‘ಹಿಂದಿ ಹೇರಿಕೆ’ ಹಿಂದಿರುವ ಷಡ್ಯಂತ್ರ ಯಾವುದು?

ಕನ್ನಡಿಗರು ನಿರಭಿಮಾನಿಗಳು. ಹಾಗೆಯೇ ಇಂಗ್ಲಿಷ್ ವ್ಯಾಮೋಹಿಗಳು ಎಂಬುದನ್ನು ಕಳೆದ ಶತಮಾನದ ಆರಂಭಕ್ಕೆ ಅನೇಕರು ಅರ್ಥೈಸಿಕೊಂಡಿದ್ದರು. ಅದಕ್ಕೇ ಕುವೆಂಪುರಂತಹ ಕವಿ ಪುಂಗವರು ‘‘ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’’ ಎಂದು ಒತ್ತಿ ಹೇಳಿದ್ದರು. ಶತಮಾನದ ಅಂತ್ಯದ ಹೊತ್ತಿಗೆ ದೇಶವು ಸ್ವತಂತ್ರಗೊಂಡಾಗ ಎಲ್ಲರ ಮೇಲೆ ಹಿಂದಿ ಭಾಷೆಯನ್ನು ಸ್ವದೇಶಿ ಆಡಳಿತಗಾರರು ಹೇರಲು ಮುಂದಾಗಿಬಿಟ್ಟಾಗ ಅದೇ ಕುವೆಂಪು ‘ತ್ರಿಭಾಷಾ ಸೂತ್ರದ ತ್ರಿಶೂಲ’ ಎಂದು ಕಟುವಾಗಿ ಟೀಕಿಸಿದ್ದರು.
ಹಿಂದಿ ಉತ್ತರ ಭಾರತದ ಮೂರ್ನಾಲ್ಕು ರಾಜ್ಯಗಳ ಭಾಷೆಯಾಗಿದೆ. ಅದು ದೇಶದ ಹೆಚ್ಚು ಜನರಾಡುವ ಭಾಷೆಯಾಗಿತ್ತು. ಅದನ್ನೇ ದೇಶದ ಎಲ್ಲೆಡೆ ಹರಡುವ ಉದ್ದೇಶ ಅಂದಿನ ರಾಜಕಾರಣಕ್ಕಿತ್ತು. ರಾಜಕಾರಣದಲ್ಲಿ ಉತ್ತರದವರ ಪ್ರಾಬಲ್ಯವೂ ಜೋರಾಗಿತ್ತು. ಅದರಿಂದಾಗಿಯೇ ಇತರ ರಾಜ್ಯಗಳವರ ಮೇಲೆ ಅದನ್ನು ಹೇರಲು ಮುಂದಾದರು. ಅಂದು ಹಿಂದಿ ಹೇರಿಕೆ ದೊಡ್ಡ ಸಮಸ್ಯೆಯಾಗಿ ಇತರರಿಗೆ ಕಾಣಲಿಲ್ಲ. ಆದರೆ, ದಕ್ಷಿಣ ರಾಜ್ಯಗಳವರಿಗೆ ಇದು ಬಲವಂತದ ಹೇರಿಕೆ ಅನ್ನಿಸತೊಡಗಿದ್ದು ನಿಜ. ಹಾಗಾಗಿ ಮದ್ರಾಸ್ ರಾಜ್ಯವು ಅದನ್ನು ವಿರೋಧಿಸತೊಡಗಿತು. ಅದರಿಂದ ತಮಿಳು ಭಾಷೆಗೆ ಮಾರಕವಾಗುತ್ತದೆಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅದು ವಾಸ್ತವವೂ ಆಗಿತ್ತು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಒಕ್ಕೂಟ ಸರಕಾರ ದೇಶಕ್ಕೊಂದು ಭಾಷಾ ನೀತಿ ರೂಪಿಸಲು ತರಾತುರಿ ನಡೆಸಿತು. ತ್ರಿಭಾಷಾ ಸೂತ್ರದಡಿಯಲ್ಲಿ ಅಂತರ್ರಾಷ್ಟ್ರೀಯ ವ್ಯವಹಾರಕ್ಕೆ ಇಂಗ್ಲಿಷ್, ದೇಶದೊಳಗಡೆ ಸಂಪರ್ಕ ಭಾಷೆಯಾಗಿ ಹಿಂದಿ, ಮಿಕ್ಕಂತೆ ಪ್ರಾದೇಶಿಕ ಆಡಳಿತಕ್ಕೆ ಸ್ಥಳೀಯ ಭಾಷೆ ಬಳಸಬಹುದೆಂಬ ನೀತಿಯನ್ನು ಘೋಷಿಸಿತು. ಅದನ್ನು ಉತ್ತರ ಮತ್ತು ಮಧ್ಯ ಭಾರತದ ಬಹುತೇಕ ರಾಜ್ಯಗಳು ಒಪ್ಪಿಕೊಂಡವು. ಅಲ್ಲಿಯ ಹಿಂದಿಯೇತರ ಭಾಷೆಗಳಿಗೂ ಹಿಂದಿಗೂ ಸಾಮ್ಯತೆಯಿದ್ದುದು ಅದಕ್ಕೆ ಕಾರಣವಾಗಿತ್ತು.
