ಸಚಿವರ ವಜಾ, ನಂತರ ತಡೆ; ಸಾಂವಿಧಾನಿಕ ಚೌಕಟ್ಟು ಅರಿತುಕೊಂಡರೇ ತಮಿಳುನಾಡು ಗವರ್ನರ್?
ವಿ. ವೆಂಕಟೇಸನ್
ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಏಕಪಕ್ಷೀಯವಾಗಿ ವಜಾ ಮಾಡಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರ್ಧಾರ ತೀರಾ ತಪ್ಪುಎಂದು ಹೇಳಲು ಗಂಭೀರ ಸಾಂವಿಧಾನಿಕ ವಿಶ್ಲೇಷಣೆಯ ಅಗತ್ಯವಿಲ್ಲ.
ಸೆಂಥಿಲ್ ಬಾಲಾಜಿ ಡಿಎಂಕೆ ಸರಕಾರದಲ್ಲಿ ಖಾತೆ ಇಲ್ಲದೆ ಸಚಿವರಾಗಿದ್ದರು. ಆದರೆ ಅವರನ್ನು ವಜಾಗೊಳಿಸಿ ವಿವಾದಕ್ಕೆ ಸಿಲುಕಿದ್ದ ಗವರ್ನರ್ ಈಗ ತಮ್ಮ ಆದೇಶ ತಡೆಹಿಡಿದಿರುವ ವರದಿಗಳಿವೆ. ಆದರೂ ಅದನ್ನು ಸ್ಟಾಲಿನ್ ಸರಕಾರದ ಮೇಲಿನ ತೂಗುಕತ್ತಿಯಂತೆ ಬಳಸಲಿರುವ ಅವರ ಉದ್ದೇಶವನ್ನೇ ಇದು ಸೂಚಿಸುತ್ತದೆ.
ಬಾಲಾಜಿ ಉದ್ಯೋಗಕ್ಕಾಗಿ ನಗದು, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂಬ ಸಾಲಿನೊಂದಿಗೆ ರಾಜಭವನದ ಪತ್ರಿಕಾ ಪ್ರಕಟಣೆ ಮೊದಲಾಗಿತ್ತು. ಎರಡನೇ ವಾಕ್ಯದಲ್ಲಿ ಬಾಲಾಜಿ ತಮ್ಮ ಸಚಿವ ಸ್ಥಾನ ದುರುಪಯೋಗಪಡಿಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ದೊಡ್ಡ ಆಧಾರರಹಿತ ಆರೋಪ ಮಾಡಲಾಗಿತ್ತು.
ಈ ಆರೋಪವನ್ನು ರುಜುವಾತುಪಡಿಸುವ ಯಾವುದೇ ಆಧಾರಗಳು ರಾಜ್ಯಪಾಲರ ಬಳಿ ಇದ್ದರೆ, ಅವರದನ್ನು ಬಹಿರಂಗಪಡಿಸಿಲ್ಲ, ಅವರ ಕಚೇರಿಯ ಬಳಿ ಅಂಥ ಮಾಹಿತಿಗಳಿವೆ, ಈ ಹಂತದಲ್ಲಿ ಗೌಪ್ಯವಾಗಿಡಬೇಕಾಗುತ್ತದೆ ಎಂದು ಮಾತ್ರ ಹೇಳಿದೆ.
ತನಿಖೆಯ ಮೇಲೆ ಪ್ರಭಾವ ಬೀರಿದ ಮತ್ತು ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಬಾಲಾಜಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಪತ್ರಿಕಾ ಪ್ರಕಟಣೆ ಹೇಳುತ್ತದೆ. ಆದರೆ, ಅವರನ್ನು ತಪ್ಪಿತಸ್ಥ ಎಂದು ಯಾರು ಘೋಷಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸುವ ಅಗತ್ಯವಿದೆಯೆಂದು ರಾಜ್ಯಪಾಲರಿಗೆ ಅನ್ನಿಸಿದಂತಿಲ್ಲ.
ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಬಾಲಾಜಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿಯೇ ಇದೆ. ನ್ಯಾಯಾಂಗ ಬಂಧನದಲ್ಲಿರುವಾಗ ಡಿಎಂಕೆ ಸರಕಾರದಲ್ಲಿ ಸಚಿವ ಸ್ಥಾನವಿಲ್ಲದೆ ಮುಂದುವರಿಯುವ ಔಚಿತ್ಯವನ್ನು ರಾಜ್ಯಪಾಲರು ಪ್ರಶ್ನಿಸಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಆದರೆ ಮುಖ್ಯಮಂತ್ರಿ ನೇತೃತ್ವದ ಸಂಪುಟದ ಸಹಾಯ ಮತ್ತು ಸಲಹೆಯಿಲ್ಲದೆ ಬಾಲಾಜಿಯವರನ್ನು ವಜಾಗೊಳಿಸಿರುವ ಗವರ್ನರ್ ಕ್ರಮಕ್ಕೆ ಯಾವ ಸಾಂವಿಧಾನಿಕ ಆಧಾರವೂ ಇಲ್ಲ.
ಬಾಲಾಜಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಇನ್ನೂ ಕೆಲವು ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ. ನಂತರ, ಅವರನ್ನು ಸಂಪುಟದಲ್ಲಿ ಮುಂದುವರಿಸುವುದರಿಂದ ನ್ಯಾಯಯುತ ತನಿಖೆ ಸೇರಿದಂತೆ ಕಾನೂನಿನ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರದ ಸ್ಥಗಿತಕ್ಕೆ ಕಾರಣವಾಗಬಹುದು ಎಂಬ ಸಮಂಜಸವಾದ ಆತಂಕಗಳಿವೆ ಎನ್ನುತ್ತದೆ.
ಈ ವಾಕ್ಯ, ರಾಜ್ಯಪಾಲರು ಕೇವಲ ಊಹೆಗಳ ಮೇಲೆ ಈ ನಿಲುವಿಗೆ ಬಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಪತ್ರಿಕಾ ಪ್ರಕಟಣೆಯಲ್ಲಿ, ರಾಜ್ಯಪಾಲರು ಈ ಆತಂಕಗಳು, ಅದರಲ್ಲೂ ಬಾಲಾಜಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವಾಗ ಹೇಗೆ ಸಮಂಜಸವೆಂದು ಕಂಡುಕೊಂಡರು ಎಂಬುದಕ್ಕೆ ವಿವರಣೆಯಿಲ್ಲ.
ಪತ್ರಿಕಾ ಪ್ರಕಟಣೆ, ಈ ಸಮಂಜಸ ಆತಂಕಗಳು ಅಂತಿಮವಾಗಿ ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರದ ಸ್ಥಗಿತಕ್ಕೆ ಕಾರಣವಾಗಬಹುದು ಎಂದು ಸೂಚಿಸುವ ಮೂಲಕ ತನ್ನ ತಾರ್ಕಿಕ ಕ್ರಿಯೆಯಲ್ಲಿ ಮತ್ತೊಂದು ಜಿಗಿತ ತೋರಿಸಿದೆ.
ಭಾರತೀಯ ಸಂವಿಧಾನದ ಯಾವುದೇ ವಿದ್ಯಾರ್ಥಿಗೆ ತಿಳಿದಿರುವಂತೆ, ಸಂವಿಧಾನದ 356ನೇ ವಿಧಿಯ ಅಡಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಕ್ಕೆ ಸಾಂವಿಧಾನಿಕ ಯಂತ್ರದ ಸ್ಥಗಿತ ಎಂಬ ಪದಗುಚ್ಚವನ್ನು ಸಮರ್ಥನೆಯಾಗಿ ಬಳಸಲಾಗುತ್ತದೆ. ರಾಜ್ಯಪಾಲ ರವಿ, ಬಾಲಾಜಿ ವಜಾ ಕ್ರಮದ ಮೂಲಕ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯಿಂದ ರಾಜ್ಯವನ್ನು ಉಳಿಸಿರುವುದಾಗಿ ಸೂಚಿಸುತ್ತಾರೆ.
ಗವರ್ನರ್ ಉಲ್ಲೇಖಿಸಿರುವಂತೆ, ಬಾಲಾಜಿ ಅವರನ್ನು ಸಚಿವರಾಗಿ ಮುಂದುವರಿಸುವುದು ಅನಿವಾರ್ಯವಾಗಿ ರಾಜ್ಯದಲ್ಲಿ 356ನೇ ವಿಧಿಯಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಆಹ್ವಾನ ನೀಡಬಲ್ಲ ಸಾಂವಿಧಾನಿಕ ಯಂತ್ರದ ಕುಸಿತಕ್ಕೆ ಕಾರಣವಾಗುತ್ತದೆ ಎಂದಲ್ಲ. ಅಂತಿಮವಾಗಿ ಸಾಂವಿಧಾನಿಕ ಯಂತ್ರದ ಸ್ಥಗಿತ ಎಂಬುದು ರಾಜಭವನದ ಕೇವಲ ಊಹೆ ಮಾತ್ರವಾಗಿದೆ ಮತ್ತು ಹಾಗೆ ತೀರ್ಮಾನಿಸಲು ಯಾವುದೇ ಗಣನೀಯ ಆಧಾರವಿಲ್ಲ ಎಂಬುದನ್ನೇ ತೋರಿಸುತ್ತದೆ.
ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಗಳು ಸ್ಥಗಿತಗೊಳ್ಳುವ ದೂರದ ಸಾಧ್ಯತೆಯನ್ನು ತಡೆಗಟ್ಟುವ ಸಲುವಾಗಿ ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ತಮ್ಮ ವಿವೇಚನೆಯನ್ನು ಚಲಾಯಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.
ರಾಜ್ಯಪಾಲ ರವಿ ತಮ್ಮ ವಿವೇಚನೆಯನ್ನು ಸಂಪುಟದ ನೆರವು ಮತ್ತು ಸಲಹೆಯಿಲ್ಲದೆ ಸಚಿವರನ್ನು ವಜಾಗೊಳಿಸಲು ವಿಸ್ತರಿಸಬಹುದೆಂದು ಊಹಿಸಿದ್ದಾರೆ. ಇದು ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ರೂಪಿಸಿರುವ ಸಾಂವಿಧಾನಿಕ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ನಬಮ್ ರೆಬಿಯಾ ಮತ್ತು ಬಮಾಂಗ್ ಫೆಲಿಕ್ಸ್ / ಡೆಪ್ಯುಟಿ ಸ್ಪೀಕರ್ ಮತ್ತು ಇತರರ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಪೀಠವು ರಾಜ್ಯಪಾಲರ ವಿವೇಚನೆಯ ಪ್ರಶ್ನೆಯನ್ನು ಬಹಳ ವಿವರವಾಗಿ ಪರಿಶೀಲಿಸಿದೆ. ಈ ವೇಳೆ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟದ ನೆರವು, ಸಲಹೆ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯಪಾಲರಿಗೆ ಅಧಿಕಾರ ಇದೆಯೇ ಎಂಬ ಪ್ರಶ್ನೆ ಎದ್ದಿತ್ತು.
ಸಂವಿಧಾನದ 163 (1)ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರು ತಮ್ಮ ಸ್ವಂತ ವಿವೇಚನೆಯಿಂದ ಸಂವಿಧಾನದ ಮೂಲಕ ಅಥವಾ ಅಡಿಯಲ್ಲಿ ಸ್ಪಷ್ಟವಾಗಿ ಅಗತ್ಯವಿರುವ ಕಾರ್ಯಗಳನ್ನು ಮಾತ್ರ ನಿರ್ವಹಿಸಬಹುದು ಎಂದು ಸಾಂವಿಧಾನಿಕ ಪೀಠ ಹೇಳಿದೆ. ಮುಖ್ಯಮಂತ್ರಿ ನೇತೃತ್ವದ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಮಾತ್ರ ರಾಜ್ಯಪಾಲರು ಸದನವನ್ನು ಕರೆಯಬಹುದು, ಮುಂದೂಡಬಹುದು ಮತ್ತು ವಿಸರ್ಜಿಸಬಹುದೇ ಹೊರತು ಸ್ವತಂತ್ರವಾಗಿ ಅಲ್ಲ ಎಂದು ಪೀಠ ಈ ಪ್ರಕರಣದಲ್ಲಿ ತೀರ್ಮಾನಿಸಿತ್ತು.
ಕಾರಣವೇನೆಂದರೆ, ಸಂವಿಧಾನದ ರಚನೆಕಾರರು ತಮ್ಮ ಮೂಲ ಚಿಂತನೆಯನ್ನು ಬದಲಾಯಿಸಿದ್ದಾರೆ ಮತ್ತು ಉಪ ವಿಧಿ (3)ನ್ನು ಬಿಟ್ಟುಬಿಡುವ ಮೂಲಕ, ರಾಜ್ಯ ಶಾಸಕಾಂಗದ ಸದನ ಅಥವಾ ಸದನಗಳನ್ನು ಕರೆಯುವ ಮತ್ತು ವಿಸರ್ಜಿಸುವ ವಿಷಯವನ್ನು ರಾಜ್ಯಪಾಲರ ವಿವೇಚನೆಗೆ ನೀಡದಿರಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದಾರೆ.
ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಸಂದರ್ಭದಲ್ಲಿ, ರಾಜ್ಯಪಾಲರ ಇಂತಹ ವಿವೇಚನೆ ನ್ಯಾಯಸಮ್ಮತವಾಗಿದೆಯೇ ಎಂದು ಕೇಳುವುದರಲ್ಲಿ ಅರ್ಥವಿದೆ. ಏಕೆಂದರೆ ಸಂಪುಟದ ಸಹಾಯ ಮತ್ತು ಸಲಹೆಯಿಲ್ಲದೆ ಸಚಿವರನ್ನು ವಜಾಗೊಳಿಸುವುದನ್ನು ರಾಜ್ಯಪಾಲರು ವಿವೇಚನೆ ಬಳಸಿ ಮಾಡಬಹುದಾದ ಕಾರ್ಯಗಳಲ್ಲಿ ಒಂದೆಂದು ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ.
ರಾಷ್ಟ್ರದ ಹಿತಾಸಕ್ತಿಗಳಿಗೆ ಯಾವುದು ಹಾನಿಕರ ಅಥವಾ ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲು ಸಂವಿಧಾನವು ರಾಜ್ಯಪಾಲರಿಗೆ ನಿರಂಕುಶ ಅಥವಾ ಸಾಮ್ರಾಜ್ಯಶಾಹಿ ಅಧಿಕಾರವನ್ನು ನೀಡಿಲ್ಲ ಎಂದು ಪೀಠವು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದೆ. ಚುನಾಯಿತ ಪ್ರತಿನಿಧಿಗಳು ಅದನ್ನು ನೋಡಿಕೊಳ್ಳಲು ಸಮರ್ಥರಾಗಿದ್ದಾರೆ. ಅಂತಹ ಗಮನಾರ್ಹ ಸನ್ನಿವೇಶ ಎದುರಾದರೆ, ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದನ್ನು ಅವರಿಗೇ ಬಿಡುತ್ತಾರೆ ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ನ್ಯಾ. ಮದನ್ ಬಿ. ಲೋಕುರ್ ತಮ್ಮ ಸಹಮತದ ತೀರ್ಪಿನಲ್ಲಿ (ಮುಖ್ಯ ತೀರ್ಪನ್ನು ನ್ಯಾ. ಜೆ.ಎಸ್. ಖೇಹರ್ ಓದಿದ್ದರು), ರಾಜ್ಯಪಾಲರು ಸಾಂವಿಧಾನಿಕ ತತ್ವವನ್ನು ಪಾಲಿಸಲು ಮತ್ತು ಅನುಸರಿಸಲು ಬದ್ಧರಾಗಿದ್ದಾರೆ, ಅಂದರೆ ಸಚಿವ ಸಂಪುಟದ ಸಲಹೆಗೆ ಬದ್ಧರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದರು. ಸಲಹೆ ಲಭ್ಯವಾಗದಿದ್ದಲ್ಲಿ ಮತ್ತು ಜವಾಬ್ದಾರಿಯುತ ಸರಕಾರ ಇಲ್ಲವಾಗಿದೆ ಎನ್ನಿಸಿದಲ್ಲಿ ರಾಜ್ಯಪಾಲರು ಸ್ಥಗಿತ ನಿಬಂಧನೆಗಳ ಮೊರೆಹೋಗುವ ಮೂಲಕ ಬಿಕ್ಕಟ್ಟು ಬಗೆಹರಿಸುವ ನಿರ್ಧಾರವನ್ನು ರಾಷ್ಟ್ರಪತಿಗಳಿಗೆ ಬಿಡಬಹುದು ಎಂದು ಅವರು ವಿವರಿಸಿದ್ದಾರೆ.
ರಾಜ್ಯಪಾಲರು ಸಚಿವರ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವುದೇ ಆದಲ್ಲಿ ಮುಖ್ಯಮಂತ್ರಿಯ ಗಮನಕ್ಕೆ ತರುವ ಮೂಲಕ ತಮ್ಮ ವಿವೇಚನೆಯನ್ನು ಚಲಾಯಿಸಬೇಕೇ ಹೊರತು, ಅವರನ್ನು ಕತ್ತಲೆಯಲ್ಲಿರಿಸುವ ಮೂಲಕ ಅಥವಾ ಏಕಪಕ್ಷೀಯವಾಗಿ ಅಲ್ಲ ಎಂದೂ ನ್ಯಾ.ಲೋಕುರ್ ಅಭಿಪ್ರಾಯಪಟ್ಟಿದ್ದಾರೆ.
(ಕೃಪೆ: thewire.in)