ಚುನಾವಣಾ ಆಯುಕ್ತರ ಮಸೂದೆ: ಪ್ರಶ್ನೆಗಳು ಮತ್ತು ಸಾಧ್ಯತೆಗಳು
- ಶ್ರಾವಸ್ತಿ ದಾಸಗುಪ್ತಾ
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ಆಯ್ಕೆ ಸಂಬಂಧ ಹೊಸ ಮಸೂದೆಯನ್ನು ಕೇಂದ್ರ ಸರಕಾರ ಮಂಡಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟ ಆಯ್ಕೆ ಸಮಿತಿಯಲ್ಲಿ ಕೇಂದ್ರ ಸರಕಾರದ ಅಧಿಕಾರವೇ ಹೆಚ್ಚಿರುವಂತೆ ನೋಡಿಕೊಳ್ಳುವ ಈ ಮಸೂದೆಯ ಮೂಲಕ ಸರಕಾರ ಚುನಾವಣಾ ಆಯೋಗದ ಮೇಲೆ ಹೊಂದಬಹುದಾದ ನಿಯಂತ್ರಣ ಕಳವಳವನ್ನು ಹುಟ್ಟುಹಾಕಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ- ೨೦೨೩ ಅನ್ನು ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಳ್ಳುವ ಮೊದಲು ಆಗಸ್ಟ್ ೧೦ರಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಇದು ಚುನಾವಣಾ ಆಯೋಗದ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿ ನಡೆಸುತ್ತಿರುವ ಯತ್ನ ಎಂದು ಆರೋಪಿಸಿದ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಮಸೂದೆ ಮಂಡನೆಯಾಯಿತು.
ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನೊಳಗೊಂಡ ಸಮಿತಿಯ ಸಲಹೆ ಮೇಲೆ ಅಧ್ಯಕ್ಷರು ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ತೀರ್ಪು ನೀಡಿತ್ತು. ಚುನಾವಣಾ ಆಯುಕ್ತರ ಆಯ್ಕೆ ವಿಧಾನವನ್ನು ರೂಪಿಸಲು ಸಂಸದೀಯ ಕಾನೂನು ಇಲ್ಲದ ಹಿನ್ನೆಲೆಯಲ್ಲಿ, ಹೊಸ ಕಾನೂನು ಬರುವವರೆಗೆ ಈ ಆಯ್ಕೆ ಸಮಿತಿ ಅಸ್ತಿತ್ವದಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಮಸೂದೆ ಹೇಳುತ್ತಿರುವುದೇನು?
ಈ ಮಸೂದೆ ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವೆಯ ನಿಯಮಗಳು ಮತ್ತು ವ್ಯವಹಾರದ ವಹಿವಾಟು) ಕಾಯ್ದೆ- ೧೯೯೧ ಅನ್ನು ರದ್ದುಗೊಳಿಸುತ್ತದೆ.
ಸಂವಿಧಾನದ ೩೨೪ನೇ ವಿಧಿಯ ಪ್ರಕಾರ, ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಅಧ್ಯಕ್ಷರು ನಿರ್ಧರಿಸಬಹುದಾದ ಇತರ ಚುನಾವಣಾ ಆಯುಕ್ತರನ್ನು (ಇಸಿಗಳು) ಒಳಗೊಂಡಿರುತ್ತದೆ. ಸಿಇಸಿ ಮತ್ತು ಇತರ ಇಸಿಗಳನ್ನು ಅಧ್ಯಕ್ಷರು ನೇಮಕ ಮಾಡುತ್ತಾರೆ.
ಹೊಸ ಮಸೂದೆ ಚುನಾವಣಾ ಆಯೋಗದ ಅದೇ ಸ್ವರೂಪವನ್ನು ಇಟ್ಟುಕೊಂಡು, ಸಿಇಸಿ ಮತ್ತು ಇತರ ಇಸಿಗಳನ್ನು ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅಧ್ಯಕ್ಷರು ನೇಮಿಸುತ್ತಾರೆ ಎಂದು ಹೇಳುತ್ತದೆ.
