‘‘ಕುಟುಂಬ ರಾಜಕಾರಣ ಒಂದು ಮೆಟ್ಟಿಲಷ್ಟೆ; ಆನಂತರ ನಮ್ಮ ಕೈಹಿಡಿಯುವುದು ನಮ್ಮ ಸಾಮರ್ಥ್ಯ ಮಾತ್ರ’’
ಮೊದಲ ಚುನಾವಣೆ, ಮೊದಲ ಗೆಲುವು. ಹೇಗಿದೆ?
ನಯನಾ: ತುಂಬ ಒಳ್ಳೆಯ ಅನುಭವ. ಈ ಮೆಟ್ಟಿಲೇರಲು ತುಂಬ ಕಷ್ಟಪಟ್ಟೆ. ಅದು ಸಾರ್ಥಕವಾಯಿತು ಎನ್ನಿಸುತ್ತಿದೆ.
ಕೆಲವರು ತುಂಬ ವರ್ಷ ಕೆಲಸ ಮಾಡಿದರೂ ಗೆಲುವು ಸಿಗುವುದಿಲ್ಲ. ನಿಮ್ಮ ಗೆಲುವು ಹೇಗಾಯಿತು?
ನಯನಾ: ಶ್ರಮವೂ ಬೇಕು, ಜೊತೆಗೆ ಹಣೆಬರಹದಲ್ಲೂ ಇರಬೇಕು. ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕು.
ಕಾಂಗ್ರೆಸ್ ವಕ್ತಾರೆಯಾಗಿದ್ದಿರಿ. ಮಾಧ್ಯಮಗಳಿಂದ ಕೆಲ ಕಾಲ ದೂರ ಇದ್ದಿರಿ. ಆ ಸಂದರ್ಭದಲ್ಲಿ ಏನು ಮಾಡುತ್ತಿದ್ದಿರಿ?
ನಯನಾ: ವಕ್ತಾರೆ ಆಗಿದ್ದುದು ನಿಜ. ಮಹಿಳಾ ಕಾಂಗ್ರೆಸ್ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆ ಮೂಲಕವೇ ವಕ್ತಾರೆಯಾಗಿದ್ದು. 2018ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೆ. ನಮ್ಮ ತಾಯಿಯ ಚುನಾವಣೆಯ ಕೆಲಸದಲ್ಲಿ ನಾನೇ ದೊಡ್ಡ ಪಾತ್ರ ವಹಿಸಿದ್ದೆ. ಅದಾದ ಬಳಿಕ ಕ್ಷೇತ್ರದ ಜವಾಬ್ದಾರಿ ಜಾಸ್ತಿಯಾಯಿತು. ಅದು 2023ರ ಚುನಾವಣೆಗೆ ಒಂದು ರೀತಿಯ ತಯಾರಿಯಂತೆ ಆಯಿತು.
ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ, ಆನಂತರ ಹೋರಾಟ, ಬೇರೆ ಬೇರೆ ಸಂಘಟನೆಗಳನ್ನು ಪ್ರತಿನಿಧಿಸಿದ್ದೀರಿ. ಆದರೆ ರಾಜಕೀಯಕ್ಕೆ ಬಂದಿದ್ದು ಹೇಗೆ? ಅಮ್ಮನ ನೆರಳಲ್ಲಿ ಬರಬೇಕು ಎನ್ನಿಸಿತೇ ಅಥವಾ ಬೇರೇನಾದರೂ ಕನಸಿತ್ತೆ?
