ಕೊರೋನ ಸುದ್ದಿಗೆ ಏಕಿಷ್ಟು ಮಹತ್ವ?
✍ ದಮ್ಮಪ್ರಿಯ ಬೆಂಗಳೂರು |
ಮಾಧ್ಯಮಗಳು ಮತ್ತೊಮ್ಮೆ ಕೊರೋನ ಸುದ್ದಿಯನ್ನು ದಿನವಿಡೀ ಪ್ರಸಾರ ಮಾಡಲು ಆರಂಭಿಸಿ ಜನತೆಯನ್ನು ಆತಂಕಕ್ಕೆ ದೂಡುತ್ತಿವೆ. ಭಾರತೀಯ ಬಹುಸಂಖ್ಯಾತ ಜನರು ಈಗಾಗಲೇ ಹಲವಾರು ತೊಂದರೆಗಳಿಂದ ತತ್ತರಿಸಿಹೋಗಿದ್ದಾರೆ. ಹಿಂದಿನ 2019ರ ಕೋವಿಡ್ ಮಹಾಮಾರಿಯಿಂದ ಸಾಮಾನ್ಯ ಜನರ ಬದುಕು ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಗೆ ತಲುಪಿದೆ. ಅಂದಿನ ಭಾರತದ ‘ಲಾಕ್ಡೌನ್’ ವ್ಯವಸ್ಥೆಗೆ ಇಂದಿಗೂ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಅಂದಿನ ವ್ಯವಸ್ಥೆ ಇನ್ನೆಂದೂ ಬರಬಾರದು ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮಾನಸಿಕ ವೇದನೆಯಾಗಿದೆ. ದುಡಿಯುವ ಯುವಕರು ಮತ್ತೆ ಉದ್ಯೋಗ ಕಳೆದುಕೊಂಡು ಬೀದಿಪಾಲಾಗುತ್ತೇವೇನೋ ಎನ್ನುವ ಆತಂಕ ನಿರ್ಮಾಣವಾಗಿದೆ. ಹಾಗಾಗಿ ಕೊರೋನ ಸುದ್ದಿಗಳನ್ನು ವಿಜೃಂಭಿಸುವ ಮುನ್ನ ಮಾಧ್ಯಮಗಳು ಇನ್ನಾದರೂ ಸಾಕಷ್ಟು ಯೋಚಿಸಬೇಕಾಗಿದೆ.
ದೇಶದಲ್ಲಿ ಅಪೌಷ್ಟಿಕತೆಯಿಂದ ದಿನನಿತ್ಯ ಸಾವಿರಾರು ಹಸುಗೂಸುಗಳು ನರಳಿ ಸಾಯುತ್ತಿರುವಾಗ, ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿಯೇ ಭ್ರೂಣಹತ್ಯೆ ಎನ್ನುವ ಅಮಾನವೀಯ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿರುವಾಗ, ಧರ್ಮ-ಜಾತಿಗಳ ನೆಪಗಳಲ್ಲಿ ಸಾವಿರಾರು ಜನರ ಹತ್ಯೆ ನಡೆಯುತ್ತಿರುವಾಗ ಕೊರೋನ ಎನ್ನುವ ವೈರಸ್ ಇವೆಲ್ಲವುಗಳಿಗಿಂತ ಭೀಕರವೇ?. ಜಾತಿ ಧರ್ಮದ ನೆರಳಲ್ಲಿ ನಡೆಯುವ ರಾಜಕಾರಣದ ಮುಂದೆ ಕೊರೋನ ಯಾವ ಲೆಕ್ಕ?
ಈಗ ನಮ್ಮನ್ನಾಳುವವರಿಂದ ನಮ್ಮ ಸಂವಿಧಾನವನ್ನು ಎಷ್ಟು ವಿರೂಪಗೊಳಿಸಲು ಸಾಧ್ಯವೋ ಅಷ್ಟೆಲ್ಲಾ ಯತ್ನಗಳು ಸತತವಾಗಿ ನಡೆಯುತ್ತಲೇ ಇವೆ. ಈಗ ಜನರನ್ನು ಚುನಾವಣೆಯ ನೆಪದಲ್ಲಿ ದಿಕ್ಕು ತಪ್ಪಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊರಟಿರುವ ಸರಕಾರಕ್ಕೆ ತಾವು ಮಾಡಿರುವ ಸಾಧನೆ ಮತ್ತು ಮುಂದಿನ ಗುರಿ ಹೇಳಿಕೊಳ್ಳಲಾಗುತ್ತದೆಯೇ.
