ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಬೆಂಕಿ ಅನಾಹುತ; ಇಬ್ಬರಿಗೆ ಗಾಯ
ಮಂಗಳೂರು, ನ.19: ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕ ಮತ್ತು ಚಾಲಕ ಗಾಯಗೊಂಡಿರುವ ಘಟನೆ ನಗರದ ಕಂಕನಾಡಿ ಪೊಲೀಸ್ ಠಾಣೆ ಸಮೀಪದ ನಾಗುರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ರಿಕ್ಷಾದಲ್ಲಿ ಸ್ಪೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಆಟೋ ರಿಕ್ಷಾದ ಒಳಗಿನ ಕೆಲವು ಭಾಗಗಳು ಸುಟ್ಟು ಹೋಗಿವೆ. ಪ್ರಯಾಣಿಕನ ಬಳಿ ಇದ್ದ ಚೀಲದಲ್ಲಿದ್ದ ಪರಿಕರದಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ.
"ಆತಂಕಗೊಳ್ಳುವ ಅಗತ್ಯವಿಲ್ಲ"
ಪ್ರಯಾಣಿಕನ ಬ್ಯಾಗ್ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಆಟೋ ಚಾಲಕ ಹೇಳಿದ್ದು ಬೆಂಕಿ ಹತ್ತಿಕೊಳ್ಳಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಎಫ್ಎಸ್ಎಲ್ ತಂಡ ತಪಾಸಣೆ ನಡೆಸಲಿದೆ. ಪ್ರಯಾಣಿಕ ಮತ್ತು ಚಾಲಕನಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕರು ಆತಂಕ, ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ವದಂತಿಗಳನ್ನು ಹಬ್ಬಿಸಬಾರದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
Next Story