ಹಮಾಸ್‌ನ ಬೀಭತ್ಸದ ಕನ್ನಡಿಯಲ್ಲಿ ಕಾಣುವುದು ಇಸ್ರೇಲಿ ಬೀಭತ್ಸದ ಚಿತ್ರಗಳೇ
ಹಮಾಸ್‌ನ ದಾಳಿಯು ಬೀಭತ್ಸವಾಗಿತ್ತು. ಅವರು ನೂರಾರು ಜನರನ್ನು ಅವರ ಮನೆಗಳಲ್ಲಿ ಮತ್ತು ಹತ್ತಿರದ ನಗರವೊಂದರಲ್ಲಿ ನಡೆಯುತ್ತಿದ್ದ ಸಂಗೀತ ಹಬ್ಬವೊಂದರಲ್ಲಿ ಕೊಚ್ಚಿ ಕೊಂದಿದ್ದಾರೆ. ಈ ಸಂದರ್ಭದಲ್ಲಿ ಈ ದಾಳಿಯ ಭೀಕರತೆ ಮತ್ತು ಅದರಿಂದ ಇಸ್ರೇಲಿ ಸಮಾಜ ಅನುಭವಿಸುತ್ತಿರುವ ಸಾಮೂಹಿಕ ಶಾಕ್ ಅನ್ನು ಅರ್ಥ ಮಾಡಿಕೊಳ್ಳುತ್ತಲೇ, ಅದನ್ನು ಸಾಧ್ಯಗೊಳಿಸಿದ ಐತಿಹಾಸಿಕ ಸಂದರ್ಭವನ್ನೂ ಅರ್ಥಮಾಡಿಕೊಳ್ಳಬೇಕೆಂದು ಹೇಳುವುದು ಅತ್ಯಂತ ಮುಖ್ಯ ಎಂದು ನನಗೆ ಅನಿಸುತ್ತದೆ.
ಇಸ್ರೇಲಿಗಳಾಗಿ ನಾವು ಗಾಝಾ ವಿಷಯದಲ್ಲಿ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬಂತಹ ಮನೋಧೋರಣೆಯನ್ನು ರೂಢಿಸಿಕೊಂಡಿದ್ದೇವೆ. ಉದಾಹರಣೆಗೆ ಈಗ ಮಾಡುತ್ತಿರುವಂತೆ ಇಸ್ರೇಲ್ ಗಾಝಾ ಮೇಲೆ ಬಾಂಬ್ ದಾಳಿ ಮಾಡುತ್ತಲೇ ಇರಬಹುದು, ಯಾವುದೇ ಹೊಣೆಗಾರಿಕೆ ಇಲ್ಲದೆ ಇಡೀ ಕುಟುಂಬಗಳನ್ನು ಮತ್ತು ನೆರೆಹೊರೆಗಳನ್ನು ವಿಧ್ವಂಸಗೊಳಿಸಬಹುದು, ಅದಕ್ಕೆ ಪ್ರತಿಯಾಗಿ ಗಾಝಾ ಪ್ರದೇಶದಿಂದ ರಾಕೆಟ್ ದಾಳಿ ಮಾಡಿದರೆ ಇಸ್ರೇಲ್ ಸ್ಥಾಪಿಸಿಕೊಂಡಿರುವ ಐರನ್ ಡೋಮ್ ಹೇಗಿದ್ದರೂ ಅವನ್ನು ಹೊಡೆದುರುಳಿಸುತ್ತದೆ... ಇತ್ಯಾದಿ. ಹೀಗಾಗಿ ಕಳೆದ ಒಂದೆರಡು ದಶಕಗಳಲ್ಲಿ ಗಾಝಾ ಮತ್ತು ಇಸ್ರೇಲ್ ನಡುವೆ ನಡೆದಿರುವ ಕದನಗಳಲ್ಲಿ ಸಾವು ನೋವುಗಳ ಅನುಪಾತದ ಸಂಖ್ಯೆ ಪ್ರತೀ ಇಸ್ರೇಲಿ ಸಾವಿಗೆ ನೂರಿನ್ನೂರು ಗಾಝಾ ಫೆಲೆಸ್ತೀನಿಯರ ಸಾವು ಎಂಬಂತಾಗಿದೆ. ಈ ಎಲ್ಲಾ ಸುರಕ್ಷತಾ ಭಾವಗಳು ಶನಿವಾರದ ದಾಳಿಯಿಂದ ಹಾರಿ ಹೋಗಿದೆ.