ಆಯ್ಕೆ ಸಮಿತಿ ಪ್ರಧಾನಿಯನ್ನು ಅಧ್ಯಕ್ಷರನ್ನಾಗಿ ಒಳಗೊಂಡಿರುತ್ತದೆ. ಸದಸ್ಯರಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಕೇಂದ್ರ ಕ್ಯಾಬಿನೆಟ್ ಮಂತ್ರಿ ಇರುತ್ತಾರೆ.
ಚುನಾವಣಾ ಆಯುಕ್ತರುಗಳ ಶೋಧನಾ ಸಮಿತಿ, ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿ ಕೇಂದ್ರ ಸರಕಾರದ ಕಾರ್ಯದರ್ಶಿಯ ಶ್ರೇಣಿಗಿಂತ ಕಡಿಮೆಯಿಲ್ಲದ ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಅದು ಆಯ್ಕೆ ಸಮಿತಿಯ ಪರಿಗಣನೆಗೆ ಐವರನ್ನು ಶಿಫಾರಸು ಮಾಡುತ್ತದೆ.
೧೯೯೧ರ ಕಾಯ್ದೆ ಇಸಿಗಳ ವೇತನ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಎಂದು ಹೇಳಿದರೆ, ಹೊಸ ಮಸೂದೆ ಸಿಇಸಿ ಮತ್ತು ಇತರ ಇಸಿಗಳ ವೇತನ, ಭತ್ತೆ ಮತ್ತು ಸೇವಾ ಷರತ್ತುಗಳು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಮವಾಗಿ ಇರುತ್ತವೆ ಎಂದು ಹೇಳುತ್ತದೆ. .
ಸಿಇಸಿ ಮತ್ತು ಇತರ ಇಸಿಗಳು ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ ಎಂಬುದು ಮಸೂದೆಯಲ್ಲಿರುವ ಮತ್ತೊಂದು ಅಂಶ.
ಚುನಾವಣಾ ಆಯೋಗದ ವ್ಯವಹಾರಗಳು ಸರ್ವಾನು ಮತದಿಂದ ನಡೆಯಲಿದ್ದು, ಭಿನ್ನಾಭಿಪ್ರಾಯ ಬಂದರೆ ಬಹುಮತದ ಮೂಲಕ ತೀರ್ಮಾನಿಸಲಾಗುವುದು.
ಸರಕಾರದ ನಿಯಂತ್ರಣ
ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯಲ್ಲಿದ್ದ ಸಿಜೆಐ ಅವರನ್ನು ಹೊರಗಿಡುವ ಮೂಲಕ ಹೊಸ ಮಸೂದೆ ಬಿಜೆಪಿ ಸರಕಾರಕ್ಕೆ ಚುನಾವಣಾ ಆಯೋಗದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ ಎಂಬುದು ಪ್ರತಿಪಕ್ಷಗಳ ಕಳವಳ.
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್ ಅವರು ‘ದಿ ವೈರ್’ಗೆ ಹೇಳಿರುವ ಪ್ರಕಾರ, ಸುಪ್ರೀಂ ಕೋರ್ಟ್ ತೀರ್ಪಿನ ನೆಲೆಯು ಸಂವಿಧಾನ ಸಭೆಯ ಅಭಿಪ್ರಾಯಗಳ ಅಭಿವ್ಯಕ್ತಿಯಾಗಿತ್ತು. ‘‘ಚುನಾವಣಾ ವ್ಯವಸ್ಥೆ ಸರಕಾರದ ನಿಯಂತ್ರಣದಿಂದ ಹೊರಗಿರಬೇಕು ಎಂಬ ವಿಚಾರದಲ್ಲಿ ಸಂವಿಧಾನ ಸಭೆ ಸಾಕಷ್ಟು ಸ್ಪಷ್ಟವಿತ್ತು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಇದನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿತ್ತು. ಆದರೆ ಮಸೂದೆ ರೂಪುಗೊಳ್ಳುವಾಗ ಇದು ಹೊರತಾಗಿದೆ.’’