ವಿಶೇಷವೆಂದರೆ, ದಕ್ಷಿಣದ ಯಾವ ಭಾಷೆಗಳಿಗೂ ಹಿಂದಿ ಸಾಮ್ಯತೆ ಹೊಂದಿರುವುದಿಲ್ಲ. ಕನ್ನಡ, ತಮಿಳು, ತೆಲುಗು, ಮಲೆಯಾಳಿ ಭಾಷೆಗಳಾಡುವ ಜನರಿಗೆ ಹಿಂದಿ ಕಬ್ಬಿಣದ ಕಡಲೆಯಂತೆ ಕಂಡಿತು. ಅದನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲ. ಅದರಲ್ಲೂ ಸ್ವಾಭಿಮಾನಿಗಳಾದ ತಮಿಳು ರಾಜಕಾರಣಿಗಳು ತ್ರಿಭಾಷಾ ನೀತಿಯನ್ನು ಬಲವಾಗಿ ವಿರೋಧಿಸಿದರು. ಯಾವ ಕಾರಣಕ್ಕೂ ಹಿಂದಿಯನ್ನು ಒಪ್ಪಲಾರೆವು ಎಂದು ಪಣ ತೊಟ್ಟರು. ಒಕ್ಕೂಟ ಸರಕಾರಕ್ಕೆ ಭಾಷಾ ನೀತಿ ವಿಚಾರದಲ್ಲಿ ಅವರು ಸೆಡ್ಡು ಹೊಡೆದಿದ್ದು ಇತರ ದಕ್ಷಿಣ ರಾಜ್ಯಗಳಿಗೆ ಪ್ರೇರಣೆ ನೀಡಿತು. ಆದರೂ ತಮಿಳರಂತೆ ಪ್ರಬಲವಾಗಿ ವಿರೋಧಿಸಿ ರಾಜಕೀಯ ನಿಲುವು ತೆಗೆದುಕೊಳ್ಳಲು ಇತರರು ಧೈರ್ಯ ಮಾಡಲಾರದೆ ಹೋಗಿದ್ದು ದುರಂತದ ಸಂಗತಿ. ಅದಕ್ಕೆ ಇನ್ನೊಂದು ಪ್ರಮುಖ ಕಾರಣವೂ ಇತ್ತು. ಒಕ್ಕೂಟದಲ್ಲಿ ಅಧಿಕಾರ ನಡೆಸುತ್ತಿದ್ದ ರಾಜಕೀಯ ಪಕ್ಷವೇ ಆ ರಾಜ್ಯಗಳಲ್ಲೂ ಅಧಿಕಾರ ನಡೆಸುತ್ತಿದ್ದುದರಿಂದ ಪಕ್ಷದ ದಿಲ್ಲಿ ರಾಜಕಾರಣದ ಮುಂದೆ ಸೊಲ್ಲೆತ್ತಲಾರದೆ ಹಿಂಜರಿದಿದ್ದು ಪ್ರಮುಖ ಕಾರಣವಾಗಿಬಿಟ್ಟಿತು.
ಆದರೆ, ತಮಿಳರ ರಾಜ್ಯದಲ್ಲಿ ಬೇರೆಯದೇ ವಾತಾವರಣವಿತ್ತು. ಅಲ್ಲಿ 19ನೇ ಶತಮಾನದಲ್ಲೇ ಸಾಮಾಜಿಕ ಚಳವಳಿಯೊಂದು ಹುಟ್ಟಿಕೊಂಡಿತು. ವಾಸ್ತವವಾಗಿ ಅದೊಂದು ಸ್ವಾಭಿಮಾನದ ಚಳವಳಿಯೂ ಆಯಿತು. ‘ದ್ರಾವಿಡ ಚಳವಳಿ’ ಜನರ ನಡುವೆ ನಡೆಯಿತು. ‘ಧರ್ಮ-ದೇವರು-ನಂಬಿಕೆ-ಮೌಢ್ಯ-ಮತಾಚಾರಗಳನ್ನು ಕೈಗೆತ್ತಿಕೊಂಡಿತು. ಇವೆಲ್ಲವೂ ಜನಸಾಮಾನ್ಯರನ್ನು ಅಡಿಯಾಳಾಗಿಸಿಕೊಳ್ಳುವ, ಶೋಷಣೆ ಮಾಡುವ ಅಸ್ತ್ರಗಳು. ಅವುಗಳನ್ನು ಆಚರಿಸುತ್ತಾ ಹೋದಲ್ಲಿ ಯಾವೊತ್ತಿಗೂ ಬುದ್ಧಿವಂತರ ಗುಲಾಮರಾಗಿಯೇ ಉಳಿಯಬೇಕಾಗುತ್ತದೆ. ಅಂಧಶ್ರದ್ಧೆಗಳಿಂದ ಹೊರ ಬನ್ನಿ. ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಿರಿ. ದೇವರು-ಧರ್ಮ-ಮೌಢ್ಯಗಳೆಲ್ಲಾ ಬುದ್ಧಿವಂತ ಜನರ ಸೃಷ್ಟಿ. ಅವರ ಸುಖ-ಸಂಪತ್ತು-ಸಂತೋಷವನ್ನು ಭದ್ರ ಮಾಡಿಕೊಳ್ಳಲು ಈ ಬಗೆಯ ನಂಬಿಕೆ-ಆಚರಣೆಗಳ ಸುಳ್ಳನ್ನು ಪೋಣಿಸಿದ್ದಾರೆ. ಅದಕ್ಕೆ ಬಲಿಯಾಗಬೇಡಿರಿ’ ಎಂದು ಜನರಲ್ಲಿ ಅರಿವು ಮೂಡಿಸತೊಡಗಿತು ದ್ರಾವಿಡ ಚಳವಳಿ.
