ಕಳೆದುಹೋದ ಅವಳ ದನಿಗಳ ಹುಡುಕುತ್ತಾ...
- ಡಾ. ಭಾರತಿ ದೇವಿ ಪಿ.
ಶಿವಮೊಗ್ಗ
‘‘ಭಾರತದ ಬಾವುಟವ ಸುತ್ತಿ ಬಾಯಿಗೆ ತುರುಕಿ ಕಿತ್ತುಕೊಂಡರು ಅವಳ ಮಾತುಗಳನು’’
ಸ್ವತಂತ್ರ ಭಾರತ ಎಪ್ಪತ್ತೈದರ ಹೊಸ್ತಿಲಲ್ಲಿರುವ ಈ ಹೊತ್ತು ಕವಿ ಡಾ.ಸಿದ್ದಲಿಂಗಯ್ಯ ಅವರ ಈ ಸಾಲುಗಳು ಮತ್ತೆ ಮತ್ತೆ ಕಾಡುತ್ತಿವೆ. ದೇಶವನ್ನು ತಾಯಿಯಾಗಿ ಹೆಣ್ಣಾಗಿ ಕಾಣುವ ಬಗೆ ನಮ್ಮಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಭಾರತಾಂಬೆ, ಭಾರತ ಮಾತೆ ಎಂಬ ಸಂಕಥನಗಳು ನಮ್ಮಲ್ಲಿ ಆಳವಾಗಿ ಬೇರೂರಿವೆ. ಸ್ವಾತಂತ್ರ್ಯ ದೊರೆತು ೭೫ ವರ್ಷ ಕಳೆದ ಈ ಸಂದರ್ಭದಲ್ಲಿ ಎಲ್ಲ ಸಂಪನ್ಮೂಲ, ಶಕ್ತಿ ಇದ್ದೂ ಈ ದೇಶ ತಲುಪಿರುವ ಸ್ಥಿತಿ ಮತ್ತು ಸ್ವತಂತ್ರ ಭಾರತದ ಮಹಿಳೆಯರ ಸ್ಥಿತಿಯನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಮಣಿಪುರದಲ್ಲಿ ಮಹಿಳೆಯರ ವಸ್ತ್ರ ಸೆಳೆದು ದೌರ್ಜನ್ಯ ನಡೆಸಿದ ಪರಿ, ನಮ್ಮಲ್ಲೇ ತುಂಡು ಬಟ್ಟೆಗಾಗಿ ಹೆಣ್ಣುಮಕ್ಕಳಿಂದ ಶಿಕ್ಷಣವನ್ನು ಕಸಿದ ಪರಿ ಕಣ್ಣ ಮುಂದೆ ಮತ್ತೆ ಮತ್ತೆ ಸುಳಿಯುತ್ತಿವೆ. ಹಸಿವು, ಮೌಢ್ಯ, ತಾರತಮ್ಯ, ನಿರುದ್ಯೋಗ, ದ್ವೇಷ ವಿವಿಧ ವೇಷಗಳಲ್ಲಿ ಕುಣಿಯುತ್ತಾ ನೆಲವನ್ನು ಅದುರಿಸುತ್ತಿವೆ. ಕುವೆಂಪು ಅಂದು ಚಿತ್ರಿಸಿದ ಹೊದ್ದುಕೊಳ್ಳಲು ಸರಿಯಾದ ಬಟ್ಟೆಯಿಲ್ಲದೆ ‘ಚಳಿಯ ಮಳೆಯಲಿ’ ನವೆವ ತಾಯಿಯ ಚಿತ್ರ, ಅಂದಿನಿಂದ ಇಂದಿಗೂ ಅದೇ ಬಗೆಯಲ್ಲಿ ಇರುವುದನ್ನು ಮೇಲಿನ ಘಟನೆಗಳು ಹೇಳುತ್ತಿವೆ.