ಸಿಜೆಐ ಅವರು ಆಯ್ಕೆ ಸಮಿತಿ ಸದಸ್ಯರಾಗಿರುವ ನಿಯಮ, ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದ್ದಂತೆ ಸಂಸತ್ತಿನಿಂದ ಕಾನೂನನ್ನು ರಚಿಸುವವರೆಗೆ ಮಾತ್ರ. ಒಂದು ಅರ್ಥದಲ್ಲಿ, ಭಾರತದ ಮುಖ್ಯ ನ್ಯಾಯಾಧೀಶರ ಬದಲು ಕ್ಯಾಬಿನೆಟ್ ಮಂತ್ರಿಯನ್ನು ತರಲಾಗಿದೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ ಮಾಡಿದ ವ್ಯವಸ್ಥೆ ಕೇವಲ ಮಧ್ಯಂತರವಾಗಿತ್ತು ಎನ್ನುತ್ತಾರೆ ಅವರು.
‘ಅಂಪೈರ್ ನಾಯಕನ ಅಧೀನನಲ್ಲ’
ಮಾಜಿ ಮುಖ್ಯ ಚುನಾವಣಾ ಆಯುಕ್ತರೊಬ್ಬರ ಪ್ರಕಾರ, ಹೊಸ ಶಾಸನದ ಪ್ರಮುಖ ಅಂಶವೆಂದರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಮನಾಗಿದ್ದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ಸ್ಥಾನಮಾನವನ್ನು ಕ್ಯಾಬಿನೆಟ್ ಕಾರ್ಯದರ್ಶಿಯ ಸ್ಥಾನಕ್ಕೆ ಇಳಿಸಿರುವುದು.
ವಾಸ್ತವವೇನೆಂದರೆ, ಕ್ಯಾಬಿನೆಟ್ ಕಾರ್ಯದರ್ಶಿ ನೇರವಾಗಿ ಸರಕಾರದ ಅಡಿಯಲ್ಲಿ ರುತ್ತಾರೆ. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆ ಅಗತ್ಯ ಬಿದ್ದರೆ ಮಂತ್ರಿಗಳು ಮತ್ತು ಪ್ರಧಾನಮಂತ್ರಿಗಳನ್ನು ಪ್ರಶ್ನಿಸಬಹುದು. ಅಂಥ ಹುದ್ದೆಯನ್ನು ಸರಕಾರ ಹೇಗೆ ತನ್ನ ಅಧೀನದಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಯೊಂದಿಗೆ ಸಮೀಕರಿಸುತ್ತದೆ ಎಂಬುದು ಅವರ ಪ್ರಶ್ನೆ.
ಕ್ಯಾಬಿನೆಟ್ ಕಾರ್ಯದರ್ಶಿ ದೇಶದ ಅತ್ಯುನ್ನತ ನಾಗರಿಕ ಸೇವಕರಾಗಿರಬಹುದು. ಆದರೆ ನೇರವಾಗಿ ಸರಕಾರದ ಅಡಿಯಲ್ಲಿದ್ದಾರೆ. ಚುನಾವಣಾ ಆಯುಕ್ತರಿಗೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸ್ಥಾನಮಾನವನ್ನು ನೀಡುವುದರಿಂದ ಅದು ಅವರಿಗೆ ಹೆಚ್ಚಿನ ಹತೋಟಿಯನ್ನು ನೀಡುತ್ತದೆ. ಅದು ಅವರನ್ನು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸಮೀಕರಿಸಿದಾಗ ಹಾಗಲ್ಲ. ತಂಡದ ನಾಯಕನಿಗೆ ಅಂಪೈರ್ ಅಧೀನವಾಗಿ ರುವುದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.