ತಮ್ಮ ಅವಧಿಯಲ್ಲಿ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಯಿತು? ರೂ. 500, 1,000 ಮುಖ ಬೆಲೆಯ ನೋಟಿನ ರದ್ದತಿಯಿಂದ ಎಷ್ಟು ಕಪ್ಪು ಹಣವನ್ನು ಹೊರ ತೆಗೆಯಲಾಯಿತು.? ರೈಲ್ವೆ ಉದ್ದಿಮೆಯನ್ನು ಖಾಸಗಿಯವರ ಕೈಗೊಪ್ಪಿಸಿದ ಮೇಲೆ ಎಷ್ಟು ಲಾಭ ಭಾರತದ ಖಜಾನೆಗೆ ಬಂದು ಸೇರಿತು? ಬಂದರು, ವಿಮಾನ ಯಾನ ಎಲ್ಲವನ್ನು ಖಾಸಗಿಯವರಿಗೆ ನೀಡಿದ ಮೇಲೆ ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ಎಷ್ಟನೇ ಸ್ಥಾನದ್ಲಲಿದೆ? ಕಳೆದ 10 ವರ್ಷಗಳ ಆಳ್ವಿಕೆಯಲ್ಲಿ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಲಾಯಿತು? ಕಾರ್ಪೊರೇಟ್ ಕಂಪೆನಿಗಳ ಸಾಲ ಕಳೆದ 10 ವರ್ಷಗಳಲ್ಲಿ ಸುಮಾರು ರೂ. 15.50 ಲಕ್ಷ ಕೋಟಿಗೂ ಹೆಚ್ಚಾಗಿ ರೈಟಪ್ ಮಾಡಿದ ಹಾಗೆ ಸಾಮಾನ್ಯ ಜನರ ಸಾಲವನ್ನು ಎಷ್ಟು ಮನ್ನಾ ಮಾಡಲಾಗಿದೆ? ದೇಶದ ಲಾಭದಾಯಕ ಬ್ಯಾಂಕುಗಳನ್ನು ವಿಲೀನ ಮಾಡಿ ಸಾಧಿಸಿದ್ದೇನು? 2019 ರ ಚುನಾವಣೆಗೂ ಮುನ್ನಾ ಸುಮಾರು 1ಲಕ್ಷದ 71 ಸಾವಿರ ಕೋಟಿ ತುರ್ತು ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಯಿತು? ಸಹಸ್ರಾರು ಬಿಎಸ್ಎನ್ಎಲ್ ಟವರ್ಗಳನ್ನು ಜಿಯೋ ಆಗಿ ಪರಿವರ್ತಿಸಿ, ಬಿಎಸ್ಎನ್ಎಲ್ ನೌಕರರ ಬಾಯಿಗೆ ಮಣ್ಣು ಹಾಕಿದ್ದಾಯಿತು. ಹಾಗಾದರೆ ಜಿಯೋ ಕಂಪೆನಿಯವರು ಸರಕಾರಕ್ಕೆ ನೀಡಿದ ಲಾಭವೆಷ್ಟು? ಇದಕ್ಕೆಲ್ಲ ಉತ್ತರ ಕೊಡುವವರು ಯಾರು?
ಈ ಎಲ್ಲದರ ಬಗ್ಗೆ ನಿರಂತರ ಪ್ರಶ್ನಿಸಬೇಕಾದ ಮಾಧ್ಯಮಗಳು ಮತ್ತೆ ಕೋವಿಡ್ನ ಹಿಂದೆ ಬಿದ್ದಿರುವುದು ಯಾರನ್ನು ಮೆಚ್ಚಿಸಲು?
ಕೋವಿಡ್-19 ಸಂದರ್ಭದಲ್ಲಾದ ಅವಾಂತರಗಳಿಂದ ಜನಸಾಮಾನ್ಯರ, ಕೆಳವರ್ಗಗಳ ಆರ್ಥಿಕತೆಯ ಸೊಂಟ ಮುರಿದಿದೆ. ಈಗ ಮತ್ತೊಮ್ಮೆ ಕೊರೋನ ಎನ್ನುವ ವೈರಸನ್ನು ಎಲ್ಲರ ತಲೆಯಲ್ಲೂ ತುಂಬುತ್ತಿರುವ ಮಾಧ್ಯಮಗಳು ನಿರೀಕ್ಷಿಸುತ್ತಿರುವುದಾದರೂ ಏನನ್ನು?