ಭಾರತ, ಬ್ರಿಟಿಷ್ ಆಡಳಿತದಿಂದ ಮುಕ್ತಗೊಂಡ ಬಳಿಕ ಒಂದಷ್ಟು ದೂರ ಸಾಗಿಬಂದಿರುವುದೇನೋ ಹೌದು. ಇಲ್ಲಿ ಹಲವು ಹಿಗ್ಗಿನ ಕಥೆಗಳಿವೆ, ದಿಟ್ಟತನದ ನಿದರ್ಶನಗಳಿವೆ, ನಿಟ್ಟುಸಿರು, ಅವಮಾನ, ಕಣ್ಣೀರಿನ ಕಥೆಗಳೂ ಇವೆ. ಕುಂಟುತ್ತಾ, ತೆವಳುತ್ತಾ ಮುಂದೆ ಸರಿದ ಈ ಹಾದಿಯ ಮೈಲುಗಲ್ಲುಗಳು ನಾವು ನಡೆದ ದೂರ ತಿಳಿಸುತ್ತಾ ಅವಲೋಕನಕ್ಕೆ, ಸ್ವವಿಮರ್ಶೆಗೆ ನಮ್ಮನ್ನು ದೂಡುತ್ತವೆ. ಈ ಬಿಂದುವಿನಲ್ಲಿ ನಿಂತ ನಾವು ಹಿಂದಿರುಗಿ ನೋಡಿದಾಗ ಕಾಣುವ ಚಿತ್ರ ಹಲವು ಬಣ್ಣಗಳು ಮೇಳೈಸಿದ, ಹಲವು ತುಂಡುಗಳನ್ನು ಸೇರಿ ಹೊಲಿದ ಕೌದಿಯ ಹಾಗೆ ಕಾಣುತ್ತದೆ.
ಸ್ವತಂತ್ರ ಭಾರತ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂಬ ಅರಿವು ಮತ್ತು ಘೋಷಣೆಯೊಂದಿಗೆ ಅಡಿಯಿಟ್ಟಿತ್ತು. ಇದಕ್ಕೂ ಹಿಂದೆ ಈ ನಿಟ್ಟಿನಲ್ಲಿ ನಡೆದ ಚಳವಳಿ, ಸುಧಾರಣಾವಾದಿ ಕೆಲಸಗಳ ದೊಡ್ಡ ಪರಂಪರೆಯೇ ಇದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂದರ್ಭ ನಮ್ಮನ್ನೇ ನಾವು ನೋಡಿಕೊಳ್ಳುವ ಅವಕಾಶ ಒದಗಿಸಿತು. ಪರಕೀಯರ ಹಿಡಿತದಿಂದ ಮುಕ್ತವಾಗಲು ಹೋರಾಟ ನಡೆಸುತ್ತಿದ್ದ ಹೊತ್ತಿನಲ್ಲೇ ನಮ್ಮನ್ನು ಕಟ್ಟಿಹಾಕಿರುವ ಇತರ ಸಂಕಲೆಗಳಿಂದ ಬಿಡಿಸಿಕೊಳ್ಳುವ ಯತ್ನವೂ ಜೊತೆಜೊತೆಗೇ ನಡೆಯಿತು. ಬ್ರಿಟಿಷರ ವಿರುದ್ಧ ಒಂದಾಗಬೇಕು ಎನ್ನುವಾಗ ಜಾತಿ, ಲಿಂಗ, ಧರ್ಮ ಮುಂತಾದವುಗಳನ್ನು ಇಟ್ಟುಕೊಂಡು ಹಿಂದಿನಿಂದಲೂ ನಡೆದುಕೊಂಡು ಬಂದ ತಾರತಮ್ಯ, ಒಡಕುಗಳು ಕಣ್ಣಿಗೆ ರಾಚತೊಡಗಿದವು. ಇವುಗಳನ್ನು ಬದಿಗಿಟ್ಟು ನಾವು ಒಂದಾಗಬೇಕೆನ್ನುವ ಹಂಬಲ ಎಲ್ಲರನ್ನೂ ಚಳವಳಿಗೆ ಎಳೆತಂದಿತು.
