ಸಾಲದ ಹೆಸರಲ್ಲಿ ಕೋಟಿಗಟ್ಟಲೆ ರೂ. ಕೊಳ್ಳೆ: ಮೋಸಗಾರರ ಆಟದಲ್ಲಿ ಕಳೆದುಕೊಳ್ಳುವವರು ಯಾರು?
20 ತಿಂಗಳ ನಿರಂತರ ಪ್ರಯತ್ನದ ಬಳಿಕ, ಅನುತ್ಪಾದಕ ಆಸ್ತಿಗಳ (ಅಂದರೆ, ನಷ್ಟವನ್ನುಂಟುಮಾಡುವ ಎನ್ಪಿಎಗಳು) ಮತ್ತು ರೈಟ್ ಆಫ್ ಮಾಡಲಾದ ಒಟ್ಟು ಸಾಲದ ವರ್ಷವಾರು ಮತ್ತು ಬ್ಯಾಂಕ್ವಾರು ವಿವರಗಳನ್ನು ಹೊರತೆಗೆಯಲು ಒಬ್ಬರು ಯಶಸ್ವಿಯಾಗಿದ್ದಾರೆ. ಜೂನ್ ತಿಂಗಳಲ್ಲಿ ‘ದಿ ವೈರ್’ನಲ್ಲಿ ಭಾರತದ ಬ್ಯಾಂಕ್ಗಳು 12 ಲಕ್ಷ ಕೋಟಿ ರೂ. ನಷ್ಟಕ್ಕೆ ತುತ್ತಾದುದರ ಬಗ್ಗೆ ಬರೆಯಲಾಗಿತ್ತು. ಆ ಮೊತ್ತ ಮೋದಿ ಆಡಳಿತದ ಮೊದಲ ಎಂಟು ವರ್ಷಗಳು, ಒಂಭತ್ತು ತಿಂಗಳುಗಳದ್ದಾಗಿತ್ತು. ಈಗ ಪೂರ್ತಿ ಒಂಭತ್ತು ವರ್ಷಗಳ ಆರ್ಬಿಐ ಅಂಕಿಅಂಶದ ಪ್ರಕಾರ, ಎಲ್ಲಾ ಬ್ಯಾಂಕ್ಗಳು ಕಳೆದುಕೊಂಡಿರುವ ಒಟ್ಟು ಮೊತ್ತ 12,50,553 ಕೋಟಿ ರೂ.
ಭಾರತದ ಇತಿಹಾಸದಲ್ಲಿ ಹಿಂದೆಂದೂ ಒಂದು ಸಣ್ಣ ಹಗರಣದ ಸುಳಿವೂ ಇಲ್ಲದೆ, ಸಣ್ಣ ಸಾರ್ವಜನಿಕ ಚರ್ಚೆಯೂ ಆಗದೆ ಬ್ಯಾಂಕುಗಳು ವರ್ಷದಿಂದ ವರ್ಷಕ್ಕೆ ಇಷ್ಟು ದೈತ್ಯಾಕಾರದ ಮೊತ್ತವನ್ನು ಕಳೆದುಕೊಂಡಿರಲಿಲ್ಲ. ನಿರೀಕ್ಷೆಯಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಹಾನಿಗೊಳಗಾದವು. ಆದರೆ ಖಾಸಗಿ ಬ್ಯಾಂಕುಗಳು ಸಹ ಇದೇ ವೈರಸ್ ಅಂಟಿಸಿಕೊಂಡು ಬಳಲುತ್ತಿದ್ದವು. ಯೆಸ್ ಬ್ಯಾಂಕ್ನ ರಾಣಾ ಕಪೂರ್ ಮತ್ತು ಐಸಿಐಸಿಐನ ಚಂದಾ ಕೊಚ್ಚಾರ್ ಅವರಿಗೆ ತಾವು ತೆರಬೇಕಾಗಿ ಬಂದ ಬೆಲೆಯೇನು ಎಂಬುದು ಮನವರಿಕೆಯಾಗಿತ್ತು.