ಅದರ ರೂವಾರಿ ರಾಮಸ್ವಾಮಿ ನಾಯ್ಕರ್. ಅವರು ತಮಿಳು ಪ್ರದೇಶದ ಪ್ರಖರ ವಿಚಾರವಾದಿ ನಾಯಕರಾಗಿದ್ದರು. ತಮಿಳರಿಗೆ ತಮಿಳು ಭಾಷೆಯೇ ಶ್ರೇಷ್ಠ ಅಂದರು. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಹಿಂದಿ ಇತ್ತೀಚೆಗೆ ಹುಟ್ಟಿಕೊಂಡ ಭಾಷೆ ಅಂದರು. ಅಂದು ‘ದೇವಭಾಷೆ’ಯೆಂದು ಸಂಸ್ಕೃತವನ್ನು ಇತರರು ಕಲಿಯಲು, ಆಡಲು ಬಿಡದೆ ಹೋದರು. ಅದನ್ನು ಗರ್ಭಗುಡಿಗಳಲ್ಲಿ ತಾವೇ ಸೃಷ್ಟಿಸಿದ ದೇವರನ್ನು ಆರಾಧಿಸಲು ಬಳಸಿದರು. ದೇವರ ಆರಾಧನೆಗೆ ಬಳಸಿದ ಸಂಸ್ಕೃತ ಜನಸಾಮಾನ್ಯರಿಗೆ ಅರ್ಥವಾಗದಂತೆ ನೋಡಿಕೊಂಡರು. ಮದುವೆ-ಮಂಗಳ ಕಾರ್ಯಗಳಲ್ಲೂ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸುತ್ತಾ ಜನರನ್ನು ಕಕ್ಕಾಬಿಕ್ಕಿಯಾಗಿಸಿಬಿಟ್ಟರು. ‘ದೇವಭಾಷೆ ನರ ಮನುಷ್ಯರಿಗೆ ಅರ್ಥವಾಗಲುಂಟೆ?’ ಎಂಬ ಭಯಾತಂಕವನ್ನು ಸೃಷ್ಟಿಸುತ್ತಾ ಹೊರಟರು. ದೇವಭಾಷೆಯನ್ನು ಕಲಿಯಬೇಕೆಂದು ಪಣ ತೊಟ್ಟು ಹೊರಟವರ ನಾಲಿಗೆ ಸೀಳಿಸಿದರು, ಕೇಳಿಸಿಕೊಂಡ ಕಿವಿಗಳಿಗೆ ಕಾದ ಸೀಸ ಸುರಿದರು. ‘ದೇವರನ್ನು ಶ್ಲೋಕದ ಸ್ತುತಿಯಿಂದ ಕರೆಯುವವರು ನಾವೇ. ದೇವರನ್ನು ಆಡಿಸುವವರೂ ನಾವೇ!’ ಎಂಬ ಭ್ರಮೆಯನ್ನು ಹುಟ್ಟು ಹಾಕಿಬಿಟ್ಟರು. ಅದನ್ನು ನಂಬಿದ ಸಹಸ್ರಾರು ಮಂದಿ ನಿರಂತರ ಗುಲಾಮಗಿರಿಗೆ ಸಿಲುಕಿಕೊಂಡು ನರಳಿದ್ದಾರೆ, ನರಳುತ್ತಲೇ ಇದ್ದಾರೆ.
