ನಂ.1 ಸ್ಥಾನ ನನಗೆ ಮಾತ್ರ ದಕ್ಕಬೇಕೆಂಬ ಅಹಂ ಬಿಟ್ಟುಬಿಡಿ: ನಟಿ ರಮ್ಯಾ ಭಾವನಾತ್ಮಕ ಮನವಿ
ಬೆಂಗಳೂರು, ಡಿ.20: 'ಕ್ರಾಂತಿ' ಚಿತ್ರ ತಂಡ, ಡಿ. 18ರಂದು ಹೊಸಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಚಿತ್ರದ ಪ್ರಚಾರ ಸಮಾರಂಭದಲ್ಲಿ ವ್ಯಕ್ತಿಯೋರ್ವ ದರ್ಶನ್‌ರೆಡೆಗೆ ಚಪ್ಪಲಿ ತೂರಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ನಟಿ ರಮ್ಯಾ, ''ಅಭಿಮಾನಿ ಸಂಘಗಳು,ಅಭಿಮಾನಿ ಬಳಗಗಳ ನಡವಳಿಕೆ ಚಿಂತಾಜನಕ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ' ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
► ರಮ್ಯಾ ಅವರ ಟ್ವೀಟ್‌ನಲ್ಲಿ ಏನಿದೆ?
`ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್‌ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು. ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದೂ ಕಷ್ಟವಾಗಿದ್ದರೆ, ಹಲವರಿಗೆ ಮೈ ತುಂಬಾ ಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತಾ ಬಂದಿರಬಹುದು. ಹಲವರು ಇದ್ದುದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ. ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲಸಾಧ್ಯ.
ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ 1 ಮತ್ತು ಈ ಸ್ಥಾನ ನನಗೆ ಮಾತ್ರ ದಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು.
ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನೂ ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತಹ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗುತ್ತಿದೆ.
ಕನ್ನಡ ಚಿತ್ರರಂಗ ಇವತ್ತು ದೇಶ-ವಿದೇಶಗಳಲ್ಲಿ ದೊಡ್ಡ ಖ್ಯಾತಿ ಪಡೆದಿದೆ. ಐಎಂಡಿಬಿ ಉನ್ನತ 10 ಚಿತ್ರಗಳ ಪಟ್ಟಿಯಲ್ಲಿ 3 ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ, ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಫೂರ್ತಿ ಬೇಕಿದೆಯೇ? ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಅಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ, ಎಲ್ಲರಿಗೂ ಒಳಿತಾಗಲಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತುಂಬಾ ಆಘಾತಕಾರಿಯಾಗಿದೆ: ದರ್ಶನ್ ಮೇಲಿನ ಚಪ್ಪಲಿ ಎಸೆತ ಖಂಡಿಸಿದ ನಟ ಸುದೀಪ್
— Ramya/Divya Spandana (@divyaspandana) December 20, 2022