‘‘ಚುನಾವಣಾ ಆಯುಕ್ತರ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಕ್ಯಾಬಿನೆಟ್ ಕಾರ್ಯದರ್ಶಿಗೆ ಇಳಿಸುವ ಬಗ್ಗೆ ಮಸೂದೆಯಲ್ಲಿ ವಿವರಿಸಲಾಗಿಲ್ಲ. ಇದು ಆರ್ಥಿಕವಾಗಿ ಸಣ್ಣ ವಿಷಯ. ಆದರೆ ಇದು ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ’’ ಎನ್ನುತ್ತಾರೆ ಅವರು.
‘‘ಕ್ಯಾಬಿನೆಟ್ ಮಂತ್ರಿಯ ಬದಲು, ಸಿಜೆಐ ಅಥವಾ ಅವರ ನಾಮನಿರ್ದೇಶಿತರನ್ನು ಹೊಂದಲು ಯಾವುದೇ ಆಕ್ಷೇಪಣೆ ಇದ್ದಲ್ಲಿ ಲೋಕಸಭೆಯ ಸ್ಪೀಕರ್, ನಿವೃತ್ತ ಸಿಜೆಐ ಅಥವಾ ಪ್ರಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಆ ಸ್ಥಾನದಲ್ಲಿ ಪರಿಗಣಿಸಬಹುದಿತ್ತು’’ ಎಂಬುದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಅಭಿಪ್ರಾಯ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಅವರು, ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕರ ಸೇರ್ಪಡೆ ಒಂದು ಸುಧಾರಣೆ. ಮೊದಲು ಸರಕಾರ ಮಾತ್ರ ನಿರ್ಧರಿಸುತ್ತಿತ್ತು. ಈಗ ವಿರೋಧ ಪಕ್ಷದ ನಾಯಕ ಇರುವುದರಿಂದ, ಹಿಂದಿನ ವ್ಯವಸ್ಥೆಗಿಂತ ಉತ್ತಮ. ಯಾರಾದರೂ ಒಪ್ಪಲು ಅಥವಾ ಒಪ್ಪದಿರಲು ಅವಕಾಶವಿದೆ ಎನ್ನುತ್ತಾರೆ.
ಆದರೂ, ಚುನಾವಣಾ ಅನುಭವ ಹೊಂದಿರುವ ಕಾರ್ಯದರ್ಶಿಗಳಿಂದ ಆಯ್ಕೆಗೆ ಮಸೂದೆ ಅವಕಾಶ ನೀಡುವುದರಿಂದ, ಇದು ಅಧಿಕಾರಶಾಹಿಯ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮುಕ್ತವಾಗಿರುವಂತಿದೆ ಎನ್ನುತ್ತಾರೆ ಕೃಷ್ಣ ಮೂರ್ತಿ.
ರಾಜಕೀಯ ವಾತಾವರಣ ಅವಲಂಬಿಸಿ
ಸ್ವಾತಂತ್ರ್ಯ
‘‘ಆಯ್ಕೆ ಸಮಿತಿಯಲ್ಲಿ ಸಿಜೆಐ ಉಪಸ್ಥಿತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವುದಿಲ್ಲ. ಸಿಜೆಐ ಸದಸ್ಯರಾಗಿರುವ ಸಮಿತಿಯಿಂದ ಸಿಬಿಐ ನಿರ್ದೇಶಕರನ್ನು ನೇಮಿಸಲಾಗುತ್ತದೆ. ಹಾಗೆಂದು ಸಿಬಿಐ ತನ್ನ ಕಾರ್ಯಾಚರಣೆಯಲ್ಲಿ ಸ್ವತಂತ್ರವಾಗಿದೆ ಎಂದು ಹೇಳಬಹುದೇ? ಅವರ ಉಪಸ್ಥಿತಿಯ ಪಾತ್ರ ಆರಂಭಿಕ ನೇಮಕಾತಿಯ ಸಮಯದಲ್ಲಿ ಮಾತ್ರ. ಆ ನಂತರ ಆ ವ್ಯಕ್ತಿ ಸರಕಾರದೊಂದಿಗೆ ಕೆಲಸ ಮಾಡಬೇಕು’’ ಎಂಬುದರತ್ತ ಗಮನ ಸೆಳೆಯುತ್ತಾರೆ ಕೃಷ್ಣಮೂರ್ತಿ ಅವರು.