ಅಂತಹ ಭ್ರಮೆ ಕಳಚಲು ನೂರಾರು ವರ್ಷಗಳೇ ಬೇಕಾದವು. ದೇವ ಭಾಷೆ ಎಂಬ ಭ್ರಮೆ ಹುಟ್ಟಿಸಿ ಬರೀ ಪುರೋಹಿತರ ಭಾಷೆಯಾಗಿಟ್ಟುಕೊಂಡಿದ್ದರ ಫಲವೇ ಇಂದು ಸಂಸ್ಕೃತವು ಸತ್ತು ಹೋಗುತ್ತಿರುವ ಭಾಷೆಯಾಗಿದೆ. ಅದಕ್ಕಾಗಿ ಪರಿತಾಪಪಡುತ್ತಿರುವ ಅವರು ಅದರ ಪುನರುಜ್ಜೀವನಕ್ಕೆ ಪ್ರಭುತ್ವಗಳ ಮೊರೆ ಹೋಗಿದ್ದಾರೆ. ಆಡಳಿತ ಮಾಡುವ ಸರಕಾರಗಳು ಜೀವಂತ ಭಾಷೆಗಳನ್ನು ನಿರ್ಲಕ್ಷಿಸಿ ಈ ಭಾಷೆಯ ಉಳಿವಿಗಾಗಿ ಬೇಕಾದಂತೆಲ್ಲಾ ನೆರವು ನೀಡುತ್ತಿವೆ. ಅದಕ್ಕೆ ಇನ್ನೊಂದು ಪೊಳ್ಳನ್ನು ತುರುಕಿದ್ದಾರೆ. ‘ಎಲ್ಲ ಭಾಷೆಗಳಿಗೂ ತಾಯಿ ಭಾಷೆ ಈ ದೇವಭಾಷೆ’ ಎಂದು ಬೊಬ್ಬಿರಿಯುತ್ತಿದೆ.
ಈ ಬಗೆಯ ವಾಸ್ತವ ಸಂಗತಿಗಳನ್ನು ದ್ರಾವಿಡ ಚಳವಳಿ ಜನಸಾಮಾನ್ಯರಲ್ಲಿ ಹೇಳುತ್ತಾ ಅರಿವು ಮೂಡಿಸಲು ಸತತವಾಗಿ ಪ್ರಯತ್ನಿಸಿದ್ದು ಫಲಕಾರಿಯಾಯಿತು. ಜನರಿಗೆ ಸತ್ಯದ ಗೋಚರವಾಯಿತು. ಅವರು ತಮಿಳು ಭಾಷೆಯನ್ನು ಆರಾಧಿಸತೊಡಗಿದರು. ಗರ್ಭಗುಡಿ ಭಾಷೆಯಿಂದ ದೂರವಾದರು. ಗುಡಿ-ಗುಂಡಾರಗಳ ಬಗ್ಗೆ ವಿಚಾರ ಮಾಡಲು ಮುಂದಾದರು. ಅಂತಹ ಅಪೂರ್ವ ಸತ್ಯವನ್ನು ತಿಳಿ ಹೇಳಿದ ರಾಮಸ್ವಾಮಿ ನಾಯ್ಕರ್ರನ್ನು ‘ಪೆರಿಯವರ್’ ಎಂದು ಧ್ಯಾನಿಸತೊಡಗಿದರು.
ಅಂತಹ ಕ್ರಾಂತಿಯ ಕಿಡಿ ಇಡೀ ತಮಿಳು ಪ್ರಾಂತವನ್ನು ಆವರಿಸಿಕೊಂಡಿದ್ದರಿಂದ, ಅದರ ಪ್ರಭಾವದಿಂದ ಸ್ವಾತಂತ್ರ್ಯೋತ್ಸವ ಕಾಲಘಟ್ಟದಲ್ಲಿ ತ್ರಿಭಾಷಾ ಸೂತ್ರದ ಹೆಸರಲ್ಲಿ ಪ್ರಾರಂಭವಾದ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಲು ಸಾಧ್ಯವಾಯಿತು. ಅವರು ಸಂಪರ್ಕ ಭಾಷೆಯಾಗಿ ಇಂಗ್ಲಿಷ್, ಆಡಳಿತ ಭಾಷೆಯಾಗಿ ತಮಿಳು ಸಾಕೆಂದು ದಿಟ್ಟ ನಿಲುವು ತಾಳಿದರು. ಹಾಗಾಗಿ ಹಿಂದಿ ತಮಿಳು ಪ್ರಾಂತದಲ್ಲಿ ನುಸುಳಲು ಸಾಧ್ಯವಾಗಲಿಲ್ಲ. ಒಕ್ಕೂಟ ಸರಕಾರದ ಇಲಾಖೆ-ಸಂಸ್ಥೆಗಳ ಮೂಲಕ ನುಸುಳುತ್ತಿದ್ದ ಹಿಂದಿ ಪದಗಳನ್ನು ಕೂಡಾ ಒಪ್ಪಲು ತಯಾರಾಗಲಿಲ್ಲ. ‘ಆಕಾಶವಾಣಿ’ ಎಂಬ ಪದವನ್ನು ಬಳಸದೆ ಪರ್ಯಾಯ ತಮಿಳು ಪದವನ್ನು ಬಳಸಿಕೊಂಡು ಸ್ವಾಭಿಮಾನವನ್ನು ಮೆರೆದಿದ್ದು ಇತಿಹಾಸವಾಗಿದೆ.
