ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ತಡರಾತ್ರಿ ಭೇಟಿ ನೀಡಿದ ಪೊಲೀಸರು: ಹಲವು ಮುಖಂಡರಿಗೆ ನೋಟಿಸ್
(ಮುನೀರ್ ಕಾಟಿಪಳ್ಳ)
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರಿಗೆ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ.
ನೋಟಿಸ್ ನಲ್ಲಿ ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಅದನ್ನು ಹೋರಾಟ ಸಮಿತಿ ತಿರಸ್ಕರಿಸಿದೆ. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಡಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಮುಚ್ಚಳಿಗೆ ಬರೆದು ಕೊಡುವಂತೆ ಹೇಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ "ಗಂಡಸು" ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ" ಎಂದು ಹೇಳಿದ್ದಾರೆ.
ಪೊಲೀಸರ ಕ್ರಮದ ಕುರಿತು "ವಾರ್ತಾಭಾರತಿ"ಯೊಂದಿಗೆ ಮಾತನಾಡಿದ ಹೋರಾಟಗಾರ ಬಿ.ಕೆ. ಇಮ್ತಿಯಾಝ್, 6 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟವನ್ನು ಪೊಲೀಸರ ಮೂಲಕ ಬೆದರಿಸುವ ಕೆಲಸ ಮಾಡಲಾಗುತ್ತಿದ್ದೆ. ಆದರೆ ಇದಕ್ಕೆಲ್ಲಾ ಹೋರಾಟ ಸಮಿತಿ ಬೆದರುವ ಪ್ರಶ್ನೆಯೇ ಇಲ್ಲ. ಟೋಲ್ ಗೇಟ್ ಹೋರಾಟ ಈಗ ಕೇವಲ ಹೋರಾಟ ಸಮಿತಿಯ ಹೋರಾಟದ ಭಾಗವಾಗಿ ಮಾತ್ರ ಉಳಿದಿಲ್ಲ. ಇದು ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿದೆ. ಹಾಗಾಗಿ ಹೋರಾಟದಿಂದ ಹಿಂಜರಿಯುವ ಪ್ರಶ್ನೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.