ಈ ಚಾರಿತ್ರಿಕ ಕಾಲಘಟ್ಟದಲ್ಲಿಯೇ ರಾಜಾರಾಮ್ ಮೋಹನ್ ರಾಯ್, ಜ್ಯೋತಿಬಾ ಫುಲೆ, ದಯಾನಂದ ಸರಸ್ವತಿ ಮುಂತಾದವರು ಸಮಾಜದಲ್ಲಿ ಮಹಿಳೆಯರ ಸ್ಥಿತಿಯನ್ನು ನೋಡಿ ಸಂಕಟಪಟ್ಟರು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಅನೇಕ ಸುಧಾರಣಾ ಕೆಲಸಗಳನ್ನು ಕೈಗೊಂಡರು. ಇವುಗಳ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಹಿಳೆಯರು ಚಳವಳಿಗೆ ಧುಮುಕಿದರು; ಜೈಲಿಗೂ ಸೇರಿದರು. ಸರೋಜಿನಿ ನಾಯ್ಡು, ವಿಜಯಲಕ್ಷ್ಮೀ ಪಂಡಿತ್, ಸುಚೇತಾ ಕೃಪಲಾನಿ, ಕಮಲಾ ದೇವಿ ಚಟ್ಟೋಪಾಧ್ಯಾಯ ಹೀಗೆ ಹಲವಾರು ಮಹಿಳಾ ನೇತಾರರು ಈ ಸಮಯದಲ್ಲಿ ತಲೆಯೆತ್ತಿದರು. ಹೀಗಾಗಿ ಸ್ವಾತಂತ್ರ್ಯ ಹೋರಾಟ ಕೇವಲ ನಾಡಿನ ಬಿಡುಗಡೆಗಾಗಿ ನಡೆದ ಹೋರಾಟ ಮಾತ್ರವಾಗದೆ ಅನೇಕ ಸಮುದಾಯಗಳು ತಮ್ಮನ್ನು ಬಿಡುಗಡೆಗೊಳಿಸಿಕೊಳ್ಳುವ ಹೋರಾಟವೂ ಆಯಿತು.
ಹೀಗೆ ಹೋರಾಟ ನಡೆಯುತ್ತಿದ್ದ ಹೊತ್ತಿನಲ್ಲೇ ಮಹಿಳೆಯರ ಹಕ್ಕುಗಳ ಪ್ರಶ್ನೆ ಬಂದಾಗೆಲ್ಲ ಸದ್ಯಕ್ಕೆ ನಮ್ಮ ಗಮನ ಸ್ವಾತಂತ್ರ್ಯ ಪಡೆಯುವ ಕಡೆಗಿರಲಿ, ನಂತರದಲ್ಲಿ ಇವುಗಳ ಈಡೇರಿಕೆಗಾಗಿ ಹೋರಾಡೋಣ ಎಂದು ಹೇಳುತ್ತಾ ಬರಲಾಯಿತು. ಈ ಸಮಯದಲ್ಲೇ ದೇಶಗಳ ವಿಭಜನೆ ನಡೆದು ಭಾರತ, ಪಾಕಿಸ್ತಾನ ಎರಡೂ ಕಡೆಗಳ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮೇರೆ ಮೀರಿದವು. ನಾಡಿನ ಗೌರವವನ್ನು ಹೆಣ್ಣಿನ ದೇಹ ಮತ್ತು ಶೀಲಗಳಿಗೆ ಆರೋಪಿಸಿ ಮಹಿಳೆಯರ ಮೇಲೆ ಎಗ್ಗಿಲ್ಲದ ದೌರ್ಜನ್ಯ ನಡೆಯಿತು. ಆಗ ಮತ್ತು ನಂತರದಲ್ಲೂ ಪ್ರಾದೇಶಿಕ, ಸಮುದಾಯಗಳ ಮತ್ತು ಕೋಮುಗಳ ನಡುವಣ ಕಲಹಗಳಲ್ಲಿ ಮಹಿಳೆಯರ ದೇಹವೇ ಯುದ್ಧಭೂಮಿಯಾಗಿರುವುದು ಗುಜರಾತ್ ದಂಗೆ, ಮಣಿಪುರದ ಗಲಭೆ ಎಲ್ಲವುಗಳಲ್ಲೂ ಮರುಕಳಿಸಿದೆ. ಮತ್ತೆ ಇವು ದೇಶಪ್ರೇಮ ಮತ್ತು ಧರ್ಮ ರಕ್ಷಣೆಯ ಜೊತೆಗೆ ಬೆಸೆದುಕೊಂಡು ಶೌರ್ಯ, ಪರಾಕ್ರಮಗಳ ಹಾಗೆ ಗೋಚರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗೆಯೇ ದಲಿತ, ಆದಿವಾಸಿ ಮಹಿಳೆಯರ ಮೇಲಣ ದೌರ್ಜನ್ಯ, ಲಿಂಗತ್ವ ಅಲ್ಪಸಂಖ್ಯಾತರ ಕಡೆಗಣನೆ ನಿರಂತರವಾಗಿ ನಡೆದು ಬಂದಿರುವುದೂ ತಲೆತಗ್ಗಿಸಬೇಕಾದ ಸಂಗತಿಯಾಗಿದೆ.
ದೇಶ ಬ್ರಿಟಿಷರಿಂದ ಮುಕ್ತವಾದ ಬಳಿಕ ಸಂವಿಧಾನದ ಮೂಲಕ, ಕಾನೂನುಗಳ ಮೂಲಕ ಮಹಿಳೆಯರಿಗೆ ಹಲವು ಅವಕಾಶಗಳು, ಸಮಾನ ಹಕ್ಕುಗಳು ದತ್ತವಾದವು. ಶಿಕ್ಷಣ, ಆರೋಗ್ಯ, ಸ್ವಾತಂತ್ರ್ಯ, ಅವಕಾಶಗಳ ಹೊಸ ಜಗತ್ತು ತೆರೆಯಿತು. ಇವು ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನಮಾನದಲ್ಲಿ ಒಂದಿಷ್ಟು ಬದಲಾವಣೆ ತಂದವು. ಹೀಗಿದ್ದರೂ ಸಮಾಜದಲ್ಲಿ ಅವರನ್ನು ನೋಡುವ ಬಗೆಯಲ್ಲಿ ಮೂಲಭೂತವಾದ ಬದಲಾವಣೆ ಆಗಲಿಲ್ಲ. ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನುಗಳು ರೂಪುಗೊಂಡವು, ಆದರೆ ಮನಸ್ಥಿತಿಗಳು ಬದಲಾಗಲಿಲ್ಲ. ಪ್ರತೀ ಬಾರಿ ಅನ್ಯಾಯವಾದಾಗಲೂ ಮತ್ತೆ ಮತ್ತೆ ಕೂಗಬೇಕಾಯಿತು. ಇಂದಿಗೂ ಮನೆ ಮತ್ತು ಜಗತ್ತು ಎಂಬ ವಿಂಗಡನೆ, ಲಿಂಗಾಧಾರಿತ ಶ್ರಮ ವಿಭಜನೆ, ದೇಹದ ಮೇಲಿನ ಒಡೆತನ ಸ್ಥಾಪಿಸುವುದು ಸಂಸ್ಕೃತಿಯ ಹೆಸರಿನಲ್ಲಿ ವಿಜೃಂಭಿಸುತ್ತಲೇ ಇದೆ. ಜಾಗತೀಕರಣದ ಯುಗದಲ್ಲಿ ನೆಲವೂ ಸಂಪನ್ಮೂಲಗಳೂ ಸರಕಾದಂತೆ ಹೆಣ್ಣಿನ ದೇಹವೂ ದೋಚಬಹುದಾದ ಸರಕಾಯಿತು. ಹಸಿರು ಚರ್ಮ ಸುಲಿದು ಕೆನ್ನೀರು ಹರಿಸುತ್ತಿರುವ ಭೂಮಿ, ವಿವಸ್ತ್ರಗೊಳಿಸಲಾದ ಮಹಿಳೆ ಇಂದಿನ ಸ್ಥಿತಿಯ ಹಸಿಯಾದ ರೂಪಕಗಳಂತೆ ಕಾಣುತ್ತವೆ.