ಹಿಂದಿ ಕೇವಲ 500-600 ವರ್ಷಗಳ ಇತ್ತೀಚಿನ ಭಾಷೆಯೆಂಬ ಸತ್ಯವನ್ನು ನಾವೆಲ್ಲಾ ಅರಿಯದಿದ್ದರೆ ತಪ್ಪಾಗುತ್ತದೆ. ಅದಕ್ಕೂ ಹಿಂದೆ ಒಂದೂವರೆ ಸಾವಿರ ವರ್ಷಗಳ ಮುಂಚಿನಿಂದಲೇ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಭಾಷೆಗಳು ಬಳಕೆಯಲ್ಲಿದ್ದವು ಎಂಬ ನೈಜ ಸಂಗತಿಯನ್ನು ಇತರರಿಗೆ ಅರ್ಥ ಮಾಡಿಸದಿದ್ದರೆ ನಮಗೆ ನಾವೇ ವಂಚನೆ ಮಾಡಿಕೊಂಡಂತಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಭಾಷೆಯನ್ನು ಕೀಳಾಗಿ ಕಂಡು ನಾವು ಉತ್ತರದವರ ಮುಂದೆ ಗುಲಾಮರಂತೆ ಉಳಿಯಬೇಕಾಗುತ್ತದೆಂಬ ವಾಸ್ತವ ಸತ್ಯವನ್ನು ಅರ್ಥೈಸಿಕೊಳ್ಳದಿದ್ದರೆ ನಾವು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ.
ಹಾಗೆ ನೋಡಿದರೆ, ತಮಿಳು ಪ್ರಾಂತದಂತೆಯೇ ಕೇರಳ ಪ್ರದೇಶದಲ್ಲೂ ಕ್ರಾಂತಿ-ಸುಧಾರಣೆಗಳು ನಡೆದಿದ್ದು ಇತಿಹಾಸ ವಾಗಿದೆ. ‘ದೇವರನ್ನು ಮನುಷ್ಯ ಸೃಷ್ಟಿಸಿದ್ದಾನೆ. ದೇವರನ್ನೇ ಮನುಷ್ಯ ತನಗೆ ಬೇಕಾದಂತೆ ಆಡಿಸುತ್ತಾ ಜನಸಾಮಾನ್ಯರನ್ನು ವಂಚಿಸುತ್ತಾ ಹೊರಟಿದ್ದಾನೆ’ ಎಂಬ ನಿಜ ಸತ್ಯವನ್ನು ಹೇಳಲು ಜೀವಮಾನವನ್ನೇ ಕಳೆದವರು ನಾರಾಯಣ ಗುರುಗಳಂಥ ಪ್ರಾಜ್ಞ ಚಿಂತಕರು. ಪುರೋಹಿತಶಾಹಿ ಶೋಷಕರ ಆಟಾಟೋಪಗಳನ್ನು ಬಯಲು ಮಾಡಲು ಪರ್ಯಾಯ ಮಾರ್ಗವನ್ನೇ ಕಂಡುಕೊಂಡರು. ಕೆಳ ಜಾತಿ ಯವರನ್ನು ಜಾಗೃತಗೊಳಿಸಿದರು. ಅವರು ಪುರೋಹಿತಶಾಹಿಗಳಿಂದ ದೂರವಿರುವಂತೆ ನೋಡಿಕೊಂಡರು. ಆ ಜನರಲ್ಲಿ ಸ್ವಾಭಿಮಾನದ ಬೀಜ ಬಿತ್ತಿದರು. ಅದು ಹೆಮ್ಮರವಾಗಿ ಬೆಳೆದಿದ್ದರಿಂದ ಆ ಪ್ರದೇಶವು ಸ್ವಾಭಿಮಾನದ ಬೀಡಾಯಿತು. ಅಲ್ಲಿಯ ಜನಭಾಷೆ ಮಲೆಯಾಳಿ ಪ್ರವರ್ಧಮಾನಕ್ಕೆ ಬೆಳೆದು ನಿಂತಿತು.