‘‘ಅಶೋಕ್ ಲಾವಾಸಾ ಅವರನ್ನು ನೋಡಿದರೆ, ಅವರ ಭಿನ್ನಾಭಿಪ್ರಾಯವನ್ನು ದಾಖಲಿಸಬೇಕೆಂದು ಒತ್ತಾಯಿಸಿದ್ದಕ್ಕಾಗಿ ಅವರು ಸಿಇಸಿ ಆಗುವ ಅವಕಾಶ ಕಳೆದುಕೊಂಡರು. ಪರಿಣಾಮ, ಅವರ ನಂತರ ಬಂದವರು ಅದನ್ನು ಉದಾಹರಣೆಯಾಗಿ ನೋಡಿದರು. ಮತ್ತು ಹೆಚ್ಚು ಜಾಗರೂಕರಾಗಿ ಉಳಿಯುವಂತಾಯಿತು. ಅಂಥ ವಾತಾವರಣ ನಿರ್ಮಾಣವಾಗಿದೆ’’ ಎನ್ನುತ್ತಾರೆ ಅವರು.
೨೦೧೯ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಿದ ಮೂವರು ಸದಸ್ಯರ ಚುನಾವಣಾ ಆಯೋಗದ ಏಕೈಕ ಸದಸ್ಯ ಲಾವಾಸಾ. ಮಾದರಿ ಸಂಹಿತೆ ಉಲ್ಲಂಘನೆ ಕುರಿತು ಆಯೋಗದ ಆದೇಶಗಳಲ್ಲಿ ಭಿನ್ನಾಭಿಪ್ರಾಯಗಳನ್ನು ದಾಖಲಿಸಬೇಕು ಎಂಬ ಲಾವಾಸಾ ಅವರ ಬೇಡಿಕೆಯನ್ನು ಬಹುಮತದಿಂದ ತಿರಸ್ಕರಿಸಲಾಯಿತು. ಈ ಬೆಳವಣಿಗೆಯ ಬಳಿಕ ಅವರ ಪತ್ನಿ, ಮಗ ಮತ್ತು ಸಹೋದರಿಯ ಮೇಲೆ ವಿವಿಧ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದೂ ನಡೆಯಿತು.
ವರ್ಷಗಳ ಕಾಲ ಅನುಸರಿಸಿದ ಹಿರಿತನದ ಮಾನದಂಡಗಳ ಪ್ರಕಾರ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು. ಆದರೂ, ಲಾವಾಸಾ ಅವರು ಚುನಾವಣಾ ಆಯೋಗವನ್ನು ತೊರೆದು ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್ಗೆ ಉಪಾಧ್ಯಕ್ಷರಾಗಿ ಸೇರಲು ನಿರ್ಧರಿಸಿದರು. ಅಲ್ಲಿ ಅವರು ಈಗ ಕೆಲಸ ಮಾಡುತ್ತಿದ್ದಾರೆ.
‘ದೇಶದ ರಾಜಕೀಯ ವಾತಾವರಣವನ್ನು ಅವಲಂಬಿಸಿ ಮಾತ್ರವೇ ಚುನಾವಣಾ ಆಯೋಗ ಸ್ವತಂತ್ರವಾಗಿರ ಬಹುದು ಎಂಬ ಅಭಿಪ್ರಾಯವನ್ನು ಕೃಷ್ಣಮೂರ್ತಿ ವ್ಯಕ್ತಪಡಿಸುತ್ತಾರೆ.