ಇನ್ನೊಂದೆಡೆ, ದ್ವೇಷದ ರಾಜಕಾರಣದ ವಕ್ತಾರರಂತೆ ಅಬ್ಬರಿಸುವ ಮಹಿಳೆಯರನ್ನು ಕಂಡರೆ ದಿಗಿಲಾಗುತ್ತದೆ. ತಾವು ತಮ್ಮನ್ನೇ ನಿರ್ಬಂಧಿಸುವ ರಾಜಕಾರಣದ ಕೈಯಲ್ಲಿ ಆಯುಧಗಳಾಗಿ ಬಳಕೆಯಾಗುತ್ತಿದ್ದೇವೆ ಎಂಬ ಕನಿಷ್ಠ ಅರಿವೂ ಅವರಿಗಿಲ್ಲ. ತಮ್ಮನ್ನೇ ಶೋಷಿಸುವ ವ್ಯವಸ್ಥೆಯ ಪರವಾಗಿ ಅವರು ಕೂಗುತ್ತಿದ್ದಾರೆ. ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳುವವರನ್ನು ಗಟ್ಟಿಗೊಳಿಸುವ ಈ ಬಗೆ ಸಾಗಿ ಬಂದ ಹೆಜ್ಜೆಗಳನ್ನು ಮರೆತು ಹಿಂದಕ್ಕೆ ಜಾರುವ ರೀತಿಯಾಗಿದೆ. ಇಂದು ಅನೇಕ ಮಂದಿ ಮಹಿಳೆಯರ ಬಾಯಲ್ಲಿ ತಾವು ಸಾಗಿಬಂದ ಹಾದಿಯ ಕುರಿತ ಅವಜ್ಞೆಯಿದೆ. ಅಧಿಕಾರದ ಮಾತುಗಳು ಅಲ್ಲಿಂದ ಹೊರಬರುತ್ತಿರುವುದು ಅವರು ಹೇಗೆ ಪುರುಷ ರಾಜಕಾರಣದಲ್ಲಿ ಹತಾರಗಳಂತೆ ಬಳಕೆಯಾಗುತ್ತಿದ್ದಾರೆ ಎಂಬುದನ್ನು ತೆರೆದು ತೋರಿಸುತ್ತದೆ. ಅಧಿಕಾರ ಹೊಂದಲು, ಪ್ರಬಲರಾಗಿರಲು ಅವರು ಮತ್ತೆ ತಮ್ಮತನವನ್ನು ಒತ್ತೆಯಿಡಬೇಕಾಗಿರುವ ವಿಚಿತ್ರ ಸ್ಥಿತಿ ಇಂದು ಇದೆ. ಮತ್ತೆ ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಕೇವಲ ಸಾಂಕೇತಿಕ ಮಟ್ಟದಲ್ಲಿ ಇದ್ದು ಅವರು ದನಿ ಕಳೆದುಕೊಂಡಿರುತ್ತಾರೆ ಅಥವಾ ಅವರು ದನಿಯೆತ್ತಿದರೆ ಆ ಸ್ಥಾನ ಕಳೆದುಕೊಳ್ಳುತ್ತಾರೆ ಎನ್ನುವ ಪರಿಸ್ಥಿತಿ ಇದೆ. ಇವು ಮೇಲು ನೋಟಕ್ಕೆ ಮಹಿಳೆಯರಿಗೆ ಅವಕಾಶ ದೊರೆತಿದೆಯಲ್ಲ ಎಂದು ಭ್ರಮಿಸುವಂತೆ ಮಾಡುತ್ತದೆ. ಆದರೆ ಅವರನ್ನು ಮತ್ತೆ ಕಟ್ಟಿಹಾಕುವ ಇನ್ನೊಂದು ಬಗೆಯ ವರಸೆಯಾಗಿದೆ.
ಇವೆಲ್ಲ ಇದ್ದಾಗಲೂ ನಮ್ಮ ನಡುವೆ ಪ್ರಜಾಪ್ರಭುತ್ವದ ಬೇರುಗಳನ್ನು ಭದ್ರಗೊಳಿಸುತ್ತಿರುವ, ನಿಜವಾದ ಅರ್ಥದಲ್ಲಿ ಸ್ತ್ರೀ ಶಕ್ತಿಗಳೇ ಆಗಿರುವ ಮಹಿಳೆಯರು ದಿಟ್ಟವಾಗಿ ಮಾತಾಡುತ್ತಿದ್ದಾರೆ. ಜಾಗತೀಕರಣದ ಆಕ್ರಮಕ ಶಕ್ತಿಯನ್ನು ಎದುರಾಗುತ್ತಾ ನಮ್ಮ ನೆಲದ ಸತ್ವವನ್ನು ಎತ್ತಿಹಿಡಿಯುತ್ತಿರುವ ವಂದನಾ ಶಿವ, ಇತಿಹಾಸ ತಿರುಚುತ್ತಿರುವ ಹೊತ್ತಿನಲ್ಲಿ ಇತಿಹಾಸವನ್ನು ನೆಲದ ನೋಟದಲ್ಲಿ ಅರ್ಥೈಸುತ್ತಿರುವ ರೊಮೀಲಾ ಥಾಪರ್, ಜನರ ಧ್ವನಿಯಾಗಿ ಜನಪರ ಹೋರಾಟ ಮುನ್ನಡೆಸಿದ ಮೇಧಾ ಪಾಟ್ಕರ್, ಮಹಾಶ್ವೇತಾ ದೇವಿ ಹೀಗೆ ಹಲವು ಚೈತನ್ಯಪೂರ್ಣ ವ್ಯಕ್ತಿತ್ವಗಳು ನಮ್ಮ ಮುಂದೆ ಬರುತ್ತವೆ. ಇವರು ಅಧಿಕಾರದ, ದ್ವೇಷದ, ಮಾರುಕಟ್ಟೆಯ ರಾಜಕಾರಣ ಮತ್ತು ಪುರುಷ ರಾಜಕಾರಣವನ್ನು ಪ್ರಶ್ನಿಸುತ್ತಾ ಹೊಸ ದಿಕ್ಕು ತೋರುವ ದೀಪಧಾರಿಗಳಾಗಿದ್ದಾರೆ. ಕೆಲವರಂತೂ ತಮ್ಮ ಪ್ರಶ್ನೆಗಳಿಂದ ಪ್ರಭುತ್ವವನ್ನು ನಡುಗಿಸುತ್ತಾ ಅದರ ಕೆಂಗಣ್ಣಿಗೆ ಗುರಿಯಾಗಿಯೂ ಕಸುವು ಕಳೆದುಕೊಳ್ಳದೇ ಮುನ್ನಡೆಯುತ್ತಿದ್ದಾರೆ. ಬಹುಶಃ ದ್ವೇಷದ ನೆಲಗಟ್ಟಿನಲ್ಲಿ ತಲೆಯೆತ್ತಿರುವ ಈ ಪ್ರಭುತ್ವಕ್ಕೆ ಮದ್ದರೆಯುವ ಪ್ರಕ್ರಿಯೆ ಮಹಿಳೆಯರಿಂದಲೇ ಆರಂಭವಾಗುತ್ತಿರುವ ಎಲ್ಲ ಸೂಚನೆಗಳೂ ಕಾಣುತ್ತಿವೆ.
