಲ್ಲಿ ಅವರು ಒಂದೇ ಒಂದು ಇಂಗ್ಲಿಷ್ ಹಾಡನ್ನು ಹಾಡಿದ್ದರು. ಅದು ದೊರೈರಾಜ್ ಭಗವಾನ್ ನಿರ್ದೇಶಿಸಿದ್ದ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾಗಾಗಿತ್ತು.
9. 1968ರಲ್ಲಿ ನಾಯಕ ನಟನಾಗಿ ರಾಜ್ ಕುಮಾರ್ ನಟನೆಯ 16 ಸಿನಿಮಾಗಳು ಬಿಡುಗಡೆಗೊಂಡಿದ್ದವು.
10. ಅವರ ಸಿನಿಮಾ ಜೀವನದಲ್ಲಿ, ರಾಜ್‌ಕುಮಾರ್ ಹನ್ನೊಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳು, ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರು 2002 ರಲ್ಲಿ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದು, ಭಾರತೀಯ ಚಿತ್ರರಂಗಕ್ಕೆ ಜೀವಮಾನದ ಕೊಡುಗೆಗಾಗಿ 1983 ರಲ್ಲಿ ಪದ್ಮಭೂಷಣ ಮತ್ತು 1995 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.