ಆದರೆ ನಾನು ಇಸ್ರೇಲಿಗಳಿಗೆ ಒಂದು ಮಾತು ನೆನೆಪಿಸಲೇ ಬೇಕೆನ್ನಿಸಿದೆ. ಈಗ ನಾವು ಅನುಭವಿಸುತ್ತಿರುವ ಅಭದ್ರತೆ ಹಾಗೂ ಯಾವಾಗ ಬೇಕಾದರೂ ಕೊಲೆಗೀಡಾಗಬಹುದು ಎಂಬ ಭಯವನ್ನು ಫೆಲೆಸ್ತೀನಿಯರು, ಅದರಲ್ಲೂ ಸದಾ ಇಸ್ರೇಲಿ ದಾಳಿಯನ್ನು ಎದುರಿಸುತ್ತಿರುವ ಗಾಝಾ ಫೆಲೆಸ್ತೀನಿಯರು, ಕಳೆದ ಹಲವಾರು ದಶಕಗಳಿಂದ ದಿನನಿತ್ಯ ಮತ್ತು ಅನುಕ್ಷಣವೂ ಎದುರಿಸಿಕೊಂಡು ಬಂದಿದ್ದಾರೆ.
ಹೀಗಾಗಿ ಹಮಾಸ್ ದಾಳಿಯ ಬೀಭತ್ಸವನ್ನು ಅಪ್ರಚೋದಿತ ಅಥವಾ ಏಕಪಕ್ಷೀಯ ದಾಳಿ ಎಂದು ಅರ್ಥ ಮಾಡಿಕೊಳ್ಳುವುದು ತುಂಬಾ ತಪ್ಪು. ಹಾಗೆಯೇ ಈ ಸಮಸ್ಯೆಗೆ ಮಿಲಿಟರಿ ಪರಿಹಾರ ಇಲ್ಲವೆಂಬುದನ್ನೂ ಅರ್ಥಮಾಡಿಕೊಳ್ಳಲೇ ಬೇಕು. ಗಾಝಾ ಮೇಲೆ ನಡೆಯುತ್ತಿರುವ ಈ ನಿರಂತರ ದಾಳಿಗಳು ಕೇವಲ ಸಾವು ಮತ್ತು ವಿನಾಶವನ್ನು ಉಂಟು ಮಾಡುತ್ತದೆಯೇ ವಿನಾ ಸಂಬಂಧಪಟ್ಟ ಯಾರಿಗೂ ಭರವಸೆಯನ್ನು ಹುಟ್ಟಿಸುವುದಿಲ್ಲ.
ಅದರಲ್ಲೂ ಹಾಲಿ ನೆತನ್ಯಾಹು ಸರಕಾರದ ನೇತೃತ್ವದಲ್ಲಿ ಇಸ್ರೇಲಿನಲ್ಲಿ ಒಂದು ಅತ್ಯುಗ್ರವಾದಿ ಜಿಯೋನಿಸ್ಟ್ ಸರಕಾರ ರಚನೆಯಾದ ಮೇಲೆ ಫೆಲೆಸ್ತೀನಿಯರ ಬದುಕಿನ ದಾರುಣತೆ ಹಲವು ಪಟ್ಟು ಹೆಚ್ಚಿದೆ. ಗಾಝಾ ಮೇಲಿನ ದಾಳಿ, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿರುವ ಫೆಲೆಸ್ತೀನ್ ಸಮುದಾಯಗಳ ಮೇಲೆ ಇಸ್ರೇಲಿ ನೆಲಸಿಗರ ನಿರಂತರ ಮತ್ತು ವ್ಯವಸ್ಥಿತ ದಾಳಿ, ಇಸ್ರೇಲಿ ಪ್ರದೇಶದ ಕಾನೂನು ಬಾಹಿರ ವಿಸ್ತರಣೆಗಳು ಈ ಹಿಂದೆಯೂ ನಡೆಯುತ್ತಿದ್ದವಾದರೂ ಈ ಅತ್ಯುಗ್ರವಾದಿ ಸರಕಾರ ಬಂದ ಮೇಲೆ ಅದು ಹಲವು ಪಟ್ಟು ಹೆಚ್ಚಾಗಿದೆ. ವೆಸ್ಟ್ ಬ್ಯಾಂಕ್‌ನಲ್ಲಿರುವ ಫೆಲೆಸ್ತೀನಿ ಪ್ರದೇಶಗಳಲ್ಲಿ ಅಕ್ರಮವಾಗಿ ತಮ್ಮ ವಸತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಇಸ್ರೇಲಿ ನೆಲಸಿಗರು ಅಲ್ಲಿ ವಾಸಿಸುತ್ತಿರುವ ಫೆಲೆಸ್ತೀನಿಯರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಮಿತಿಯಿಲ್ಲವಾಗಿದೆ. ಇಸ್ರೇಲಿ ನೆಲಸಿಗರು ತಮಗಿಷ್ಟ ಬಂದಂತೆ ನೆರೆಹೊರೆಯಲ್ಲಿರುವ ಫೆಲೆಸ್ತೀನಿಯರ ಮನೆಗಳಿಗೆ ನುಗ್ಗಿ, ಲೂಟಿ ಮಾಡಿ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ. ಅವರ ಜೊತೆಗೆ ಬರುವ ಇಸ್ರೇಲಿ ಪೊಲೀಸರು ಮೌನವಾಗಿದ್ದುಕೊಂಡು ಈ ದಾಳಿಕೋರರಿಗೆ ರಕ್ಷಣೆ ಕೊಡುತ್ತಾರೆ. ಫೆಲೆಸ್ತೀನಿಯರ ಪ್ರದೇಶದಲ್ಲಿ ಹೊಸದಾಗಿ ಠಾಣೆಯನ್ನು ಸ್ಥಾಪಿಸಲಾಗುತ್ತಿದೆ. ದೊಡ್ಡದೊಡ್ಡ ಫೆಲೆಸ್ತೀನ್ ನಗರಗಳ ಮಧ್ಯೆ ಇರುವ ನಬ್ಲುಸ್ ಅಂಥ ನಗರದ ಮಧ್ಯೆ ಹೋಗಿ ಇಸ್ರೇಲಿಗಳು ಪ್ರಾರ್ಥನೆ ಸಲ್ಲಿಸಬೇಕೆಂದರೂ ಸೈನಿಕರು ಅವರಿಗೆ ರಕ್ಷಣೆ ಕೊಡುತ್ತಾರೆ.
ಹೀಗಾಗಿ ಫೆಲೆಸ್ತೀನಿಯರಿಗೆ ಅಪಾರವಾದ ಅಭದ್ರತೆ, ಅಸುರಕ್ಷತೆ ಕಾಡುತ್ತಿದೆ. ಏಕೆಂದರೆ ಅಂತಹ ಕಡೆಗಳಲ್ಲಿ ಫೆಲೆಸ್ತೀನಿ ಪೊಲೀಸರಿಗೆ ಕಾರ್ಯವ್ಯಾಪ್ತಿ ಇರುವುದಿಲ್ಲ ಮತ್ತು ಅವರಿಂದ ಫೆಲೆಸ್ತೀನಿಯರಿಗೆ ರಕ್ಷಣೆ ಸಿಗುವುದಿಲ್ಲ. ಹೀಗಾಗಿ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೋದಾಗ ಸೈನಿಕರು ಅವರನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಫೆಲೆಸ್ತೀನಿಯರು ಕಳೆದ ಹಲವಾರು ದಶಕಗಳಿಂದ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಕಳೆದ ಕೆಲವು ತಿಂಗಳಿಂದ ಪರಿಸ್ಥಿತಿ ಅವರಿಗೂ ಅಸಹನೀಯ ಹಾಗೂ ದುರ್ಭರ ಎನಿಸುವಂತಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಫೆಲೆಸ್ತೀನ್ ವಿಷಯವನ್ನು ಜಗತ್ತು ಕಡೆಗಣಿಸುವಂತಹ ಇನ್ನು ಕೆಲವು ಬೆಳವಣಿಗೆಗಳು ಸಂಭವಿಸಿವೆ.