ದೇಶವೆಂಬ ತಾಯಿಯ ಅಂಗಗಳು ಇಂದು ತಮ್ಮದೇ ಮಕ್ಕಳ ಹತಾರಗಳಿಂದ ಘಾಸಿಗೊಂಡು ರಕ್ತ ಸುರಿಸಿಕೊಂಡು ನಿಂತಿವೆ. ಮಹಿಳೆಯರ ಚೀರಾಟ ಅರಣ್ಯ ರೋದನವಾಗಿದೆ. ಈ ಹೊತ್ತಿನಲ್ಲಿ ನಾವು ಸ್ವತಂತ್ರ ಭಾರತದ ಹೆಜ್ಜೆಗಳ ಚಹರೆಗಳನ್ನು ಗುರುತಿಸುತ್ತಿದ್ದೇವೆ. ಬರಹದ ಆರಂಭದಲ್ಲಿ ಉಲ್ಲೇಖಿಸಲಾದ ಕುವೆಂಪು ಅವರ ಕವಿತೆ ಕೊನೆಗೆ ‘‘ನಮ್ಮೆಲ್ಲ ರಂಗಗಳೆ ನಮ್ಮಬ್ಬೆಯಂಗವೈ’’ ಎನ್ನುತ್ತದೆ. ನಾವೆಲ್ಲರೂ ಕೂಡಿ ನಮ್ಮ ಭಾರತಾಂಬೆಯ ವಿವಿಧ ಅಂಗಗಳು, ಆದ್ದರಿಂದಲೇ ಅವರು ‘‘ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ’’ ಎನ್ನುವುದರ ಮೂಲಕ ದೇಶದ ಅಭಿವೃದ್ಧಿ ಎಲ್ಲರ ಹಿತದಲ್ಲಿ ಅಡಗಿದೆ ಎನ್ನುವುದನ್ನು ಮಾರ್ಮಿಕವಾಗಿ ನುಡಿಯುತ್ತಾರೆ. ದೇಶ ಮಹತ್ವದ ತಿರುವಿನಲ್ಲಿ ನಿಂತಿರುವ ಈ ಬಿಂದುವಿನಲ್ಲಿ ಪ್ರಜಾಸತ್ತಾತ್ಮಕ ಆಶಯಗಳನ್ನು, ಕ್ರಮಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಮ್ಮೆಲ್ಲ ವಾಗ್ವಾದಗಳು ನಡೆಯಬೇಕಾಗಿದೆ. ಇವು ಎಲ್ಲರೂ ಮುಕ್ತವಾಗಿ ಅಭಿವ್ಯಕ್ತಿಸಬಲ್ಲ, ಬದುಕಬಲ್ಲ ಒಂದು ವಾತಾವರಣ ನಿರ್ಮಿಸುತ್ತದೆ. ಭಾರತ ಎನ್ನುವುದು ಹಲವು ಸಮುದಾಯಗಳಿಂದ ಕೂಡಿದ ಒಂದು ಒಕ್ಕೂಟ. ಈ ಮುಕ್ತತೆ ಮತ್ತು ವಾಗ್ವಾದಗಳಿಗೆ ಅವಕಾಶವಿರುವ ವಾತಾವರಣ ಮಾತ್ರ ನಮ್ಮನ್ನು ಬಹುತ್ವದೊಂದಿಗೆ ಮುನ್ನಡೆಸಬಲ್ಲದು ಎಂಬ ತಿಳುವಳಿಕೆಯೊಂದಿಗೆ ಸಾಗುವ ಅಗತ್ಯವಿದೆ. ಮಹಿಳೆಯರ ಮುನ್ನಡೆ, ಎಲ್ಲ ಸಮುದಾಯಗಳ ಮುನ್ನಡೆ, ದೇಶದ ಮುನ್ನಡೆ ಪರಸ್ಪರ ಹೆಣೆದುಕೊಂಡಿವೆ.