ಅಂತೆಯೇ, ನೂರಾರು ವರ್ಷಗಳ ಮುಂಚೆಯೇ ಕನ್ನಡ ನೆಲದಲ್ಲಿಯೂ ಸಾಮಾಜಿಕ-ಭಾಷಿಕ-ಧಾರ್ಮಿಕ ಕ್ರಾಂತಿ ನಡೆಯಿ ತೆಂಬುದು ಹೆಮ್ಮೆಯ ಇತಿಹಾಸವಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರು ಭದ್ರವಾಗಿ ಬೇರೂರಿದ್ದ ವೈದಿಕಶಾಹಿಗಳ ಕುಟಿಲ ತಂತ್ರದ ವಿರುದ್ಧ ಬಂಡಾಯ ಮೊಳಗಿಸಿದ್ದು ಸಾಧಾರಣ ಸಂಗತಿಯಲ್ಲ. ‘ಸೃಷ್ಟಿಯ ಮುಂದೆ ಎಲ್ಲರೂ ಸಮಾನರು. ಇಲ್ಲಿ ಮೇಲು-ಕೀಳು ಎಂಬುದೆಲ್ಲಾ ಮನುಷ್ಯ ಸೃಷ್ಟಿಗಳು. ಜಾತಿ-ಮತ ಭೇದಗಳೂ ಮನುಷ್ಯ ಸೃಷ್ಟಿಯೇ ಹೊರತು ದೈವ ಸೃಷ್ಟಿಯಲ್ಲ. ಮತ-ಮೌಢ್ಯಾಚರಣೆ ಬಿಡಿ, ಎಲ್ಲರೂ ಒಂದೆಂದು ತಿಳಿದು ಮುನ್ನಡಿಯಿಡಿ. ದೇವರು ಗುಡಿಯಲ್ಲಿಲ್ಲ, ನಿಮ್ಮ ಎದೆಯೊಳಗೇ ಇದ್ದಾರೆ’ ಎಂದು ಇಷ್ಟಲಿಂಗವನ್ನು ತೋರಿದವರು. ಎಲ್ಲ ಜಾತಿ-ಪಂಗಡಗಳವರು ಮನುಷ್ಯ ಮಾತ್ರದವರು ಎಂದು ಘೋಷಿಸಿದವರು. ಅರ್ಥವಾಗದ ದೇವಭಾಷೆಯ ಸಹವಾಸ ಬಿಡಿರಿ. ನಿಮ್ಮೆದೆಯ ಭಾಷೆ ಕನ್ನಡವೇ ನಿಮ್ಮ ಪಾಲಿನ ದೇವಭಾಷೆ ಎಂದು ಅಧಿಕೃತ ಮುದ್ರೆಯೊತ್ತಿದವರು. ಅದು ಕನ್ನಡದ ಕನ್ನಡ ಕ್ರಾಂತಿ ಕಹಳೆ ಮೊಳಗಿದ ಕಾಲ.
ಅಲ್ಲಿಂದ ಮೇಲಿಂದ ಮೇಲೆ ಬಂದ ದಾಸರು, ಸಂತರು, ಫಕೀರರು, ಸರ್ವಜ್ಞರು, ಕವಿ ಪುಂಗವರೆಲ್ಲಾ ಕನ್ನಡವೇ ದೈವ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಕನ್ನಡವು ದೈವ ಭಾಷೆ, ವಿದೇಶಿ ಭಾಷೆ, ಸ್ವದೇಶಿ ಹೇರಿಕೆ ಭಾಷೆಗಳ ತುಳಿತದಲ್ಲಿಯೂ ಉಳಿದು ಬೆಳೆದುಕೊಂಡು ಬಂದಿದೆಯೆಂಬುದನ್ನು ಮರೆಯಬಾರದು. ಕನ್ನಡ ಜನಭಾಷೆ. ಇದಕ್ಕೆ ಸಾವು ಬರದು ಎಂಬ ಸತ್ಯ ಪ್ರಭುತ್ವಕ್ಕೆ ಅರಿವಾಗಿದೆ. ಆದರೆ ಸತ್ತ ಭಾಷೆ, ಹೇರಿಕೆ ಭಾಷೆಗಳು ಪ್ರಭುತ್ವದ ಬಲದಿಂದಲೇ ಬದುಕಬೇಕಾಗಿದೆ. ಹಾಗಾಗಿ, ಅವುಗಳಿಗೆ ವಿಶ್ವವಿದ್ಯಾನಿಲಯ, ಅಕಾಡಮಿಗಳು, ಶಿಕ್ಷಣದಲ್ಲಿ ಕಡ್ಡಾಯ, ಆಗಷ್ಟೆ ಶಾಲೆಗೆ ಸೇರುವ ಮಗುವಿಗೂ ಕಲಿಸಬೇಕೆಂಬ ಶಾಸನ ರೂಪಿಸುವ ದುರುಳತನ ಹೆಚ್ಚುತ್ತಿರುವುದನ್ನು ಕಾಣುವ ದುರಂತ ಎದುರಾಗಿದೆ.
ಆಂಧ್ರದಲ್ಲೂ ಹಿಂದಿಗೆ ಸೆಡ್ಡು ಹೊಡೆಯುವ ಪ್ರಯತ್ನಗಳು ನಡೆದಿದ್ದುಂಟು. ವಿಶಾಲಾಂಧ್ರದಲ್ಲಿ ತೆಲುಗು ಭಾಷೆಗಾಗಿ ಕ್ರಾಂತಿಯೇ ನಡೆದಿರುವ ಉದಾಹರಣೆಗಳಿವೆ. ಅದರ ಪರಿಣಾಮವಾಗಿ ತೆಲುಗರು ಸ್ವಾಭಿಮಾನಿಗಳು ಎಂಬಂತೆ ತಮ್ಮತನ ಮೆರೆದಿದ್ದಾರೆ. ಈ ಹೊತ್ತಿಗೂ ತೆಲುಗು ಭಾಷೆ ದೇಶದಲ್ಲಿ ಅತಿ ಹೆಚ್ಚು ಜನರು ಮಾತಾಡುವ ಎರಡನೇ ಭಾಷೆಯಾಗಿದೆ. ತೆಲುಗು ಚಿತ್ರಗಳು ದೇಶಾದ್ಯಂತ ಸದ್ದು ಮಾಡುತ್ತವೆ. ಆ ಜನರೂ ಇತರರೊಡನೆ ಮಾತಾಡುವಾಗ ತಮ್ಮತನ ಉಳಿಸಿಕೊಂಡು ಬಂದಿರುವುದು ಹೆಗ್ಗಳಿಕೆಯಾಗಿ ಉಳಿದಿದೆ.
ವಾಸ್ತವ ಸತ್ಯ ಇಂತಿದ್ದರೂ, ತಮಿಳುನಾಡು ಹೊರತಾಗಿ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ ರಾಜ್ಯಗಳು ತ್ರಿಭಾಷಾ ಸೂತ್ರದ ಹೆಸರಲ್ಲಿ ಹಿಂದಿ ಹೇರಿಕೆಯನ್ನು ಸಹಿಸಿಕೊಳ್ಳುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಕರ್ನಾಟಕವು 1960ರ ದಶಕದಲ್ಲಿ ರಾಜಕಾರಣದ ದೌರ್ಬಲ್ಯದ ಕಾರಣಕ್ಕೆ ತಪ್ಪೆಸಗಿದೆ. ಉಳಿದ ರಾಜ್ಯಗಳೂ ಹಾಗೇ ತಪ್ಪು ಮಾಡಿರುವುದುಂಟು. ಆದರಿಂದು ಹಿಂದಿ ಹೇರಿಕೆಯು ಪರೋಕ್ಷವಾಗಿ ದಬ್ಬಾಳಿಕೆಯ ರಾಜಕಾರಣವಾಗುತ್ತಿದೆ. ತಮಿಳುನಾಡಿನ ಬಲಾಢ್ಯ ರಾಜಕಾರಣವನ್ನೇ ಹಿಂದಿ ಹೆಸರಲ್ಲಿ ಅಲುಗಾಡಿಸುವ ದುಷ್ಟ ರಾಜಕಾರಣ ‘ದಿಲ್ಲಿ ದೊರೆಗಳಿಂದ’ ನಡೆಯುತ್ತಿದೆ. ಹಿಂದಿ ಒಪ್ಪದಿದ್ದವರು, ಕಲಿಯಲೊಪ್ಪದವರು ದೇಶದ್ರೋಹಿಗಳೆಂದು ಘೋಷಿಸುವ ಮಟ್ಟಕ್ಕೆ ಒಕ್ಕೂಟ ಸರಕಾರದ ರಾಜಕಾರಣದ ಅಟ್ಟಹಾಸ ಮೆರೆಯುತ್ತಿದೆ.
ದೇಶಕ್ಕೆಲ್ಲಾ ಒಂದೇ ಭಾಷೆ-ಒಂದೇ ಧರ್ಮ-ಒಂದೇ ನೀತಿ-ಒಂದೇ ಕಾನೂನು-ಒಂದೇ ಚುನಾವಣೆ ಎಂಬ ಅಪಾಯಕಾರಿ ತತ್ವವನ್ನು ಹೇಳುವ ಇಂದಿನ ದಿಲ್ಲಿ ಪ್ರಭೃತಿಗಳು ಉತ್ತರ ಭಾರತಕ್ಕೆ ತ್ರಿಭಾಷಾ ಸೂತ್ರವನ್ನು ಅಳವಡಿಸದೆ ಇನ್ನೊಂದು ರೀತಿಯಲ್ಲಿ ವಂಚಿಸತೊಡಗಿದ್ದಾರೆ. ಕನ್ನಡಿಗರು-ತಮಿಳರು-ತೆಲುಗರು- ಮಲಯಾಳಿಗಳು ಮೂರನೇ ಭಾಷೆ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ದಬ್ಬಾಳಿಕೆ ಮಾಡುವವರು ಹಿಂದಿವಾಲಾಗಳಿಗೆ, ರಾಜಸ್ಥಾನಿಗಳಿಗೆ, ಬಂಗಾಳಿಗಳಿಗೆ, ಬಿಹಾರಿಗಳಿಗೆ ಕನ್ನಡ-ತಮಿಳು-ತೆಲುಗು-ಮಲಯಾಳಿ ಭಾಷೆಗಳಲ್ಲಿ ಒಂದನ್ನಾದರೂ ಮೂರನೇ ಭಾಷೆಯಾಗಿ ಕಲಿಯಬೇಕು ಎಂದು ಹೇಳಲಾರದೆ ಹೋಗಿರುವುದು ವಿಪರ್ಯಾಸವಾಗಿದೆ.
ಸ್ವಾತಂತ್ರ್ಯೋತ್ತರ ಕಾಲದ ರಾಜಕೀಯ ಹಿಂದಿಯೇತರರಿಗೂ ಹಿಂದಿಯನ್ನು ಕಲಿಸುವ ಹಂಬಲವನ್ನಷ್ಟೆ ಹೊಂದಿತ್ತು. ಆದರೆ, ಬಲವಂತವಾಗಿ ಹೇರಲು ಹಟ ತೊಟ್ಟಿರಲಿಲ್ಲ. ಆದರೂ, ಹಿಂದಿ ಹರಡಲು ಹೆಚ್ಚಿನ ಹಣವನ್ನು ವ್ಯಯ ಮಾಡುತ್ತಿದ್ದುದುಂಟು. ಆದರೆ, ಈ ಹೊತ್ತಿನ ರಾಜಕಾರಣವು ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಎಲ್ಲ ಜನರಿಗೂ ಹಿಂದಿ ಕಡ್ಡಾಯ ಕಲಿಕೆ ಮಾಡಿಸಲೇಬೇಕೆಂಬ ಶಪಥ ಮಾಡಿಬಿಟ್ಟಿದೆ. ಅದಕ್ಕೆ ಅವರೇ ಅಳವಡಿಸಿಕೊಂಡಿರುವ ಕೋಮು ಸಿದ್ಧಾಂತ ಮುಖ್ಯ ಕಾರಣವಾಗಿದೆ. ‘ಇದು ಹಿಂದೂಸ್ಥಾನ. ಇಲ್ಲಿ ಹಿಂದೂಗಳೇ ಇರಬೇಕು. ಹಾಗೇ ಹಿಂದೂಗಳಿಗಾಗಿ ಏಕೈಕ ಭಾಷೆ ಹಿಂದಿ ಇರಬೇಕೆಂಬುದು ಅವರ ಸಿದ್ಧಾಂತವಾಗಿದೆ. ಅದಕ್ಕಾಗಿ ಹಿಂದೂಯೇತರರನ್ನು, ಹಿಂದಿಯೇತರರನ್ನು ಕೀಳಾಗಿ ಕಾಣತೊಡಗಿದ್ದಾರೆ. ಇದನ್ನು ಒಪ್ಪದವರನ್ನು ದೇಶದ್ರೋಹಿಗಳೆಂದು ಸಾರಲು ಷಡ್ಯಂತ್ರ ರೂಪಿಸುತ್ತಿದ್ದಾರೆ. ಹಿಂದೂ-ಹಿಂದೂಸ್ಥಾನ-ಹಿಂದಿ ಎಂಬುದು ಅವರ ರಾಜಕಾರಣದ ಏಕೈಕ ಗುರಿಯಾಗಿದೆ. ಇತರರನ್ನು ಇನ್ನಿಲ್ಲವಾಗಿಸುವ ದುರುಳತನವೂ ಗೋಚರವಾಗುತ್ತಿದೆ.
ಹಿಂದಿ ಹೇರಿಕೆಗೆ ಹಟ ತೊಟ್ಟವರು ಬೇರಾರೂ ಅಲ್ಲ. ಸಹಸ್ರ ವರ್ಷಗಳ ಹಿಂದೆ ದೈವ ಭಾಷೆ ಹೆಸರಲ್ಲಿ ಸಂಸ್ಕೃತವನ್ನು ಬರೀ ತಮ್ಮ ಭಾಷೆಯಾಗಿ ಮಾಡಿಕೊಂಡು ಶತಮಾನಗಳ ಕಾಲ ಜನಸಾಮಾನ್ಯರನ್ನು ಅಡಿಯಾಳಾಗಿಟ್ಟುಕೊಂಡು ಸುಖ-ಸಂಪತ್ತಿನಲ್ಲಿ ತೇಲಾಡಿದವರೇ ಈಗ ಹಿಂದಿ ವೇಷ ತೊಟ್ಟು ಬಂದಿದ್ದಾರೆ. ಅವರ ಹಿಂದೂ-ಹಿಂದೂಸ್ಥಾನ-ಹಿಂದಿ ಸಿದ್ಧಾಂತ ಯಶಸ್ವಿಗೊಂಡರೆ ಮಾತೃಭಾಷೆ ಹೆಸರನ್ನುಳಿಸಿಕೊಳ್ಳಲು ಹೋರಾಡು ತ್ತಿರುವ ಜನ ಸಮುದಾಯಗಳು ಅಪಾಯಕಾರೀ ನರಳಿಕೆಗೆ ಸಿಲುಕಿಕೊಳ್ಳಬೇಕಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ದಕ್ಷಿಣದ ರಾಜ್ಯ ಮತ್ತು ಭಾಷೆಗಳನ್ನು ಆಪೋಷನ ಮಾಡಿಕೊಳ್ಳುವ ದುರುಳ ರಾಜಕಾರಣ ಮೇಲುಗೈ ಸಾಧಿಸದೇ ಇರದು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ತುರ್ತಾಗಿದೆ.