ನಯನಾ: ಅಮ್ಮನ ನೆರಳು ಅನ್ನುವುದಕ್ಕಿಂತ ಹೆಚ್ಚಾಗಿ ಅದು ಪ್ರಭಾವ. ಮನೆಯ ವಾತಾವರಣವೂ ಹಾಗೆಯೇ ಇತ್ತು. ಏನು ಮಾಡಬೇಕು ಜೀವನದಲ್ಲಿ ಎಂಬ ತಿಳುವಳಿಕೆ ಬಂದಾಗ ರಾಜಕೀಯಕ್ಕೆ ಬರಬೇಕು ಎಂದು ನಾನೇ ನಿರ್ಧಾರ ತೆಗೆದುಕೊಂಡೆ. ಅದಕ್ಕಾಗಿಯೇ ನಾನು ಕಾನೂನು ಓದಿದ್ದು. ಅದೃಷ್ಟ ಚೆನ್ನಾಗಿತ್ತು. ಒಳ್ಳೆಯ ಲಾ ಸ್ಕೂಲಲ್ಲಿ ಪ್ರವೇಶ ಸಿಕ್ಕಿತು. ಆನಂತರ ಹಲವು ವರ್ಷ ವಕೀಲೆಯಾಗಿ ಕೆಲಸ ಮಾಡಿದೆ. ಸಂದರ್ಭ ಸಿಕ್ಕಿದಾಗ ರಾಜಕೀಯ ಪ್ರವೇಶ ಮಾಡಿದೆ. ಸಮಯ ಬಂದಾಗ ಎಲ್ಲವೂ ಕೂಡಿ ಬರುತ್ತದೆ ಎಂಬುದು ನಮ್ಮ ತಂದೆತಾಯಿ ನಂಬಿಕೆಯಾಗಿತ್ತು.
ಕುಟುಂಬದಲ್ಲಿ ಸಾಮಾನ್ಯವಾಗಿ ಗಂಡುಮಕ್ಕಳು ರಾಜಕೀಯಕ್ಕೆ ಬರುತ್ತಾರೆ. ಆದರೆ ನಿಮ್ಮ ಕುಟುಂಬದಲ್ಲಿ ವಿಭಿನ್ನ. ಗಂಡುಮಕ್ಕಳಿಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ಮಗಳಿಗೆ ಇದೆ ಎಂದು ನಿಮ್ಮ ಅಮ್ಮ ಯಾವಾಗಲೂ ಹೇಳುತ್ತಿದ್ದರು. ಇದು ಹೇಗೆ?
ನಯನಾ: ಅದಕ್ಕೆ ತಾಯಿಯೇ ಒಂದು ರೀತಿಯಲ್ಲಿ ಪ್ರೇರಣೆ. ನಮ್ಮ ಮನೆಯಲ್ಲಿ ಗಂಡುಮಕ್ಕಳು, ಹೆಣ್ಣುಮಕ್ಕಳು ಎಂದು ತಾರತಮ್ಯ ಮಾಡಲೇ ಇಲ್ಲ. ನನಗೂ ಅಷ್ಟೇ ಮಟ್ಟದ ಸ್ವಾತಂತ್ರ್ಯ ಇತ್ತು. ಬೆಳೆಯುವ ವೇಳೆಯಲ್ಲಿ ನಮಗೆ ಯಾವ ವ್ಯತ್ಯಾಸವೂ ಅನ್ನಿಸಲೇ ಇಲ್ಲ. ಜನಜೀವನದಲ್ಲಿ ಯಾವ ಮಾಧ್ಯಮದ ಮೂಲಕ ಬೆರೆಯಲು, ಪರಿವರ್ತನೆ ತರಲು ಸಾಧ್ಯ ಎಂದು ಯೋಚಿಸಿದಾಗ ರಾಜಕೀಯಕ್ಕಿಂತ ಬೇರಾವುದಕ್ಕೂ ಶಕ್ತಿ ಇಲ್ಲ ಎನ್ನಿಸಿತು. ಜನರನ್ನು ತಲುಪಲು ಈ ಕ್ಷೇತ್ರದಲ್ಲಿ ವ್ಯಾಪಕ ಅವಕಾಶವಿದೆ ಎಂಬುದು ನನ್ನನ್ನು ಪ್ರಭಾವಿಸಿತು.
ಪರಿವರ್ತನೆ ಎಂದು ಹೇಳಿದಿರಿ. ಏನು ಪರಿವರ್ತನೆ ಮಾಡಬೇಕು ಎಂಬುದು ರಾಜಕೀಯದಲ್ಲಿ ನಿಮ್ಮ ಕನಸು?