ಬ್ಯಾಂಕ್ ಠೇವಣಿಗಳನ್ನು ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ರಾಜಕೀಯ ಬೆಂಬಲವಿರುವ ವಂಚಕರಿಗಾಗಿ ಹೇಗೆ ಬಳಸಲಾಗಿದೆ ಎಂಬುದು ಬಯಲಾಯಿತು. ನರೇಂದ್ರ ಮೋದಿ ಯವರೊಂದಿಗೆ ಪ್ರವರ್ಧಮಾನಕ್ಕೆ ಬಂದು ಮತ್ತು ಅವರೊಡನೆ ಸುತ್ತಾಡಿದ ಅನೇಕರು ಬ್ಯಾಂಕ್ಗಳಿಂದ ಹಲವು ಲಕ್ಷ ಕೋಟಿ ರೂ. ಲೂಟಿ ಮಾಡಿದರು. ಮೋದಿ ಸರಕಾರದಿಂದ ಈ ಯಾರೊಬ್ಬರೂ ವಿಚಾರಣೆ ಮತ್ತು ಜೈಲು ಶಿಕ್ಷೆಗೆ ಒಳಪಡಲಿಲ್ಲ. ಆದರೆ ಮನಮೋಹನ್ ಸಿಂಗ್ ಸರಕಾರ ರಾಮಲಿಂಗಂ ರಾಜು ಅವರನ್ನು ಸತ್ಯಂ ವಂಚನೆಗಾಗಿ ಜೈಲಿಗೆ ಕಳಿಸಿತ್ತು. ಸಿಂಗ್ ಅವರ ಆಡಳಿತ ಭ್ರಷ್ಟವಾಗಿದೆ ಎಂದು ಬೊಬ್ಬೆ ಹೊಡೆದಿದ್ದ ಅನೇಕ ಟೀವಿ ಚಾನೆಲ್ಗಳು ಆನಂತರ ತಮ್ಮನ್ನು ಮೋದಿ ಅಥವಾ ಅವರ ಬಂಡವಾಳಶಾಹಿ ಗೆಳೆಯರಿಗೆ ಮಾರಿಕೊಂಡವು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 1ರಂದು ನನ್ನ ಚುಕ್ಕಿಗುರುತಿನ ಪ್ರಶ್ನೆಗೆ ಉತ್ತರಿಸಿದ ರೀತಿ ಅಸ್ಪಷ್ಟವಾಗಿತ್ತು. ಈ ಮೊತ್ತವನ್ನು ವಸೂಲಿ ಮಾಡಲು (ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ) ಮತ್ತು ಅಗ್ರ ಇಪ್ಪತ್ತು ವಂಚಕರಲ್ಲಿ ಪ್ರತಿಯೊಬ್ಬರಿಗೂ ಶಿಕ್ಷೆಯನ್ನು ನೀಡಲಾಗಿದೆ ಎಂದು ರಾಜ್ಯಸಭೆಯಲ್ಲಿ ನನ್ನ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು. ಆದರೆ ನನ್ನ ಪ್ರಶ್ನೆ ನಿರ್ದಿಷ್ಟವಾಗಿ ಇಪ್ಪತ್ತು ಉನ್ನತ ವಂಚಕರನ್ನು ಕುರಿತದ್ದಾಗಿತ್ತು. ಅವರಲ್ಲಿ ಅನೇಕರು ಪ್ರಧಾನಿಗೆ ವೈಯಕ್ತಿಕವಾಗಿ ಗೊತ್ತಿರುವವರು.
ಹಣಕಾಸು ಸಚಿವರು ಈ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸಿಕೊಂಡ ರಾದರೂ, ಅದೇ ದಿನ ವಿತ್ತಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಸರಕಾರ ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ ಎಂದು ಉತ್ತರಿಸಿದರು. ಅಂದರೆ, 40,000 ಕೋಟಿ ರೂ.ಗಿಂತ ಹೆಚ್ಚು ಸಾಲವನ್ನು ಬಾಕಿ ಇರಿಸಿಕೊಂಡವರು ಪಾವತಿಸದೆ ಇರುವ ಮೊತ್ತ ಎಷ್ಟು ದೊಡ್ಡದು ಎಂಬುದನ್ನು ಗಮನಿಸಬಹುದು. ಮೋದಿಯವರ ಒಂಭತ್ತು ವರ್ಷಗಳಲ್ಲಿ ಬ್ಯಾಂಕ್ಗಳು ಸುಮಾರು 69 ಲಕ್ಷ ಕೋಟಿ ರೂ.ಗಳನ್ನು ಎನ್ಪಿಎ ಎಂದು ಪರಿಗಣಿಸಿವೆ.
ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಅದು ಏಕೆ ತುಂಬಾ ಅನುಮಾನಾಸ್ಪದವಾಗಿದೆ ಮತ್ತು ಪ್ರಪಂಚದ ಇತರ ದೇಶಗಳಿಗಿಂತ ಕೆಟ್ಟದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ಒಟ್ಟು ಸಾಲಗಳಿಗೆ ಎನ್ಪಿಎ ಶೇಕಡಾವಾರು ಪ್ರಮಾಣಗಳು ಐಎಂಎಫ್ ವೆಬ್ಸೈಟ್ನಲ್ಲಿವೆ. ಅದರಂತೆ, ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ 0.4 ಮತ್ತು 1.4ರ ಮಧ್ಯೆ ಇರುತ್ತದೆ. ನಿಸ್ಸಂಶಯವಾಗಿ, ಅಲ್ಲಿ ಪ್ರಾಮಾಣಿಕತೆ ಹೆಚ್ಚು, ಅಧಿಕಾರಸ್ಥರು ತಮ್ಮ ಮಿತ್ರರನ್ನೇ ಆಯಕಟ್ಟಿನ ಜಾಗದಲ್ಲಿ ಕೂರಿಸುವುದು (ಕ್ರೋನಿಸಂ) ಕಡಿಮೆ ಮತ್ತು ಭ್ರಷ್ಟಾಚಾರ ವಿರೋಧಿ ಕಾವಲು ಬಲವಾಗಿದೆ. ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್ಗಳಲ್ಲಿ ಕ್ರೋನಿಸಂ ಕಾರಣದಿಂದಾಗಿಯೇ ಅಲ್ಲಿನ ಅನುತ್ಪಾದಕ ಸಾಲದ ಶೇಕಡಾವಾರು ಪ್ರಮಾಣವೂ ಜಾಸ್ತಿ.
ಜಾಗತಿಕ ಮಟ್ಟದ ವಿವರಗಳನ್ನು ಗಮನಿಸಿದರೆ, ಚೀನಾ, ವಿಯೆಟ್ನಾಂ, ಮಲೇಶ್ಯ ಮತ್ತು ಕಾಂಬೋಡಿಯಾಗಳು ಶೇ.1.6ರಿಂದ ಶೇ.1.7ರಷ್ಟು ಕೆಟ್ಟ ಸಾಲಗಳನ್ನು ಹೊಂದಿವೆ. ಇಂಡೋನೇಶ್ಯದಲ್ಲಿ ಇದು ಶೇ.2.6ರಷ್ಟಿದೆ. ಎನ್ಪಿಎಗಳು ಟರ್ಕಿ, ಥಾಯ್ಲೆಂಡ್ ಮತ್ತು ಬ್ರೂನಿಯಲ್ಲಿ ಒಟ್ಟು ಸಾಲದ ಸುಮಾರು ಶೇ.3ರಷ್ಟಿವೆ. ಇದನ್ನು ನೋಡಿದರೆ, ಮೋದಿ ಆಡಳಿತದ ಒಂಭತ್ತು ವರ್ಷಗಳಲ್ಲಿ ಭಾರತದ ಸ್ಥಿತಿ ನಾಚಿಕೆಗೇಡಿನದ್ದಾಗಿದೆ. ವಿತ್ತಖಾತೆ ಮಾಹಿತಿಗಳ ಪ್ರಕಾರ, ಎನ್ಪಿಎಗಳು 2018ರ ಮಾರ್ಚ್ನಲ್ಲಿ ಶೇ.11.46ಕ್ಕೆ ಏರಿದವು. 2021ರಲ್ಲಿ ಅದು ಕೊಟ್ಟ ಮತ್ತೊಂದು ಉತ್ತರದ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಗರಿಷ್ಠ ಶೇ.12.17 ಎಂದು ಉಲ್ಲೇಖಿಸಲಾಗಿತ್ತು.