‘‘ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಕೇಂದ್ರ ಸಚಿವರಿಗೆ ಶೋಕಾಸ್ ನೊಟೀಸ್ ನೀಡಲಾಗಿದೆಯೇ? ಹಿಂದೆ ಆಯುಕ್ತರು ಕಾನೂನು ಸಚಿವರಂಥವರಿಗೂ ಶೋಕಾಸ್ ನೊಟೀಸ್ ನೀಡಿದ್ದಿತ್ತು. ಮೋದಿಯನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದಕ್ಕಾಗಿ ಸೋನಿಯಾ ಗಾಂಧಿಯವರಿಗೂ ನೋಟಿಸ್ ನೀಡಲಾಗಿತ್ತು. ಆಯೋಗಕ್ಕೆ ಅದನ್ನು ಮಾಡಲು ಯಾವುದೇ ಹಿಂಜರಿಕೆ ಇರಲಿಲ್ಲ. ಸ್ವತಂತ್ರವಾಗಿರುವುದು ವಾತಾವರಣವನ್ನು ಅವಲಂಬಿಸಿದೆ. ಯಾವುದೇ ಸಂಸ್ಥೆ ಪರಿಸರದ ಉತ್ಪನ್ನವಾಗಿದೆ. ಪರಿಸರವೇ ವಿಭಿನ್ನವಾಗಿದ್ದರೆ ಸ್ವಾತಂತ್ರ್ಯವನ್ನು ನಿರೀಕ್ಷಿಸಲು ಆಗದು’’ ಎನ್ನುತ್ತಾರೆ.
ಮತ್ತಷ್ಟು ಬದಲಾವಣೆಗಳು
ಲೋಕುರ್ ಪ್ರಕಾರ, ಮಸೂದೆಯಲ್ಲಿ ಮತ್ತಷ್ಟು ಬದಲಾವಣೆಗಳ ಬಗ್ಗೆ ಯೋಚಿಸುವ ಅಗತ್ಯವಿದೆ.
‘‘ಸಂವಿಧಾನ ಸಭೆಯಲ್ಲಿ ಪ್ರೊ.ಶಿಬ್ಬನ್ ಲಾಲ್ ಸಕ್ಸೇನಾ ಅವರು ಪ್ರತಿಪಾದಿಸಿದ ವಿಚಾರವೆಂದರೆ, ನೇಮಕಾತಿಯನ್ನು ಸಂಸತ್ತಿನ ಎರಡೂ ಸದನಗಳ ಮೂರನೇ ಎರಡರಷ್ಟು ಬಹುಮತದಿಂದ ದೃಢೀಕರಿಸಬೇಕು ಎಂಬುದು. ಡಾ. ಅಂಬೇಡ್ಕರ್ ಅವರು ಇದು ಕಷ್ಟಕರ ಪ್ರಕ್ರಿಯೆ ಎಂದಿದ್ದರು. ಆದರೆ ಅಮೆರಿಕದ ಸಂವಿಧಾನದಲ್ಲಿ ಇದೇ ಪ್ರಕ್ರಿಯೆಯನ್ನು ತಿರಸ್ಕರಿಸಿರಲಿಲ್ಲ. ಇದನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಶಿಫಾರಸು ಮಾಡುವುದನ್ನು ಅಂಬೇಡ್ಕರ್ ಅವರು ನಂತರದ ಹಂತದಲ್ಲಿ ಪರಿಗಣನೆಗೆ ಮುಕ್ತವಾಗಿಸಿದ್ದರು. ಇದು ತಮಗೆ ದೊಡ್ಡ ತಲೆನೋವು ತಂದಿದೆ ಎಂದಿದ್ದ ಅವರು, ಇದು ಸದನಕ್ಕೂ ದೊಡ್ಡ ತಲೆನೋವಾಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ತಿಳಿದಿದ್ದರು.
ಲೋಕುರ್ ಅವರ ಪ್ರಕಾರ, ‘‘ತಲೆನೋವು ಈಗ ನಮ್ಮದಾಗಿದೆ. ನಾವು ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯ ಎಳೆಗಳನ್ನು ಚರ್ಚಿಸಬೇಕಾಗಿದೆ.’’
(ಕೃಪೆ:thewire.in)