ನಯನಾ
: ತಕ್ಷಣಕ್ಕೆ ಆಗಬೇಕಾದ್ದು ಎಂಬ ಗುರಿಯ ಜೊತೆಗೇ ದೀರ್ಘಾವಧಿಯ ಗುರಿಯೂ ಇರಬೇಕು. ಮೊದಲ ಬಾರಿಗೆ ಶಾಸಕಿಯಾಗಿರುವ ನನಗೆ ಕ್ಷೇತ್ರದ ಬಗ್ಗೆ ಬಹಳ ಆಸಕ್ತಿಯಿದೆ. 2004ರಲ್ಲಿ ತಾಯಿ ಚುನಾವಣೆ ಸೋತರು. ಬಿಜೆಪಿ, ಜೆಡಿಎಸ್ಗೆ ಅವಕಾಶ ಸಿಕ್ಕಿತು. 20 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ರಸ್ತೆಗಳಿಲ್ಲ. ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಬೇಕು ಎಂಬುದು ನನ್ನ ತಕ್ಷಣದ ಆದ್ಯತೆ. ಮೂಲಭೂತ ಸೌಕರ್ಯಗಳು ಬರಬೇಕು. ಆಸ್ಪತ್ರೆಯಾಗಬೇಕು. 20 ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ ಎಂದಿರಿ. ನಿಮ್ಮ ತಾಯಿಯವರೇ ಹೆಚ್ಚು ಬಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇದೆಲ್ಲ ಸಮಸ್ಯೆಗೆ ನಿಮ್ಮ ತಾಯಿಯವರು ಮತ್ತು ಕಾಂಗ್ರೆಸ್ ಆಗ ಸ್ಪಂದಿಸಲಿಲ್ಲವೇ?
ನಯನಾ: ಕಾಂಗ್ರೆಸ್ ಇದ್ದುದರಿಂದಲೇ ಒಂದು ಹಂತದವರೆಗೆ ಅಭಿವೃದ್ಧಿಯಾಗಿದೆ. ಆದರೆ ಮತ್ತೆ ಇಪ್ಪತ್ತು ವರ್ಷಗಳಲ್ಲಿ ಒಂದು ಜಿಗಿತ ಆಗಬೇಕಿತ್ತಲ್ಲ, ಅದು ಆಗಲಿಲ್ಲ. ನಮಗೆ ಅದನ್ನು ಮಾಡುವ ಅವಕಾಶ ಸಿಗಲಿಲ್ಲ. ರಸ್ತೆ, ಸೇತುವೆಗಳಂಥ ಸೌಲಭ್ಯ, ಶಿಕ್ಷಣದ ಬಗೆಗಿನ ಚಿಂತನೆಯೂ ಬಂದಿಲ್ಲ. ಕಾಂಗ್ರೆಸ್ ಕಾಲದಲ್ಲಿ ಆದ ಕೆಲಸಗಳೆಲ್ಲವೂ ಈ 20 ವರ್ಷಗಳಲ್ಲಿ ನಿಂತಲ್ಲೇ ನಿಂತುಬಿಟ್ಟವು. ಅಲ್ಲಿನ ಕಾಲೇಜುಗಳು, ಶಾಲೆಗಳು, ಹೊಯ್ಸಳ ಸ್ಟೇಡಿಯಂ, ತೋಟಗಾರಿಕೆ ಕಾಲೇಜು ಎಲ್ಲವೂ ನನ್ನ ತಾಯಿಯ ಅವಧಿಯಲ್ಲಿಯೇ ಆಗಿದ್ದು. ಮಿನಿ ವಿಧಾನಸೌಧವೂ ಸೇರಿ ಅರ್ಥಪೂರ್ಣ ಕೆಲಸಗಳೆಲ್ಲ ಆಗಿದ್ದು ನನ್ನ ತಾಯಿಯ ಅವಧಿಯಲ್ಲಿಯೇ. ಹಳ್ಳಿಗಳಿಗೆ ಹೋದಾಗ ಜನರು ಅದನ್ನು ನೆನೆಸಿಕೊಳ್ಳುತ್ತಾರೆ. ನಮ್ಮ ತಾಯಿಯವರು ತಂದ ಸ್ತ್ರೀಶಕ್ತಿ ಕಾರ್ಯಕ್ರಮದ ಪ್ರಭಾವವಂತೂ ಇಡೀ ರಾಜ್ಯದಲ್ಲಿಯೇ ಇದೆ. ಆ ಯೋಜನೆ ಬಂದು 23 ವರ್ಷಗಳಾದವು. ಇವತ್ತಿಗೂ ಅದಕ್ಕೆ ಅಷ್ಟೇ ಮಹತ್ವವಿದೆ.
ಮೋಟಮ್ಮ ಎಂಬ ಹೆಸರು ಮತ್ತು ವ್ಯಕ್ತಿತ್ವ ನಿಮಗೆ ಹೆಚ್ಚು ಒತ್ತಡವನ್ನು ತರುತ್ತದೆ. ಅಮ್ಮನ ಸಾಧನೆಯ ಹಿನ್ನೆಲೆಯಲ್ಲಿ ಜನ ನಿಮ್ಮಿಂದ ನಿರೀಕ್ಷಿಸುವುದು ಹೆಚ್ಚಿರುತ್ತದೆ. ಅಂಥ ಒತ್ತಡ ನಿಮಗಿದೆಯೇ?
ನಯನಾ: ಆ ಹೊರೆ ತುಂಬ ಇದೆ. ಮೊದಲು ರಾಜಕೀಯಕ್ಕೆ ಬಂದಾಗ ಅದು ತುಂಬ ಅನುಭವಕ್ಕೆ ಬರುತ್ತಿತ್ತು. ಆದರೆ ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ ಎಂಬುದು ಗೊತ್ತಿತ್ತು. ಅದು ಹೊರಗೆ ಬರಲು ಹಲವು ವರ್ಷಗಳು ಬೇಕಾದವು. ನನಗೇ ನನ್ನ ಮೇಲೆ ವಿಶ್ವಾಸ ಬರಬೇಕಿತ್ತು. ನನ್ನ ತಾಯಿಗೆ ಇರುವ ಪಾಸಿಟಿವ್ ಅಂಶಗಳು ನನಗಿಲ್ಲದೆ ಇರಬಹುದು. ಆದರೆ ನನ್ನದೇ ಆದ ಪ್ಲಸ್ ಪಾಯಿಂಟ್ಗಳು ಇವೆ. ಅದನ್ನು ನಾನು ಜನರೆದುರು ಇಡಬೇಕು ಎಂಬ ಅರಿವು ಬಂದಾಗ ಆ ದಾರಿಯಲ್ಲಿ ಹೊರಟೆ. ಆ ಹೊರೆ ಖಂಡಿತ ಇದೆ. ಯಾಕೆಂದರೆ ಆ ಹೆಸರಿಗೆ ಅಂಥ ತೂಕ ಇದೆ. ಆ ಹೆಸರಿನಿಂದಲೇ ಜನ ನನ್ನನ್ನು ಗುರುತಿಸಿದ್ದಾರೆ. ಆದರೆ ನನ್ನದೇ ವ್ಯಕ್ತಿತ್ವ ಇರುವುದನ್ನು ಕ್ಷೇತ್ರದ ಜನತೆ ಮತ್ತು ನನ್ನ ಪಕ್ಷ ಗ್ರಹಿಸಿದೆ ಎಂಬ ಭಾವನೆಯಿದೆ.
ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶ ಕಡಿಮೆ. ಈಗಲೂ ಅಷ್ಟೆ. ಅಂಥದ್ದರಲ್ಲಿ ನಿಮಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಈ ಮಹಿಳಾ ಪ್ರಾತಿನಿಧ್ಯ ಮತ್ತು ರಾಜಕೀಯದ ಬಗ್ಗೆ ಏನೆನ್ನುತ್ತೀರಿ?
ನಯನಾ
: ಮಹಿಳೆಯರು ಕಡಿಮೆ ಇರುವುದು ಎಂಬುದನ್ನು ಒಪ್ಪಿಕೊಳ್ಳಬೇಕು. ಹೆಚ್ಚಿನ ಅವಕಾಶಗಳು ಸಿಗುವ ಅಗತ್ಯವೂ ಇದೆ. ಈಗ ಹೇಗೆ ಸ್ಥಳೀಯ ಸಂಸ್ಥೆಗಳಲ್ಲಿ 50 ಪರ್ಸೆಂಟ್ ಮಹಿಳೆಯರಿಗೆ ಅವಕಾಶ ಇದೆ. ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ. ಆ ಅವಕಾಶ ಕಲ್ಪಿಸಿರುವುದಕ್ಕೆ ಮಹಿಳೆಯರ ಪ್ರಾತಿನಿಧ್ಯವೂ ಹೆಚ್ಚಿದೆ. ಅದೇ ಅವಕಾಶ ಇಲ್ಲಿಯೂ ಬರಬೇಕು. ಆದರೆ ಬೇರೆ ಕ್ಷೇತ್ರಗಳಲ್ಲೂ ಮಹಿಳೆಯರು ಕಡಿಮೆಯೇ. ಸಾರ್ವಜನಿಕ ಜೀವನವಾಗಿರುವುದರಿಂದ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯಿರುವುದು ಎದ್ದುಕಾಣುತ್ತದೆ. ಪ್ರಾತಿನಿಧ್ಯ ಹೆಚ್ಚಬೇಕೆಂದು ದನಿಯೆತ್ತಲು ನಾನು ಸಿದ್ಧ. ಹಿರಿಯರ ಬೆಂಬಲ, ಪ್ರೋತ್ಸಾಹ ಯಾವ ರೀತಿಯಲ್ಲಿ ಸಿಗುತ್ತಿದೆ?
ನಯನಾ: ತುಂಬ ಚೆನ್ನಾಗಿದೆ. ಸಲಹೆ, ಪ್ರೋತ್ಸಾಹ ಸಿಗುತ್ತಿದೆ. ನೂತನ ಶಾಸಕರಿಗಾಗಿ ತರಬೇತಿ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷರು ಮಾಡಿದ್ದು ಕೂಡ ಉಪಯುಕ್ತವಾಗಿತ್ತು.
ಅಧಿವೇಶನದಲ್ಲಿ ಅರ್ಥಪೂರ್ಣವಾದ ಚರ್ಚೆಯಲ್ಲಿ ಭಾಗವಹಿಸಬೇಕೆಂದಿದ್ದೇನೆ. ಕ್ಷೇತ್ರ ಮಾತ್ರವಲ್ಲದೆ, ರಾಜ್ಯದ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆಯೂ ಅರಿವು ಇರಬೇಕು. ಅದರ ಬಗ್ಗೆಯೂ ಸದನದಲ್ಲಿ ಗಮನ ಸೆಳೆಯಬೇಕು.
ನೀವು ಎರಡು ವಿಚಾರಕ್ಕೆ ಜನರ ಗಮನ ಸೆಳೆದಿರಿ. ಮೊದಲನೆಯದು ಪ್ರದೀಪ್ ಈಶ್ವರ್ ಮಾತಿನ ವೇಳೆ ಸದನದಲ್ಲಿ ನೀವು ಮೇಜು ಕುಟ್ಟಿದ್ದು ಟ್ರೋಲ್ ಆಯಿತು. ಅದಕ್ಕೆ ಏನು ಹೇಳಬಯಸುತ್ತೀರಿ?
ನಯನಾ: ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಮಾತುಗಳಿರುವಂತೆ ಕೆಟ್ಟ ಪ್ರತಿಕ್ರಿಯೆಗಳೂ ಇರುತ್ತವೆ. ಅವರ ಮಾತಿನಲ್ಲಿ ಸಣ್ಣ ತಪ್ಪು, ಮಾಹಿತಿ ದೋಷ ಇತ್ತು. ಆದರೆ ಅವರ ಮಾತಿನ ಉದ್ದೇಶ ಮಹತ್ವದ್ದಾಗಿತ್ತು. ಕೋವಿಡ್ ಸಂದರ್ಭದ ಸಾವುಗಳನ್ನು ನಿರ್ಲಕ್ಷಿಸಿದ್ದರ ಬಗ್ಗೆ ಹೇಳಿದ್ದರು. ಅದಕ್ಕೆ ನಾನು ಮೇಜು ಕುಟ್ಟಿದೆ. ಇತರರೂ ಹಾಗೆಯೇ ಮಾಡಿದರು. ನಾನು ಅವರ ಪಕ್ಕ ಇದ್ದುದರಿಂದ ಗಮನ ಸೆಳೆಯಿತು. ಇವನ್ನೆಲ್ಲ ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕ ಬದುಕಿನಲ್ಲಿ ಇರಲಿಕ್ಕಾಗುವುದಿಲ್ಲ. ನನಗಂತೂ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿಯಿದೆ.
ನೂತನ ಶಾಸಕರೂ ಸೇರಿದಂತೆ ಬಹಳಷ್ಟು ಶಾಸಕರ ಬಗ್ಗೆ ಇರುವ ದೂರು ಏನೆಂದರೆ, ಅವರು ಕ್ಷೇತ್ರದಲ್ಲಿ ಇರುವುದಿಲ್ಲ ಎಂಬುದು. ನೀವು ನಿಮ್ಮ ಕ್ಷೇತ್ರದ ಜನತೆಗೆ ಏನು ಹೇಳುತ್ತೀರಿ?
ನಯನಾ : ಶಾಸಕಿಯಾದ ತಕ್ಷಣವೇ ನಾನು ಹೇಳಿದ್ದು, ಕ್ಷೇತ್ರದಲ್ಲಿ ವಾರದಲ್ಲಿ ನಾಲ್ಕು ದಿನ ಬುಧವಾರದಿಂದ ಶನಿವಾರ ಇದ್ಧೇ ಇರುತ್ತೇನೆ ಎಂದು. ನನ್ನ ಕೆಲಸ ನಾನು ಮಾಡುತ್ತೇನೆ. ಕ್ಷೇತ್ರಕ್ಕೆ ಅಷ್ಟೇ ಜನ ಸಹಾಯಕರನ್ನೂ ನೇಮಿಸಿದ್ದೇನೆ. ವೃತ್ತಿಪರ ಹಿನ್ನೆಲೆಯಿಂದ ಬಂದಿರುವುದರಿಂದ ವ್ಯವಸ್ಥಿತವಾಗಿಯೇ ಎಲ್ಲವನ್ನೂ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರದ ಜನರಲ್ಲಿ ನಾವು ಅವರ ಕೈಗೆ ಸಿಗುತ್ತಿಲ್ಲ ಎಂಬ ಭಾವನೆ ಬರಬಾರದು. ಅಧಿವೇಶನಕ್ಕೆ ಬರುವಾಗಲೂ, ಇಷ್ಟು ದಿನ ನಾನು ಕ್ಷೇತ್ರದಲ್ಲಿ ಇರುತ್ತಿಲ್ಲ ಎಂಬ ಮಾಹಿತಿಯನ್ನು ಕ್ಷೇತ್ರದ ಜನತೆಗೆ ಕೊಟ್ಟಿದ್ದೆ.
ಇನ್ನು ಕುಟುಂಬ ರಾಜಕಾರಣದ ವಿಚಾರ. ನೀವು ಕುಟುಂಬ ರಾಜಕಾರಣದ ಒಂದು ಭಾಗವೇ?
ನಯನಾ
: ಸ್ವಲ್ಪ ಮಟ್ಟಿಗೆ ನಾನು ಕುಟುಂಬ ರಾಜಕಾರಣದ ಒಂದು ಭಾಗ. ಆದರೆ ಈ ಮಟ್ಟಕ್ಕೆ ನಾನು ಬರುವುದಕ್ಕೆ ನನ್ನದೇ ಆದ ಒಂದು ಹೋರಾಟ ಇತ್ತು. ಇನ್ನು ಕುಟುಂಬ ರಾಜಕಾರಣದಿಂದ ಬಂದಿದ್ದೇನೆ ಎಂದ ಮಾತ್ರಕ್ಕೆ ನಾನು ಅಂಜಬೇಕಾ? ನನಗೆ ಹಾಗೆನ್ನಿಸುವುದಿಲ್ಲ. ಕುಟುಂಬದ ಹಿನ್ನೆಲೆ ರಾಜಕಾರಣಕ್ಕೆ ಬೇಗ ಬರಲು ಒಂದು ಮೆಟ್ಟಿಲಾಗಬಹುದೇ ಹೊರತು ಆಮೇಲೆ ಕೈಹಿಡಿಯಬೇಕಾದವರು ಜನರೇ. ಅದಕ್ಕೆ ನಮ್ಮದೇ ಆದ ಸಾಮರ್ಥ್ಯ ಬೇಕಾಗುತ್ತದೆ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವ ಇವತ್ತಿನ ಸಂದರ್ಭದ ಬಗ್ಗೆ, ಬಿಜೆಪಿಯವರ ಆರೋಪಗಳ ಬಗ್ಗೆ ಏನು ಹೇಳುತ್ತೀರಿ?
ನಯನಾ: ಅವರಿಗೆ ಧರ್ಮದ ರಾಜಕಾರಣ ಬಿಟ್ಟು ಬೇರೆ ಯಾವುದೂ ಗೊತ್ತೇ ಇಲ್ಲ. ಧರ್ಮಕ್ಕೆ ಹೊರತಾದ ರಾಜಕಾರಣ ಗೊತ್ತಿದ್ದರೆ ಮತ್ತೆ ಗೆದ್ದುಬರುತ್ತಿದ್ದರು. ಅವರು ಅಧಿಕಾರದಲ್ಲಿದ್ದಾಗಲೂ ಧರ್ಮರಾಜಕಾರಣವನ್ನೇ ಮಾಡಿದರು. ಅವರ ಅವಧಿಯಲ್ಲಿಯೂ ಕೊಲೆಗಳಾದಾಗ ಅದಕ್ಕೂ ಧರ್ಮದ ಬಣ್ಣ ಹಚ್ಚಲು ಪ್ರಯತ್ನ ಮಾಡಿದರು. ಆದರೆ ಪರಿಶೀಲನೆ ನಡೆದಾಗ ಅವರ ಆರೋಪಗಳಲ್ಲಿ ಹುರುಳಿರಲಿಲ್ಲ. ಅದರಿಂದಾಗಿಯೇ ಅವರು ಸೋತರು. ಜನ ಧರ್ಮ ರಾಜಕಾರಣದ ಬಗ್ಗೆ ಚಿಂತೆ ಮಾಡುತ್ತಿಲ್ಲ. ಜನ ತಮ್ಮ ಬದುಕು ಸುಧಾರಣೆಯಾಗಲಿದೆ ಎಂಬ ಭರವಸೆಯ ಮೇಲೆ ಕಾಂಗ್ರೆಸನ್ನು ಗೆಲ್ಲಿಸಿದ್ದಾರೆ.
ಚಿಕ್ಕಮಗಳೂರಿಗೆ ದೊಡ್ಡ ರಾಜಕೀಯ ಇತಿಹಾಸವಿದೆ. ಈಗ ಲೋಕಸಭೆ ಚುನಾವಣೆ ಗೆಲ್ಲಲು ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಯತ್ನ ಹೇಗಿದೆ?
ನಯನಾ: ತುಂಬ ದೊಡ್ಡ ಸವಾಲು. 2004ರಲ್ಲಿ ನಮಗೆ ಹೊಡೆತ ಬಿದ್ದಾಗಿನಿಂದ ಈ ಸಲದ್ದು ದೊಡ್ಡ ಸಾಧನೆ. 1999ರಲ್ಲಿ ಐದಕ್ಕೆ ಐದೂ ಕ್ಷೇತ್ರಗಳನ್ನು ಗೆದ್ದಿದ್ದೆವು. ಬಿಜೆಪಿ ಘಟಾನುಘಟಿ ನಾಯಕರ ಎದುರಲ್ಲಿ ಈ ಗೆಲುವು ಸಾಧ್ಯವಾಗಿದೆ. ಪೂರ್ತಿ ಕೇಸರಿಮಯವಾಗಿ ಹೋಗಿದ್ದ ಜಿಲ್ಲೆಯಲ್ಲಿ ಒಂದು ಬದಲಾವಣೆ ತರುವುದಕ್ಕೆ ಇದು ದೊಡ್ಡ ಅವಕಾಶ.