ಈ ತಾರತಮ್ಯ ಕೊನೆಗಾಣಿಸಿ
ಬಿ.ಡಿ. ಜತ್ತಿ ಮತ್ತು ಎಸ್.ಆರ್. ಕಂಠಿ
ರಾಜ್ಯದಲ್ಲಿ ೧೯೪೭ರಿಂದ ಇಲ್ಲಿಯ ತನಕ ಮುಖ್ಯಮಂತ್ರಿಗಳಾದಂತಹ ಅನೇಕರು ನಮ್ಮನ್ನಗಲಿದ್ದಾರೆ. ಇವರಲ್ಲಿ ಕೆಲವು ಮಾಜಿ ಮುಖ್ಯಮಂತ್ರಿಗಳಿಗೆ ಮಾತ್ರ ಅವರು ಹುಟ್ಟಿದ ದಿನ ಮತ್ತು ನಿಧನರಾದ ದಿನ ಸರಕಾರದ ವತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ ತಪ್ಪದೆ ನಡೆದುಕೊಂಡು ಬಂದಿರುತ್ತದೆ. ಆದರೆ ನಮ್ಮನ್ನಗಲಿರುವ ಬಹಳಷ್ಟು ಮುಖ್ಯಮಂತ್ರಿಗಳ ಸ್ಮರಣೆಯನ್ನು ಸರಕಾರಗಳು ಮಾಡುವುದೇ ಇಲ್ಲ. ಈ ತಾರತಮ್ಯವನ್ನು ಸರಿಪಡಿಸುವಂತೆ ಅನೇಕ ಬಾರಿ ವಿಧಾನಸಭೆಯ ಹಿಂದಿನ ಸಭಾಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಈ ಹಿಂದಿನ ಸಭಾಪತಿಗಳಿಗೆ ಮನವಿ ಪತ್ರಗಳನ್ನು ಕೊಟ್ಟರೂ ಅದು ಕಾರ್ಯಗತವಾಗಿಲ್ಲ. ಡಿ.ಪಿ.ಆರ್. ಇಲಾಖೆಯಲ್ಲಿ ಈ ವಿಚಾರದಲ್ಲಿ ನಿರ್ಣಯವನ್ನು ಕೈಗೊಳ್ಳಲು ಇನ್ನೂ ಸಾಧ್ಯವಾಗಿರುವುದಿಲ್ಲ.
ಕೆ.ಸಿ. ರೆಡ್ಡಿಯವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಅನಾವರಣ ಮಾಡಿದ ಕಾರಣದಿಂದಾಗಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆೆ. ಇದೇ ರೀತಿಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಮೆಗಳಿರುವ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಮತ್ತು ದೇವರಾಜ ಅರಸುರವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿ, ಕಡಿದಾಳ್ ಮಂಜಪ್ಪ, ಎಸ್. ಆರ್. ಕಂಠಿ ಮುಂತಾದ ಹಲವರು ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿರುತ್ತಾರೆ. ಆದರೆ ಇವರು ಹುಟ್ಟಿದ ದಿನ ಮತ್ತು ನಿಧನರಾದ ದಿನ ಇವರ ಅಭಿಮಾನಿಗಳು ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳನ್ನು ನಡೆಸುವುದನ್ನು ಬಿಟ್ಟರೆ ಸರಕಾರದ ವತಿಯಿಂದ ಯಾವ ನೆನಪಿನ ಕಾರ್ಯಕ್ರಮವೂ ನಡೆಯುವುದಿಲ್ಲ. ಇವರ ಭಾವಚಿತ್ರವನ್ನು ವಿಧಾನಸೌಧದ ಯಾವುದಾದರೂ ಒಂದು ಕಡೆ ಇಟ್ಟು ಒಂದು ದಿನ ಗೌರವ ಸಲ್ಲಿಸಲು ಆರ್ಥಿಕ ಇಲಾಖೆಗೆ ಕೋಟ್ಯಂತರ ರೂ.ಗಳ ಹೊರೆಯೇನೂ ಬೀಳುವುದಿಲ್ಲ. ಕೆಲವೇ ಕೆಲವು ಸಾವಿರ ರೂ.ಗಳಲ್ಲಿ ಈ ಕಾರ್ಯಕ್ರಮವನ್ನು ಮಾಡಬಹುದು. ಪಾರ್ಲಿಮೆಂಟ್ನಲ್ಲಿ ಅತಿ ಕಡಿಮೆ ಅವಧಿಗೆ ಪ್ರಧಾನಮಂತ್ರಿಗಳಾಗಿದ್ದ ಚರಣ್ ಸಿಂಗ್ರವರಿಂದ ಹಿಡಿದು ಸುದೀರ್ಘ ಅವಧಿಗೆ ಪ್ರಧಾನಿಗಳಾಗಿದ್ದ ನೆಹರೂರವರ ತನಕ ಅಗಲಿದ ಎಲ್ಲಾ ಪ್ರಧಾನಿಗಳಿಗೆ ಅಲ್ಲಿನ ಸಚಿವಾಲಯದ ವತಿಯಿಂದ ಒಂದಷ್ಟು ಜನ ಗಣ್ಯರು ಸೇರಿ ಅವರ ಭಾವಚಿತ್ರಗಳಿಗೆ ಪುಷ್ಪವನ್ನರ್ಪಿಸಿ ಸ್ಮರಿಸಿಕೊಳ್ಳುವ ವ್ಯವಸ್ಥೆ ಇದೆ. ಆದರೆ ಕರ್ನಾಟಕದಲ್ಲಿ ಈ ಸಂಪ್ರದಾಯವೇ ಇಲ್ಲ. ಇತ್ತೀಚೆಗೆ ಎಲ್ಲಾ ಮಾಜಿ ಪ್ರಧಾನಿಗಳನ್ನು ಪರಿಚಯಿಸುವ ಮ್ಯೂಸಿಯಂ ಸಹ ಸ್ಥಾಪನೆಯಾಗಿದೆ. ಕರ್ನಾಟಕದಲ್ಲೂ ಇಂತಹ ಒಂದು ಮ್ಯೂಸಿಯಂ ಸ್ಥಾಪನೆಯ ಕಾರ್ಯವನ್ನೇಕೆ ಮಾಡಬಾರದು. ಕ್ರಿಯಾಶೀಲವಾಗಿರುವ ಸಭಾಧ್ಯಕ್ಷರು, ಅಪಾರ ಅನುಭವ ಹೊಂದಿರುವ ಸಭಾಪತಿಗಳು ಈಗಲಾದರೂ ಈ ನಿಟ್ಟಿನಲ್ಲಿ ಆಲೋಚಿಸಿ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಬೇಕು.