ಗದ್ದರ್.... ಉರಿಯ ನೆರಳಿಗೊಂದು ವಿದಾಯ
ಭವ್ಯ ಭಾರತದ
ಬಡಿವಾರವನ್ನು
ಜಾಣಪದಗಳಿಂದ
ಬೆತ್ತಲುಗೊಳಿಸಿದ್ದ ಗದ್ದರ್...
ಪೊಲೀಸರ ದಾಳಿಗೆ
ಎನ್ಕೌಂಟರ್ ಆಗದಂತೆ
ತನ್ನ ಹಾಡುಗಳಲ್ಲೇ ಕ್ರಾಂತಿಗೆ ಅಡಗುದಾಣ ಕಲ್ಪಿಸಿದ್ದ ಗದ್ದರ್...
ಕ್ರಾಂತಿಕಾರಿಗಳನ್ನು
ಕೊಂದು ಬೀಗಿದವರೆದುರು ಹಾಡಿನಲ್ಲಿ ಬಿತ್ತಿ ಬೆಳೆದ ಗದ್ದರ್...
ಸರಕಾರ ಕೊಟ್ಟ ಗುಂಡಿನ
ಬಳುವಳಿಯನ್ನು ಗುಂಡಿಗೆಯ ಬಳಿಯೇ
ಕೊನೆವರೆಗೂ ಕಾಪಿಟ್ಟುಕೊಂಡಿದ್ದ ಗದ್ದರ್...
ಆದರೂ...
ಅನುಗಾಲವೂ ಉರಿದುರಿದು
ಬೆಳಕು ತೋರಿದ ನೀವೂ....
ಕೊನೆಕೊನೆಗೆ ಕಾಲದ ಕರಾಮತ್ತಿಗೆ
ಬಲಿಯಾದಿರೇಕೆ?
ಬಂಡಾಯ ರಾಗದಲ್ಲಿ
ಸಂಧಾನ ಸಾಹಿತ್ಯ
ಪಲುಕಿದಿರೇಕೆ ...?
ರಾಗವನ್ನು ಮಾತ್ರ
ಉಳಿಸಿಕೊಂಡು
ಚರಣ ಪಲ್ಲವಿಗಳನ್ನು
ಬದಲಿಸಿದಿರೇಕೆ ..?
ವಾಡೆ ಗೂಡಗಳ
ಉಸಿರ ತೆಗೆದವರೊಂದಿಗೆ
ಕೈಕುಲುಕಿದೀರೆಕೆ....?
ತಲೆಬಾಗದವರ
ತಲೆತೆಗೆವ ಧರ್ಮಕಾರಣದ ಮುಂದೆ
ತಲೆಬಗ್ಗಿಸಿ ನಿಂತಿರೇಕೆ....? ಇರಲಿ ಬಿಡಿ...
ಇತಿಹಾಸವಿರುವುದೇ ಹೀಗೇನೋ?
ಕಾಲವನ್ನು ಮೀರಿ ನಿಲ್ಲುವರು
ಕೆಲವರು ಮಾತ್ರವೇನೋ? ನಿಮ್ಮ ಕಾಲದ ಕತ್ತಲನ್ನು
ಓಡಿಸಲು...
ನೀವು ಕಲಿಸಿದ ಹಾಡುಗಳು ಈಗಲೂ ಕತ್ತಲಲ್ಲೇ ಇರುವ ಶ್ರೀಕಾಕುಳಮ್
ದಂಡಕಾರಣ್ಯದ ಕಾಡುಗಳಲ್ಲಿ..
ತೆಲಂಗಾಣ, ಆಂಧ್ರದ
ಗೂಡುವಾಡೆಗಳಲ್ಲಿ.....
ದಲಿತ ಭಾರತದ ಅಸ್ಮಿತೆಯಲ್ಲಿ
ರೈತ ಭಾರತದ ನಿನಾದಗಳಲ್ಲಿ..
ಅಳಿಯದೆ ಉಳಿದಿವೆ ..
ಹತಾಶೆಯ ಕಾರ್ಗತ್ತಲಲ್ಲಿ
ಹೋರಾಟದ ಉರಿದೀಪ
ಹಚ್ಚುತ್ತಿವೆ...
ಹೊಸ ಉಸಿರಿಗೆ
ಪರಿತಪಿಸುತ್ತಾ
ಹೊಸ ಕೊರಸ್ಸಿಗೆ
ಕಾಯುತ್ತಿರುವ ನಿಮ್ಮ ಹಳೆಯ ಹಾಡುಗಳು...
ನಿಮ್ಮನ್ನು ನೆನೆಯುತ್ತಿವೆ ...
ಬೆಚ್ಚನೆಯ ವಿದಾಯ
ಹೇಳುತ್ತಿವೆ ..