ಅನುತ್ಪಾದಕ ಸಾಲಗಳು ಶೇ.2ರ ಪ್ರಮಾಣದಲ್ಲಿರುವುದನ್ನು ಅಂತರ್ರಾಷ್ಟ್ರೀಯ ಮಾನದಂಡ ಎಂದು ಭಾವಿಸಿದರೆ, ಭಾರತದಲ್ಲಿನ ಈ ಶೇಕಡಾವಾರು ಪ್ರಮಾಣ ತುಂಬಾ ಹೆಚ್ಚಾಗಿದೆ. ಇದು ವಂಚನೆ, ಒಪ್ಪಂದ ಅಥವಾ ಬ್ಯಾಂಕ್ ಸಾಲಗಳ ದುರ್ಬಳಕೆಯ ಪರಿಣಾಮ.
ಯಾವುದೇ ದೊಡ್ಡ ಸಾಲವನ್ನು ಸಾಮಾನ್ಯವಾಗಿ ರಾಜಕೀಯ ಅಥವಾ ಪ್ರಾಯೋಜಕತ್ವವಿಲ್ಲದೆ ಬಿಡುಗಡೆ ಮಾಡಲಾಗುವುದಿಲ್ಲ ಎಂದೇ ಎಲ್ಲರೂ ಹೇಳುತ್ತಾರೆ. ಕಳೆದ ಒಂಭತ್ತು ವರ್ಷಗಳಲ್ಲಿ ಇದು ನಿಚ್ಚಳವಾಗಿಯೂ ಆಗಿದೆ. ಶೇ.2ರಷ್ಟು ಪ್ರಮಾಣವೆಂಬ ಅಂತರ್ರಾಷ್ಟ್ರೀಯ ಮಾನದಂಡದ ಪಾಲನೆ ಭಾರತಕ್ಕೆ ತುಂಬಾ ಕಠಿಣ ಎಂದು ಕೆಲವರು ವಾದಿಸಬಹುದು. ಆದರೆ ಪ್ರಪಂಚದ ಹೆಚ್ಚಿನ ದೇಶಗಳು ಮತ್ತು ಏಶ್ಯದ ಇತರ ದೇಶಗಳು ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಶೇ.2ರ (ಅಥವಾ ಸ್ವಲ್ಪ ಹೆಚ್ಚು) ಮಟ್ಟದಲ್ಲೇ ಇರಲು ಎಲ್ಲವನ್ನೂ ಸರಿದೂಗಿಸಬಲ್ಲವಾದರೆ ಭಾರತಕ್ಕೆ ಏಕೆ ಸಾಧ್ಯವಿಲ್ಲ?
ಉತ್ತರವನ್ನು ಪಡೆಯಲು, ಮೋದಿ ಆಡಳಿತದ ವರ್ಷಗಳಲ್ಲಿ ಎಲ್ಲರಿಗೂ ಗೊತ್ತಿರುವ ಅಧಿಕಾರಸ್ಥರ ಮಿತ್ರರು ಮತ್ತಿತರ ಕ್ರಿಮಿನಲ್ಗಳು ಎಷ್ಟೆಲ್ಲ ದೋಚಿದ್ದಾರೆ ಎಂಬುದನ್ನು ಗ್ರಹಿಸಬೇಕಾಗಿದೆ. ವಿಪರ್ಯಾಸವೆಂದರೆ, ಅದಕ್ಕಾಗಿ ಅವರಿಗೆ ಯಾವ ಶಿಕ್ಷೆಯೂ ಆಗಿಲ್ಲ.
ಡಿಸೆಂಬರ್ 31, 2022ರಂದು ಎನ್ಪಿಎಗಳ ಪ್ರಮಾಣ ಒಟ್ಟು ಸಾಲದ ಶೇ.4.41ಕ್ಕೆ ಇಳಿದಿದೆ ಎಂದು ಸರಕಾರ ತುತ್ತೂರಿ ಬಾರಿಸಿತು. ಆದರೆ ಆರ್ಬಿಐ, ಸಾರ್ವಜನಿಕ ವಲಯದ ಬ್ಯಾಂಕ್ಗಳ ಒಟ್ಟು ಎನ್ಪಿಎ ಅನುಪಾತಗಳು ಸೆಪ್ಟಂಬರ್ 2023ಕ್ಕೆ ಶೇ.9.4ಕ್ಕೆ ಏರಬಹುದು ಎಂದು ಅಂದಾಜಿಸಿದೆ. ಯುಪಿಎ ಸರಕಾರದ ಕಡೇ ವರ್ಷಗಳಲ್ಲಿ ಎನ್ಪಿಎ ಶೇಕಡಾವಾರುಗಳ ಏರಿಕೆ ಇತ್ತೆಂಬುದು ನಿಜವಾದರೂ, ಇದು ಇನ್ನೂ ಶೇ.3ಕ್ಕಿಂತ ಕಡಿಮೆಯಿತ್ತು. ಅದರ ಕಡೇ ವರ್ಷದಲ್ಲಿ ಶೇ.4ಕ್ಕೆ ಏರಿತು. ಸರಕಾರದ ಅವಧಿ ಕೊನೆಗೊಳ್ಳುತ್ತಿದ್ದ ಹೊತ್ತಲ್ಲಿನ ಕೆಲವು ಅಜಾಗರೂಕ ಸಾಲದ ಪ್ರಕರಣಗಳು ಇದ್ದಿರಬಹುದು. ಆದರೆ ಮೋದಿ ಸರಕಾರಕ್ಕೆ ಎಲ್ಲವನ್ನೂ ಪರಿಶೀಲಿಸಲು, ಸ್ಥಿರಗೊಳಿಸಲು ಮತ್ತು ಕೆಟ್ಟ ಸಾಲಗಳನ್ನು ಇಲ್ಲವಾಗಿಸಲು ಪೂರ್ತಿ ಒಂಭತ್ತು ವರ್ಷಗಳಿದ್ದವು. ಆದರೆ ಅದಕ್ಕೆ ಬದಲಾಗಿ, ಅವರ ಸಮಯದಲ್ಲಿ ಕೆಟ್ಟ ಸಾಲಗಳು ದುಪ್ಪಟ್ಟಾದವು, ಮೂರು ಪಟ್ಟಾದವು. ಅವರದೇ ಸ್ನೇಹಿತ ಉದ್ಯಮಿಗಳು ಎಲ್ಲ ಕೊಳ್ಳೆಹೊಡೆದರು. ಬ್ಯಾಂಕ್ಗಳನ್ನು ವಂಚಿಸಿದರು. ಅಷ್ಟಾದರೂ ಎಲ್ಲವೂ ಚೆನ್ನಾಗಿದೆ ಎಂದೇ ಬಿಂಬಿಸಲಾಗುತ್ತಿದೆ. ಏಕೆಂದರೆ ಹೆಚ್ಚಿನ ಮತದಾರರು ಠೇವಣಿ ಮತ್ತು ಮನೆ/ಕಾರು ಸಾಲಗಳ ಬಡ್ಡಿದರಗಳಾಚೆಗೆ ಬ್ಯಾಂಕಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಎನ್ಪಿಎಗಳ ವಿಚಾರದಿಂದ ಈಗ ರೈಟ್ ಆಫ್ ವಿಚಾರಕ್ಕೆ ಹೋಗುವುದಾದರೆ, ರೈಟ್ ಆಫ್ ಮಾಡಲಾದ ಸಾಲದಿಂದ ಹೋದದ್ದು ಯಾವ ಹಣ? ಆರ್ಬಿಐ ನಿರ್ದೇಶನದಂತೆ ತಮ್ಮ ಬ್ಯಾಲೆನ್ಸ್ ಶೀಟ್ಗಳನ್ನು ಸ್ವಚ್ಛಗೊಳಿಸಲು, ತೆರಿಗೆ ಪ್ರಯೋಜನಗಳನ್ನು ಪಡೆಯಲು ಮತ್ತು ಬಂಡವಾಳವನ್ನು ಅತ್ಯುತ್ತಮವಾಗಿಸಲು ಬ್ಯಾಂಕುಗಳು ಈ ರೈಟ್ ಆಫ್ ವಿಧಾನ ಅನುಸರಿಸುತ್ತವೆ ಎಂದು ಸರಕಾರ ಹೇಳುತ್ತದೆ. ನಷ್ಟ ಮುಚ್ಚಿಹಾಕುವುದಕ್ಕೆ ಈ ವಿಧಾನವನ್ನು ಒಂದು ಗಿಣಿಪಾಠದಂತೆ ಒಪ್ಪಿಸಲಾಗುತ್ತಿದೆ. ಕಡೆಗೆ ಇಲ್ಲಿ ಮಹಾ ವಂಚಕರು ಕೊಳ್ಳೆ ಹೊಡೆದು ವಂಚಿಸಿದ ನಷ್ಟವನ್ನು ಹೊಂದಾಣಿಕೆ ಮಾಡಲು ಬ್ಯಾಂಕಿನಲ್ಲಿಯ ಜನಸಾಮಾನ್ಯ ಗ್ರಾಹಕರ ಠೇವಣಿ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಶಿಕ್ಷಣ, ಆರೋಗ್ಯ, ಸಾಮಾಜಿಕ ಅಥವಾ ಗ್ರಾಮೀಣ ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ಸಾವಿರ ಕೋಟಿ ರೂ.ಗಳನ್ನು ಕಡಿತ ಮಾಡುವ ಅದೇ ಸರಕಾರ, ಮರುಪಾವತಿ ಮಾಡದ ಸಾಲಕ್ಕಾಗಿ 12.5 ಲಕ್ಷ ಕೋಟಿ ರೂ.ಗಳನ್ನು ಅಳಿಸಿಹಾಕುತ್ತದೆ. ಅದಕ್ಕೆ ಕಾರಣರಾದ ವಂಚಕರು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಡುತ್ತದೆ. ಈ ಬೃಹತ್ ಮೊತ್ತದ ಚೇತರಿಸಿಕೊಳ್ಳಲಾಗದ ನಷ್ಟವನ್ನು ತಮ್ಮ ಬ್ಯಾಂಕ್ ಠೇವಣಿಗಳು ಮತ್ತು ಬ್ಯಾಂಕ್ಗಳು ಕಷ್ಟದಿಂದ ಗಳಿಸಿದ ಲಾಭಗಳಿಂದ ಏಕೆ ಹೊಂದಿಸಲಾಗಿದೆ ಎಂದು ಪ್ರಶ್ನಿಸುವಷ್ಟು ಯಾವುದೇ ನಾಗರಿಕರಿಗೆ ಮಾಹಿತಿಯಿರುವುದಿಲ್ಲ. ಈ ಹಗರಣವನ್ನು ಕೆಲವರು ಅರ್ಥಮಾಡಿಕೊಳ್ಳುತ್ತಾರೆ. ಇದು ತುಂಬಾ ಕ್ರೂರವಾಗಿ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ನಡೆಯುತ್ತದೆ. ನಾವು ಕಳೆದುಕೊಳ್ಳುತ್ತೇವೆ, ಅವರು ಲಾಭ ಮಾಡಿಕೊಳ್ಳುತ್ತಾರೆ.
ಹಣವು ಎಂದಿಗೂ ಕಣ್ಮರೆಯಾಗುವುದಿಲ್ಲ. ಅದು ಒಬ್ಬರ ಜೇಬಿನಿಂದ ಮತ್ತೊಬ್ಬರ ಜೇಬಿಗೆ ಹೋಗುತ್ತಿರುತ್ತದೆ. ಸುಸ್ತಿದಾರ (ಅಥವಾ ದುರ್ಬಳಕೆ ಮಾಡಿಕೊಳ್ಳುವ) ಉದ್ಯಮಿಗಳು ರೈಟ್ ಆಫ್ ಎಂದು ಕರೆಯಲ್ಪಡುವ, ಒಂದು ಬಗೆಯ ಸಾಲ ಮನ್ನಾ ಲಾಭ ಪಡೆಯುತ್ತಾರೆ. ಏಕೆಂದರೆ ರೈಟ್ ಆಫ್ ಬಳಿಕ ಅವರಿಗೆ ಸಾಲ ತೀರಿಸಲೇಬೇಕೆಂಬ ತಲೆಬಿಸಿ ಕಡಿಮೆ ಇರುತ್ತದೆ. ತಮ್ಮ ನೆರವಿಗಿರುವ ಯಾವುದೇ ರಾಜಕೀಯ ಪಕ್ಷಕ್ಕೆ ಹಣಕಾಸು ಒದಗಿಸುವ ಈ ದೊಡ್ಡ ತಿಮಿಂಗಿಲಗಳಿಗೆ ತಮ್ಮ ಈ ವಂಚನೆಯನ್ನು ತಮಗೆ ಕರಗತವಾಗಿರುವ ಎಲ್ಲ ಬಗೆಯ ಕಾರ್ಪೊರೇಟ್ ತಂತ್ರಗಳೊಂದಿಗೆ ಸಾಕಷ್ಟು ಅಚ್ಚುಕಟ್ಟಾಗಿ ನಿಭಾಯಿಸುವುದು ಹಾಗೂ ಗೊಂದಲಮಯ ನಗದು ನಿರ್ವಹಣೆ ಮತ್ತು ನಿಧಿ ವರ್ಗಾವಣೆಯ ಯಾವುದೇ ಜಾಡುಗಳನ್ನು ಬಿಡದೆ ಇರುವುದು ಗೊತ್ತಿರುತ್ತದೆ. ಬ್ಯಾಂಕರ್ಗಳು, ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ಗುಪ್ತಚರ ನಿರ್ದೇಶನಾಲಯ, ಗಂಭೀರ ವಂಚನೆಗಳ ಕಚೇರಿ ಮತ್ತು ಇತರ ಕಾರ್ಪೊರೇಟ್ ಮತ್ತು ಹಣಕಾಸು ಆಡಳಿತ ನಿಯಂತ್ರಕರು ನಿಜವಾಗಿಯೂ ಗಂಭೀರವಾಗಿದ್ದರೆ ಅವು ಇದನ್ನೆಲ್ಲ ಭೇದಿಸಲು ಸಾಧ್ಯ. ಆದರೆ ಅಧಿಕಾರಸ್ಥರ ಮಿತ್ರರ ವಿಚಾರದಲ್ಲಿ ಹಾಗಾಗುವುದಿಲ್ಲ.
ಸ್ಪಷ್ಟವಾಗಿ ಹೇಳುವುದಾದರೆ, ರಾಜಕೀಯದಲ್ಲಿರುವವರೇ ಈ ವಂಚಕರಿಗೆ ಆಶ್ರಯ ನೀಡುತ್ತಾರೆ. ರಾಶಿ ರಾಶಿ ಸಂಖ್ಯೆಯಲ್ಲಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಪ್ರಧಾನಿ ಮೋದಿ, ಇಂಥ ಕ್ರಿಮಿನಲ್ಗಳಿಗೆ ಅನುಕೂಲವಾಗುವ ಪ್ರಸಕ್ತ ಹಣಕಾಸು ಕಾನೂನುಗಳನ್ನು ತಿದ್ದುಪಡಿ ಮಾಡಲು ಹೋಗುತ್ತಿಲ್ಲ. ಇದರ ನಡುವೆಯೇ, ದಿವಾಳಿ ಎಂದು ಘೋಷಿಸಲಾಗುವ ಕಂಪೆನಿಗಳನ್ನು ಮತ್ತೆ ಬ್ಯಾಂಕುಗಳಿಂದಲೇ ಸಾಲ ಪಡೆದು ಅವುಗಳ ಹಿಂದಿನ ಮಾಲಕರು ತಮ್ಮ ಸಂಬಂಧಿಗಳ ಮೂಲಕವೇ ಖರೀದಿಸುವುದೂ ನಡೆಯುತ್ತದೆ. ರಾಜಕೀಯ ಸಂಪರ್ಕವುಳ್ಳ ಮಾಲಕರಿಗೆ ಹೊಸ ಸಾಲಗಳೊಂದಿಗೆ ಪುನರಾವರ್ತಿತ ನಷ್ಟ ಮುಚ್ಚಿಡುವುದು ಮಾತ್ರವಲ್ಲದೆ ವೈಯಕ್ತಿಕ ಲಾಭಕ್ಕಾಗಿ ಕಂಪೆನಿಯ ಹಣವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸುಲಭ.
(ಕೃಪೆ: thewire.in)