ಇಸ್ರೇಲ್ ಮತ್ತು ಅದನ್ನು ಸುತ್ತುವರಿದಿರುವ ಅರಬ್ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದಕ್ಕೆ ಪ್ರಧಾನ ಕಾರಣ ಇಸ್ರೇಲ್ ಫೆಲೆಸ್ತೀನ್ ಅನ್ನು ಆಕ್ರಮಿಸಿರುವುದು. ಹೀಗಾಗಿ ಅರಬ್ ಜಗತ್ತು ಮತ್ತು ಇಸ್ರೇಲ್ ನಡುವಿನ ಸಂಬಂಧ ಸುಧಾರಿಸಬೇಕೆಂದರೆ ಫೆಲೆಸ್ತೀನ್‌ಗೆ ನ್ಯಾಯ ದಕ್ಕುವುದು ಪೂರ್ವ ಶರತ್ತಾಗಿತ್ತು. ಹೀಗಾಗಿ ಫೆಲೆಸ್ತೀನ್‌ಗೆ ಆಗುತ್ತಿರುವ ಅನ್ಯಾಯ ಜಾಗತಿಕ ವೇದಿಕೆಯ ಮೇಲೂ ಪದೇಪದೇ ಚರ್ಚೆಯಾಗುತ್ತಿತ್ತು. ಆದರೆ 2020ರ ಲ್ಲಿ ಟ್ರಂಪ್ ನೇತೃತ್ವದಲ್ಲಿ ಸಂಭವಿಸಿದ ಅಬ್ರಹಂ ಒಪ್ಪಂದಗಳ ಭಾಗವಾಗಿ ಕೆಲವು ಅರಬ್ ದೇಶಗಳು ಫೆಲೆಸ್ತೀನ್ ವಿಷಯವನ್ನು ಪಕ್ಕಕ್ಕೆ ಸರಿಸಿ ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಇಸ್ರೇಲ್ ಜೊತೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಅಮೆರಿಕದ ಹಾಲಿ ಅಧ್ಯಕ್ಷ ಬೈಡನ್ ನೇತೃತ್ವದಲ್ಲಿ ಸೌದಿ ಅರೇಬಿಯ ಮತ್ತು ಇಸ್ರೇಲ್‌ಗಳ ನಡುವೆ ಜಾರಿಯಲ್ಲಿರುವ ಸಂಬಂಧಗಳ ಸಹಜೀಕರಣ (ನಾರ್ಮಲೈಸೇಶನ್) ಚರ್ಚೆಗಳೂ ಫೆಲೆಸ್ತೀನಿಯ ಹಿತಾಸಕ್ತಿಯ ಪರವಾಗಿದ್ದ ಮತ್ತೊಂದು ರಾಜತಾಂತ್ರಿಕ ಅಸ್ತ್ರವನ್ನು ಇಲ್ಲವಾಗಿಸುತ್ತಿದೆ.
ಅದಕ್ಕಾಗಿಯೇ ನೆತನ್ಯಾಹು ಫೆಲೆಸ್ತೀನಿಯರನ್ನು ಬದಿಗೆ ಸರಿಸಿ ಮತ್ತು ಫೆಲೆಸ್ತೀನಿಯರು ಇಲ್ಲದೆಯೇ ನಾವು ಅರಬ್ ದೇಶಗಳೊಂದಿಗೆ ಶಾಂತಿ ಸಾಧಿಸಬಹುದು ಎಂದು ಘೋಷಿಸಿದ್ದಾರೆ. ಹೀಗಾಗಿ ಇಸ್ರೇಲ್ ತಮ್ಮ ಮೇಲೆ ಹೇರಿರುವ ವರ್ಣಭೇದದಂತಹ ಅಪಾರ್ಥೈಡ್ ವಿರುದ್ಧ ಹೋರಾಡಲು ಫೆಲೆಸ್ತೀನಿಯರ ಬಳಿ ಅಸ್ತ್ರಗಳು ಕಡಿಮೆಯಾಗುತ್ತಿವೆ.
ಇವು ಯಾವುವೂ ಶನಿವಾರ ಹಮಾಸ್ ಮಾಡಿದಂಥ ಕ್ರೂರ ಕೃತ್ಯಗಳ ಸಮರ್ಥನೆಯಲ್ಲ. ಆದರೆ ಅದೇ ಸಮಯದಲ್ಲಿ ಯಾವ ಸಂದರ್ಭದಲ್ಲಿ ಫೆಲೆಸ್ತೀನಿಯರು ಹೆಚ್ಚೆಚ್ಚು ಹತಾಶರಾಗುತ್ತಾ ಇಂತಹ ಕೃತ್ಯಗಳನ್ನು ಎಸಗುವ ಕಡೆಗೆ ದೂಡಲ್ಪಡುತ್ತಿದ್ದಾರೆ ಎಂಬುದು ಮಾತ್ರ ನನಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ.
ಆದರೆ ಈ ದಾಳಿಯು ಆತ್ಮವಿಮರ್ಶೆ ಮತ್ತು ಪುನರಾವಲೋಕನಗಳಿಗೆ ಎಡೆಮಾಡಿಕೊಡುವಂತೆ ಕಾಣುತ್ತಿಲ್ಲ. ಬದಲಿಗೆ ಇದು ಇಸ್ರೇಲಿ ಸಮಾಜದಲ್ಲಿ ಅಳಿದುಳಿದಿರುವ ನ್ಯಾಯಶೀಲರಲ್ಲೂ ಹಾಗೂ ಒಟ್ಟಾರೆ ಇಸ್ರೇಲಿ ಸಮಾಜದಲ್ಲೂ ಕೇವಲ ಸೇಡಿನ ಭಾವವನ್ನು ಮಾತ್ರ ಕೆರಳಿಸಿದೆ. ಈ ಸಂದರ್ಭವನ್ನು ಬಳಸಿಕೊಂಡು ಗಾಝಾಗೆ ಗರಿಷ್ಠ ಹಾನಿಯನ್ನು ಉಂಟು ಮಾಡಬೇಕೆಂಬ ಧ್ವನಿ ಅಬ್ಬರವಾಗುತ್ತಿದೆ.
ಆದರೆ ಹಮಾಸ್‌ನ ಬೀಭತ್ಸದ ಕನ್ನಡಿಯಲ್ಲಿ ಕಾಣುವುದು ಇಸ್ರೇಲಿ ಬೀಭತ್ಸದ ಚಿತ್ರಗಳೇ.
ಇಸ್ರೇಲಿ ದಾಳಿಗಳು ಹುಟ್ಟುಹಾಕಿದ ಅಭದ್ರತೆ, ಅಸುರಕ್ಷತೆ, ಆಕ್ರೋಶ, ಹತಾಶೆಗಳಿಂದಲೇ ಹಮಾಸ್ ಮಾಡಿದ ಬೀಭತ್ಸ ಹುಟ್ಟಿಕೊಂಡಿತು. ಆದರೆ ಈ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿಗಳು ಗಾಝಾ ಮೇಲೆ ಮತ್ತಷ್ಟು ಬೀಭತ್ಸ ದೌರ್ಜನ್ಯಗಳನ್ನು ಎಸಗಲು ಇಸ್ರೇಲಿ ಸರಕಾರಕ್ಕೆ ಬೆಂಬಲಿಸುತ್ತಿದ್ದಾರೆ. ಇದು ಇಸ್ರೇಲಿಗಳು, ಫೆಲೆಸ್ತೀನಿಯರಿಬ್ಬರಿಗೂ ಒಂದು ಡೆಡ್ ಎಂಡ್ ಆಗಿದೆ.
ಆದರೂ ಈಗ ಇಸ್ರೇಲಿಗಳು ಎದುರಿಸುತ್ತಿರುವ ಅಭದ್ರತೆ, ಅಸಹಾಯಕ ಆಕ್ರೋಶಗಳು ಬಹಳ ವರ್ಷಗಳಿಂದ ಲಕ್ಷಾಂತರ ಫೆಲೆಸ್ತೀನಿಯರ ದಿನನಿತ್ಯದ ಅನುಭವವಾಗಿದೆ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಇಸ್ರೇಲ್ ಅನುಸರಿಸುತ್ತಿರುವ ಜನಾಂಗೀಯ ಭೇದ, ಆಕ್ರಮಣ ಮತ್ತು ದಿಗ್ಬಂಧನಗಳನ್ನು ಕೊನೆಗೊಳಿಸುವುದು ಮತ್ತು ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯನ್ನು ಒದಗಿಸುವ ಭವಿಷ್ಯವನ್ನು ಕಟ್ಟಿಕೊಳ್ಳಲು ಮುಂದಾಗುವುದು. ಅದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ.